ನ್ಯಾಯಾಂಗ ಕ್ಷೇತ್ರದ ಭರವಸೆಯ ಬೆಳಕು ವಕೀಲರು: ಇಂದು ವಕೀಲರ ದಿನ

Lawyers day
Published on
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ನಾಯಕತ್ವ ವಹಿಸಿದ ನಾಯಕರನ್ನು ಗಮನಿಸಿದರೆ ಬಹುತೇಕರು ವಕೀಲರಾಗಿದ್ದರು ಅಥವಾ ಕಾನೂನಿನ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದರು ಎಂಬುದು ವಿಶೇಷ. ಗಾಂಧೀಜಿ, ಲಾಲಾಲಜಪತ್ ರಾಯ್, ಬಾಬು ರಾಜೇಂದ್ರಪ್ರಸಾದ್, ಸರ್ದಾರ್ ವಲ್ಲಭಭಾಯ್ ಪಟೇಲ್, ದಾದಾಭಾಯಿ ನವರೋಜಿ, ಸುರೇಂದ್ರನಾಥ ಬ್ಯಾನರ್ಜಿ, ಮದನಮೋಹನ ಮಾಳವಿಯ, ಮೋತಿಲಾಲ್ ನೆಹರು, ಲೋಕಮಾನ್ಯ ಬಾಲಗಂಗಾಧರ ತಿಲಕ್, ಸಿ. ರಾಜಗೋಪಾಲಾಚಾರಿ, ಸಿ.ಆರ್.ದಾಸ್, ಬುಲಾಭಾಯಿ ದೇಸಾಯಿ, ಅಸಫ್ ಅಲಿ, ಗೋವಿಂದ ವಲ್ಲಭ ಪಂತ್, ಕೈಲಾಶ್ ನಾಥ್ ಕಟ್ಜು ಹೀಗೆ ಹಲವರ ನಿದರ್ಶನ ನೀಡಬಹುದು.

ಸ್ವಾತಂತ್ರ್ಯಾನಂತರ ಸ್ವಾವಲಂಬಿ ಮತ್ತು ಸ್ವಾಭಿಮಾನಿ ಭಾರತಕ್ಕೆ ಸಂವಿಧಾನ ರಚಿಸಲು ನೇಮಿಸಿದ ಸಮಿತಿ ಕೂಡ ಕಾನೂನು ತಜ್ಞರುಗಳಾದ ಡಾ. ಬಾಬಾಸಾಹೇಬ್ ಅಂಬೇಡ್ಕರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಎನ್.ಗೋಪಾಲಸ್ವಾಮಿ, ಬೆನಗಲ್ ನರಸಿಂಗರಾವ್, ಕೆ.ಎಂ. ಮುನ್ಷಿ, ಮೊಹಮ್ಮದ್ ಸಾದುಲ್ಲಾ, ಬಿ.ಎಲ್.ಮಿತ್ತರ್, ಡಿ.ಪಿ.ಕೈಟನ್​ರನ್ನು ಒಳಗೊಂಡಿತ್ತು. ಸಂವಿಧಾನ ಸಭೆಯ ಸಂವಿಧಾನ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಸಂವಿಧಾನದ ಕರಡು ರೂಪ ನೀಡಿದ ಬೆನಗಲ್ ನರಸಿಂಹರಾಯರು ಕರ್ನಾಟಕದವರು ಎಂಬುದು ಹೆಮ್ಮೆ.

