ಸಾಲ ಪಡೆಯುವಾಗ ಎಚ್ಚರ

loan app
Published on
A kshana
ಮಹಾನಗರದಲ್ಲಿ ಅದೊಂದು ಮಧ್ಯಮ ವರ್ಗದ ಮನೆ. ಅಲ್ಲಿನ ಒಂದು ಕೋಣೆಯ ತಾರಸಿಯ ಫ್ಯಾನಿಗೆ ವ್ಯಕ್ತಿಯೊಬ್ಬನು ಪಂಚೆಯೊಂದನ್ನು ಕಟ್ಟಿ ನೇಣು ಹಾಕಿಕೊಂಡಿದ್ದು ಮೃತಪಟ್ಟಿದ್ದ. ಸ್ಥಳಕ್ಕೆ ಹೋದ ಪೊಲೀಸರು ಶವವನ್ನು ಕೆಳಗಿಳಿಸಿ ಆತ ಯಾರೆಂದು ಮನೆಯ ಯಜಮಾನನನ್ನು ವಿಚಾರಿಸಿದರು. ಮೃತನು ತನ್ನ ಮಗ ವಿನೋದ್ ಎಂದೂ ಅವನಿಗೆ 32 ವರ್ಷ ವಯಸ್ಸಾಗಿದ್ದು ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದ ಎಂದಾತ ಹೇಳಿದ.

ಪಂಚನಾಮೆಯನ್ನು ಮಾಡುವ ಸಮಯದಲ್ಲಿ ಪೊಲೀಸರಿಗೆ ಕೋಣೆಯ ಟೇಬಲ್ ಮೇಲೆ ಎರಡು ಪುಟಗಳ ಒಂದು ಪತ್ರ ಕಂಡಿತು. ಅದನ್ನವರು ತೆಗೆದು ಓದಿದಾಗ ಅದರಲ್ಲಿ ಮೃತ ವಿನೋದ್ ಹೀಗೆ ಬರೆದಿದ್ದ: ನಾನು ತಿಂಗಳಿಗೆ 18,000 ರೂಪಾಯಿ ಸಂಬಳ ಗಳಿಸುತ್ತಿದ್ದು ಅದರಲ್ಲಿ 1000 ರೂ.ಗಳನ್ನು ನನ್ನ ಖರ್ಚಿಗಿಟ್ಟುಕೊಂಡು ಉಳಿದ ಹಣವನ್ನು ಮನೆ ನಡೆಸಲು ನನ್ನ ತಂದೆಗೆ ಕೊಡುತ್ತಿದ್ದೆ. ಸುಮಾರು ಒಂದು ವರ್ಷದ ಹಿಂದೆ ನಮಗೆ ಒಂದು ಗಂಭೀರ ಆರ್ಥಿಕ ಸಮಸ್ಯೆ ಎದುರಾಯಿತು. ಆಗ ನಾನು ನನ್ನ ಸ್ನೇಹಿತರನ್ನು ಸಾಲ ಕೇಳಿದೆ. ಲೋನ್ ಆಪ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಕ್ಷಣಾರ್ಧದಲ್ಲಿ ಸಾಲ ಪಡೆಯಬಹುದೆಂದು ಹೇಳಿ ಒಂದು ಆಪ್ ಡೌನ್​ಲೋಡ್ ಮಾಡಲು ತಿಳಿಸಿದ. ನಾನು ನನ್ನ ಫೋನಿಗೆ ಅದನ್ನು ಡೌನ್​ಲೋಡ್ ಮಾಡಿಕೊಂಡು ಸಾಲಕ್ಕೆ ಅರ್ಜಿ ಹಾಕಿದೆ. ಸಾಲಕೊಡಲು ನನ್ನ ಮೊಬೈಲ್ ಪೋನಿನಲ್ಲಿರುವ ಕಾಂಟಾಕ್ಟ್

ಗಳು, ಫೋಟೋಗಳು, ಮುಂತಾದವನ್ನು ನೋಡಲು ಆ ಆಪ್​ಗೆ ಅನುಮತಿ ಕೊಡಬೇಕೆಂದು ಬರೆದಿತ್ತು. ನಾನು ಒಪ್ಪಿದೆ. ಆನಂತರ ನನ್ನ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ವಿವರಗಳನ್ನು ಅಪ್​ಲೋಡ್ ಮಾಡಿದೆ. ಸಾಲವೆಷ್ಟು ಬೇಕೆಂದು ಕೇಳಿದಾಗ 50000 ರೂ. ಎಂದು ನಮೂದಿಸಿದೆ. ತಿಂಗಳಿಗೆ ಶೇ. ಒಂದೂ ಮುಕ್ಕಾಲರ ಬಡ್ಡಿ ದರದಂತೆ ಬೇಡಿದ ಸಾಲ ನನ್ನ ಬ್ಯಾಂಕ್​ಗೆ ಜಮೆಯಾಯಿತು.

