ಹೈರಾಣಾಗಿಸುವ ನೆಗೆಟಿವ್ ಬಾಡಿ ಇಮೇಜ್: ಆಕಾರ-ವಿಕಾರಗಳಿಗೆ ಅಂಟಿಕೊಳ್ಳದೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳೋಣ

Worried Woman
Published on

ಹೆಣ್ಣುಮಕ್ಕಳು ಹೇಗೆ ಪ್ರಪಂಚವನ್ನು ನೋಡುತ್ತಿದ್ದಾರೆ ಎನ್ನುವುದಕ್ಕಿಂತ ಪ್ರಪಂಚದ ಕಣ್ಣುಗಳು ಆಕೆಯನ್ನು ಹೇಗೆ ನೋಡುತ್ತಿವೆ ಎಂಬುದಕ್ಕೆ ಸಾಮಾಜಿಕ ಪ್ರಾಶಸ್ತ್ಯ ಜಾಸ್ತಿ. ಒಮ್ಮೊಮ್ಮೆ, ಒಬ್ಬ ವ್ಯಕ್ತಿಯಾಗಿ ದೈಹಿಕವಾಗಿ ಹೇಗೆ ಗೋಚರಿಸುತ್ತಿದ್ದೇನೆ ಎನ್ನುವುದಕ್ಕಿಂತಲೂ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬೇಕೋ ಅದರೆಡೆಗೆ ಗಮನ ಕೊಡಬೇಕು ಎಂಬುದೂ ಹೊಳೆಯದಿರುವಷ್ಟು ಹೆಣ್ಣುಮಕ್ಕಳ ಮನಸ್ಸನ್ನು ಈ ನೆಗಟಿವ್ ಬಾಡಿ ಇಮೇಜ್ (ನಕಾರಾತ್ಮಕ ದೇಹ ಚಿತ್ರಣ)ಎಂಬ ಕ್ರಿಮಿ ಆವರಿಸಿಕೊಂಡುಬಿಡುತ್ತದೆ. ಅದರಲ್ಲೂ ಸ್ವಲ್ಪ ಸೂಕ್ಷ್ಮ ಪ್ರವೃತ್ತಿಯ, ದುರ್ಬಲ ಮನದ ಹೆಣ್ಣುಮಕ್ಕಳು ದೇಹದ ಲೋಪದೋಷಗಳ ಬಗ್ಗೆ ಹೆಚ್ಚೇ ಚಿಂತಿತರಾಗುತ್ತಾರೆ.

| ಡಾ.ಸುಷ್ಮಸಿಂಧು ಮನಃಶಾಸ್ತ್ರಜ್ಞೆ

ಹೆಣ್ಣು ಯಾವ ರೀತಿಯ ದೈಹಿಕ ಚಿತ್ರಣವನ್ನು ಸುಂದರ, ಪರ್ಫೆಕ್ಟ್ ಎಂದುಕೊಂಡಿದ್ದಾಳೋ, ಸುತ್ತಲಿನ ಸಮಾಜ ಯಾವ ಮಾದರಿಗೆ ಅವಳನ್ನು ಹೋಲಿಸುತ್ತಿದೆಯೋ, ಅದರ ನಿರೀಕ್ಷೆಗಳೇನೋ... ಈ ಎಲ್ಲ ಮಾನದಂಡಗಳ ಮೇಲೆ ಅವಳ ಮನದಲ್ಲಿ ತನ್ನ ದೇಹದ ಬಗ್ಗೆ ಅಭಿಮಾನ, ಅವಮಾನ ಮೂಡಲು ಶುರುವಾಗುತ್ತದೆ. ದಪ್ಪ-ಸಣ್ಣ, ಎತ್ತರ- ಗಿಡ್ಡ, ಕಪ್ಪು- ಬಿಳುಪು ಇವುಗಳಲ್ಲಿ ಯಾವುದರ ಪ್ರಮಾಣ ಏರುಪೇರಾದರೂ ಅವಹೇಳನಕ್ಕೆ ಗುರಿಯಾಗುವುದು ಗ್ಯಾರಂಟಿ. ಜತೆಗೆ ಮುಖ ಲಕ್ಷಣ, ಓರೆಕೋರೆಗಳನ್ನು ಎತ್ತಾಡುತ್ತಾ ಹೆಣ್ಣು ಮಕ್ಕಳನ್ನು ದೇಹಕ್ಕೇ ಅಂಟಿಸಿ, ಅಂದಾಜಿಸಿ ಅವರ ಮನದಲ್ಲಿ ಋಣಾತ್ಮಕವಾದ ದೇಹ ಚಿತ್ರಣವನ್ನು ಅವರವರೇ ಎನಿಸಿಕೊಂಡವರು ತುಂಬಿ ಬಿಡುತ್ತಾರೆ.

