ರೋಗಗಳ ವಿರುದ್ಧವೂ ಮುನಿಸಿಕೊಳ್ಳುವ ಮುಟ್ಟಿದರೆ ಮುನಿ

Touch Me Not
Published on
‘ಮುಟ್ಟಿದರೆ ಮುನಿ’ ಎಂಬ ಹೆಸರಿನ ಕಳೆಯನ್ನು ನೋಡದೇ ಇರುವವರು ಯಾರೂ ಇರಲಿಕ್ಕಿಲ್ಲ. ಎಷ್ಟೋ ಹಳ್ಳಿಗಳಲ್ಲಿ ಯಾಕಾದರೂ ನಮ್ಮ ತೋಟದಲ್ಲಿ ಇದು ಬೆಳೆಯಿತೋ ಎಂದು ಬೇಸರಿಸಿಕೊಳ್ಳುತ್ತಾರೆ. ಇದಕ್ಕೆ ಇರುವ ಮುಳ್ಳು ಹೀಗೆ ಅನ್ನಿಸಲು ಮುಖ್ಯ ಕಾರಣ. ಆದರೆ ನಾವು ಮುಟ್ಟಿದಾಗ ಮುನಿಸಿಕೊಳ್ಳುವುದಷ್ಟೇ ಅಲ್ಲದೇ ಇದು ಹಲವು ರೋಗಗಳ ಮೇಲೆ ಕೂಡ ಮುನಿಸಿಕೊಳ್ಳುತ್ತದೆ ಮತ್ತು ಅವುಗಳಿಗೆ ಕಂಟಕಪ್ರಾಯವಾಗುತ್ತದೆ. ಹಾಗಾಗಿ ನಾವು ಈ ಕಳೆಯ ಮೇಲೆ ಮುನಿಸಿಕೊಳ್ಳದೇ ಅದ್ಭುತ ಔಷಧೀಯ ಸಸ್ಯವೆಂದು ಇದನ್ನು ಬಳಸಿಕೊಳ್ಳಬೇಕು.

ಮುಟ್ಟಿದರೆ ಮುನಿ ಸಸ್ಯದ ಉಪಯೋಗಗಳು ಬಹಳ. ಅವುಗಳಲ್ಲಿ ಪ್ರಮುಖ ವಾದವುಗಳನ್ನು ಇಂದು ತಿಳಿದುಕೊಳ್ಳೋಣ. ಇದಕ್ಕೆ ಕಹಿ ಮತ್ತು ಒಗರು ರುಚಿ ಇದ್ದು ತಂಪು ಗುಣವನ್ನು ಹೊಂದಿದೆ. ಕಫ ಮತ್ತು ಪಿತ್ತದೋಷಗಳನ್ನು ಕಡಿಮೆ ಮಾಡುವ ಗುಣ ಇದಕ್ಕಿದೆ. ಇದನ್ನು ಮುಟ್ಟಿದಾಗ ಹೇಗೆ ಮುದುಡಿಕೊಳ್ಳುತ್ತದೆಯೋ ಹಾಗೆಯೇ ಯಾವೆಲ್ಲ ರೋಗಗಳಲ್ಲಿ ಅಂಗಾಂಶಗಳು ಅಥವಾ ರಕ್ತನಾಳಗಳು ಮುದುಡಿಕೊಳ್ಳಬೇಕಾದ ಅವಶ್ಯಕತೆ ಇರುತ್ತದೆಯೋ ಅಲ್ಲೆಲ್ಲಾ ಇದು ಪ್ರಯೋಜನಕ್ಕೆ ಬರುತ್ತದೆ. ಉದಾ ಹರಣೆಗೆ, ಗಂಡಸರಲ್ಲಿ ಮಧ್ಯ ವಯಸ್ಸು ಕಳೆದ ನಂತರ ಪ್ರಾಸ್ಪೇಟ್ ಗ್ರಂಥಿಯು ಊದಿಕೊಂಡು ಮೂತ್ರ ವಿಸರ್ಜನೆಯ ವಿಷಯದಲ್ಲಿ ಹಲವು ರೀತಿಯ ತೊಂದರೆ ಗಳನ್ನು ಅನುಭವಿಸಬೇಕಾಗುತ್ತದೆ. ಹಾಗೆ ಊದಿಕೊಂಡ ಪ್ರಾಸ್ಪೇಟ್ ಗ್ರಂಥಿಯನ್ನು ಕುಗ್ಗಿಸುವಲ್ಲಿ ಅಥವಾ ಮುದುಡಿಸುವಲ್ಲಿ ಈ ಸಸ್ಯ ತುಂಬಾ ಪ್ರಯೋಜನಕಾರಿ.