ಮೊದಲ ನಾಲ್ಕು ತಿಂಗಳು ಹಾಗೂ ಹೀಗೂ ಇ.ಎಂ.ಐ ಕಂತುಗಳನ್ನು ಕಟ್ಟಿದೆ. ಮುಂದೆ ಬೇರೆ ತೊಂದರೆಗಳು ಬಂದ ಕಾರಣ ಕಂತನ್ನು ಕಟ್ಟಲಾಗಲಿಲ್ಲ. ಕಂತು ಕಟ್ಟಬೇಕಾದ ಮಾರನೆಯ ದಿನದಿಂದಲೇ ಕಂಪನಿಯ ಏಜೆಂಟರು ನನಗೆ ಪದೇಪದೆ ಕರೆ ಮಾಡಿ ಹಣ ಕಟ್ಟಲು ಒತ್ತಾಯಿಸತೊಡಗಿದರು. ಒಂದು ವಾರದ ನಂತರ ನಮ್ಮ ಮನೆಗೇ ಬಂದರು. ನಂತರ ನಮ್ಮ ಕಚೇರಿಗೂ ಬಂದು ನನ್ನನ್ನು ಕಾಡತೊಡಗಿದರು. ಇಎಂಐ ತುಂಬಲು ಅವರಿವರಿಂದ ಸಾಲ ಕೇಳಿದೆ. ಯಾರೂ ಕೊಡಲಿಲ್ಲ.

ಇದಾದ ನಂತರ ಲೋನ್ ಕಂಪನಿಯು ನನ್ನ ಫೋನಿನ ಕಾಂಟೆಕ್ಟ್ ಲಿಸ್ಟ್​ನಲ್ಲಿದ್ದ ನನ್ನ ಸ್ನೇಹಿತರಿಗೆ ಕರೆ ಮಾಡಿ ನಾನು ಪಡೆದ ಸಾಲಕ್ಕೆ ಅವರ ಹೆಸರನ್ನು ಷೂರಿಟಿಯೆಂದು ಕೊಟ್ಟಿರುವ ಕಾರಣ ಸಾಲ ತೀರಿಸಲು ನನಗೆ ಒತ್ತಾಯಿಸಲು ಅವರಿಗೆ ಹೇಳಿದರು. ಗಾಬರಿಯಾದ ಸ್ನೇಹಿತರು ನನಗೆ ಈ ವಿಷಯವನ್ನು ತಿಳಿಸಿದಾಗ ನಾನು ಯಾರ ಹೆಸರನ್ನೂ ಷೂರಿಟಿಯೆಂದು ಕೊಟ್ಟಿಲ್ಲ ಎಂದು ಅವರಿಗೆ ಹೇಳಿ ಸಮಾಧಾನ ಪಡಿಸಿದೆ. ಮುಂದೆಯೂ ನಾನು ಸಾಲ ತೀರಿಸದಿದ್ದಾಗ ಕಂಪನಿಯ ಏಜೆಂಟರು ನನ್ನ ಫೋನಿನಲ್ಲಿದ್ದ ನನ್ನ ಚಿತ್ರಗಳನ್ನು ಮತ್ತು ವೀಡಿಯೋಗಳನ್ನು ಕದ್ದು ಅವನ್ನು ಅಶ್ಲೀಲ ಚಿತ್ರಗಳನ್ನಾಗಿ ಮಾರ್ಪಾಟು ಮಾಡಿ ಅವನ್ನು ನನ್ನ ಕಾಂಟಾಕ್ಟ್ ಲಿಸ್ಟ್​ನಲ್ಲಿದ್ದವಿರಿಗೆಲ್ಲರಿಗೂ ವಾಟ್ಸಾಪ್ ಮಾಡಿದರು. ಹೆದರಿದ ನಾನು ಅವರನ್ನು ಸಂರ್ಪಸಿದಾಗ ಬಾಕಿ ಇರುವ ಸಾಲವನ್ನು ತೀರಿಸಿದರೆ ಮಾತ್ರ ಸುಮ್ಮನಾಗುತ್ತೇವೆ ಎಂದರು. ನನಗೆ ಬಾಕಿ ಉಳಿದ ಸಾಲವಾದ 35000 ರೂ.ಗಳನ್ನು ತೀರಿಸಲು ಸಾಧ್ಯವೇ ಆಗುತ್ತಿಲ್ಲ್ಲ ಮುಂದೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಹೀಗಾಗಿ ನಾನು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದೇನೆ. ನನ್ನ ಆತ್ಮಹತ್ಯೆಗೆ ಲೋನ್ ಆಪ್ ಸಂಸ್ಥೆ ಹಾಗೂ ಅದರ ಏಜೆಂಟರೇ ಕಾರಣ.

