

ಖುಷಿಗೊಂಡ ನವಪ್ರೀತ್ ಜಲಂಧರ್ಗೆ ಹೋಗಿ ಆ ಸಂಸ್ಥೆಯ ಮಾಲೀಕ ಬ್ರಿಜೇಶ್ ಮಿಶ್ರಾನನ್ನು ಭೇಟಿಯಾದ. ತಾನು ಹಲವಾರು ವರ್ಷಗಳಿಂದ ಪಂಜಾಬಿನ ಸಾವಿರಾರು ವಿದ್ಯಾರ್ಥಿಗಳನ್ನು ಕೆನಡಾ ಮತ್ತು ಆಸ್ಟ್ರೇಲಿಯಾಕ್ಕೆ ವಿದ್ಯಾಭ್ಯಾಸ ಮತ್ತು ವಲಸೆಗಾಗಿ ಕಳುಹಿಸಿರುವುದಾಗಿ ಹೇಳಿದ ಮಿಶ್ರಾ ಈ ಸೇವೆಗಾಗಿ ತನ್ನ ಶುಲ್ಕ 16 ಲಕ್ಷ ರೂ. ಎಂದ. ಮನೆಗೆ ಮರಳಿದ ನವಪ್ರೀತ್ ತನ್ನ ಮಾತಾಪಿತರಿಗೆ ಈ ಮಾಹಿತಿ ಕೊಟ್ಟ. ಮಗನ ಆಸೆ ಪೂರೈಸಬೇಕೆಂದು ಅವರು ಬ್ಯಾಂಕಿನಲ್ಲಿದ್ದ ತಮ್ಮ ಸ್ಥಿರ ಠೇವಣಿಗಳನ್ನು ಮುರಿದು ನವಪ್ರೀತ್ಗೆ ಹಣ ಕೊಟ್ಟರು. ಮಿಶ್ರಾನ ಕಚೇರಿಗೆ ನವಪ್ರೀತ್ ಹೋದಾಗ ಅಲ್ಲಿ ಅವನಂತೆಯೇ ಇನ್ನೂ 70 ವಿದ್ಯಾರ್ಥಿಗಳು ಹಣದೊಂದಿಗೆ ಬಂದಿದ್ದರು. ಹಣ ಪಡೆದ ಮಿಶ್ರಾ ಕೆಲವು ಅರ್ಜಿಗಳನ್ನು ತುಂಬಲು ಹೇಳಿ ಮುಂದಿನ ವಾರ ಬರುವಂತೆ ನವಪ್ರೀತ್ಗೆ ತಿಳಿಸಿದ. ಮುಂದಿನ ವಾರ ನವಪ್ರೀತ್ ಹೋದಾಗ ಆತ ಅವನಿಗೆ ಕೆನಡಾದ ಪ್ರತಿಷ್ಠಿತ ಕಾಲೇಜೊಂದರ ಪ್ರವೇಶ ಪತ್ರ ನೀಡಿದ. ಕೆನಡಾದ ವೀಸಾ ಅರ್ಜಿ ತುಂಬಲು ಸಹಾಯ ಮಾಡಿದ. ಕೆಲವೇ ವಾರಗಳಲ್ಲಿ ನವಪ್ರೀತ್ಗೆ ಕೆನಡಾದಲ್ಲಿ ವಿದ್ಯಾಭ್ಯಾಸ ಮಾಡಲು ವೀಸಾ ದೊರಕಿತು.