ಮಾಡಬೇಕಾದುದೇನು?: ಈ ಸಸ್ಯದ ಹಸಿ ಎಲೆಗಳನ್ನು ತಂದು ಜಜ್ಜಿ ಪೇಸ್ಟ್ ಮಾಡಿ ಒಂದು ಚಿಕ್ಕ ಅಡಿಕೆಯಷ್ಟನ್ನು ನಿತ್ಯವೂ ಸೇವಿಸಿದರೆ ಪ್ರಾಸ್ಪೇಟ್ ಗ್ರಂಥಿಯ ಸಮಸ್ಯೆ ಕಡಿಮೆಯಾಗುತ್ತದೆ. ಹಸಿ ಎಲೆಗಳು ಸಿಗದಿದ್ದರೆ ಒಣಗಿಸಿ ಇಟ್ಟುಕೊಂಡ ಗಿಡವನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿಕೊಂಡು ಎರಡು ಚಮಚದಷ್ಟು ಈ ಪುಡಿಗೆ ನಾಲ್ಕು ಲೋಟ ನೀರು ಹಾಕಿ ಒಂದು ಲೋಟಕ್ಕೆ ಬತ್ತಿಸಿ, ಸೋಸಬೇಕು. ಅದನ್ನು ಬೆಳಗ್ಗೆ ಮತ್ತು ರಾತ್ರಿ ಆಹಾರದ ಮೊದಲು ಅರ್ಧ ಲೋಟದಷ್ಟು ಕುಡಿಯುವುದರಿಂದ ಕೂಡ ತುಂಬಾ ಪ್ರಯೋಜನವಾಗುತ್ತದೆ. ಮಹಿಳೆಯರಲ್ಲಿ ಅತಿಯಾಗಿ ರಕ್ತಸ್ರಾವ ಆಗುತ್ತಿದ್ದರೆ ಆಗ ಕೂಡ ಇದೇ ರೀತಿ ಕಷಾಯ ಮಾಡಿ 3 ತಿಂಗಳುಗಳ ಕಾಲ ಸತತವಾಗಿ ಸೇವಿಸುತ್ತಿದ್ದರೆ ಅತಿಯಾದ ರಕ್ತಸ್ರಾವ ಚೆನ್ನಾಗಿ ಹತೋಟಿಗೆ ಬಂದು ಋತುಚಕ್ರ ನಿಯಮಿತವಾಗಿ ಆಗಲು ಮತ್ತು ಮುಟ್ಟಿನ ಸಮಯದಲ್ಲಿ ಸರಿಯಾಗಿ ರಕ್ತಸ್ರಾವ ಆಗಲು ಸಹಾಯವಾಗುತ್ತದೆ. ಇದರ ಬೇರುಗಳನ್ನು ಕೂಡಿಸಿಟ್ಟುಕೊಂಡು ಇಡೀ ಗಿಡದ ಬದಲು ಕೇವಲ ಬೇರು ಹಾಕಿ ಇದೇ ರೀತಿಯಲ್ಲಿ ಕಷಾಯ ಮಾಡಿ 15 ದಿನ ಸೇವಿಸಿದರೆ ಸಾಮಾನ್ಯ ಗಾತ್ರದ ಮೂತ್ರದ ಕಲ್ಲುಗಳು ಬೀಳಲು ಸಹಾಯವಾಗುತ್ತದೆ. ಬೇಧಿಯಲ್ಲಿ ಕೂಡ ಇದು ಅತ್ಯಂತ ಸಹಕಾರಿ. ಇದರ ರಸ ತೆಗೆದು ಅಥವಾ ಕಷಾಯ ಮಾಡಿ ಅದಕ್ಕೆ ದಾಳಿಂಬೆ ಸಿಪ್ಪೆಯ ಪುಡಿಯನ್ನು ಅರ್ಧ ಚಮಚ ಹಾಕಿ ದಿನದಲ್ಲಿ ಎರಡರಿಂದ ಮೂರು ಬಾರಿ ಸೇವಿಸಿದರೆ ಬೇಧಿ ನಿಲ್ಲುತ್ತದೆ. ಮೂಲವ್ಯಾಧಿಯಲ್ಲಿ ಗಡ್ಡೆಗಳು ಮುದುಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ವಿಶೇಷವಾಗಿ ರಕ್ತ ಮೂಲವ್ಯಾಧಿಯಲ್ಲಿ ಇದು ತುಂಬಾ ಪ್ರಯೋಜನಕಾರಿ. ಆಗಲೂ ಮೇಲೆ ಹೇಳಿದಂತೆಯೇ ಇದರ ಕಷಾಯ ತಯಾರಿಸಿ ಸೇವಿಸಬಹುದು. ಗಾಯವಾದಾಗ ರಕ್ತಸ್ರಾವವನ್ನು ನಿಲ್ಲಿಸಲು ಇದರ ಎಲೆಗಳ ಪೇಸ್ಟ್ ಮಾಡಿ ಹಚ್ಚಬಹುದು. ಇದರಿಂದ ಗಾಯ ಬೇಗನೆ ಗುಣವಾಗಲು ಕೂಡ ಸಹಾಯವಾಗುತ್ತದೆ. ಗುದ ಅಥವಾ ಗರ್ಭಾಶಯ ಜಾರುವ, ಹೊರಬರುವ ಸಮಸ್ಯೆಯಾಗುತ್ತಿದ್ದರೆ ಇದರ ಕಷಾಯದ ಸೇವನೆ ತಕ್ಕಮಟ್ಟಿಗೆ ಸಹಾಯಮಾಡುತ್ತದೆ. ಇನ್ನು ಆಧುನಿಕ ಸಂಶೋಧನೆಗಳು ಇದಕ್ಕೆ ಸೂಕ್ಷ್ಮಾಣು ನಿರೋಧಕ ಗುಣ, ನರಗಳ ಶಕ್ತಿಯನ್ನು ಹೆಚ್ಚಿಸುವ ಗುಣ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸುವ ಗುಣಗಳಿವೆ ಎಂಬುದನ್ನು ಕಂಡುಕೊಂಡಿವೆ. ಒಟ್ಟಿನಲ್ಲಿ ಇದು ಕಳೆಯಲ್ಲ; ನಮಸ್ಕಾರಕ್ಕೆ ಯೋಗ್ಯವಾದ ಅದ್ಭುತ ಔಷಧ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net