ಈ ಪತ್ರವನ್ನು ಓದಿದ ಪಿಎಸ್​ಐ ಅಸ್ವಾಭಾವಿಕ ಸಾವಿನ ಪ್ರಕರಣವೊಂದನ್ನು ದಾಖಲು ಮಾಡಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳಿಸಿದರು. ಏತನ್ಮಧ್ಯೆ ಈ ಮಾಹಿತಿಯನ್ನರಿತ ಆ ವಿಭಾಗದ ಡಿಸಿಪಿ ಲೋನ್ ಆಪ್​ಗಳ ಹಾವಳಿಯಿಂದ ಹಲವಾರು ಕುಟುಂಬಗಳು ಹಾಳಾಗಿರುವುದನ್ನು ಮನಗಂಡು ಸಂಬಂಧಪಟ್ಟ ಪೊಲೀಸರಿಗೆ ಸುಲಿಗೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಪ್ರಕರಣವನ್ನು ಲೋನ್ ಆಪ್ ಸಂಸ್ಥೆ, ಮತ್ತದರ ಏಜೆಂಟರ ಮೇಲೆ ದಾಖಲಿಸಲು ಸೂಚಿಸಿದರು. ತಾವೇ ಖುದ್ದಾಗಿ ತನಿಖೆಯ ಉಸ್ತುವಾರಿಯನ್ನು ವಹಿಸಿಕೊಂಡರು.