ದೈಹಿಕ ಸವಾಲುಗಳು: ಹಾಗೆ ನೋಡಿದರೆ ದೈಹಿಕವಾದ ಸಾಕಷ್ಟು ಸವಾಲು, ಬದಲಾವಣೆಗಳಿಗೆ ಒಳಗಾಗುವುದು ಹೆಣ್ಣು ಮಕ್ಕಳೇ. ಋತುಚಕ್ರ, ತಾಯ್ತನ, ಮೆನೋಪಾಸ್​ನಂತಹ ಪ್ರಮುಖ ಘಟ್ಟಗಳು, ಹಾರ್ವೇನ್ ವ್ಯತ್ಯಯದಿಂದಾದ ಏರುಪೇರುಗಳು ಹೆಣ್ಣುಮಕ್ಕಳ ದೇಹವನ್ನು ಒತ್ತಡಕ್ಕೊಳಪಡಿಸುತ್ತಲೇ ಇರುತ್ತದೆ. ಹಾಗೆಯೇ ಸಾಂಸಾರಿಕ, ವೃತ್ತಿ ಸಂಬಂಧಿತ ಸಮಸ್ಯೆಗಳು, ಆತಂಕಗಳು ಬರೀ ಮನಸ್ಸಿನಲ್ಲಷ್ಟೇ ಉಳಿಯದೇ ಅದರ ಪರಿಧಿಯನ್ನೂ ದಾಟಿ ದೇಹವನ್ನೂ ತಲ್ಲಣಿಸುತ್ತಿರುತ್ತದೆ. ಇದೆಲ್ಲದರ ನಡುವೆ ಆರೋಗ್ಯ ಕಾಪಾಡಿಕೊಳ್ಳುವುದೇ ಸಾಹಸವಾಗಿರುವಾಗ ಆಕರ್ಷಕವಾದ ಅಂಗಸೌಷ್ಟವ ಹೊಂದಿಲ್ಲವೆಂಬ ಕೊರಗೂ ಸೇರಿಬಿಟ್ಟರೆ ಸಂತಸ, ನೆಮ್ಮದಿ ಮನಸ್ಸಿನಿಂದ ದೂರವೇ. ಅದರಲ್ಲೂ ಸಣ್ಣ ವ್ಯತ್ಯಾಸಗಳಿಂದಲೂ ವೇಗವಾಗಿ ದೇಹವನ್ನು ವ್ಯಾಪಿಸುವ ಬೊಜ್ಜಿನ ಸಮಸ್ಯೆಯಿಂದ ದೇಹದತ್ತ ನೆಗೆಟಿವಿಟಿಯನ್ನು ಬೆಳೆಸಿಕೊಳ್ಳುವ ಹೆಣ್ಣುಮಕ್ಕಳೇ ಜಾಸ್ತಿ.

