

ವಾದಿರಾಜ ಪ್ರಸನ್ನ
ನಮ್ಮ ಬುದ್ಧಿಮಟ್ಟದಿಂದ ಕೇಳಿದ ವರವು ಒಂದೊಮ್ಮೆ ನಮ್ಮನ್ನು ಕಷ್ಟಕ್ಕೆ ಸಿಲುಕಿಸಬಹುದು. ಬೇರೆಯವರಿಗೆ ಕೆಟ್ಟದ್ದಾಗಲಿ ಎಂದು ಬಯಸುವ ವರವನ್ನು ಸರ್ವದಾ ಕೇಳಬಾರದು. ಹಾಗಾಗಿ ನಮಗೆ ಯಾವುದು ಒಳಿತೋ ಆ ವರವನ್ನು ಕೊಟ್ಟು ಉದ್ಧರಿಸು ಎಂದು ದೇವರನ್ನು ಪ್ರಾರ್ಥಿಬೇಕು.
ಒಂದು ಊರಿನಲ್ಲಿ ಒಬ್ಬ ಹುಡುಗನಿದ್ದನು. ಅವನಿಗೆ ದೇವರಲ್ಲಿ ಅಪಾರವಾದ ನಂಬಿಕೆ. ದೃಢಭಕ್ತಿಯಿಂದ ದೇವರ ಪೂಜೆ ಮಾಡುತ್ತಿದ್ದನು. ಅವನಿಗೆ ಒಂದು ದಿನ ದೇವರು ಪ್ರತ್ಯಕ್ಷನಾಗಿ ನಿನಗೆ ಏನು ವರ ಬೇಕೋ ಕೇಳಿಕೋ ಎಂದನು. ಆ ಬಾಲಕನು ‘ನಾನು ಹೇಳಿದ್ದು ನಡೆಯಲಿ!’ ಎಂದು ಕೇಳಿಕೊಂಡನು. ಭಗವಂತನು ತಥಾಸ್ತು ಎಂದನು. ಹಲವು ದಿನಗಳ ಕಾಲ ಅವನು ಆ ವರವನ್ನು ಉಪಯೋಗಿಸಲಿಲ್ಲ.
ಒಮ್ಮೆ ಇವನು ತಪ್ಪೊಂದನ್ನು ಮಾಡುತ್ತಿದ್ದ. ಅದನ್ನು ನೋಡಿದ ಮೇಷ್ಟ್ರು, ಇವನನ್ನು ಸರಿದಾರಿಗೆ ತರಲು ಹೊಡೆಯುತ್ತಾರೆ. ಕೋಪಗೊಂಡ ಬಾಲಕನಿಗೆ ದೇವರಲ್ಲಿ ಕೇಳಿದ ವರದ ನೆನಪು ಬಂತು. ಮೇಷ್ಟ್ರ ತಲೆ ಸಿಡಿದು ಹೋಗಲಿ ಅಂದನು. ತಕ್ಷಣ ಮೇಷ್ಟ್ರ ತಲೆ ಸಿಡಿದು ಹೋಯಿತು. ಒಮ್ಮೆ ಇವನು ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ದಾರಿಯಲ್ಲಿ ಎಸೆದಿದ್ದನು. ನಂತರ ಆಟವಾಡುತ್ತಿದ್ದಾಗ ಅವನಿಗೆ ಅರಿವಿಲ್ಲದಂತೆ ಆ ಸಿಪ್ಪೆಯ ಮೇಲೆ ಕಾಲಿಟ್ಟನು; ಜಾರಿಬಿದ್ದನು. ಅಲ್ಲಿದ್ದ ಹುಡುಗರು ನಗಲಾರಂಭಿಸಿದರು. ಅವನಿಗೆ ಅವಮಾನವಾಯಿತು. ಕೋಪ ಬಂತು. ಹಿಂದೆಮುಂದೆ ಯೋಚಿಸದೆ, ‘ಈ ಸಿಪ್ಪೆ ಎಸೆದವರ ತಲೆ ಸಿಡಿದು ಹೋಗಲಿ’ ಎಂದ. ಮರುಕ್ಷಣದಲ್ಲಿ ಆ ಬಾಲಕನ ತಲೆ ಪುಡಿಪುಡಿಯಾಯಿತು.