ವಿನೋದನ ಮೊಬೈಲ್ ಫೋನಿನಲ್ಲಿದ್ದ ಖಾಸಗಿ ಡಾಟಾವನ್ನು ಕಳ್ಳತನ ಮಾಡಿದ್ದರೆಂದು ಲೋನ್ ಆಪ್ ಕಂಪನಿಯ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅನ್ವಯ ಇನ್ನೊಂದು ಕೇಸನ್ನು ದಾಖಲಿಸಿದರು. ಜಪ್ತಿ ಮಾಡಿದ್ದ ವಿನೋದ್​ನ ಮೊಬೈಲ್ ಫೋನಿಗೆ ಬೆದರಿಕೆಯ ಕರೆಗಳನ್ನು ಮಾಡಿದ್ದ ಕಂಪನಿಯ ಏಜೆಂಟರಾದ ಸುರೇಶ್ ಮತ್ತು ವಸಂತ್ ಇವರಿಬ್ಬರನ್ನೂ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಲಾಯಿತು. ಅವರಿಬ್ಬರೂ ತಾವು ಲೋನ್ ಕಂಪನಿಯ ನೌಕರರಲ್ಲವೆಂದೂ ಸಾಲ ಪಡೆದು ಮರಳಿಸಿದವರಿಗೆ ಬೆದರಿಸಲು ತಮ್ಮನ್ನು ನೇಮಿಸಿಕೊಳ್ಳಲಾಗಿದೆಯೆಂದೂ ತಿಳಿಸಿದರು. ಅವರಿಬ್ಬರನ್ನೂ ಬಂಧಿಸಿದ ನಂತರ ಪೊಲೀಸರು ಆ ನಗರದಲ್ಲಿದ್ದ ಲೋನ್ ಆಪ್ ಶಾಖೆಯ ಕಚೇರಿಗೆ ಹೋದರು. ಅಲ್ಲಿನ ಕಂಪ್ಯೂಟರ್​ಗಳು, ಫೋನುಗಳು, ಕಾಗದ ಪತ್ರಗಳು ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಂಡರು. ಶಾಖಾಧಿಕಾರಿಯನ್ನು ವಶಕ್ಕೆ ಪಡೆದು ಅವನನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ತಮ್ಮ ಲೋನ್ ಆಪ್​ನ ಕೇಂದ್ರ ಕಚೇರಿಯು ಚೆನ್ನೈನಲ್ಲಿದ್ದು, ಭಾರತದ 15 ರಾಜ್ಯಗಳ ರಾಜಧಾನಿಗಳಲ್ಲಿ ಅದರ ಶಾಖೆಗಳಿವೆ. ಶಾಖಾ ಕಚೇರಿಗಳು ಆಪ್ ಮೂಲಕ ಸಾಲ ಕೇಳಿದವರನ್ನು ಸಂರ್ಪಸಿ ಅವರಿಗೆ ಸಾಲ ನೀಡುವುದಲ್ಲದೆ, ಕೊಟ್ಟ ಸಾಲಗಳನ್ನು ವಸೂಲಿ ಮಾಡುತ್ತವೆ. ನಾವು ಯಾರಿಗೂ ಸಾಲ ತೆಗೆದುಕೊಳ್ಳಿ ಎಂದು ಬಲವಂತ ಮಾಡುವುದಿಲ್ಲ, ನಮ್ಮ ಆಪ್ ಡೌನ್ ಲೋಡ್ ಮಾಡಿ ಯಾರು ಸಾಲ ಪಡೆಯುತ್ತಾರೋ ಅವರು ನಿಗದಿತ ಸಮಯದಲ್ಲಿ ಬಡ್ಡಿ ಸಮೇತ ಸಾಲ ತೀರಿಸುವುದನ್ನು ನೋಡಿಕೊಳ್ಳುವುದಷ್ಟೆ ನಮ್ಮ ಕೆಲಸ. ಅವರು ಒಂದು ವೇಳೆ ಸಾಲ ತೀರಿಸದಿದ್ದರೆ ಅವರನ್ನು ಬೆದರಿಸಿ ಕೊಟ್ಟ ಸಾಲವನ್ನು ವಾಪಸ್ ಪಡೆಯಲು ನಮ್ಮ ಮೇಲಾಧಿಕಾರಿಗಳು ಸೂಚಿಸಿದ್ದಾರೆ. ಏಕೆಂದರೆ ನಾವು ಯಾವುದೇ ರೀತಿಯ ಸೆಕ್ಯೂರಿಟಿ ಇಲ್ಲದೇ ಅವರಿಗೆ ಸಾಲ ಕೊಟ್ಟಿರುತ್ತೇವೆ. ಬಹುತೇಕ ಜನರು ನಾವು ಇಷ್ಟೆಲ್ಲಾ ಬೆದರಿಸಿದರೂ ಸಾಲ ಮತ್ತು ಬಡ್ಡಿಯನ್ನು ಮರಳಿಸುವುದಿಲ್ಲ. ನಮ್ಮಲ್ಲಿ ಸಾಲ ಮಾಡಿದವರಲ್ಲಿ ಶೇ. 30ರಷ್ಟು ಜನರು ಸಾಲವನ್ನೇ ತೀರಿಸಿಲ್ಲ ಎಂದ. ಬೆದರಿಕೆಯ ಕರೆಗಳನ್ನು ಮಾಡಲು ನಾವು ಐದಾರು ಜನರನ್ನು ಏಜೆಂಟುಗಳನ್ನಾಗಿ ಇಟ್ಟುಕೊಂಡಿದ್ದೇವೆ. ಅವರು ನಮ್ಮ ಸಂಸ್ಥೆಯ ನೌಕರರಲ್ಲ, ಅವರಿಗೆ ಕಮಿಷನ್ ಕೊಡುತ್ತೇವೆ ಎಂದ.