ಜಗತ್ತಿನ ಬಹುತೇಕ ತತ್ತ್ವಸಿದ್ಧಾಂತ, ಹಕ್ಕು ಮತ್ತು ಕರ್ತವ್ಯ ಗಳ ಆಳವಾದ ಅಧ್ಯಯನ ನಡೆಸಿ ಸ್ವತಂತ್ರ ಭಾರತಕ್ಕೊಂದು ಶ್ರೇಷ್ಠ ಸಂವಿಧಾನ ರೂಪಿಸಿದ ಕೀರ್ತಿಯ ಸಿಂಹಪಾಲು ವಕೀಲವೃತ್ತಿಗೆ ಸಲ್ಲುತ್ತದೆ ಎಂದರೆ ತಪ್ಪಾಗಲಾರದು. ವಕೀಲರೂ ಆಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ವಹಿಸಿದ ನಾಯಕತ್ವ, ಸಮನ್ವಯತೆ ಹಾಗೂ ಸಹಬಾಳ್ವೆ ಅಜರಾಮರ. ಇಂದು ನಾವು ನೋಡುತ್ತಿರುವ ಸರ್ವವ್ಯಾಪಿ, ಸರ್ವರ್ಸ³ ಕಾನೂನುಗಳ ಮೂಲ ಅಥವಾ ತಾಯಿ ನಮ್ಮ ಸಂವಿಧಾನ. ಈ ಸಂವಿಧಾನವನ್ನು ಕಾಲಕಾಲಕ್ಕೆ ಸೂಕ್ತವಾಗಿ ವ್ಯಾಖ್ಯಾನ ಮಾಡುತ್ತಿರುವುದು ವಕೀಲರೇ. ಸಾಂವಿಧಾನಿಕ ಪೀಠಗಳನ್ನು ಅಲಂಕರಿಸಿ ಸಮರ್ಪಕ ತೀರ್ಪಗಳನ್ನು ನೀಡುವವರು ಕೂಡ ಮೂಲತಃ ವಕೀಲರೇ ಆಗಿರುತ್ತಾರೆ. ಹಾಗಾಗಿ ವಕೀಲರ ವಿಶೇಷವಾದ ಸ್ಥಾನಮಾನ ಮತ್ತು ಜವಾಬ್ದಾರಿಗಳನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಈ ಕೊಡುಗೆ ಮತ್ತು ಜವಾಬ್ದಾರಿಗಳ ಅವಲೋಕನಕ್ಕಾಗಿ ಮತ್ತು ಭಾರತದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ಅವರ ಜನ್ಮದಿನದ ಸವಿನೆನಪಿಗಾಗಿ ಪ್ರತಿ ವರ್ಷ ಡಿಸೆಂಬರ್ 03ನ್ನು ವಕೀಲರ ದಿನವಾಗಿ ಆಚರಿಸಲಾಗುತ್ತದೆ.

ಬಾಬು ರಾಜೇಂದ್ರ ಪ್ರಸಾದರು (ಜನನ 1884 ಡಿಸೆಂಬರ್ 03) ಕಾನೂನು ಪದವಿ ನಂತರ ಸ್ನಾತಕೋತ್ತರ ಪದವಿಯನ್ನೂ ಪಡದು, ವಕೀಲವೃತ್ತಿ ಆರಂಭಿಸಿದರು. ನಂತರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರವಹಿಸಿ, ದೇಶ, ಸಮಾಜಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡರು. ಭಾರತದ ಮೊದಲ ರಾಷ್ಟ್ರಪತಿಯಾಗಿ (1950 ಜನವರಿ 26ರಿಂದ ಸತತ ಹನ್ನೆರಡು ವರ್ಷ) ಕಾರ್ಯನಿರ್ವಹಿಸಿ, ಜನಮಾನಸದಲ್ಲಿ ಶಾಶ್ವತ ಸ್ಥಾನ ಗಳಿಸಿದರು. ವಕೀಲರ ದಿನದ ನಿಮಿತ್ತ ಡಾ.ರಾಜೇಂದ್ರಪ್ರಸಾದರ ಸಾಧನೆ ಹಾಗೂ ಕೊಡುಗೆಗಳನ್ನು ನೆನಪಿಸುವುದು ಒಂದು ಭಾಗವಾದರೆ, ವಕೀಲ ವೃತ್ತಿ ಬಗ್ಗೆ ಚಿಂತನ-ಮಂಥನ ನಡೆಸಿ ಕಾನೂನು ಕ್ಷೇತ್ರದ ಆಗುಹೋಗುಗಳ ಬಗ್ಗೆ ಅವಲೋಕಿಸುವುದು ಇನ್ನೊಂದು ಭಾಗ.