ನವಪ್ರೀತ್ ಕೆನಡಾಗೆ ಹೋಗಲು ಖುಷಿಯಿಂದ ಸಿದ್ಧನಾದ. ಆದರೆ ಅಲ್ಲಿನ ವಿದ್ಯಾಭ್ಯಾಸ ಶುಲ್ಕ, ಊಟ, ವಸತಿ, ಪ್ರಯಾಣದ ಖರ್ಚನ್ನು ನವಪ್ರೀತ್ನೇ ಭರಿಸಬೇಕಾಗಿತ್ತು. ನವಪ್ರೀತ್ನ ತಂದೆ ತನ್ನ ಹೊಲದ ಅರ್ಧ ಭಾಗ ಮಾರಿ ಆ ಹಣವನ್ನೂ ಹೊಂದಿಸಿದರು. ಮುಂದಿನ ತಿಂಗಳು ಕೆನಡಾ ವಿಮಾನನಿಲ್ದಾಣದಲ್ಲಿ ನವಪ್ರೀತ್ ಇಳಿದ ಕೂಡಲೇ ಅದೇ ವಿಮಾನದಲ್ಲಿ ಬಂದಿದ್ದ ನವಪ್ರೀತ್ ಹಾಗೂ ಇತರ 11 ವಿದ್ಯಾರ್ಥಿಗಳನ್ನು ಮಿಶ್ರಾನ ಏಜೆಂಟ್ ಭೇಟಿಯಾದ. ಎಲ್ಲರಿಗೂ ವಸತಿಯ ಅವಕಾಶ ಮಾಡಿಕೊಟ್ಟ. ಎರಡು ದಿನಗಳಾದ ಮೇಲೆ ಅದೇ ಏಜೆಂಟ್ ಅವರ ಬಳಿ ಬಂದು, ಒಂದು ತೊಂದರೆಯಾಗಿದೆ. ನಿಮಗೆ ಪ್ರವೇಶ ಕೊಟ್ಟಿದ್ದ ಹಂಟರ್ ಕಾಲೇಜಿನಲ್ಲಿ ಸೀಟ್ಗಳು ಮುಗಿದು ಹೋಗಿದೆ ಎಂದ. ಎಲ್ಲ ವಿದ್ಯಾರ್ಥಿಗಳೂ ತಬ್ಬಿಬ್ಬಾದರು. ‘‘ಇದು ಹೇಗೆ ಸಾಧ್ಯ? ಇರುವಷ್ಟು ಸೀಟ್ಗಳಿಗೆ ತಾನೆ ಪ್ರವೇಶ ಮಾಡುವುದು? ನಮಗೆ ಪ್ರವೇಶ ಪತ್ರ ನೀಡಿದ ಬಳಿಕ ಪ್ರವೇಶವಿಲ್ಲವೆಂದರೆ ಹೇಗೆ? ನಮ್ಮ ಮುಂದಿನ ಗತಿಯೇನು?’ ಎಂದು ತಕರಾರೆತ್ತಿದರು. ‘‘ಈ ಕಾಲೇಜಿನಲ್ಲಿ ಓವರ್ ಬುಕಿಂಗ್ ಪದ್ಧತಿಯಿದೆ. ನೂರು ಸೀಟು ಗಳಿದ್ದರೆ ನೂರಿಪ್ಪತ್ತು ಜನರಿಗೆ ಪ್ರವೇಶ ಕೊಡುತ್ತಾರೆ. ಮೊದಲು ಬಂದವರಿಗೆ ಸೀಟ್ ಕೊಡುತ್ತಾರೆ, ನೀವು ಇಲ್ಲಿಗೆ ಬರುವುದು ಲೇಟಾಗಿರುವುದರಿಂದ ಹೀಗಾಗಿದೆ’ ಎಂದ.
ಎಲ್ಲ ಹನ್ನೆರಡೂ ಯುವಕರು ತಲೆ ಮೇಲೆ ಕೈಹೊತ್ತು ಕುಳಿತರು. ‘‘ನೀವೇನೂ ಚಿಂತೆ ಮಾಡಬೇಕಾಗಿಲ್ಲ. ನೀವು ಹಂಟರ್ ಕಾಲೇಜಿಗೇ ಸೇರಬೇಕೆಂದರೆ ಮುಂದಿನ ಸೆಮಿಸ್ಟರ್ವರೆಗೆ ಕಾದು ಆನಂತರ ಅಲ್ಲಿಗೇ ಸೇರಬಹುದು. ಒಂದು ವೇಳೆ ಬೇಡವೆಂದರೆ ನಿಮಗೆ ಬೇರೆ ಕಾಲೇಜಿನಲ್ಲಿ ಪ್ರವೇಶ ಕೊಡಿಸುತ್ತೇವೆ. ನಾವು ನಿಮ್ಮನ್ನು ಭಾರತಕ್ಕೆ ಮರಳಿ ಕಳಿಸುವುದಿಲ್ಲ. ಯಾರಿಗಾದರೂ ಇಷ್ಟವಿರದಿದ್ದರೆ ಇಂಡಿಯಾಗೆ ಹೋಗಬಹುದು’ ಎಂದ. ಮುಂದೇನು ಮಾಡುವುದೆಂದು ಯಾರಿಗೂ ತೋಚಲಿಲ್ಲ. ‘‘ನಮಗೆ ಹೊಸದಾಗಿರುವ ಈ ದೇಶದಲ್ಲಿ ಆರು ತಿಂಗಳ ಕಾಲ ಸುಮ್ಮನೆ ಕುಳಿತಿರುವುದು ಹೇಗೆ?’ ಎಂದು ಎಲ್ಲರೂ ಅವನ ಸಲಹೆಯನ್ನೇ ಕೇಳಿದರು. ಹಂಟರ್ ಕಾಲೇಜಿಗೆಂದು ಅವರು ನೀಡಿದ್ದ ಶುಲ್ಕವನ್ನು ಅವರೆಲ್ಲರಿಗೂ ಮರಳಿಸಿದ ಆ ವ್ಯಕ್ತಿ, ‘‘ನೀವು ಒಪ್ಪಿದರೆ ನಾನು ನಿಮಗೆ ಬೇರೆ ಕಾಲೇಜಿನಲ್ಲಿ ಅದೇ ಮಾದರಿಯ ಕೋರ್ಸಗಳಿಗೆ ಹಂಟರ್ ಕಾಲೇಜಿಗಿಂತ ಕಡಿಮೆ ಶುಲ್ಕಕ್ಕೆ ಪ್ರವೇಶ ಕೊಡಿಸುವೆ, ತೀರ್ಮಾನ ನಿಮ್ಮದು’ ಎಂದ.
‘ಹೇಗಿದ್ದರೂ ಕೆನಡಾದ ಕಾಲೇಜಿನಿಂದಲೇ ಡಿಗ್ರಿ ಬಂದಂತಾಗುತ್ತದೆ, ಹಂಟರ್ ಕಾಲೇಜ್ ಆಗದಿದ್ದರೇನಂತೆ’ ಎಂದು ಯೋಚಿಸಿದ ಆ ವಿದ್ಯಾರ್ಥಿಗಳು ಅವನ ಸಲಹೆಗೊಪ್ಪಿದರು. ತಾನು ಕೊಟ್ಟ ಮಾತಿನಂತೆಯೇ ಆತ ಎಲ್ಲರಿಗೂ ಕೆನಡಾದ ಬೇರೆಬೇರೆ ಕಾಲೇಜುಗಳಲ್ಲಿ ಸೀಟು ಕೊಡಿಸಿದ. ಒಂದೇ ವಾರದ ನಂತರ ನವಪ್ರೀತ್ಗೆ ಬೇರೊಂದು ಕಾಲೇಜಿನಲ್ಲಿ 3 ವರ್ಷದ ಎಂಜಿನಿಯರಿಂಗ್ ಡಿಪ್ಲೊಮಾ ಕೋರ್ಸಿಗೆ ಸೀಟ್ ದೊರಕಿತು. ಮೂರು ವರ್ಷಗಳ ನಂತರ ನವಪ್ರೀತ್ ಉನ್ನತ ಅಂಕಗಳನ್ನು ಗಳಿಸಿ ತನ್ನ ವಿದ್ಯಾಭ್ಯಾಸ ಮುಗಿಸಿದ. ಕೆನಡಾದಲ್ಲಿಯೇ ನೌಕರಿ ಮಾಡುವ ಇಚ್ಛೆಯಿಂದ ಆತ ಅಲ್ಲಿಗೆ ಬಂದಿದ್ದರಿಂದ ಆ ದೇಶದ ವರ್ಕ್ ಪರ್ವಿುಟ್ಗಾಗಿ ಅರ್ಜಿ ಹಾಕಿದ. ಕೆಲವೇ ದಿನಗಳಲ್ಲಿ ಅವನಿಗೆ ಕೆನಡಾ ಸರ್ಕಾರದ ವಲಸೆ ವಿಭಾಗದಿಂದ ಪತ್ರ ಬಂತು. ಅವನೊಡನೆ ಭಾರತದಿಂದ ಬಂದಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಉದ್ದೇಶಿಸಿದ್ದ ನೋಟಿಸ್ ಅದಾಗಿತ್ತು. ‘‘ನೀವು ಹಂಟರ್ ಕಾಲೇಜಿನ ನಕಲಿ ಪ್ರವೇಶ ಪತ್ರದ ಆಧಾರದ ಮೇಲೆ ಕೆನಡಾದ ವೀಸಾ ಪಡೆದು ಮೋಸದಿಂದ ನಮ್ಮ ದೇಶಕ್ಕೆ ಬಂದಿದ್ದೀರಿ. ನಿಮ್ಮನ್ನು ಕೂಡಲೇ ನಿಮ್ಮ ಖರ್ಚಿನಲ್ಲಿ ಕೆನಡಾದಿಂದ ಏಕೆ ಗಡಿಪಾರು ಮಾಡಬಾರದು ಎನ್ನಲು ಸಕಾರಣಗಳನ್ನು ಈ ನೋಟಿಸ್ ಮುಟ್ಟಿದ 15 ದಿನಗಳಲ್ಲಿ ನೀಡಿ’ ಎಂದು ಬರೆದಿತ್ತು.
