ಕಾದುನಿಂತ ಟ್ರಂಪ್! ಗಾದಿ ಬಿಡೆನು ಎನ್ನುವ ಬೈಡೆನ್?

Joe Biden
Published on
ಜಗದಗಲ
ಜೋ ಬೈಡೆನ್ ಅಧ್ಯಕ್ಷರಾಗಿ ಆಯ್ಕೆಯಾದಾಗ ಅವರು ದೂರವಾಣಿಯಲ್ಲಿ ಮೊದಲು ಮಾತಾಡಿದ್ದು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರೂಡೋ ಜತೆ. ನಂತರ ಅವರ ಸಂಭಾಷಣೆ ಸಾಗಿದ್ದು ಅಮೆರಿಕದ ಸಾಂಪ್ರದಾಯಿಕ ಸಹಯೋಗಿಗಳಾದ ಬ್ರಿಟನ್ ಮತ್ತು ಜರ್ಮನಿಗಳ ರಾಷ್ಟ್ರನಾಯಕರೊಂದಿಗೆ. ಎರಡು ವಾರಗಳ ಹಿಂದೆ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಶಾಲಿಯಾದ ನಂತರ ಡೊನಾಲ್ಡ್ ಟ್ರಂಪ್ ಮಾತಾಡಿದ ಮೊದಲ ಮೂವರು ಜಾಗತಿಕ ನಾಯಕರೆಂದರೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಇಸ್ರೇಲಿ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ಮತ್ತು ಸೌದಿ ಅರೇಬಿಯಾದ ಪ್ರಧಾನಮಂತ್ರಿ ರಾಜಕುಮಾರ ಮಹಮದ್ ಬಿನ್ ಸಲ್ಮಾನ್. ಅಮೆರಿಕದ ಈ ಇಬ್ಬರು ನಾಯಕರ ಜಾಗತಿಕ ಆದ್ಯತೆಗಳಲ್ಲಿ ಕಾಣುವ ಧ್ರುವಗಳ ಅಂತರವನ್ನು ಗುರುತಿಸಲು ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕಿಲ್ಲ.

ಭಾರತ, ಇಸ್ರೇಲ್ ಮತ್ತು ಸೌದಿ ಅರೇಬಿಯಾಗಳ ಬಗೆಗಿನ ಬೈಡೆನ್ ಆಡಳಿತದ ನಿಲುವುನೀತಿಗಳು ದ್ವಂದ್ವಪೂರ್ಣವಾದುವು. ಈ ದ್ವಂದ್ವ ಒಟ್ಟಾರೆ ಡೆಮೋಕ್ರಾಟಿಕ್ ಪಕ್ಷದ ನೀತಿಯೇ ಆಗಿರುವುದು ಗಮನಾರ್ಹ. ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ, ಅಲ್ಲಿನ ಸೇನೆಯ ರಕ್ಷಣೆಯಲ್ಲೇ ಇರುವುದು ಬರಾಕ್ ಒಬಾಮರಿಗೆ ತಿಳಿಯುತ್ತದೆ. ಆ ಭಯೋತ್ಪಾದಕನನ್ನು ಕೊಲ್ಲಲು ಅವರು ತಮ್ಮ ರಕ್ಷಣಾಪಡೆಗಳಿಗೆ ಹೇಳುತ್ತಾರೆ. ಅದೂ ಆಗಿಹೋಗುತ್ತದೆ. ಆದರೆ ತನ್ನ ಭಯೋತ್ಪಾದನೆಯ ವಿರುದ್ಧದ ಸಮರದಲ್ಲಿ ಮುಂಚೂಣಿ ರಾಷ್ಟ್ರವೆಂದು ಗುರುತಿಸಿಕೊಂಡು ಸುಮಾರು 35 ಬಿಲಿಯನ್ ಡಾಲರ್​ಗಳನ್ನು ಕಬಳಿಸಿದ್ದ ಪಾಕಿಸ್ತಾನವು ಅಮೆರಿಕನ್ ಸೇನೆ ಸರಿಸುಮಾರು ಒಂದು ದಶಕದಿಂದಲೂ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಯಾರನ್ನು ಹುಡುಕುತ್ತಿತ್ತೋ ಆ ಭಯೋತ್ಪಾದಕನನ್ನು ತನ್ನ ರಕ್ಷಣೆಯಲ್ಲೇ ಇರಿಸಿಕೊಂಡಿದೆ ಎಂದು ಗೊತ್ತಾದಾಗ ಒಬಾಮ ಆಡಳಿತದ ನೀತಿಯಲಿ ಏನಾದರೂ ಬದಲಾವಣೆ? ಉಹ್ಞುಂ ಏನೂ ಇಲ್ಲ! ಪಾಕಿಸ್ತಾನಕ್ಕೆ ಬಿಲಿಯನ್​ಗಟ್ಟಲೆ ಸೇನಾ ಧನಸಹಾಯ ನಿರ್ವಿಘ್ನವಾಗಿ ಮುಂದುವರಿಯಿತು. ಆಗೊಮ್ಮೆ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಪಾಕಿಸ್ತಾನಕ್ಕೆ ಬಂದು ಅಲ್ಲಿನ ನೆಲದಲ್ಲಿ ನಿಂತು ‘ನೀವು ಹಾವುಗಳನ್ನು ಸಾಕಿದರೆ ಅವು ನಿಮ್ಮ ನೆರೆಯವರನ್ನು ಮಾತ್ರ ಕಚ್ಚುತ್ತವೆ ಎಂದು ನೀವು ತಿಳಿಯಲಾಗದು’ ಎಂದು ‘ಚಂದದ’ ಉಪದೇಶ ಕೊಟ್ಟುಹೋದರು. ಆದರೆ ಆ ‘ಹಾವು’ಗಳನ್ನು ಸಾಕಲು ಬೇಕಾದ ಹಣವನ್ನು ಪಾಕಿಸ್ತಾನಕ್ಕೆ ನೀಡುತ್ತಲೇ ಹೋಗುವುದನ್ನು ಒಬಾಮ ಆಡಳಿತ ನಿಲ್ಲಿಸಲಿಲ್ಲ. ಬದಲಾಗಿ 2015ರಲ್ಲಿ ನಮ್ಮ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬಂದ ಅಧ್ಯಕ್ಷ ಒಬಾಮ ನಮ್ಮ ಸಂಸತ್​ನಲ್ಲಿ ನಿಂತು ನಮಗೇ ಪ್ರಜಾಪ್ರಭುತ್ವದ ಬಗ್ಗೆ ಉಪದೇಶ ನೀಡಿದರು! ಅತ್ತ ಚೀನೀ ಕಮ್ಯೂನಿಸ್ಟ್ ಸರ್ಕಾರದ ಟಿಬೆಟ್​ನಲ್ಲಿ ಎಸಗುತ್ತಿರುವ ಅಮಾನವೀಯ ಕೃತ್ಯಗಳನ್ನು ತಡೆಯಲು ಏನಾದರೂ ಮಾಡಿ ಎಂದು ದಲಾಯಿ ಲಾಮಾ ಎದುರಿಗೆ ಕೂತು ಕೇಳಿಕೊಂಡಾಗ ಇದೇ ಒಬಾಮ ‘ಆ ಬಗ್ಗೆ ನೀವು ಚೀನೀ ಸರ್ಕಾರದ ಜತೆ ಮಾತಾಡಿ’ ಎಂದು ಭಾರಿ ಸಲಹೆ ಕೊಟ್ಟು ಕೈತೊಳೆದುಕೊಂಡರು!