ಮುಂದೆ ತಿಳಿದುಬಂದದ್ದೇನೆಂದರೆ ಇದೇ ಲೋನ್ ಆಪ್ ಸಂಸ್ಥೆಯು ಭಾರತದ ವಿವಿಧ ನಗರಗಳಲ್ಲಿ ಸುಮಾರು 50 ಬ್ಯಾಂಕ್ ಖಾತೆಗಳನ್ನು ಹೊಂದಿದ್ದು ಈ ಖಾತೆಗಳ ಮೂಲಕವೇ ಅರ್ಜಿದಾರರಿಗೆ ಸಾಲವನ್ನು ಕೊಡುತ್ತಿತ್ತು. ಪ್ರತಿ ಶಾಖೆಯಲ್ಲಿಯೂ ಪ್ರತಿದಿನವೂ ಒಂದು ಕೋಟಿ ರೂಗಿಂತ ಹೆಚ್ಚಿನ ಮೌಲ್ಯದ ವ್ಯವಹಾರವು ನಡೆಯುತ್ತಿತ್ತು. ವಾಪಸಾದ ಸಾಲ ಮತ್ತು ಬಡ್ಡಿ ಹಣದಲ್ಲಿ ಶೇಕಡಾ 50ರಷ್ಟನ್ನು ಶಾಖೆಗಳು ಚೆನ್ನೈನ ಕೇಂದ್ರ ಕಚೇರಿಗೆ ಕಳಿಸುತ್ತಿದ್ದು ಆ ಕಚೇರಿಯಲ್ಲಿ ಸ್ವಲ್ಪ ಹಣವನ್ನು ಕ್ರಿಪ್ಟೋ› ಕರೆನ್ಸಿಗೆ ಬದಲಾಯಿಸಿ ಬೇರೆ ಬೇರೆ ಅಕೌಂಟುಗಳಿಗೆ ವರ್ಗಾಯಿಸಲಾಗುತ್ತಿತ್ತು. ಉಳಿದ ಹಣವನ್ನು ಆಪ್​ನ ಮಲೇಷಿಯಾ ಮತ್ತು ವಿಯೆಟ್ನಾಂ ಕಚೇರಿಗಳಿಗೆ ಹವಾಲಾ ಮಾರ್ಗದ ಮುಖಾಂತರ ಕಳುಹಿಸಲಾಗುತ್ತಿತ್ತು. ಕಳೆದ ಎರಡು ವರ್ಷಗಳಲ್ಲಿ ಅಂದಾಜು 300 ಕೋಟಿ ರೂ.ಗಳನ್ನು ಆ ಕಂಪನಿ ವಿದೇಶಗಳಿಗೆ ರವಾನಿಸಿತ್ತು.

ಲೋನ್ ಆಪ್​ನಿಂದ ಪಡೆದ ಸಾಲವನ್ನು ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಗಳ ಬಗ್ಗೆ ವಿವರಗಳನ್ನು ಕಲೆ ಹಾಕಿದಾಗ ಕಳೆದ ಎರಡು ವರ್ಷಗಳಲ್ಲಿ 9 ಪ್ರಕರಣಗಳು ದಾಖಲಾಗಿದ್ದವು. ಅವೆಲ್ಲವನ್ನೂ ಅಸ್ವಾಭಾವಿಕ ಸಾವುಗಳೆಂದೇ ಸಂಬಂಧಪಟ್ಟ ಠಾಣೆಗಳಲ್ಲಿ ಮುಕ್ತಾಯಗೊಳಿಸಲಾಗಿತ್ತು. ಆಗ ಪೊಲೀಸರು ಆ ಪ್ರಕರಣಗಳಿಗೂ ಮರುಜೀವ ಕೊಟ್ಟು ಅವುಗಳ ತನಿಖೆಯನ್ನು ಮುಂದುವರಿಸಿದರು. ವಿನೋದನ ಆತ್ಮಹತ್ಯೆ ಪ್ರಕರಣಕ್ಕೆ ವಿದೇಶೀ ವಿನಿಮಯ ಕಾಯ್ದೆಯ ಕಲಂಗಳನ್ನೂ ಅಳವಡಿಸಲಾಯಿತು. ಲೋನ್ ಆಪ್ ಡೆವಲಪ್ ಮಾಡಿ ಆದರ ಮೂಲಕ ಭಾರತದ ಸಾವಿರಾರು ಜನರಿಗೆ ಟೋಪಿ ಹಾಕುತ್ತಿದ್ದವರನ್ನು ಮಟ್ಟ ಹಾಕಿ ಈ ವ್ಯವಹಾರದ ಬುಡಕ್ಕೇ ಕೊಡಲಿಪೆಟ್ಟನ್ನು ಕೊಡಬೇಕೆಂದು ಪೊಲೀಸರು ನಿರ್ಧರಿಸಿದರು.