ನವನೀತ್ಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು. ಆತ ಏನನ್ನು ಮಾಡಲೂ ತೋಚದೆ ಅದೇ ನಗರದಲ್ಲಿಯೇ ವಾಸಿಸುತ್ತಿದ್ದ ಕೆಲ ಸಿಖ್ ಹಿರಿಯರ ಬಳಿ ಹೋಗಿ ಆ ಪತ್ರ ತೋರಿಸಿದ. ಇದೊಂದು ಗುರುತರ ಪ್ರಕರಣವೆಂದು ಹೇಳಿದ ಅವರು ಕೂಡಲೇ ವಕೀಲರೊಬ್ಬರನ್ನು ಸಂರ್ಪಸಲು ಸೂಚಿಸಿದರು. ಅದರಂತೆ ಆತ ವಕೀಲರೊಬ್ಬರನ್ನು ಸಂರ್ಪಸಿದ. ಅವರು ಕೆನಡಾದ ಇಮಿಗ್ರೇಷನ್ ಇಲಾಖೆಯನ್ನು ಸಂರ್ಪಸಿದಾಗ ಹಂಟರ್ ಕಾಲೇಜಿನ ಲೆಟರ್ಹೆಡ್ನಲ್ಲಿ ಕೊಟ್ಟ ಪ್ರವೇಶ ಪತ್ರ ನಕಲಿಯೆಂದು ತಿಳಿಯಿತು. ‘‘ನಕಲಿ ದಾಖಲೆಗಳನ್ನು ಕೊಟ್ಟು ವೀಸಾ ಪಡೆದಿರುವುದು ಘೊರ ಅಪರಾಧವಾದ್ದರಿಂದ ಕೂಡಲೇ ನೀವು ಭಾರತಕ್ಕೆ ಮರಳದಿದ್ದರೆ ನಿಮ್ಮನ್ನು ಕಾರಾಗೃಹಕ್ಕೆ ಕಳುಹಿಸುತ್ತಾರೆ’ ಎಂದರು ವಕೀಲರು.
ನವಪ್ರೀತ್ ಮತ್ತು ಅವನಂತೆಯೇ ನೋಟಿಸ್ ಪಡೆದಿದ್ದ ಇತರರು ಕೆನಡಾದಲ್ಲಿರುವ ಭಾರತದ ದೂತಾವಾಸದ ಅಧಿಕಾರಿಗಳಿಗೆ ವಸ್ತುಸ್ಥಿತಿಯನ್ನು ತಿಳಿಸಿ ಅವರ ಸಹಾಯ ಕೋರಿದರು. ಇದಲ್ಲದೆ ಪಂಜಾಬ್ನಲ್ಲಿರುವ ಎಲ್ಲ ರಾಜಕೀಯ ಪಕ್ಷಗಳ ಮೊರೆ ಹೋದರು. ಭಾರತ ಸರ್ಕಾರದ ಒತ್ತಡದ ಮೇರೆಗೆ ಕೆನಡಾ ಅಧಿಕಾರಿಗಳು ತಾವು ನೀಡಿದ ಗಡೀಪಾರು ಪತ್ರಕ್ಕೆ ತಡೆ ನೀಡಿದರು. ಈ ಪ್ರಕರಣ ಬೆಳಕಿಗೆ ಬಂದ ಕೂಡಲೇ ಪಂಜಾಬ್ನ ಜಲಂಧರ್ ಜಿಲ್ಲಾ ಪೊಲೀಸರು ಮಿಶ್ರಾನ ಮೇಲೆ ಕ್ರಮ ಜರುಗಿಸಲು ಮುಂದಾದಾಗ ಮಿಶ್ರಾನ ವಿರುದ್ಧ ದೂರು ಕೊಡಲು ಮುಂದೆ ಬಂದಿದ್ದು ಆತ ಕೆನಡಾಕ್ಕೆ ಕಳುಹಿಸಿದ್ದ ವಿದ್ಯಾರ್ಥಿಗಳಲ್ಲಿ ಮೂರು ಜನ ಮಾತ್ರ. ಅವರ ದೂರಿನ ಮೇರೆಗೆ ಮಿಶ್ರಾ ಮತ್ತವನ ಮೂವರು ಸಹಾಯಕರಾದ ರಾಹುಲ್, ಭಾರ್ಗವ್, ಗುರ್ನಾಂ ಸಿಂಗ್ ವಿರುದ್ಧ ನಂಬಿಕೆ ದ್ರೋಹ, ಫೋರ್ಜರಿ, ಮೋಸಕ್ಕಾಗಿ ಮಾಡುವ ಫೋರ್ಜರಿ, ನಕಲಿ ದಾಖಲೆಯನ್ನು ನೈಜ ದಾಖಲೆಯೆಂದು ತೋರಿಸುವುದು, ಆಪರಾಧಿಕ ಒಳಸಂಚು ಇವೇ ಅಪರಾಧಗಳಿರುವ ಎಫ್ಐಆರ್ಗಳು ದಾಖಲಾದವು. ಏತನ್ಮಧ್ಯೆ ಮಿಶ್ರಾ ಮತ್ತು ಗುರ್ನಾಂ ಪರಾರಿಯಾದರು. ಆದರೆ ಮಿಶ್ರಾನ ಸಹಾಯಕ ರಾಹುಲ್ ಸೆರೆಯಾದ. ಆತ ಪೊಲೀಸರಿಗೆ ಈ ಪ್ರಕರಣ ಹೇಗೆ ನಡೆಯಿತು ಎನ್ನುವ ಎಲ್ಲ ವಿವರ ನೀಡಿದ.
ಏತನ್ಮಧ್ಯೆ ಕೆನಡಾದ ಸಿಖ್ ಸಂಘಟನೆಗಳ ಒತ್ತಡದ ಮೇರೆಗೆ ಕೆನಡಾ ಸರ್ಕಾರವೂ ಈ ಬಗ್ಗೆ ತನಿಖೆ ಆರಂಭಿಸಿತು. ಬ್ರಿಜೇಶ್ ಮಿಶ್ರಾ ಹಂಟರ್ ಕಾಲೇಜಿನ ಪ್ರವೇಶ ಪತ್ರವನ್ನು ನಕಲಿ ಮಾಡಿ ಅದರ ಆಧಾರದ ಮೇರೆಗೆ ವಿದ್ಯಾರ್ಥಿಗಳಿಗೆ ವೀಸಾ ಕೊಡಿಸಿದ್ದ. ಒಮ್ಮೆ ವಿದ್ಯಾರ್ಥಿಗಳು ಕೆನಡಾಕ್ಕೆ ಬಂದಿಳಿದ ಕೂಡಲೇ ಆತ ಅಲ್ಲಿಯ ಸಣ್ಣಪುಟ್ಟ ಶಿಕ್ಷಣ ಸಂಸ್ಥೆಗಳಲ್ಲಿ ಅವರೆಲ್ಲರಿಗೂ ಪ್ರವೇಶ ಸಿಗುವಂತೆ ಮಾಡಿದ್ದ. ಆದರೆ ನಕಲಿ ದಾಖಲೆಗಳ ಮೂಲಕ ವೀಸಾ ಪಡೆದ ಅಪರಾಧದ ಹೊಣೆಗಾರಿಕೆಯನ್ನು ವಿದ್ಯಾರ್ಥಿಗಳೇ ಹೊರಬೇಕಾಗಿತ್ತು. ಏಕೆಂದರೆ ವೀಸಾ ಅರ್ಜಿಗಳನ್ನು ಅವರೇ ತುಂಬಿದ್ದು ತಾವು ಆ ಅರ್ಜಿ ತುಂಬಲು ಯಾರದೇ ಸಹಾಯವನ್ನು ಪಡೆದಿಲ್ಲವೆಂದು ಪ್ರಮಾಣೀಕರಿಸಿದ್ದರು. ಅಲ್ಲದೆ ವೀಸಾ ಸಂದರ್ಶನದಲ್ಲಿ ಮಿಶ್ರಾ ಕೊಟ್ಟಿದ್ದ ಸುಳ್ಳು ದಾಖಲೆಯನ್ನು ತೋರಿಸಿದವರು ಅವರೇ ಆಗಿದ್ದರು. ಕೆನಡಾದ ತನಿಖೆಯಲ್ಲಿ ಸುಮಾರು 700 ಭಾರತೀಯ ವಿದ್ಯಾರ್ಥಿಗಳು ಇದೇ ರೀತಿ ಕೆನಡಾಗೆ ಬಂದಿದ್ದಾರೆಂದು ತಿಳಿಯಿತು.