ಈ ಕಥೆಯು ಕೇಳಲು ಅಡುಗೂಲಜ್ಜಿ ಕಥೆ ಇದ್ದಂತೆ ತೋರಿದರೂ ಇತಿಹಾಸ- ಪುರಾಣಗಳಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ. ಮಹಾ ಶಿವ ಭಕ್ತ ಭಸ್ಮಾಸುರನ ಕಥೆ, ಹಿರಣ್ಯಕಶಿಪುವಿನ ಕಥೆ, ಮಹಿಷಾಸುರನ ಕಥೆ, ಮೂಕಾ ಸುರನ ಕಥೆ ಇತ್ಯಾದಿ. ಅನೇಕ ವಿಚಿತ್ರ ವರಗಳಿಂದಲೇ ಅವರ ಅವನತಿಗಳಾಗಿವೆ.
ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ದೇವರಿಂದ ವರ ಪಡೆದು ನಮ್ಮ ಉದ್ಧಾರವಾಗಬೇಕೇ ಹೊರತು ಅವನತಿಯಲ್ಲ! ಸರ್ವದಾ ಹರಿ ಭಕ್ತರಾದ ಪ್ರಹ್ಲಾದ, ಧ್ರುವನಂತಹವರ ಪ್ರಾರ್ಥನೆಗಳು ನಮಗೆ ಅನುಕರಣೀಯ. ಭಕ್ತಶಿರೋಮಣಿಗಳ, ಅನೇಕ ದಾಸರುಗಳ ಪಥವು ಅನುಸರಣೀಯವೇ.
ಹಾಗಾಗಿ ನಮ್ಮ ಮಹರ್ಷಿಗಳು ಸಾರ್ವಕಾಲಿಕವಾಗಿ ಸರ್ವಜನಾಂಗದ ಒಳಿತಿಗಾಗಿ ಅನೇಕ ಚತುರ್ಭದ್ರ ವಿಚಾರಗಳನ್ನು ಆಚರಣೆಗೆ ತಂದಿದ್ದಾರೆ. ದೇವರು ನಮಗೆ ಜ್ಞಾನ ಭಕ್ತಿ ವೈರಾಗ್ಯಗಳನ್ನು ಕರುಣಿಸಲಿ ಎಂಬ ಆದರ್ಶ ಪ್ರಾರ್ಥನೆಯನ್ನು ಸೂತ್ರಪ್ರಾಯವಾಗಿ ತಿಳಿಸಿಕೊಟ್ಟಿದ್ದಾರೆ.
ಇಂತಹ ಪ್ರಾರ್ಥನೆಯಿಂದ ಲೌಕಿಕ ಸುಖವುಂಟು. ಪಾರಮಾರ್ಥಿಕ ಸುಖವೂ ಉಂಟು. ‘ಹಿನ್ನೋಟ, ಮುನ್ನೋಟ ಎರಡೂ ಮನುಷ್ಯನಿಗೆ ಬೇಕು. ಸ್ವರೂಪ ಜ್ಞಾನ ಬೇಕು. ಇವೆರಡನ್ನೂ ನೆನಪಿನಲ್ಲಿಟ್ಟಿರುವ ಮನುಷ್ಯ ಎಂದಿಗೂ ಮೃತ್ಯುವಶನಾಗುವುದಿಲ್ಲ. ಅಮೃತತ್ವವನ್ನು ಪಡೆಯುತ್ತಾನೆ’ ಎಂಬ ಯೋಗಿವರೇಣ್ಯ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.
(ಲೇಖಕರು ಸಂಸ್ಕೃತಿ ಚಿಂತಕರು, ಅಷ್ಟಾಂಗಯೋಗ ವಿಜ್ಞಾನಮಂದಿರಂ)