

| ಧರ್ಮರಾಜ ಪಾಟೀಲ ಬೆಳಗಾವಿ
ಪಶ್ಚಿಮ ಘಟ್ಟದಲ್ಲೀಗ ಪ್ರಕೃತಿ ಸೌಂದರ್ಯದ ನರ್ತನ. ಎಲ್ಲೆಲ್ಲೂ ಹಸಿರಿನಿಂದ ತುಂಬಿದ ವನಸಿರಿ. ದಟ್ಟನೆಯ ಕಾಡು; ಅಲ್ಲಲ್ಲಿ ಹೃನ್ಮನ ಸೆಳೆಯುವ ಜಲಪಾತಗಳು. ವರ್ಣನೆಗೆ ನಿಲುಕದ ಸೊಬಗು. ಸ್ವರ್ಗವೇ ಧರೆಗೆ ಇಳಿದಿದೆಯೇ ಎಂಬ ಭಾವ. ಇದು ‘ದೂಧ್ ಸಾಗರ್ ಫಾಲ್ಸ್’ನ ಪ್ರಭಾವ. ಕರ್ನಾಟಕ- ಗೋವಾ ಗಡಿಯ ನಿತ್ಯಹರಿದ್ವರ್ಣ ಕಾಡಿನ ಮಧ್ಯದಲ್ಲಿ 1,017 ಅಡಿ ಎತ್ತರ ಹಾಗೂ 100 ಅಡಿ ಅಗಲದಲ್ಲಿ ಈ ಜಲಪಾತ ಧುಮ್ಮಿಕ್ಕುತ್ತಿದೆ. ಭಾರತದಲ್ಲಿರುವ ಅತಿ ಎತ್ತರದ ಜಲಪಾತಗಳಲ್ಲಿ ಇದೂ ಒಂದು. ಮುಂಗಾರು ಮಳೆ ಆರಂಭದಲ್ಲೇ ಉತ್ತಮವಾಗಿ ಸುರಿದ ಪರಿಣಾಮ ಬೆಟ್ಟ-ಗುಡ್ಡಗಳೆಲ್ಲ ಹಚ್ಚಹಸಿರು ಹೊದ್ದುಕೊಂಡಿವೆ. ವನಸಿರಿ ಮಧ್ಯೆ ಭೋರ್ಗರೆಯುತ್ತ ಹಾಲಿನ ಹೊಳೆಯಂತೆ ಇಲ್ಲಿ ನೀರು ಬೀಳುತ್ತಿದೆ. ಈ ಜಲಪಾತ ಎರಡು ಕವಲುಗಳಾಗಿ ಹರಿದು, ಮತ್ತೆ ಒಂದೇ ಕಡೆ ಸೇರಿ ಕಲ್ಲುಬಂಡೆಯನ್ನು ಬಳಸಿ ಮತ್ತೆ ನಾಲ್ಕು ಕವಲುಗಳಾಗಿ ಬೇರ್ಪಟ್ಟು ಧುಮ್ಮಿಕ್ಕುತ್ತದೆ. ಮಾಂಡೋವಿ (ಮಹಾದಾಯಿ) ನದಿಯ ನೀರು, ಪಶ್ಚಿಮ ಘಟ್ಟದ ಸಾಲುಗಳಲ್ಲಿ ಹರಿದು ಅರಬ್ಬೀ ಸಮುದ್ರ ಸೇರುವ ಮೊದಲು ಈ ಸೌಂದರ್ಯ ಮೈದಳೆದಿರುತ್ತದೆ.
ವ್ಯೂ ಪಾಯಿಂಟ್: ಫಾಲ್ಸ್ಗೆ ಭೇಟಿ ನೀಡುವ ಪ್ರವಾಸಿಗರಿಗೆ ಅಲ್ಲಿನ ಸೌಂದರ್ಯ ವೀಕ್ಷಿಸಲು ಗೋವಾ ಅರಣ್ಯ ಇಲಾಖೆ ‘ವ್ಯೂ ಪಾಯಿಂಟ್’ ನಿರ್ವಿುಸಿದೆ. ಜಲಪಾತದ ಸಮೀಪ ಹೋಗಲು ಸ್ಟೆಪ್ಡ್ ಗಾರ್ಡನ್ ಇದೆ. ವಯಸ್ಸಾದವರೂ ಹತ್ತಿರದಿಂದ ವೀಕ್ಷಿಸಬಹುದು.
ಎಲ್ಲಿದೆ?: ಬೆಳಗಾವಿಯಿಂದ 80 ಕಿ.ಮೀ., ಪಣಜಿಯಿಂದ 60 ಕಿ.ಮೀ.
ಹೋಗುವುದು ಹೇಗೆ?: ಬೆಳಗಾವಿಯ ಲೋಂಡಾ ರೈಲ್ವೆ ಜಂಕ್ಷನ್ನಿಂದ ಕ್ಯಾಸಲ್ರಾಕ್ ಮಾರ್ಗವಾಗಿ ಸಾಗಿ ದೂಧ್ ಸಾಗರ ಫಾಲ್ಸ್ ಸಮೀಪದಲ್ಲೇ ಇಳಿಯಬಹುದು. ದೂಧ್ಸಾಗರ್ ಬಳಿ ರೈಲು ನಿಲ್ದಾಣವಿಲ್ಲ. ಆದರೆ, ಪ್ರವಾಸಿಗರಿಗೆ ಅನುಕೂಲವಾಗಲೆಂದು ಆ ಮಾರ್ಗದಲ್ಲಿ ಸಾಗುವ ರೈಲನ್ನು ಒಂದು ನಿಮಿಷ ನಿಲ್ಲಿಸುತ್ತಾರೆ. ಟ್ರೆಕ್ಕಿಂಗ್ಗಾದರೆ ಕ್ಯಾಸಲ್ರಾಕ್ನಿಂದ ರೈಲು ಹಳಿ ಮೇಲೆ 14 ಕಿ.ಮೀ. (6 ತಾಸು) ನಡೆಯಬೇಕು. ಗೋವಾದ ಕುಳೆಂ ರೈಲು ನಿಲ್ದಾಣದಿಂದ 8 ಕಿ.ಮೀ. (4 ತಾಸು) ನಡೆದು ಬರಬಹುದು. ಆದರೆ, ದಟ್ಟ ಕಾಡಿನ ಮಧ್ಯೆ ನಡೆಯುವುದು ಅಪಾಯ. ರಸ್ತೆ ಮಾರ್ಗವಾದರೆ ಗೋವಾದ ಕುಳೆಂ ತಲುಪಿ ಜೀಪ್ ಬಾಡಿಗೆ ಪಡೆದು, ದೂಧ್ಸಾಗರ್ ತಲುಪಬಹುದು.