

ಹೊಟ್ಟೆಪಾಡಿಗಾಗಿ ಹೋರಾಟ, ಸೌಲಭ್ಯಗಳಿಗಾಗಿ ಹೋರಾಟ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ- ಜಗತ್ತಿನಲ್ಲಿ ಈ ಮೂರು ತೆರನಾದ ಹೋರಾಟಗಳು ನಡೆಯುತ್ತಲೇ ಇರುತ್ತವೆ. ಹೊಟ್ಟೆಪಾಡಿಗಾಗಿ ನಡೆಸುವ ಹೋರಾಟ ದೈನಂದಿನ ಹೋರಾಟ. ಸೌಲಭ್ಯಗಳಿಗಾಗಿ ನಡೆಯುವ ಹೋರಾಟಗಳು ಕಾಲಕ್ರಮೇಣ ಸ್ಥಗಿತಗೊಳ್ಳುತ್ತವೆ. ಸಾಮಾಜಿಕ ನ್ಯಾಯದ ಪರವಾಗಿ ನಡೆದ/ನಡೆಯುವ ಹೋರಾಟಗಳು ಇತಿಹಾಸದ ಪುಟ ಸೇರುತ್ತವೆ. ಹೊಟ್ಟೆಪಾಡಿಗಾಗಿ ನಡೆಯುವ ಹೋರಾಟ ವೈಯಕ್ತಿಕವಾದುದು. ಸೌಲಭ್ಯಗಳಿಗಾಗಿ ನಡೆಸುವ ಹೋರಾಟ ಸಮೂಹದ ಏಳಿಗೆಗಾಗಿ ನಡೆಯುವಂತಹದು. ಸಾಮಾಜಿಕ ನ್ಯಾಯಕ್ಕಾಗಿ ನಡೆಯುವ ಹೋರಾಟ ವ್ಯಷ್ಟಿ ಮತ್ತು ಸಮ್ಟಷ್ಟಿಯ ಹಿತವನ್ನು ಸಾಧಿಸುವಂತಹದು.
12ನೇ ಶತಮಾನದಲ್ಲಿ ಬಸವಣ್ಣ ಮುಂದಾಳುತನದಲ್ಲಿ ಜರುಗಿದಂಥ ಹೋರಾಟ ಸಮಷ್ಟಿಪ್ರಜ್ಞೆಯ ಸಂಕೇತ. ಏಕೆಂದರೆ ವಚನ ಚಳವಳಿ ಕೇವಲ ಭೌತಿಕವಾದ ಹೊಂದಿರಲಿಲ್ಲ; ಅದು ಬೌದ್ಧಿಕ ಮಟ್ಟ ಹೆಚ್ಚಿಸಲು ನಡೆದಂಥ ಕ್ರಾಂತಿ. ಮಾನವ ಭೌತಿಕ ದಾಸ್ಯಕ್ಕೆ ತನ್ನನ್ನು ಒಳಪಡಿಸಿಕೊಳ್ಳುತ್ತಾನೆ. ಭೌತಿಕ ದಾಸ್ಯಕ್ಕೆ ಒಳಗಾದ ವ್ಯಕ್ತಿಯ ಆಲೋಚನೆಗಳು ಸಂಕುಚಿತವಾಗಿರುತ್ತವೆ. ಬೌದ್ಧಿಕ ಆಲೋಚನೆ/ಚಿಂತನೆಗಳು ಪ್ರಬುದ್ಧವಾಗಿ ಇರುತ್ತವೆ. ಕಾರಣ ವಚನಕಾರರ ಚಳವಳಿ ವಿಜ್ಞಾನ-ತಂತ್ರಜ್ಞಾನದೊಟ್ಟಿಗೆ ತತ್ತ್ವಜ್ಞಾನವನ್ನೂ ಒಳಗೊಂಡಿತ್ತು. ವೈಚಾರಿಕ ಸಂಘರ್ಷ ಅಭಿವ್ಯಕ್ತಿಗೆ ಒತ್ತು ನೀಡುತ್ತದೆ. ವೈಚಾರಿಕ ಸಂಘರ್ಷ ವ್ಯಕ್ತಿ ಮತ್ತು ಸಮುದಾಯದಲ್ಲಿ ಸ್ವಾಭಿಮಾನ ಮೂಡಿಸುತ್ತದೆ. ಇದರಿಂದಾಗಿ ಶಿವಶರಣರು ಭೌತಿಕ ಸುಖಕ್ಕಿಂತ ಸಮೂಹದ ಸುಖ ಬಯಸಿದರು. ಭೌತಿಕ ದಾಸ್ಯಕ್ಕೆ ಒಳಗಾಗುವುದನ್ನು ಬಸವಣ್ಣನವರು-
ಆಯುಷ್ಯವುಂಟು ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ
ಆಯುಷ್ಯ ತೀರಿ ಪ್ರಳಯ ಬಂದಡೆ ಆ ಅರ್ಥವನುಂಬುವರಿಲ್ಲ.
ನೆಲನನಗಿದು ಮಡುಗದಿರಾ, ನೆಲ ನುಂಗಿದಡುಗುಳುವುದೆ?
ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ, ಉಣ್ಣದೆ ಹೋಗದಿರಾ!
ನಿನ್ನ ಮಡದಿಗಿರಲೆಂದಡೆ, ಆ ಮಡದಿಯ ಕೃತಕ ಬೇರೆ
ನಿನ್ನ ಒಡಲು ಕೆಡೆಯಲು ಮತ್ತೊಬ್ಬನಲ್ಲಿಗೆ ಅಡಕದೆ ಮಾಬಳೆ?
ಹೆರರಿಗಿಕ್ಕಿ ಹೆಗ್ಗುರಿಯಾಗಿ ಕೆಡಬೇಡ,
ಕೂಡಲಸಂಗನ ಶರಣರಿಗೆ ಒಡನೆ ಸವೆಸುವುದು
ಇದು ಬಸವಣ್ಣನವರಂಥ ಸಮಷ್ಟಿ ಪ್ರಜ್ಞೆಗೆ ಒಳಗಾದವರ ಬದ್ಧತೆ. ಆಗಿನ ದಿನಗಳಲ್ಲಿ ಹಣವನ್ನು ನೆಲದೊಳಗೆ ಅಡಗಿಸಿ ಇಡಲಾಗುತ್ತಿತ್ತು. ಸಿರಿ-ಸಂಪತ್ತನ್ನು ರಕ್ಷಿಸುವಲ್ಲಿ ಭೂಮಿಯೇ ಬ್ಯಾಂಕ್ ಆಗಿತ್ತು. ಈ ದಿನಗಳಲ್ಲಿ ಜನರು ಹಣವನ್ನು ಮನೆಗಳಲ್ಲಿ, ನೆಲಮಾಳಿಗೆಯಲ್ಲಿ ಬಚ್ಚಿಡುತ್ತಾರೆ; ಮುಚ್ಚಿಡುತ್ತಾರೆ. ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ(ಕೂಡಿಟ್ಟು), ಉಣ್ಣದೆ ಹೋಗುವ ಧನಪಿಶಾಚಿಗಳ ಸ್ಥಿತಿಯನ್ನು ಕಂಡು ಬಸವಣ್ಣ ವ್ಯಂಗ್ಯವಾಡುತ್ತಾರೆ. ಮಣ್ಣಿನಲ್ಲಿ ಮರೆಯಾಗಿ ಹೋಗುವ ಧನ-ಕನಕಾದಿಗಳನ್ನು ಶರಣರಿಗೆ ಬಡಿಸಿ ಸವೆಸಬೇಕೆಂಬ ಎಚ್ಚರಿಕೆ ನೀಡುತ್ತಾರೆ.
ಕರೊನಾ ಕಾಲ ಕೂಡ ಇಂದು ಅಸಹಾಯಕ ಸ್ಥಿತಿ ಸೃಷ್ಟಿಸಿದೆ. ಕೆಲವರ ಬಳಿ ಕೋಟ್ಯಾನುಕೋಟಿ ಹಣ ಶೇಖರಣೆ ಆಗಿದೆ. ಹಣದಿಂದ ಔಷಧ ಕೊಳ್ಳಬಹುದು, ಆಮ್ಲಜನಕ, ವೆಂಟಿಲೇಟರ್ ಮತ್ತಿತರ ವ್ಯವಸ್ಥೆ ಪಡೆಯಬಹುದು. ಇವೆಲ್ಲ ಸೌಲಭ್ಯ ಇದ್ದಾಗ್ಯೂ ಸ್ಥಿತಿವಂತರು ಸಾಯುತ್ತಿದ್ದಾರೆ. ಅದರಂತೆ ಸಾವು-ಬದುಕಿನ ನಡುವೆ ಮಧ್ಯಮವರ್ಗದವರು ಪರಿತಪಿಸುವಂತಾಗಿದೆ. ಕರೊನಾ ವೈರಾಣು ತಾರತಮ್ಯ ಮಾಡುವುದಿಲ್ಲ; ಬಡವ-ಶ್ರೀಮಂತರೆಂಬ ಭೇದ-ಭಾವವಿಲ್ಲ. ಯುವಕ-ವೃದ್ಧ ಎಂಬ ಭಿನ್ನತೆಯಿಲ್ಲ. ಕರೊನಾ ಕಣ್ಣಿಗೆ ಕಾಣದ ಒಂದು ವೈರಾಣು. ಅದು ಆಧುನಿಕ ಪ್ರಪಂಚದ ಎಲ್ಲ ಯುದ್ಧಾಸ್ತ್ರಗಳಿಗಿಂತಲೂ ಮಾರಕವಾಗಿದೆ.
ಕೂಡಿಟ್ಟ ಹಣ ಇಂಥ ಪ್ರಸಂಗದಲ್ಲಿ ಸಾರ್ವಜನಿಕ ಸೇವೆಗೆ ಬಳಸುವುದು ಹೆಚ್ಚು ಉಪಯುಕ್ತ. ಕೋವಿಡ್-19 ಎಲ್ಲಿಲ್ಲದ ಸಂಕೀರ್ಣತೆ ಸೃಷ್ಟಿಸಿದ್ದು, ಬಡವರ ಬದುಕಿನ ಮೇಲೆ ಬಂಡೆ ಎಳೆದಿದೆ. ಅವರು ದಿನನಿತ್ಯದ ಕೆಲಸ-ಕಾರ್ಯಕ್ಕೆ ಹೋಗುವಂತಿಲ್ಲ. ಹೊಟ್ಟೆಗೆ ತುತ್ತು ಸಿಗುವಂತಿಲ್ಲ. ಇನ್ನಿಲ್ಲದ ಅಸಹಾಯಕತೆ. ಕೆಲವರ ಬಳಿ ಕೂಡಿಟ್ಟ ಹಣವಿದ್ದು, ಪರಿತಪಿಸುತ್ತಿದ್ದಾರೆ; ಇನ್ನು ಕೆಲವರು ದೈನಂದಿನ ಜೀವನಕ್ಕೆ ಅಗತ್ಯವಾದ ಅನುಕೂಲತೆಗಳು ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ.
ಇಂದಿನ ಸ್ಥಿತಿಗೆ ಅನ್ವಯವಾಗುತ್ತದೆ ಬಸವಣ್ಣರ ಈ ವಚನ-
ಅರಿವಿನರಿತವ ಕೆಡಿಸಿತ್ತು ಬಡತನವೆಂಬ ರಾಹು,
ಉಳ್ಳವನ ಉಳುವೆಯ ಕೆಡಿಸಿತ್ತು ಮೋಹವೆಂಬ ರಾಹು,
ಕಾಬವನ ಕಾಣಿಕೆಯ ಕೆಡಿಸಿತ್ತು ಕಾಮವೆಂಬ ಕತ್ತಲೆ,
ಎನ್ನ ಮನದ ಭಯಕ್ಕಂಜಿ ನಿಮ್ಮ ಮೊರೆಹೊಕ್ಕೆ ಕೂಡಲಸಂಗಮದೇವಾ
ಬಡತನವೆಂಬ ರಾಹು ಬದುಕನ್ನು ಕಿತ್ತು ತಿನ್ನುತ್ತಿದೆ. ಕರೊನಾ ಎಂಥ ದಯನೀಯ ಸ್ಥಿತಿಯನ್ನು ನಿರ್ವಿುಸಿದೆ- ಒಂದೆಡೆ ಒಡೆದು ಬಿಸಾಡಿದ ತೆಂಗಿನಕಾಯಿ ಹೋಳುಗಳು. ಕೆಲವರು ತಿಂದು ಬಿಸಾಡಿದ ಎಳನೀರಿನ ಬುರುಡೆಗಳು. ಅವುಗಳ ಒಳಗಿನ ತೆಂಗಿನ ತಿರುಳನ್ನು ಕಿತ್ತು ತಿನ್ನುವ ಮಕ್ಕಳು. ಇಂದು ಇಂಥ ದುಸ್ಥಿತಿ. ಸಂಕಷ್ಟದ ಸಂದರ್ಭವು ಜಗತ್ತನ್ನು ಒಗ್ಗೂಡಿಸುತ್ತಿದೆ. ಕಳೆದ ವರ್ಷ ಪ್ರಥಮ ಅಲೆ ಎದುರಾದಾಗ ಕೇಂದ್ರ ಸರ್ಕಾರ ಕರೊನಾ ವೈರಾಣುವಿನ ಹಿನ್ನೆಲೆಯಲ್ಲಿ ಸೂಕ್ತ ಔಷಧಗಳನ್ನು ವಿದೇಶಗಳಿಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆಯಿತು. ಎರಡನೆಯ ಅಲೆ ಭಾರತದಲ್ಲಿ ಸಂಕಷ್ಟದ ಸ್ಥಿತಿ ನಿರ್ವಿುಸಿದ್ದು, ಭಾರತದ ಕೋರಿಕೆ ಮನ್ನಿಸಿದ ವಿದೇಶಗಳು ದೇಶಕ್ಕೆ ಅಗತ್ಯವಿರುವ ಆಮ್ಲಜನಕ, ಇತ್ಯಾದಿ ವೈದ್ಯಕೀಯ ಸಾಮಗ್ರಿ ಕಳುಹಿಸಿಕೊಟ್ಟು ಹೃದಯವೈಶಾಲ್ಯ ತೋರಿಸಿವೆ.
