ಮಧುಮೇಹ ಕಾಯಿಲೆ ನಿಯಂತ್ರಿಸಲು ಅಪಾನ ಮುದ್ರೆ

apana mudra
Published on
gopalakrishna delampady
ದೇಹದಲ್ಲಿರುವ ಮಲಿನ ವಸ್ತುಗಳ ಸಮರ್ಪಕವಾದ ವಿಸರ್ಜನೆಯ ತೊಂದರೆಗಳನ್ನು ಮುದ್ರೆಗಳ ಮೂಲಕ ಸರಿಪಡಿಸಬಹುದು. ಅಪಾನ ಮುದ್ರೆಯು ಶ್ವಾಸಕೋಶದ ಶ್ಲೇಷ್ಮ ತೆಗೆದು ಹಾಕುತ್ತದೆ. ದೇಹದಲ್ಲಿರುವ ವಿಷಕಾರಕ ವಸ್ತುಗಳನ್ನು ತೆಗೆಯುವಲ್ಲಿ ಈ ಮುದ್ರೆ ಸಹಕಾರಿಯಾಗಿದೆ. ದೇಹದ ಶುದ್ಧೀಕರಣವನ್ನು ಈ ಮುದ್ರೆಯ ಮೂಲಕ ಮಾಡಬಹುದು. ಜೀರ್ಣಾಂಗ ವ್ಯವಸ್ಥೆ, ಮೂತ್ರ, ಮಲಬದ್ಧತೆ, ವಾಯುದೋಷ, ತೇಗುವುದು, ಎದೆ ಉರಿ, ಅಜೀರ್ಣಗಳ ಸಮಸ್ಯೆಯನ್ನು ಈ ಮುದ್ರೆಯಿಂದ ಸರಿಪಡಿಸಬಹುದು.

ವಿಧಾನ: ಮಧ್ಯದ ಬೆರಳು ಮತ್ತು ಉಂಗುರ ಬೆರಳ ತುದಿಯನ್ನು ಹೆಬ್ಬೆರಳಿನ ತುದಿಗೆ ಸೇರಿಸಬೇಕು. ಉಳಿದ ಎರಡು ಬೆರಳುಗಳು ನೇರವಾಗಿರಲಿ. ಸುಮಾರು 30 ರಿಂದ 40 ನಿಮಿಷಗಳ ಕಾಲ ಈ ಮುದ್ರೆಯನ್ನು ಮಾಡಿದಲ್ಲಿ ಉತ್ತಮ ಆರೋಗ್ಯವನ್ನು ಪಡೆಯಬಹುದು. ಇದರೊಂದಿಗೆ 10 ನಿಮಿಷ ಪ್ರಾಣ ಮುದ್ರೆಯನ್ನು ಸಹ ಮಾಡಿ. ತುಂಬಾ ವಯಸ್ಸಾದವರು, ಹೊಟ್ಟೆಯ ಕಾಯಿಲೆ ಸಮಸ್ಯೆ ಇದ್ದವರು 10 ನಿಮಿಷಕ್ಕಿಂತ ಹೆಚ್ಚು ಹೊತ್ತು ಅಭ್ಯಾಸ ಮಾಡುವುದು ಬೇಡ. ವಾಂತಿ ಬೇಧಿ, ಕಾಲರಾ ಸಮಸ್ಯೆ ಇದ್ದಾಗ ಅಭ್ಯಾಸ ಮಾಡುವುದು ಬೇಡ.

ಅಪಾನ ಮುದ್ರೆಯ ಲಘು ಮಂತ್ರ: ಇಷ್ಟ ದೇವರು, ‘ಯಾ ಓಂ ಹ್ರೀಂ ಪಶುಪತಯೇ ರೋಗನಾಶಾಯ ಪಟ್’ ಎಂದು ತಮ್ಮ ವಯಸ್ಸಿನಷ್ಟು ಪಠಿಸಿದರೆ ಸಾಕು. ಒಟ್ಟು 30 ರಿಂದ 40 ನಿಮಿಷಗಳ ಕಾಲ ಅಪಾನಮುದ್ರೆ ಮಾಡಿ. ಕೊನೆಯಲ್ಲಿ ಪ್ರಾಣಮುದ್ರೆ ಹತ್ತು ನಿಮಿಷ ಮಾಡಿ. ಮಂತ್ರ: ಓಂ ಹಿರಣ್ಯ ಗರ್ಭಾಯ ನಮಃ . ಇದನ್ನು 108 ಬಾರಿ ಪಠಿಸಿ.