ಎಂಟು ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಅಧ್ಯಕ್ಷರಾದಾಗ ಪಾಕಿಸ್ತಾನದ ಮುಖಕ್ಕೇ ಹೇಳಿದ್ದು, ‘ಭಯೋತ್ಪಾದನೆಯ ವಿರುದ್ಧ ಹೋರಾಡಲು ನೀವು ನಮ್ಮಿಂದ ಬಿಲಿಯನ್​ಗಟ್ಟಲೆ ಹಣವನ್ನು ಕೊಳ್ಳೆಹೊಡೆದಿರಿ. ಆದರೆ ಪ್ರತಿಯಾಗಿ ನಮಗೆ ಸಿಕ್ಕಿದ್ದೇನು? ಕೇವಲ ಸುಳ್ಳುಗಳು ಮತ್ತು ಮೋಸ ಅಷ್ಟೇ!’ ಎಂದು. ಹೇಳಿದ್ದಷ್ಟೇ ಅಲ್ಲ, ಪಾಕಿಸ್ತಾಕ್ಕೆ ಸಂದಾಯವಾಗುತ್ತಿದ್ದ ಸೇನಾ ನೆರವಿನ 90 ಭಾಗವನ್ನು ಕತ್ತರಿಸಿದರು. ಅತ್ತ ಚೀನಾದ ಆದಾಯವನ್ನು ಕುಗ್ಗಿಸಿ ಅದರ ಸೇನಾ ಅಟ್ಟಹಾಸಕ್ಕೆ ಕಡಿವಾಣ ಹಾಕಹೋದರು. ಚೀನಾ ಮತ್ತು ಪಾಕಿಸ್ತಾನಗಳೆರಡೂ ಒಟ್ಟುಗೂಡಿ ಉತ್ತರ ಲಡಾಖ್ ಮೇಲೆ ಆಕ್ರಮಣವೆಸಗಲು 2020ರ ಜೂನ್ ಕೊನೆಯ ವಾರದಲ್ಲಿ ತಯಾರಿ ನಡೆಸಿದಾಗ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪೆಯೋ ಭಾರತದ ಪರವಾಗಿ ನಿಂತು ಅವೆರಡೂ ದೇಶಗಳಿಗೆ ಎಚ್ಚರಿಕೆ ನೀಡಿದರು. ಪರಿಣಾಮ ಅದ್ಭುತ. ಅವೆರಡೂ ದುರುಳ ದೇಶಗಳು ಬಾಲಮುದುರಿಕೊಂಡು ಓಡಿಹೋದವು.

ದುರದೃಷ್ಟವಶಾತ್ ಮುಂದಿನ ಆರುತಿಂಗಳಲ್ಲಿ ಟ್ರಂಪ್ ಅಧಿಕಾರ ಕಳೆದುಕೊಂಡರು; ಒಬಾಮ ಅವರ ‘ಹಿರಿಯ’ ಶಿಷ್ಯ ಹಾಗೂ ಹಿಲಾಲ್-ಎ- ಪಾಕಿಸ್ತಾನ್ ಪ್ರಶಸ್ತಿಪುರಸ್ಕೃತ ಬೈಡೆನ್ ಅಧ್ಯಕ್ಷಗಾದಿಗೇರಿದರು. ಚೀನಾ ಮತ್ತು ಪಾಕಿಸ್ತಾನಗಳ ಜತೆ ಅಮೆರಿಕದ ಮಧುಚಂದ್ರ ಮತ್ತೆ ಆರಂಭವಾಯಿತು; ಭಾರತ ದೂರ ದೂರ ಸರಿದುಹೋಯಿತು. ಬೈಡೆನ್ ಆಡಳಿತ ಪಾಕಿಸ್ತಾನಕ್ಕೆ ಸೇನಾ ನೆರವನ್ನು ಪುನರಾರಂಭಿಸಿತು, ನಾಲ್ಕು ದಶಕಗಳಿಗಿಂತಲೂ ಹಳೆಯದಾದ ಎಫ್-16 ಯುದ್ಧವಿಮಾನಗಳ ದುರಸ್ತಿಗೆಂದು ಪಾಕಿಸ್ತಾನಕ್ಕೆ 450 ಮಿಲಿಯನ್ ಡಾಲರ್​ಗಳ ನೆರವನ್ನೂ ಅಮೆರಿಕ ಘೊಷಿಸಿತು.