ಈ ನಿಟ್ಟಿನಲ್ಲಿ ನಗರ ಕಚೇರಿಯ ಶಾಖಾ ಮ್ಯಾನೇಜರ್​ನನ್ನು ವಿಶ್ವಾಸಕ್ಕೆ ಪಡೆದು ತಮಗೆ ಕಂಪನಿಯ ಮಲೇಷಿಯನ್ ಮಾಲೀಕನನ್ನು ಬಂಧಿಸಲು ನೆರವಾದರೆ ಆತನ ಶಿಕ್ಷೆಯನ್ನು ಕಡಿತಗೊಳಿಸುವುದಾಗಿ ತಿಳಿಸಿದರು. ಕಂಪನಿಯ ಮಾಲೀಕನ ಹೆಸರು ಹಾಗೂ ಆತ ನೋಡಲು ಹೇಗಿದ್ದಾನೆ ಎನ್ನುವುದು ನಮಗ್ಯಾರಿಗೂ ತಿಳಿದಿಲ್ಲ. ನಾವೆಲ್ಲರೂ ನಮ್ಮ ಸಂವಹನವನ್ನು ವಾಟ್ಸಪ್, ಟೆಲಿಗ್ರಾಂ, ವಿ ಚಾಟ್ ಮುಂತಾದ ಆಪ್​ಗಳ ಮೂಲಕವೇ ಮಾಡುತ್ತೇವೆ, ಫೋನ್ ಮೂಲಕ ಸಂಪರ್ಕವಿಲ್ಲ ಎಂದ ಆತ. ಆಗ ಪೊಲೀಸರು ಮಲೇಷಿಯನ್ನರನ್ನು ಟ್ರಾ್ಯಪ್ ಮಾಡಲು ಮ್ಯಾನೇಜರ್​ನ ಫೋನಿನ ಮೂಲಕ, ಆತ ಬರೆದಂತೆ ಕಂಪನಿಯ ಮಾಲೀಕನಿಗೆ ಒಂದು ವಾಟ್ಸಾಪ್ ಸಂದೇಶವನ್ನು ಕಳುಹಿಸಿದರು. ಒಂದು ಬೃಹತ್ ಹಾಗೂ ಮಹತ್ವದ ಬಿಸಿನೆಸ್ ಬಗ್ಗೆ ಮಾತನಾಡಲು ಕೂಡಲೇ ಭಾರತಕ್ಕೆ ಬರಲು ಕೋರಿದರು. ಆತ ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನೂ ಕೊಟ್ಟರು.

ಆಗ ಕಂಪನಿಯ ಮಾಲಿಕ ತನ್ನ ಇಬ್ಬರು ಪಾರ್ಟನರ್​ಗಳ ಜತೆ ಭಾರತಕ್ಕೆ ಬಂದ. ಅವರು ವಿಮಾನ ನಿಲ್ದಾಣದಿಂದ ಹೊರಬಂದ ಕೂಡಲೇ ಅವರನ್ನು ವಶಕ್ಕೆ ಪಡೆದ ಪೊಲೀಸರು ಅವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಿದರು. ತಾವು ಲೋನ್ ಆಪ್ ಡೆವಲಪ್ ಮಾಡಿ ಅದನ್ನು ಪಾಕಿಸ್ತಾನ, ಬಾಂಗ್ಲಾದೇಶ, ವಿಯಟ್ನಾಂ, ಮಯಾನ್ಮರ್ ಇಲ್ಲಿ ಬಿಟ್ಟಿದ್ದೇವೆ. ಎಲ್ಲೆಡೆಯಲ್ಲಿಯೂ ನಮ್ಮ ಬಿಸಿನಿಸ್ ಮಾಡೆಲ್ ಒಂದೇ ಎಂದರು. ವಿನೋದ್ ಸಾವಿನ ಪ್ರಕರಣದಲ್ಲಿಯೇ ಅವರೆಲ್ಲರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಪ್ರಕರಣ ವಿಚಾರಣೆಗೆ ಬರಬೇಕಾಗಿದೆ. ಹೇಗೆ ಸಾಲವನ್ನು ಬೇಡುವುದು ಭಿಕ್ಷಾಟನೆಗಿಂತ ಉತ್ತಮವಲ್ಲವೋ ಹಾಗೆಯೇ ಬಡ್ಡಿಗಾಗಿ ಹಣವನ್ನು ಕೊಡುವುದು ಕಳ್ಳತನಕ್ಕಿಂತ ಮಿಗಿಲಲ್ಲ ಎಂದ ಬ್ರಿಟಿಷ್ ಕಾದಂಬರಿಗಾರ್ತಿ ಡೋರಿಸ್ ಲೆಸ್ಸಿಂಗಳ ಮಾತುಗಳನ್ನು ಲೆಕ್ಕಿಸದೆ ಇದ್ದರೆ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net