ವೃತ್ತಿನಿಷ್ಠೆ ಮುಖ್ಯ: ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರಗಳಲ್ಲಿ ನ್ಯಾಯಾಂಗ ಕೂಡ ಒಂದು. ಸರಿಸುಮಾರು 24 ಲಕ್ಷ ವಕೀಲರು ಈಗಾಗಲೇ ನೋಂದಣಿ ಮಾಡಿ ಕೊಂಡು ನ್ಯಾಯಾಂಗದ ಹಲವು ವಿಭಾಗಗಳಲ್ಲಿ ವೃತ್ತಿಜೀವನ ನಡೆಸುತ್ತಿದ್ದಾರೆ. ವಕೀಲ ವೃತ್ತಿಯನ್ನು ‘ನೊಬಲ್ ಪ್ರೊಫೆಷನ್ ’ ಎಂದು ಕೊಂಡಾಡುವ ಸಂದರ್ಭದಲ್ಲಿ ವೃತ್ತಿಯಲ್ಲಿ ಅನುಸರಿಸಬೇಕಾದ ನಿಷ್ಠೆ, ಗೌರವ, ಅಧ್ಯಯನ, ನೈತಿಕತೆ ಇತ್ಯಾದಿ ಮೌಲ್ಯಗಳನ್ನು ಮರೆಯುವಂತಿಲ್ಲ. ಕಠಿಣ ಪರಿಶ್ರಮಕ್ಕೆ ಯಾವತ್ತೂ ಸೂಕ್ತ ಪ್ರತಿಫಲ ಇದ್ದೇ ಇದೆ ಎಂಬುದನ್ನು ನೆನಪಿಸಿಕೊಳ್ಳಲು ಒಂದಷ್ಟು ಹಿರಿಯ ಕಾನೂನು ಪಂಡಿತರ ಸಾಧನೆಗಳು ಮತ್ತು ಜೀವನಾದರ್ಶಗಳ ಸ್ಮರಣೆ ಅತ್ಯಗತ್ಯ. ವಕೀಲರನ್ನು ‘ಸಾಮಾಜಿಕ ವೈದ್ಯರು’ ಎಂದು ಕರೆಯುವುದುಂಟು. ಏಕೆಂದರೆ ಸಮಾಜದ ಡೊಂಕನ್ನು ತಿದ್ದುವಲ್ಲಿ ವಕೀಲರ ಪಾತ್ರ ಮಹತ್ವದ್ದು. ಸಾಮಾಜಿಕ ಸುಧಾರಣೆಗಳನ್ನು ತರಲು ಮತ್ತು ಪಿಡುಗುಗಳನ್ನು ಕೊನೆಗಾಣಿಸಲು ಮಹತ್ವದ ಪಾತ್ರ ವಹಿಸಬೇಕಾಗುತ್ತದೆ. ಕಾಲಕಾಲಕ್ಕೆ ಜನಪರ ಹೋರಾಟ, ಚಳವಳಿಗಳಿಗೆ ನಾಯಕತ್ವ ನೀಡುವುದು ಮಾತ್ರವಲ್ಲದೆ ನ್ಯಾಯಾಲಯಗಳಲ್ಲಿ ದೀನ, ದಲಿತ, ಶೋಷಿತ, ಅಸಂಘಟಿತ ವರ್ಗ ಕ್ಷೇತ್ರಗಳ ಹಕ್ಕುಗಳಿಗಾಗಿ, ಅಭಿವೃದ್ಧಿಗಾಗಿ ನ್ಯಾಯಯುತ ಹೋರಾಟ ಮಾಡಬೇಕಾದದ್ದು ವಕೀಲರೇ. ವಕೀಲರನ್ನು ‘ಸಾಮಾಜಿಕ ಇಂಜಿನಿಯರ್​ಗಳು’ ಎಂದೂ ಕರೆಯುವುದುಂಟು. ಏಕೆಂದರೆ ದೇಶದ ಸಮಗ್ರ ಅಭಿವೃದ್ಧಿ, ಮೂಲಭೂತ ಸೌಕರ್ಯಗಳನ್ನು ಜನಮಾನಸಕ್ಕೆ ತಲುಪಿಸುವಂತೆ ಮಾಡುವುದಲ್ಲದೆ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಇತ್ಯಾದಿಗಳಿಂದ ಸಮಾಜವನ್ನು ಮುಕ್ತಗೊಳಿಸಲು ಬಹುಪಾಲು ಹೋರಾಟ ವಕೀಲರದ್ದೇ. ತುರ್ತಪರಿಸ್ಥಿತಿಯ ಕರಾಳ ದಿನಗಳಲ್ಲಿ ಜನರು ಎಲ್ಲ ಮೂಲಭೂತ ಹಕ್ಕುಗಳನ್ನು ಕಳೆದುಕೊಂಡಾಗ ನ್ಯಾಯಾಲಯದ ಕದ ತಟ್ಟುವಲ್ಲಿ ಹಾಗೂ ಜಾಗೃತಿ ಮೂಡಿಸುವಲ್ಲಿ ವಕೀಲರ ಪಾತ್ರವನ್ನು ಮರೆಯುವಂತಿಲ್ಲ.