ಅವಾಸ್ತವ ದೇಹ ಚಿತ್ರಣ: ಯಾರೂ ತಮ್ಮ ಸೌಂದರ್ಯದ ಬಗ್ಗೆ ಸಂಪೂರ್ಣ ತೃಪ್ತರಾಗಿರುವುದಿಲ್ಲ. ಏನೆಂದರೂ ತಮ್ಮ ದೇಹದ ಬಗ್ಗೆ ಎಲ್ಲರಿಗೂ ಒಂದಲ್ಲೊಂದು ಅಸಮಾಧಾನ ಇದ್ದೇ ಇರುವುದು. ಆದರೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಅವರ ಅಸ್ತಿತ್ವ, ಗೌರವ, ಭವಿಷ್ಯ ಎಲ್ಲವೂ ದೈಹಿಕ ಸ್ವರೂಪದ ಮೇಲೆಯೇ ನಿಂತಿದೆ ಎಂಬ ನಂಬಿಕೆ ಚಿಕ್ಕಂದಿನಿಂದಲೇ ಬಲವಾಗಿಬಿಡುವುದರಿಂದ ಅವರ ಆಲೋಚನೆಯನ್ನೆಲ್ಲಾ ದೇಹದ ಘನತೆ, ನ್ಯೂನತೆಗಳೇ ತುಂಬುತ್ತದೆ. ಮೀಡಿಯಾದಲ್ಲಿ ಮೇಕಪ್, ತಾಂತ್ರಿಕತೆಯ ಕೈಚಳಕಗಳನ್ನು ಮರೆಮಾಚಿ ಸಹಜ ಸುಂದರವೆನ್ನುವಂತೆ ಬಿಂಬಿತವಾಗುವ ರೂಪದರ್ಶಿ ಗಳು, ಹುಡುಗಿಯ ಪ್ರಬುದ್ಧತೆ, ಸಾಧನೆಗಳಿಗಿಂತೆಲ್ಲಾ ಅವಳ ಅಂದವೇ ಶ್ರೇಷ್ಠವೆನ್ನುವಂತೆ ದೊರೆಯುವ ಸಾಮಾಜಿಕ ಪ್ರಶಂಸೆಗಳು ಅವಾಸ್ತವವಾದ ಸೌಂದರ್ಯ ಮಾಪಕವನ್ನು ತಲೆಯಲ್ಲಿಟ್ಟುಕೊಂಡು ಅದಕ್ಕೆ ಇನ್ನಿಲ್ಲದಂತೆ ಹೋಲಿಸಿಕೊಂಡು ನಲುಗುವಂತೆ ಪ್ರೇರೇಪಿಸುತ್ತವೆ.

ನೀವೂ ಋಣಾತ್ಮಕ ದೇಹ ಚಿತ್ರಣ ಹೊಂದಿದ್ದೀರಾ?: ನೆಗಟಿವ್ ದೇಹಭಾವ ಆತ್ಮವಿಶ್ವಾಸವನ್ನು ಕುಗ್ಗಿಸಿ ನಮ್ಮೆಲ್ಲಾ ಚಟುವಟಿಕೆಗಳ ಮೇಲೂ ಋಣಾತ್ಮಕ ಪರಿಣಾಮ ಬೀರಿ ಕಾರ್ಯಕ್ಷಮತೆಯನ್ನು ತಗ್ಗಿಸುತ್ತದೆ. ಸುಮ್ಮನಿರಲೂಬಾರದು, ದೈಹಿಕವಾಗಿ ತೊಡಗಿಸಿಕೊಳ್ಳಬೇಕಾದ ಯಾವ ಕೆಲಸವನ್ನೂ ಖುಷಿಯಿಂದ ಸಮರ್ಪಕವಾಗಿ ಮಾಡಲೂ ಆಗದು ಎನ್ನುವಂತಾದಾಗ ದೇಹ ಸಂಬಂಧಿತ ನಕಾರಾತ್ಮಕ ಆಲೋಚನೆಗಳ ಹಿಡಿತಕ್ಕೆ ನಾವು ಒಳಗಾಗಿದ್ದೇವೆ ಎಂದರ್ಥ.

