ಶತ್ರುಗಳನ್ನು ಏಕಕಾಲದಲ್ಲಿ ಎದುರಿಸಬೇಕಾದ ಸವಾಲು

Column
Published on
| ಬೈಂದೂರು ಚಂದ್ರಶೇಖರ ನಾವಡ

‘ಸರ್ವಋತು ಮಿತ್ರರು’ ಎಂದು ಗುರುತಿಸಿಕೊಂಡಿರುವ ಪಾಕಿಸ್ತಾನ ಮತ್ತು ಚೀನಾ ತಮ್ಮ ದೋಸ್ತಿಯ ಆಳವನ್ನು ವರ್ಣಿಸಲು ತಾವಿಬ್ಬರು ‘ಐರನ್ ಬ್ರದರ್ಸ್’ ಎಂದು ಘೊಷಿಸಿಕೊಂಡಿವೆ. ‘ಶತ್ರುವಿನ ಶತ್ರು ಮಿತ್ರ’ ಎನ್ನುವಂತೆ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಪಾಕಿಸ್ತಾನಕ್ಕೆ ಭಾರತದ ಶತ್ರುವಾದ ಚೀನಾ ಪರಮಾಪ್ತ ಮಿತ್ರ. 90ರ ದಶಕದಲ್ಲಿ ಶೀತಯುದ್ಧ ಸಮಾಪ್ತಿಯ ನಂತರ ವ್ಯೂಹಾತ್ಮಕ ಮಹತ್ವ ಮತ್ತು ಅಮೆರಿಕದ ಬೆಂಬಲ ಎರಡನ್ನೂ ಕಳೆದುಕೊಂಡ ಅನಾಥ ಭಾವದಲ್ಲಿರುವ ಪಾಕಿಸ್ತಾನಕ್ಕೆ ಚೀನಾ ಈಗ ಆಪದ್ಭಾಂಧವ.

ಕಾಶ್ಮೀರ ವಿಷಯದಲ್ಲಿ ತನಗೆ ಬೆಂಬಲ ನೀಡಲಿಲ್ಲವೆಂದು ತನ್ನ ಪಾಲಿನ ಕಾಮಧೇನುವಾಗಿದ್ದ ಸೌದಿ ಅರೇಬಿಯಾವನ್ನೇ ದೂಷಿಸಿ, ವಿರೋಧ ಕಟ್ಟಿಕೊಂಡು ಅದರಿಂದ ಆರ್ಥಿಕ ಸಹಾಯ ವಂಚಿತವಾದ ನಂತರವಂತೂ ಪಾಕ್ ಚೀನಾದ ಸ್ನೇಹಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧವಾಗಿದೆ. ಭಾರತದ ವಿರುದ್ಧ ವಿಷ ಕಾರುತ್ತಿರುವ ಪಾಕಿಸ್ತಾನಿ ನಾಯಕರು ಚೀನೀಯರ ಮಿತ್ರತ್ವದಲ್ಲಿ ಅಂಧರಾಗಿ ದೇಶದ ಆರ್ಥಿಕ ಹಿತವನ್ನು ಬಲಿ ಕೊಡುತ್ತಿದ್ದಾರೆ. ವಿಶ್ವದಾದ್ಯಂತದ ಮುಸಲ್ಮಾನರ ಹಿತರಕ್ಷಣೆಯ ಜವಾಬ್ದಾರಿ ಹೊತ್ತ ದೊಣ್ಣೆನಾಯಕನಂತೆ ವರ್ತಿಸುತ್ತಿರುವ ಅಲ್ಲಿನ ನಾಯಕರಿಗೆ ಚೀನಾದಲ್ಲಿ ಮುಸಲ್ಮಾನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಮತ್ತು ಮಾನವ ಹಕ್ಕು ಉಲ್ಲಂಘನೆ ಕಾಣಿಸುತ್ತಿಲ್ಲ.