ಸ್ವಾರ್ಥದ ಬೆನ್ನೇರಿ ಹೋಗುತ್ತಿರುವ ಜಗತ್ತಿಗೆ ಬಸವಾದಿ ಶರಣರು ನಿಸ್ವಾರ್ಥ ಹಾಗೂ ತ್ಯಾಗದ ದೀಕ್ಷೆಯನ್ನಿತ್ತರು. ಕಣ್ಮುಂದೆ ಏನೆಲ್ಲ ನಡೆದರೂ ಅದನ್ನು ಲೆಕ್ಕಿಸದೆ ತಾನು ಜಂಗಮಾರಾಧನೆ ನಡೆಸುತ್ತೇನೆಂಬ ಅಚಲ ವಿಶ್ವಾಸ ಬಸವಣ್ಣನವರದು-
ಅರ್ಥವನರ್ಥವ ಮಾಡಿ ಕೋಳಾಹಳಂಗೆಯ್ಯುತ್ತಿರಲಿ,
ಹುಟ್ಟಿದ ಮಕ್ಕಳ ನವಖಂಡವ ಮಾಡಿ ಕಡಿವುತ್ತಿರಲಿ,
ಮುಟ್ಟುವ ಸ್ತ್ರೀಯ ಕಣ್ಣಮುಂದೆ
ಅಭಿಮಾನಂಗೊಂಡು ನೆರೆವುತ್ತಿರಲಿ,
ಇಂತೀ ತ್ರಿವಿಧವೂ ಹೊರಗಣವು.
ಇನ್ನೆನ್ನಂಗದ ಮೇಲೆ ಬರಲಿ, ಹಿಡಿಖಂಡವ ಕೊಯ್ಯಲಿ,
ಇಕ್ಕುವ ಶೂಲ ಪ್ರಾಪ್ತಿಸಲಿ,
ಹಾಕೊಂದೆಸೆ ಹನ್ನೊಂದೆಸೆಯಾಗಿ ಮಾಡುತ್ತಿರಲಿ.
ಮತ್ತೆಯೂ ಲಿಂಗಾರಾಧನೆಯ ಮಾಡುವೆ,
ಜಂಗಮಾರಾಧನೆಯ ಮಾಡುವೆ, ಪ್ರಸಾದಕ್ಕೆ ತಪ್ಪೆ.
ಇಂತಪ್ಪ ಭಾಷೆ ಕಿಂಚಿತ್ತು ಹುಸಿಯಾದಡೆ
ನೀನಂದೆ ಮೂಗ ಕೊಯಿ, ಕೂಡಲಸಂಗಮದೇವಾ.
ಗಂಭೀರ ಪರಿಸ್ಥಿತಿಯಲ್ಲೂ ಜಂಗಮಾರಾಧನೆ ನೆರವೇರಿಸುತ್ತೇನೆಂಬ ದೃಢವಿಶ್ವಾಸ. ಸಂತಾಪ, ಸಂಕಷ್ಟ, ಸಂದಿಗ್ಧತೆ ಹಲವರಿಗೆ ಸವಾಲಾದರೆ, ಸತ್ಪುರುಷರಿಗೆ ಸೇವೆಯ ಸಂದರ್ಭ. ಸಹಕಾರಿ ಭಾವನೆಯವರು ಅನ್ಯರ ಸಂಕಷ್ಟಗಳಿಗೆ ಸಹಕರಿಸಲು ಮುಂದಾಗುತ್ತಾರೆ. ಸೇವೆಗೆ ಸೂಕ್ತ ಸಮಯ ಎಂದು ಭಾವಿಸುತ್ತಾರೆ.
(ಲೇಖಕರು ಚಿತ್ರದುರ್ಗ ಶ್ರಿಮುರುಘಾ ಮಠದ ಪೀಠಾಧ್ಯಕ್ಷರು)