ದೇಹವೇ ನಮ್ಮ ಐಡೆಂಟಿಟಿಯಲ್ಲ

ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ತೂಕ ಕಳೆದುಕೊಳ್ಳುವುದಕ್ಕಿಂತ ಅದರಿಂದ ಸಿಗುವ ಉಲ್ಲಾಸ ಆದ್ಯತೆಯಾಗಬೇಕು. ದೇಹ ಕೇಂದ್ರಿತವಾದ ಮನಸ್ಸನ್ನು ಸೃಜನಶೀಲ ಹವ್ಯಾಸ, ಆರೋಗ್ಯಕರ ಅಭ್ಯಾಸಗಳತ್ತ ತೊಡಗಿಸಿಕೊಳ್ಳಬೇಕು. ದೇಹವೇ ನಮ್ಮ ಐಡೆಂಟಿಟಿಯಲ್ಲ. ವ್ಯಕ್ತಿತ್ವ ರೂಪಿಸಿಕೊಳ್ಳಲು ವೃತ್ತಿ, ಪ್ರವೃತ್ತಿಗಳಿಂದ ದೊರೆಯುವ ವಿಶ್ವಾಸ, ಸಕಾರಾತ್ಮಕ ಭಾವ ಸಹಕಾರಿಯಾಗುವುದು. ವಯೋಸಹಜವಾದ ದೇಹದ ಬದಲಾವಣೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮನೋಭಾವನೆ ಹೊಂದುವುದು ಎಂದಿಗೂ ಆರೋಗ್ಯಕರ ಎಂದು ತಿಳಿಯಬೇಕು. ದೇಹದ ಕುರಿತು ತೀವ್ರವಾದ ಕಾಳಜಿಯಾಗಲಿ, ನಿರ್ಲಕ್ಷ್ಯವಾಗಲಿ ಅನುಪಯುಕ್ತ. ಏನಿದ್ದರೂ ಸಮತೋಲಿತವಾಗಿ ದೇಹ ಆರೋಗ್ಯ ನೋಡಿಕೊಂಡು, ಸ್ವ- ಆರೈಕೆ ಮಾಡಿಕೊಳ್ಳುತ್ತಾ, ನಮ್ಮ ಆಕಾರ-ವಿಕಾರಗಳಿಗೆ ಅಂಟಿಕೊಳ್ಳದೇ ಖುಷಿಖುಷಿಯಾಗಿ ಮನಸ್ಸನ್ನಿಟ್ಟುಕೊಂಡು ಸ್ವ-ಮೌಲ್ಯವನ್ನು ಅರಿತುಕೊಂಡು ಬಿಟ್ಟರೆ ಯಾವ ನೆಗೆಟಿವಿಟಿಯೂ ಹೆಚ್ಚು ಬಾಧಿಸದು.

ಹೊರಬರಲು ತಾಳ್ಮೆ ಅಗತ್ಯ

ಋಣಾತ್ಮಕ ದೇಹ ಚಿತ್ರಣದಿಂದ ಹೊರ ಬರುವುದು ಅಷ್ಟು ಸಲೀಸಲ್ಲ. ವರ್ಷಗಟ್ಟಲೆ ನಕಾರಾತ್ಮಕ ಮಾತುಗಳನ್ನು ಕೇಳಿ ಅದೇ ನೇರದಲ್ಲಿ ಹೆಣ್ಣುಮಕ್ಕಳು ತಮ್ಮ ನಂಬುಗೆ, ಚಿಂತನೆಗಳನ್ನು ರೂಢಿಸಿಕೊಂಡ ಮೇಲೆ ಬಹಳ ತಾಳ್ಮೆ, ಸಮಯ, ಪ್ರಯತ್ನ ಈ ನಿಟ್ಟಿನಲ್ಲಿ ಅನಿವಾರ್ಯ. ಈ ದಿಸೆಯಲ್ಲಿ ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ. ಮಾಧ್ಯಮ ತೋರಿಸುವ ಅವಾಸ್ತವಿಕ ದೇಹ ಚಿತ್ರಣವನ್ನು ರ್ತಸದೇ ಒಪ್ಪುವುದನ್ನು ಕೈಬಿಡಬೇಕು. ಮೀಡಿಯಾದಲ್ಲಿ ಐಡಿಯಲ್ ಎಂದು ತೋರಿಸುವ ಹೆಣ್ಣುಮಕ್ಕಳ ದೇಹ ಚಿತ್ರಣದ ಹಿಂದೆ ಲಾಭದ ಉದ್ದೇಶ ಇರುವುದೇ ವಿನಾ ಮತ್ಯಾವ ಸದುದ್ದೇಶವೂ ಇರುವುದಿಲ್ಲ. ಹಾಗಾಗಿ ಅಲ್ಲಿ ತೋರಿಸುವುದೆಲ್ಲ ನಿಜವಲ್ಲ. ದೇಹದ ಬಗ್ಗೆ ಮನಸ್ಸಿನಲ್ಲಿ ನಕಾರಾತ್ಮಕವಾಗಿ ಮಾತನಾಡದಿರಿ. ನಮ್ಮ ದೇಹ ಹೇಗೆ ಅವಿರತವಾಗಿ ಕಾರ್ಯ ನಿರ್ವಹಿಸುತ್ತಾ ಆರೋಗ್ಯವಾಗಿದೆ ಎನ್ನುವುದು ಅದು ಹೇಗೆ ಕಾಣಿಸುತ್ತಿದೆ ಎನ್ನುವುದಕ್ಕಿಂತ ಬಹು ಮುಖ್ಯ. ದೇಹದ ಕುರಿತು ಕೃತಜ್ಞ ಭಾವವಿರಲಿ. ಕೆಟ್ಟ ಆಲೋಚನೆಗಳನ್ನು ಆಲಕ್ಷಿಸಿ, ನಿಮ್ಮಲ್ಲಿರುವ ಒಳ್ಳೆಯ ಅಂಶಗಳತ್ತ ಮನಸ್ಸನ್ನು ತಿರುಗಿಸಿ. ಮನಸ್ಸಿನಲ್ಲಿ ಋಣಾತ್ಮಕ, ಖಿನ್ನ ಭಾವ ಹೆಚ್ಚಾದಷ್ಟೂ ಅನಾರೋಗ್ಯಕರ ಅಭ್ಯಾಸಗಳಾದ ಎಮೋಷನಲ್ ಈಟಿಂಗ್, ಅತಿಯಾಗಿ ಸೇವಿಸುವುದು ಇಲ್ಲವೇ ತೀವ್ರಕರವಾದ ಡಯಟಿಂಗ್ ಜಾಸ್ತಿಯಾಗುತ್ತದೆ ಮತ್ತು ಮಾನಸಿಕ ತೊಂದರೆಗಳಿಗೂ ಎಡೆ ಮಾಡಿಕೊಡುತ್ತದೆ. ಹಾಗಾಗಿ ಮನವನ್ನು ಹಸನಾಗಿಡಿ. ಅತಿಯಾಗಿ ಬ್ಯೂಟಿ ಮ್ಯಾಗಜಿನ್ಸ್, ಟಿಪ್ಸ್ ಗಳನ್ನು ಅನುಕರಿಸುವುದನ್ನು ನಿಲ್ಲಿಸಿ. ನಿರ್ಧಿಷ್ಟ ಮಾನದಂಡಗಳನ್ನು ಹೇರಿ ಅವೇ ಹೆಣ್ಣು ಮಕ್ಕಳನ್ನು ದುರ್ಬಲರನ್ನಾಗಿಸುತ್ತಲೂ ಇವೆ ಎಂಬುದು ನೆನಪಿರಲಿ.

ನೆಗೆಟಿವ್ ದೇಹ ಚಿತ್ರಣದ ಸಾಮಾನ್ಯ ಲಕ್ಷಣಗಳಿವು

  • ಸಾಮಾಜಿಕ ಸನ್ನಿವೇಶಗಳು, ಸಂತೋಷ ಕೂಟಗಳಿಂದ ಆದಷ್ಟು ತಪ್ಪಿಸಿಕೊಳ್ಳುವುದು.
  • ನಕಾರಾತ್ಮಕ ಟೀಕೆಗಳಿಂದ ತೀವ್ರವಾಗಿ ಘಾಸಿಗೊಂಡು ಕೀಳರಿಮೆ, ಖಿನ್ನತೆಗೊಳಗಾಗುವುದು.
  • ಅತಿಯಾಗಿ ದೇಹದ ಮೇಲೆಯೇ ಕೇಂದ್ರಿತವಾಗಿರುವುದು. ಕನ್ನಡಿ, ಗಾಜಿನ ಪ್ರತಿಫಲನಗಳಲ್ಲೆಲ್ಲಾ ತನ್ನ ದೇಹದ ಕುಂದುಕೊರತೆಗಳನ್ನಷ್ಟೇ ನೋಡಿಕೊಳ್ಳುವುದು.
  • ಕಾಸ್ಮೆಟಿಕ್ಸ್, ಪಾರ್ಲರ್​ಗಳ ಮೇಲೆ ವಿಪರೀತ ದುಡ್ಡು ಸುರಿಯುವುದು.
  • ಅನಾರೋಗ್ಯಕರ ಡಯಟಿಂಗ್, ಸೌಂದರ್ಯ ಚಿಕಿತ್ಸೆಗಳ ಮೊರೆಹೋಗುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net