

| ಲತೀಶ್ ಎಸ್. ಓಡಿಲ್ನಾಳ
ಕಲೆ ಎನ್ನುವುದು ನಿಂತ ನೀರಲ್ಲ ಅದು ಹರಿಯುವ ಜಲಧಾರೆ. ಪ್ರತಿಯೊಬ್ಬರಲ್ಲೂ ಹಲವು ರೀತಿಯ ಕಲಾ ಪ್ರತಿಭೆ ಅಡಗಿರುತ್ತದೆ. ಅದನ್ನು ಬೆಳೆಸುವ ರೀತಿ ಮಾತ್ರ ಬೇರೆ ಬೇರೆ. ಆಸಕ್ತಿ, ಛಲಕ್ಕೆ ನೀರೆರೆಯುತ್ತ ಹೋದಂತೆ ಒಂದು ಚಿಕ್ಕ ಪ್ರತಿಭೆಯೂ ಹೆಮ್ಮರವಾಗಿ ಬೆಳೆದು ನಿಲ್ಲುತ್ತದೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಕ್ಯೂಬ್ ಕಲೆಗಾರ ಪೃಥ್ವೀಶ್.
ಕ್ಯೂಬ್ ಎಂಬ ಆಟಿಕೆಯನ್ನು ಹಿಡಿದುಕೊಂಡು ಅದರಲ್ಲಿ ನಾನಾ ರೀತಿಯ ಖೂಬ್ಸೂರತ್ ಎಂಬಂಥ ಕಲಾಕೃತಿಗಳನ್ನು ರಚಿಸುವುದು ಸುಲಭದ ವಿಷಯವಲ್ಲ. ಅಂತಹ ಒಂದು ಅದ್ಭುತವಾದ ಕಲೆಯನ್ನು ಪೃಥ್ವೀಶ್ ಕರಗತವಾಗಿಸಿಕೊಂಡಿದ್ದಾರೆ. ಹಲವು ಸಭೆ-ಸಮಾರಂಭಗಳಲ್ಲಿ ಮದುವೆ, ಹುಟ್ಟುಹಬ್ಬ, ನಾಮಕರಣಗಳಲ್ಲಿ ಕ್ಯೂಬ್ ಕಲೆ ಪ್ರದರ್ಶನ ಮಾಡುತ್ತ ಬಂದಿರುವ ಇವರು ಐಐಎಂಬಿ ಬೆಂಗಳೂರು ಏಕ್ಸಿಮರ್ಸ್ ಕಾರ್ಯಕ್ರಮದಲ್ಲಿ ಆಪಲ್ ಕಂಪನಿ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಕಲಾಕೃತಿಗಳ 900 ಕ್ಯೂಬ್ಗಳನ್ನು ಬಳಸಿ ಪ್ರದರ್ಶಿಸಿದ್ದಾರೆ. ಗಣರಾಜ್ಯೋತ್ಸವ ಪ್ರಯುಕ್ತ ಚೆನ್ನೈ ಫೀನಿಕ್ಸ್ ಮಾಲ್ ನಲ್ಲಿ 1997 ಕ್ಯೂಬ್ಗಳಿಂದ ರಿಪಬ್ಲಿಕ್ ಡೇ ಚಿತ್ರಣ ಪ್ರದರ್ಶಿಸಿದ ಹೆಗ್ಗಳಿಕೆಯೂ ಇವರದಾಗಿದೆ. ರೇಡಿಯೋ ಸಿಟಿ ಲೋಗೊ ಪ್ರದರ್ಶನ ಹಾಗೂ ಕೇರಳದ ಮಲಪುರಂ ಜಾನಪದ ನೃತ್ಯ ಪ್ರಕಾರಗಳಾದ ಕಥಕ್ಕಳಿಯನ್ನು 400 ಕ್ಯೂಬ್ ಬಳಸಿ ಪ್ರದರ್ಶನ ನೀಡಿದ್ದಾರೆ. ವಿದುಷಿ ಎಂ.ಎಸ್. ಸುಬ್ಬಲಕ್ಷ್ಮಿ ಅವರ ಪುಣ್ಯತಿಥಿಯಂದು ಉಜಿರೆಯಲ್ಲಿ 700 ಕ್ಯೂಬ್ ಬಳಸಿಕೊಂಡು ಮೊನಾಲಿಸಾ ಕಲಾಕೃತಿಗಳನ್ನೂ ಪ್ರದರ್ಶಿಸಿದ್ದಾರೆ.