ಸದ್ಯಕ್ಕೆ ಆ ಎಲ್ಲ ವಿದ್ಯಾರ್ಥಿಗಳ ಪರಿಸ್ಥಿತಿಯೂ ಚಿಂತಾಜನಕವಾಗಿದ್ದು ಅವರಿಗೆ ಯಾವ ನೌಕರಿಯೂ ಇಲ್ಲದೆ ಬೇರೊಬ್ಬರ ಮೇಲೆ ಅವಲಂಬನೆ ಮಾಡಬೇಕಾಗಿದೆ. ಅವರ ಸಹಾಯಕ್ಕೆ ಕೆನಡಾದ ಸಿಖ್ ಸಂಘಟನೆಗಳು ಮುಂದೆ ಬಂದಿವೆ. ಕೆನಡಾ ಬಿಟ್ಟು ಬೇರೆ ದೇಶಕ್ಕೆ ಹೋಗಲು ಅವರ್ಯಾರಿಗೂ ಮನಸ್ಸಿಲ್ಲ. ಭಾರತಕ್ಕೆ ಗಡೀಪಾರಾದರೆ ಸ್ವದೇಶದಲ್ಲಿ ನೌಕರಿ ಸಿಗುವ ಭರವಸೆ ಅವರಿಗಿಲ್ಲ. ಇದೇ ವರ್ಷದ ಆದಿಯಲ್ಲಿ ಮಿಶ್ರಾ ಮೋಸದಿಂದ ಕೆನಡಾ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಅಲ್ಲಿನ ಗಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಕೆನಡಾದಲ್ಲಿ ಅವನ ವಿರುದ್ಧ 5 ಆರೋಪಗಳನ್ನು ಹೊರಿಸಲಾಗಿದೆ. ಆದರೆ ಆತನ ಬಂಧನದಿಂದ ವಿದ್ಯಾರ್ಥಿಗಳು ನಿರಪರಾಧಿಗಳೆಂದೇನೂ ಸಾಬೀತಾಗುವುದಿಲ್ಲ. ಹೀಗಾಗಿ ಅವರ ಭವಿಷ್ಯ ಡೋಲಾಯಮಾನವಾಗಿದೆ. ಅಮೆರಿಕದ ರಾಜಕೀಯ ತಜ್ಞ ಜೇಮ್್ಸ ವಿಲ್ಸನ್, ‘ಚಾರಿತ್ರ್ಯವನ್ನು ತೊರೆದರೆ ಸಮಾಜವು ಕೊಡಬೇಕಾದ ಬೆಲೆಯೇ ಅಪರಾಧ’ ಎನ್ನುತ್ತಾನೆ. ವಿದೇಶಗಳಲ್ಲಿ ಕಲಿಯಬೇಕೆನ್ನುವ ಹಾಗೂ ಜೀವಿಸಬೇಕೆನ್ನುವ ವ್ಯಾಮೋಹದಿಂದ ಬಹಳ ಯುವಕರು ಮೋಸದ ಕೃತ್ಯಗಳನ್ನು ಮಾಡಿ ತೊಂದರೆಗೀಡಾಗಿದ್ದಾರೆ, ಈಡಾಗುತ್ತಲೇ ಇದ್ದಾರೆ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)