ಪ್ರಯೋಜನ: ಅಪಾನ ಮುದ್ರೆಯಿಂದ ಹಲವಾರು ಪ್ರಯೋಜನಗಳಿವೆ. ಮುಖ್ಯವಾಗಿ ಈ ಮುದ್ರೆಯನ್ನು ನಿಯಮಿತವಾಗಿ ಮಾಡುವುದರಿಂದ ಮಧುಮೇಹ ಕಾಯಿಲೆಯನ್ನು ನಿಯಂತ್ರಿಸಬಹುದು. ಮಲಬದ್ಧತೆ ಹಾಗೂ ಮೂಲವ್ಯಾಧಿ ಸಮಸ್ಯೆಯನ್ನು ನಿವಾರಿಸುವಲ್ಲಿ ಕೂಡ ಇದು ಸಹಾಯ ಮಾಡುತ್ತದೆ. ಜೀರ್ಣ ಶಕ್ತಿ ಹೆಚ್ಚಿಸುತ್ತದೆ. ಅಧಿಕವಾದ ಶರೀರದ ಬೆವರುವಿಕೆಯನ್ನು ತಡೆಯುತ್ತದೆ. ಹಲ್ಲು ನೋವು ಹಾಗೂ ವಸಡು ಸಂಬಂಧಿ ನೋವನ್ನು ಕಡಿಮೆ ಮಾಡುತ್ತದೆ. ದೇಹದ ಜಡತ್ವವನ್ನು ಹೋಗಲಾಡಿಸುತ್ತದೆ. ವಾಂತಿಯ ನಿಯಂತ್ರಣಕ್ಕೂ ಸಹಕಾರಿ. ಊಟ ಆದ ನಂತರ ತಿಂದ ಆಹಾರ ಜೀರ್ಣವಾಗಲು ಈ ಮುದ್ರೆ ಅಭ್ಯಾಸ ಮಾಡಿ. ಬೆಳಿಗ್ಗೆ ಎದ್ದ ಕೂಡಲೇ ಮಲ ವಿಸರ್ಜನಾ ಕಾರ್ಯ ಸುಗಮವಾಗಲು ಈ ಅಪಾನ ಮುದ್ರೆಯನ್ನು ಅಭ್ಯಾಸ ಮಾಡಿ.

ಮುದ್ರೆಗಳನ್ನು ಯಾರು ಬೇಕಾದರೂ ಯಾವಾಗ ಬೇಕಾದರೂ ಅಭ್ಯಾಸ ಮಾಡಬಹುದು. ಕುಳಿತುಕೊಂಡು ಇರುವಾಗಲಾದರೂ, ನಿಂತಾಗ, ಪ್ರಯಾಣಿಸುವಾಗ, ಹಾಗೆಯೇ ಹಾಸಿಗೆಯಲ್ಲಿ ಮಲಗಿರುವಾಗಲೂ ಅಷ್ಟೇಕೆ ಟಿ.ವಿ ವೀಕ್ಷಣೆ ಮಾಡುತ್ತಿರುವಾಗಲೂ ಮುದ್ರೆಗಳನ್ನು ಮಾಡಬಹುದು. ಮುದ್ರೆಯನ್ನು ಎರಡೂ ಕೈಗಳಿಂದ ಮಾಡಿದರೆ ಉತ್ತಮ ಲಾಭವನ್ನು ಪಡೆಯಬಹುದಾಗಿದೆ. ಮುದ್ರೆಗಳನ್ನು ಯಾವುದೇ ಸ್ಥಿತಿಯಲ್ಲೂ ಮಾಡಬಹುದಾದರೂ ವಿಶೇಷವಾಗಿ ಪದ್ಮಾಸನ, ಸ್ವಸ್ತಿಕಾಸನ, ಸುಖಾಸನ ಅಥವಾ ವಜ್ರಾಸನ ಹಾಕಿ ಧ್ಯಾನಾವಸ್ಥೆಯಲ್ಲಿ ಕುಳಿತು ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಚೈತನ್ಯ ಹಾಗೂ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಮುದ್ರೆಗಳನ್ನು ಮಾಡುವಾಗ ಮನಸ್ಸು ನಿರ್ಮಲವಾಗಿರಲಿ.

ಯಾವುದೇ ಸಮಯದಲ್ಲಿ ಶರೀರದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುದ್ರೆಗಳಂತಹ ಸರಳ, ಸುಂದರ, ಸಹಜ ಹಾಗೂ ತಕ್ಷಣದ ಉಪಾಯ ಮತ್ತೊಂದಿಲ್ಲ ಎಂದೇ ಹೇಳಬಹುದು. ಇದೊಂದು ನಿರುಪದ್ರವಿ ಚಿಕಿತ್ಸಾ ಪದ್ಧತಿಯಾಗಿದ್ದು ಅಬಾಲ ವೃದ್ಧರು ಮುದ್ರೆಯಿಂದ ಪ್ರಯೋಜನವನ್ನು ಪಡೆಯಬಹುದು. ನಾನಾ ಪ್ರಕಾರದ ಈ ಮುದ್ರೆಗಳನ್ನು ಗುರುವಿನ ಮಾರ್ಗದರ್ಶನ, ಸಲಹೆ ಪಡೆದು ಅಭ್ಯಾಸ ಮಾಡಬೇಕು. ಮಧುಮೇಹದ ಹತೋಟಿಗೆ ಅನುಸರಿಸಬೇಕಾದ ಕ್ರಮಗಳು ಮುಖ್ಯ. ವ್ಯಕ್ತಿಯು ನಿಯಮಿತವಾದ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಅಗತ್ಯವಿರುವ ಔಷಧಿ ಸೇವನೆ, ಉತ್ತಮವಾದ ಆಹಾರ ಪದ್ಧತಿ ತೀರ ಅಗತ್ಯ. ಕೆಲವು ಸರಳ ವ್ಯಾಯಾಮಗಳು, ಕ್ರಿಯೆಗಳು, ಸರಳ ಯೋಗಾಸನಗಳು ಹಾಗೂ ಮುದ್ರೆಗಳು, ಪ್ರಾಣಾಯಾಮ, ಧ್ಯಾನವನ್ನು ಅಳವಡಿಸಿಕೊಂಡರೆ ಮಧುಮೇಹ ರೋಗವನ್ನು ಸಾಕಷ್ಟು ನಿಯಂತ್ರಣದಲ್ಲಿಟ್ಟುಕೊಂಡು ಉತ್ತಮವಾಗಿ ಬಾಳಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net