ನಿಜವಾದ ಆತಂಕ: ನಾಲ್ಕು ದಶಕಗಳ ಹಿಂದೆಯೇ ನಮ್ಮ ಯುದ್ಧ ನೀತಿಕಾರರು ಮುಂದೊಂದು ದಿನ ಚೀನಾ ಮತ್ತು ಪಾಕಿಸ್ತಾನವನ್ನು ಏಕಕಾಲದಲ್ಲಿ ಎದುರಿಸಬೇಕಾದ ವಿಕಟ ಸ್ಥಿತಿ ಬರಬಹುದೆಂದು ಅಂದಾಜಿಸಿದ್ದರು. ಸೈನ್ಯ ನೇತೃತ್ವ ಈ ಕುರಿತು ಕಾಲಕಾಲಕ್ಕೆ ಅಂದಂದಿನ ಸರ್ಕಾರವನ್ನು ಎಚ್ಚರಿಸುತ್ತ ಬಂದಿತ್ತು ಮತ್ತು ಆಂತರಿಕವಾಗಿ ಉನ್ನತ ಸೇನಾಧಿಕಾರಿಗಳ ಸ್ತರದಲ್ಲಿ ಈ ಕುರಿತು ಚಿಂತನ-ಮಂಥನ ನಡೆಯುತ್ತಿತ್ತು. ಜಾರ್ಜ್ ಫರ್ನಾಂಡಿಸ್ ಮತ್ತು ಮುಲಾಯಂ ಸಿಂಗ್​ರಂಥ ದೂರದೃಷ್ಟಿಯ ಕೆಲವು ರಕ್ಷಣಾ ಮಂತ್ರಿಗಳು ಮಾತ್ರ ಈ ಕುರಿತು ಗಂಭಿರವಾಗಿದ್ದರು.

ದಶಕಗಳ ಹಿಂದೆಯೇ ಜಾರ್ಜ್ ಫರ್ನಾಂಡಿಸ್ ಚೀನಾ ನಮ್ಮ ನಂಬರ್ ಒನ್ ಶತ್ರು ಎಂದಿದ್ದರು. ಈಗಿನ ಸ್ಥಿತಿಯನ್ನು ಅವಲೋಕಿಸಿದರೆ ಆ ಮಾತು ನಿಜವೆನಿಸುತ್ತಿದೆ. ಇದುವರೆಗೆ ಗುಳ್ಳೆ ನರಿಯಂತೆ ಪಾಕಿಸ್ತಾನವನ್ನು ಛೂ ಬಿಡುತ್ತಿದ್ದ ಚೀನಾ ಈಗ ನೇರವಾಗಿಯೇ ಭಾರತದ ವಿರುದ್ಧ ಸೆಟೆದು ನಿಂತಿದೆ. ಏಕಕಾಲದಲ್ಲಿ ಉಭಯ ಶತ್ರುಗಳನ್ನು ಎದುರಿಸಲು ಭಾರತ ಮಾನಸಿಕವಾಗಿ ತಯಾರಾಗಬೇಕಾಗಿದೆ. ಸೇನೆಯಷ್ಟೇ ಅಲ್ಲ, ರಾಜಕೀಯ ವಲಯದಲ್ಲೂ ಈ ಕುರಿತು ಒಕ್ಕೊರಲ ಸಹಮತಿ ಅಗತ್ಯ ಮತ್ತು ಇದುವರೆಗೆ ರಕ್ಷಣಾ ವಿಷಯದ ಚರ್ಚೆಯಿಂದ ದೂರವಿರುವ ಜನಸಾಮಾನ್ಯರು ಈ ವಿಷಯದಲ್ಲಿ ಆಸಕ್ತಿ ತೋರಬೇಕಾಗಿದೆ ಹಾಗೂ ಇದರ ಗಂಭೀರತೆಯನ್ನು ಅರಿತುಕೊಳ್ಳಬೇಕಾಗಿದೆ.

ಏಕತೆಯ ಭಾವ ಮುಖ್ಯ: ಸೈನ್ಯ ಆಧುನೀಕರಣದಂಥ ವಿಷಯದಲ್ಲಿ ರಾಜಕೀಯ ಭಿನ್ನಾಭಿಪ್ರಾಯ ದೇಶದ ಏಕತೆಗೆ ಅಪಾಯಕಾರಿ ಎನ್ನುವ ಅರಿವನ್ನು ಜನಸಾಮಾನ್ಯರಲ್ಲೂ ಮೂಡಿಸುವ ಅಗತ್ಯವಿದೆ. ಅರಬ್ ರಾಷ್ಟ್ರಗಳಿಂದ ಸುತ್ತುವರಿಯಲ್ಪಟ್ಟ ಪುಟ್ಟ ದೇಶ ಇಸ್ರೇಲ್ ದಶಕಗಳಿಂದ ಅವುಗಳ ಹಗೆತನವನ್ನು ಎದುರಿಸುತ್ತ ಇಂದು ವಿಶ್ವ ಸಮುದಾಯದ ನಡುವೆ ತಲೆಎತ್ತಿ ನಿಂತ ಉದಾಹರಣೆ ಭಾರತೀಯರಿಗೆ ಆದರ್ಶವಾಗಬೇಕಾಗಿದೆ. ವಿಶಾಲ ಜನಸಂಖ್ಯೆ ಮತ್ತು ಅಗಾಧ ಸಂಪನ್ಮೂಲ ಹೊಂದಿರುವ ಭಾರತೀಯರು ದೃಢ ಇಚ್ಛಾಶಕ್ತಿ ತೋರಿದರೆ ಇದು ಅಸಾಧ್ಯವಾದ ಕೆಲಸವೇನಲ್ಲ.