ಅದೇ ಸಮಯಕ್ಕೆ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಅಮೆರಿಕಗಳ ನಡುವೆಯೂ ವಿಶ್ವಾಸ ಕ್ಷೀಣಿಸತೊಡಗಿ ಸಂಬಂಧಗಳು ಬಿಗಡಾಯಿಸತೊಡಗಿದವು. ಒಂದು ಹಂತದಲ್ಲಿ ಅದು ಎಷ್ಟರಮಟ್ಟಿಗೆ ಹೋಯಿತೆಂದರೆ ಪ್ಯಾಲೆಸೆôನ್ ಕುರಿತಾಗಿನ ಬೈಡೆನ್ ಆಡಳಿತದ ಹೇಳಿಕೆಗಳು ಇಸ್ರೇಲ್​ನಲ್ಲಿ ಸಂಶಯ ಮೂಡಿಸಿದರೆ ಅಧ್ಯಕ್ಷ ಬೈಡೆನ್​ರ ದೂರವಾಣಿ ಕರೆಯನ್ನು ಸ್ವೀಕರಿಸಲೂ ಮಹಮದ್ ಬಿನ್ ಸಲ್ಮಾನ್ ನಿರಾಕರಿಸಿದರು!

ಆದರೆ ತನ್ನ ನೀತಿಗಳು ಈ ಸಂದರ್ಭಕ್ಕೆ ಹೊಂದಿಕೆಯಾಗಲಾರವು ಎಂದು ಒಂದೇ ವರ್ಷದೊಳಗೆ ಬೈಡೆನ್ ಆಡಳಿತಕ್ಕೆ ಮನವರಿಕೆಯಾಗತೊಡಗಿತು. ಚೀನಾ ಜತೆ ಚಕ್ಕಂದ ಅಮೆರಿಕದ ಹಿತಾಸ್ತಿಗಳಿಗೇ ಮಾರಕ, ಅದನ್ನು ಹೇಗಾದರೂ ನಿಗ್ರಹಿಸಲೇಬೇಕು ಎಂದರಿತ ಬೈಡೆನ್ ಟ್ರಂಪ್ ಹಾಕಿಕೊಟ್ಟಿದ್ದ ದಾರಿಗೇ ಮರಳಿದರು. ಇಂದಿನ ವಾಸ್ತವಗಳ ಪ್ರಕಾರ ಚೀನಾವನ್ನು ಎದುರಿಸಲು ಭಾರತಕ್ಕಿಂತ ಸೂಕ್ತವಾದ ದೇಶ ಮತ್ತೊಂದಿಲ್ಲ ಮತ್ತು ಮೋದಿಯವರಿಗಿಂತ ಸಮರ್ಥ ಜಾಗತಿಕ ನಾಯಕ ಮತ್ತೊಬ್ಬರಿಲ್ಲ ಎಂಬ ಸತ್ಯವನ್ನರಿತ ಬೈಡೆನ್ ಆಡಳಿತ ಭಾರತದತ್ತ ಸ್ನೇಹದ ಕೈ ಚಾಚತೊಡಗಿತು. ಇದು ಎಷ್ಟರಮಟ್ಟಿಗೆ ಹೋಯಿತೆಂದರೆ ಯೂಕ್ರೇನ್ ಮೇಲೆ ಆಕ್ರಮಣವೆಸಗಿದ ರಷ್ಯಾ ಮೇಲೆ ಆರ್ಥಿಕ ದಿಗ್ಬಂಧನಗನ್ನು ಹೇರಿದ ಬೈಡೆನ್ ಆಡಳಿತ, ಆ ದಿಗ್ಬಂಧನಗಳು ಭಾರತಕ್ಕೆ ಅನ್ವಯಿಸುವುದಿಲ್ಲ, ರಷ್ಯಾದಿಂದ ಭಾರತ ಕಚ್ಚಾತೈಲವನ್ನು ಎಷ್ಟು ಬೇಕಾದರೂ ಆಮದುಮಾಡಿಕೊಳ್ಳಬಹುದು ಎಂದು ಹೇಳಿತು! ಅಷ್ಟರಲ್ಲಾಗಲೇ ಅತ್ತ ಚೀನಾ ವಿರುದ್ಧ ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಕಿಂಗ್​ಡಂ (ಬ್ರಿಟನ್) ಜತೆಗೆ ಸೇರಿ ‘ಅಖಿಓಖಿಖ’ ಸೇನಾಕೂಟವನ್ನೂ ಬೈಡೆನ್ ಸರ್ಕಾರ ಕಟ್ಟಿಯಾಗಿತ್ತು.