ಸದಾ ಅಧ್ಯಯನಶೀಲರಾಗಿ ಇರುವಂಥ ವೃತ್ತಿ ಎಂದರೆ ಅದು ವಕೀಲ ವೃತ್ತಿ. ಪ್ರತಿದಿನ, ಪ್ರತಿಕ್ಷಣ ಹೊಸ ವಿಚಾರ, ವಿಷಯ ಹಾಗೂ ಅನುಭವಗಳನ್ನು ಪಡೆಯುತ್ತ ಹೋಗುವ ವೃತ್ತಿ ಇದು. ಇದಕ್ಕಾಗಿಯೇ ವಕೀಲರನ್ನು ಮತ್ತು ಕಾನೂನು ಪಂಡಿತರನ್ನು ಸಂಬೋಧಿಸುವಾಗ Learned (ಪ್ರಾಜ್ಞ) ಎಂಬ ಪದ ಬಳಸುತ್ತಾರೆ. ನ್ಯಾಯಾಧೀಶರು ಹಾಗೂ ನ್ಯಾಯವಾದಿಗಳು ನ್ಯಾಯಾಂಗ ವ್ಯವಸ್ಥೆಯ ಆಧಾರಸ್ತಂಭವಿದ್ದಂತೆ. ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆ, ಗೌರವ, ಅಭಿಮಾನದಿಂದ ಕಾಣುವುದು ಅವಶ್ಯ. ಉತ್ತಮ ನ್ಯಾಯವಾದಿಗಳಿದ್ದರೆ ಉತ್ತಮ ನ್ಯಾಯಾಧೀಶರು ಮತ್ತು ಉತ್ತಮ ನ್ಯಾಯಾಧೀಶರಿದ್ದರೆ ಉತ್ತಮ ನ್ಯಾಯವಾದಿಗಳು ಸಿಗಲು ಸಾಧ್ಯ. ಇಲ್ಲಿ ಯಾರು ಕೂಡ ಇನ್ನೊಬ್ಬರನ್ನು ಅಗೌರವಯುತವಾಗಿ ನಡೆಸಿಕೊಳ್ಳಬಾರದು. ನ್ಯಾಯದೇಗುಲದ ಪಾವಿತ್ರ್ಯ ಕಾಪಾಡುವುದು ಸಾಮೂಹಿಕ ಜವಾಬ್ದಾರಿ. ವಕೀಲರನ್ನು Officers Of The Court (ನ್ಯಾಯಾಲಯದ ಅಧಿಕಾರಿ ) ಎಂದು ಕರೆಯುವುದು ಇದಕ್ಕಾಗಿ. ಕಕ್ಷಿದಾರರ ಹಿತ ಕಾಪಾಡುವುದರೊಂದಿಗೆ ನ್ಯಾಯಾಲಯದಲ್ಲಿ ಸಹಕರಿಸುವುದು ಆದ್ಯ ಕರ್ತವ್ಯ. ನ್ಯಾಯಾಲಯಕ್ಕೆ, ನ್ಯಾಯಾಧೀಶರಿಗೆ ಅಪಚಾರ, ಅಗೌರವ ಆಗದಂತೆ ನಡೆಯುವುದೇ ವೃತ್ತಿಧರ್ಮ.

ವೃತ್ತಿಗೆ ಹೊಸದಾಗಿ ಬರುವ ಯುವ ವಕೀಲರುಗಳಿಗೆ ಸೂಕ್ತ ಮಾರ್ಗದರ್ಶನ, ಅವಕಾಶ, ಪ್ರೋತ್ಸಾಹ ನೀಡುವ ಜವಾಬ್ದಾರಿ ಹಿರಿಯರದ್ದಾದರೆ, ಗೌರವ, ಶ್ರದ್ಧೆಯಿಂದ ಹಿರಿಯರ ಸಲಹೆ, ಸಹಕಾರಗಳನ್ನು ಪಾಲಿಸುವುದು ಕಿರಿಯರ ಜವಾಬ್ದಾರಿ. ತಮಗೆ ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ವೃತ್ತಿಯಲ್ಲಿ ಬೆಳೆಯುವುದರೊಂದಿಗೆ ಘನತೆ, ಗೌರವ ಸಂಪಾದಿಸುವುದು ಮುಖ್ಯ. ಅಂದಿನಿಂದ ಇಂದಿನವರೆಗೂ ಸಮಾಜಕ್ಕೆ ನಾಯಕತ್ವ ಕೊಡುತ್ತ ಬಂದಿರುವ ಕಾನೂನು ಕ್ಷೇತ್ರ ನಿಜಕ್ಕೂ ಮಹತ್ತರವಾದುದು. ಈ ಮುಂದೆಯೂ ಇದರ ಘನತೆ ಹೀಗೆ ಮುಂದುವರಿಯಲಿ.

(ಲೇಖಕರು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಮತ್ತು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net