ಹೀಗೆ ಅನೇಕ ರೀತಿಯ ಕಲಾಕೃತಿಗಳನ್ನು ಕ್ಯೂಬ್ ಮೂಲಕ ರಚಿಸಿ ಪ್ರದರ್ಶನ ಮಾಡಿಕೊಂಡು ಬರುತ್ತಿರುವ ಇವರು ಇದನ್ನು ಕಲಿಯಲು ಆಸಕ್ತಿ ಇರುವ ಜನರಿಗೆ ಹೇಳಿಕೊಡಬೇಕು ಎಂದು ಒಂದು ವರ್ಷದ ಅವಧಿಯಲ್ಲಿ ಒಂದು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ರೂಬಿಕ್ಸ್ ಕ್ಯೂಬ್ ತರಬೇತಿ ನೀಡಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಸಾಧಿಸಿದ್ದಾರೆ.
ಕ್ಯೂಬ್ನಲ್ಲಿ ಸುಲಭ ಪರಿಹಾರ ಕಂಡು ಹಿಡಿದ ಹಿನ್ನೆಲೆಯಲ್ಲಿ ವರ್ಲ್ಡ್ ರೆಕಾರ್ಡ್ಸ್ ಇಂಡಿಯಾದಲ್ಲೂ ಇವರ ಸಾಧನೆ ಸೇರ್ಪಡೆಗೊಂಡಿದೆ. ಅತಿ ಕಡಿಮೆ ಸಮಯದಲ್ಲಿ ಚಿತ್ರ ರಚನೆಯನ್ನು ಮಾಡಿ ಅಸಿಸ್ಟೆಂಟ್ ವರ್ಲ್ಡ್ ರೆಕಾರ್ಡ್ಸ್ನಲ್ಲೂ ಹೆಸರು ದಾಖಲಿಸಿದ್ದಾರೆ. 4500 ಕ್ಯೂಬ್ಸ್ ಬಳಸಿ ದ್ವಿಮುಖ ಚಿತ್ರ ರಚಿಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾರೆ.
ಅತಿ ಕಡಿಮೆ ಅವಧಿಯಲ್ಲಿ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ರೂಬಿಕ್ ಕ್ಯೂಬ್ ತರಬೇತಿ ನೀಡಿರುವುದನ್ನು ಪರಿಗಣಿಸಿ ವರ್ಲ್ಡ್ ರೆಕಾರ್ಡ್ಸ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಹಾಗೂ ಉಡುಪಿ ಜೆಸಿಐ ವತಿಯಿಂದ ಪ್ರತಿಭಾ ಪುರಸ್ಕಾರ, ಶಿವರಾಮ ಕಾರಂತ ವಿದ್ಯಾರ್ಥಿ ಗೌರವ ಮೊದಲಾದ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ.
ಡಾ. ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಅವರದೇ ಭಾವಚಿತ್ರವಿಟ್ಟು ಬಿಡಿಸಿದ ಹೆಗ್ಗಳಿಕೆ ಇವರದು. ಹಾಗೆಯೇ ನುಡಿಸಿರಿಯಲ್ಲಿ ಮೋಹನ್ ಆಳ್ವ, ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಖ್ಯಾತ ಉದ್ಯಮಿ ಆನಂದ ಸಿ. ಕುಂದರ್ ಹಾಗೂ ಶೃಂಗೇರಿಯಲ್ಲಿ ಶ್ರೀ ರಾಘವೇಂದ್ರಸ್ವಾಮಿ ಇವರ ಭಾವಚಿತ್ರವನ್ನು ರಚಿಸಿದ್ದಾರೆ. ನರೇಂದ್ರ ಮೊದಿ, ರಾಹುಲ್ ದ್ರಾವಿಡ್, ಸರ್ ಎಂ. ವಿಶ್ವೆಶ್ವರಯ್ಯ, ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ನಟ ಸುದೀಪ್, ಅಂಬರೀಷ್ ಕೂಡ ಇವರ ಕ್ಯೂಬ್ ಕಲಾಕೃತಿಯಲ್ಲಿ ಮೂಡಿಬಂದಿದ್ದಾರೆ.