ಭಾರತದ ಜತೆ ಸಂಬಂಧಗಳನ್ನು ‘ಆರೋಗ್ಯಕರ’ವಾಗಿಟ್ಟುಕೊಳ್ಳುವ ಪ್ರಯತ್ನಗಳನ್ನು ಹಮ್ಮಿಕೊಳ್ಳುತ್ತಲೇ ಬೈಡೆನ್ ಆಡಳಿತ ಭಾರತಕ್ಕೆ ಇರಿಸುಮುರಿಸಾಗುವ ಕ್ರಮಗಳಿಗೂ ಮುಂದಾಯಿತು. ಭಾರತದ ಜತೆ ಅತಿಮಹತ್ವದ ಸೇನಾ ಸಹಕಾರದ ಒಪ್ಪಂದಗಳನ್ನು ಮಾಡಿಕೊಳ್ಳುತ್ತಲೇ ‘ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರಗಳಾಗುತ್ತಿವೆ’ ಎಂದೂ ಹೇಳುವ ಉದ್ದೇಶಪೂರ್ವಕ ಸುಳ್ಳು ವರದಿಗಳನ್ನು ಬೈಡೆನ್ ಆಡಳಿತದ ವಿದೇಶಾಂಗ ಇಲಾಖೆ ದೊಡ್ಡದಾಗಿ ಪ್ರಚಾರ ಮಾಡಿತು, ಅದೂ ಮತ್ತೆ ಮತ್ತೆ! ಜತೆಗೆ ಭಾರತ, ಹಿಂದೂಗಳು ಮತ್ತು ಮೋದಿ ಸರ್ಕಾರದ ಬಗ್ಗೆ ದುರಭಿಪ್ರಾಯ ಮೂಡಿಸುವ ಮಾತುಗಳನ್ನು ಡೆಮೋಕ್ರಾಟಿಕ್ ಪಕ್ಷದ ವಿವಿಧ ನೇತಾರರು ಎಗ್ಗಿಲ್ಲದೆ ಹೇಳತೊಡಗಿದ್ದೂ ನಡೆಯಿತು. ಇವರಲ್ಲಿ ಭಾರತೀಯ ಮೂಲದ ಪ್ರಮೀಳಾ ಜೈಪಾಲ್ ಮತ್ತು ಅಮೆರಿಕದ ಪೌರತ್ವಕ್ಕಾಗಿ ತನ್ನ ಸಹೋದರನನ್ನೇ ಮದುವೆಯಾಗುವ ನಾಟಕವಾಡಿದಳು ಎಂದು ಹೇಳಲಾಗುವ ಇಲ್ಹಾನ್ ಒಮರ್ ಪ್ರಮುಖರು. ‘ಅಯೋಧ್ಯೆಯ ರಾಮಮಂದಿರ ದ್ವೇಷದ ಸಂಕೇತ’ ಎಂದು ನ್ಯೂಯಾರ್ಕ್ ನಗರದ ಡೆಮೋಕ್ರಾಟಿಕ್ ಮೇಯರ್ ಎರಿಕ್ ಆಡಮ್್ಸ ಹೇಳಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಮಹತ್ವದ ವಿಷಯವೆಂದರೆ ಕೆನಡಿಯನ್ ಖಲಿಸ್ತಾನಿ ಭಯೋತ್ಪಾದಕ ಹರ್​ದೀಪ್ ಸಿಂಗ್ ನಿಜ್ಜರ್​ನ ಹತ್ಯೆಯ ಹಿಂದೆ ಭಾರತ ಸರ್ಕಾರ ಮತ್ತು ಆಟ್ಟವಾದಲ್ಲಿನ ಭಾರತೀಯ ಹೈಕಮಿಷನ್ ಇವೆ ಎಂಬ ಆಧಾರರಹಿತ ಆಪಾದನೆಗಳನ್ನು ಬೈಡೆನ್​ನರ ಖಾಸಾ ಸಹಯೋಗಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ಮಾಡಿದ್ದೂ ಅಮೆರಿಕ ನೀಡಿದೆ ಎನ್ನಲಾದ ‘ಬೇಹುಗಾರಿಕಾ ವರದಿ’ಗಳ ಆಧಾರದ ಮೇಲೆ. ಅಂದರೆ ಟ್ರೂಡೋರನ್ನು ಭಾರತದ ವಿರುದ್ಧ ಎತ್ತಿಕಟ್ಟಿದ್ದು ಬೈಡೆನ್ ಆಡಳಿತವೇ. ಇಷ್ಟೆಲ್ಲ ವಿಪರೀತದ ಸೂಚನೆಗಳು ಡೆಮೋಕ್ರಾಟಿಕ್ ಪಕ್ಷ ಮತ್ತು ಸರ್ಕಾರದಿಂದ ಬರುತ್ತಿದ್ದುದು ಅದೇ ಡೆಮೋಕ್ರಾಟಿಕ್ ಸರ್ಕಾರ ಭಾರತದ ಜತೆ ಅತಿಮಹತ್ವದ ಸೇನಾಸಹಕಾರದ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದಾಗಲೇ ಎನ್ನುವುದು ಮೋದಿಯವರ ಭಾರತದ ಬಗ್ಗೆ ಬೈಡೆನ್ ಸರ್ಕಾರದ ನೀತಿಗಳು ಅದೆಷ್ಟು ಡೋಲಾಯಮಾನವಾಗಿದ್ದವು ಎಂದು ತೋರಿಸುತ್ತವೆ.

ಅತ್ತ ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್-ಹಮಾಸ್ ಸಂಘರ್ಷ ಆರಂಭವಾದಾಗಲೂ ಬೈಡೆನ್ ಆಡಳಿತದ್ದು ದ್ವಂದ್ವದ ನೀತಿಯೇ. ಗಾಝಾದಲ್ಲಿ ಅದು ಮಾಡಬೇಡ ಇದು ಮಾಡಬೇಡ ಎಂದು ಇಸ್ರೇಲ್​ಗೆ ಪುಂಖಾನುಪುಂಖ ಕಟ್ಟಳೆಗಳನ್ನು ವಿಧಿಸಿ, ಆ ಎಲ್ಲ ರೆಡ್​ಲೈನ್​ಗಳನ್ನು ಆ ಯೆಹೂದಿ ರಾಷ್ಟ್ರ ದಾಟಿದಾಗಲೂ ಅದರ ವಿರುದ್ಧ ಏನೂ ಕ್ರಮ ತೆಗೆದುಕೊಳ್ಳದ್ದು ಬೈಡೆನ್ ಸರ್ಕಾರದ ದ್ವಂದ್ವದ ಪರಾಕಾಷ್ಟೆಯೇ ಸರಿ.