ದೇಶಾಭಿಮಾನ, ಸ್ವದೇಶೀ ನೀತಿ, ರಾಜಕೀಯ ಜಾಗೃತಿಯಂಥ ಅಭಿಯಾನಗಳಿಂದ ಭಾರತ ಆಂತರಿಕವಾಗಿ ಬಲಿಷ್ಠವಾಗಲಿದೆ. ರಾಜಕೀಯ ಜಾಗೃತಿ ಮತ್ತು ರಕ್ಷಣಾ ವಿಷಯಕ್ಕೆ ಸಂಬಂಧಿಸಿ ನಾಗರಿಕ ಪ್ರಜ್ಞೆ ಹೆಚ್ಚುವುದರಿಂದ ರಾಜಕಾರಣಿಗಳು ರಕ್ಷಣಾ ವಿಷಯದ ಕುರಿತು ಕೀಳು ರಾಜಕೀಯ ಮಾಡಲು ಹಿಂಜರಿಯುತ್ತಾರೆ. ಆಂತರಿಕವಾಗಿ ದೇಶ ಬಲಹೀನವಾದಾಗಲೆಲ್ಲ ಗಂಡಾಂತರ ಎದುರಾಗಿದೆ. ನಾಗರಿಕರ ನಿರಂತರ ಜಾಗೃತಿಯೊಂದೇ ಎಲ್ಲ ವಿಪತ್ತುಗಳಿಂದ ದೇಶವನ್ನು ಪಾರು ಮಾಡಬಲ್ಲ ಸಂಜೀವಿನಿ. ಸೇನೆ ತನ್ನ ಕೆಲಸ ಮಾಡುತ್ತದೆ ನಿಜ, ಜತೆಗೆ ಪೂರಕವಾಗಿ ನಮ್ಮ ರಾಜಕೀಯ ವ್ಯವಸ್ಥೆ ಹೆಜ್ಜೆ ಹಾಕಬೇಕಾಗಿದೆ ಮತ್ತು ಜನಸಾಮಾನ್ಯರಿಂದಲೂ ದೇಶದ ಹಿತಕಾಯುವ ಕೆಚ್ಚು ಹೆಚ್ಚಬೇಕಾಗಿದೆ.

ಪಾಕಿಸ್ತಾನ ಅಪಾಯಕಾರಿ ರಾಷ್ಟ್ರ ಎಂಬುದು ಗೊತ್ತಿರುವಂಥದ್ದೇ. ಆದರೆ, ಚೀನಾ ಅದಕ್ಕಿಂತಲೂ ಅಪಾಯಕಾರಿ. ಏಕೆಂದರೆ, ಅದರ ವಿಸ್ತರಣಾವ್ಯಾಮೋಹ, ಜಾಗತಿಕ ನಾಯಕನಾಗಬೇಕು ಎಂಬ ಹಠ ಹಲವು ದೇಶಗಳ ಪಾಲಿಗೆ ಘಾತಕವಾಗಿ ಪರಿಣಮಿಸುತ್ತಿದೆ. ಹಿಂದೂ ಮಹಾಸಾಗರದಲ್ಲಿ ಅದರ ಹೆಚ್ಚುತ್ತಿರುವ ಚಟುವಟಿಕೆ ಗಳನ್ನು ನಿಯಂತ್ರಿಸಲು ಭಾರತ ಇತ್ತೀಚೆಗಷ್ಟೇ ಗಂಭೀರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗಾಗಿ, ರಾಷ್ಟ್ರದ ಸುರಕ್ಷೆಯ ವಿಷಯ ಬಂದಾಗ ರಾಜಕೀಯ ಏಕತೆ ಮೂಡಬೇಕು. ಆಡಳಿತ ಪಕ್ಷಗಳು, ಪ್ರತಿಪಕ್ಷಗಳು ಈ ವಿಷಯವನ್ನು ಅರ್ಥಮಾಡಿಕೊಳ್ಳಬೇಕು.

(ಲೇಖಕರು ಮಾಜಿ ಸೈನಿಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net