ಸೌದಿ ಅರೇಬಿಯಾದ ಬಗ್ಗೆ ಹೇಳುವುದಾದರೆ ತೈಲ ಉತ್ಪಾದನೆಯ ದೈನಂದಿನ ಮಿತಿಯ ಕುರಿತಾಗಿ ಬೈಡೆನ್ ಆಡಳಿತದ ನೀತಿಗಳು ಮಹಮದ್ ಬಿನ್ ಸಲ್ಮಾನ್​ರನ್ನು ವಾಷಿಂಗ್​ಟನ್​ನಿಂದ ದೂರ ಒಯ್ದವು. ಬೈಡೆನ್​ರ ಮೇಲೆ ಎಂಬಿಎಸ್​ರ ಅವಿಶ್ವಾಸ ಅದೆಷ್ಟರಮಟ್ಟಿಗೆ ಹೋಯಿತೆಂದರೆ ಅವರು ಚೀನಾದ ಮಧ್ಯಸ್ಥಿಕೆಯಲ್ಲಿ ಕಟ್ಟಾ ವಿರೋಧಿ ಇರಾನ್ ಜತೆಗೆ ಸಂಬಂಧಗಳನ್ನು ವೃದ್ಧಿಸಿಕೊಳ್ಳುವ ಕ್ರಮಕ್ಕೂ ಮುಂದಾದರು! ಒಟ್ಟಿನಲ್ಲಿ ಬೈಡೆನ್ ಅವಧಿ ಪಶ್ಚಿಮ ಮತ್ತು ದಕ್ಷಿಣ ಏಷ್ಯಾದಲ್ಲಿ ಅಮೆರಿಕದ ವಿಶ್ವಾಸಾರ್ಹತೆ ತಳ ಮುಟ್ಟಿದ ಕಾಲ.

ಇದು ಮತ್ತೆ ಸರಿದಾರಿಗೇರುವ ಸಾಧ್ಯತೆ ಟ್ರಂಪ್​ರ ಚುನಾವಣಾ ವಿಜಯದಲ್ಲಿ ಕಾಣತೊಡಗಿದೆ. ಟ್ರಂಪ್ ತಮ್ಮ ಮಿತ್ರ ಎಂದು ಮೋದಿ ಹೇಳಿದರೆ ಮೋದಿ ತಮ್ಮ ಸನ್ಮಿತ್ರ ಎಂದು ಟ್ರಂಪ್ ಹೇಳಿದ್ದಾರೆ. ಇದು ನಿದ್ದೆಗೆಡಿಸಿರುವುದು ಸದ್ಯಕ್ಕೆ ಮುಖ್ಯವಾಗಿ ಆಟ್ಟವಾ ಮತ್ತು ಢಾಕಾಗಳನ್ನು. ಬಿಲ್ ಮತ್ತು ಹಿಲರಿ ಕ್ಲಿಂಟನ್​ರಿಂದ ಬೆಳೆದು; ಒಬಾಮ, ಕಮಲಾ ಮತ್ತು ಬೈಡೆನ್​ರಿಂದ ಇಂದು ಅಧಿಕಾರ ಗಿಟ್ಟಿಸಿಕೊಂಡಿರುವ ಮಹಮದ್ ಯೂನುಸ್ ಅದೆಷ್ಟು ಕಂಗೆಟ್ಟರೆಂದರೆ ಟ್ರಂಪ್​ರ ವಿಜಯ ನಿಶ್ಚಿತವೆಂದು ತಿಳಿಯುತ್ತಿದ್ದಂತೇ ಆ ಅರ್ಥಶಾಸ್ತ್ರಜ್ಞ-ರಾಜಕಾರಣಿ ಮಧ್ಯರಾತ್ರಿಯಲ್ಲಿ ತಮ್ಮ ಉಸ್ತುವಾರಿ ಸರ್ಕಾರದ ಪ್ರಮುಖರ ಸಭೆ ಕರೆದು ಮುಂದೇನಾಗಬಹುದು ಎಂಬ ಚರ್ಚೆಯಲ್ಲಿ ತೊಡಗಿದರು! ಅದಾದ ಮೂರು ದಿನಗಳಲ್ಲಿ ಅತ್ತ ಕೆನಡಾದಲ್ಲಿ ಭಯೋತ್ಪಾದಕ ಅರ್ಶ್ ದಲ್ಲಾ ಬಂಧಿತನಾದ! ಪಂಜಾಬ್​ನಲ್ಲಿ ಕುಕೃತ್ಯಗಳನ್ನೆಸಗಿ ಕೆನಡಾಕ್ಕೆ ಓಡಿಹೋಗಿ ನಾಲ್ಕು ವರ್ಷಗಳಿಂದಲೂ ಅಲ್ಲಿ ಅಡಗಿರುವ ಅವನನ್ನು ಬಂಧಿಸಿ ತನಗೆ ಒಪ್ಪಿಸುವಂತೆ ಭಾರತ ಸರ್ಕಾರ ಕೆನಡಾಕ್ಕೆ ಮನವಿ ಮಾಡಿಕೊಂಡಿತ್ತು. ಆದರೆ ಟ್ರೂಡೋ ಸರ್ಕಾರ ಕೈಕಟ್ಟಿ ಕುಳಿತಿತ್ತು. ದಲ್ಲಾನ ಬಂಧನ ಕೆನಡಾದ ಮೇಲೆ ಟ್ರಂಪ್​ರ ವಿಜಯದ ಪರಿಣಾಮದ ಮೊದಲ ಸೂಚನೆಯಂತೆ ಕಾಣುತ್ತಿದೆ. ಆದಾಗ್ಯೂ ಈ ಬಗ್ಗೆ ಇದಮಿತ್ಥಂ ಎಂದು ಹೇಳಲು ಇನ್ನೂ ಸ್ವಲ್ಪ ಕಾಯುವುದು ವಿಹಿತ. ಆದರೆ ಟ್ರಂಪ್ ಮತ್ತು ಮೋದಿಯವರ ನಡುವಿನ ಸ್ನೇಹವಿಶ್ವಾಸಗಳು ಮತ್ತು ಭಾರತದ ಪರ ಗೌರವ, ವಿಶ್ವಾಸ ಮತ್ತು ಪ್ರೀತಿ ಹೊಂದಿರುವ ಮೈಕ್ ವಾಲ್ಟ್ ್ಜ ಮಾಕೋ ಅಂಟೋನಿಯೋ ರೂಬಿಯೋ, ಅಮೆರಿಕನ್ ಹಿಂದೂ ತುಳಸಿ ಗ್ಯಾಬಾರ್ಡ್ ಮುಂತಾದವರು ಟ್ರಂಪ್ ಆಡಳಿತದಲ್ಲಿ ಮುಖ್ಯ ಸ್ಥಾನಗಳನ್ನು ಪಡೆದುಕೊಳ್ಳಲಿರುವುದು ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತ- ಅಮೆರಿಕ ಸಂಬಂಧಗಳು ಉನ್ನತ ಮಟ್ಟಕ್ಕೇರಲಿವೆ ಎನ್ನವುದರ ಸೂಚನೆ.

ಇಸ್ರೇಲ್ ಬಗ್ಗೆ ಹೇಳುವುದಾದರೆ ಆ ದೇಶದ ಬಗ್ಗೆ ವಾಷಿಂಗ್​ಟನ್​ನಲ್ಲಿ ದ್ವಂದ್ವ ಮರೆಯಾಗಿ ಒಂದು ಸ್ಪಷ್ಟ ನೀತಿ ಮೂಡಿಬರಲಿದೆ. ಟ್ರಂಪ್ ಆಯ್ಕೆಯಾದ ನಾಲ್ಕು ದಿನಗಳಲ್ಲಿ ಅವರೊಂದಿಗೆ ಇಸ್ರೇಲಿ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ಮೂರು ಸಾಲ ದೂರವಾಣಿಯಲ್ಲಿ ಸಂಭಾಷಿಸಿದ್ದಾರೆ! ಇದರರ್ಥ ಗಹನವಾದುದೇನೋ ಮತ್ತೆಮತ್ತೆ ಚರ್ಚೆಯಾಗಿದೆ. ಟ್ರಂಪ್ ಮೊದಲೇ ಇರಾನ್​ನ ಮೂಲಭೂತವಾದಿ ಸರ್ಕಾರದ ಕಟ್ಟಾ ವಿರೋಧಿ. ಆ ದೇಶದ ವಿರುದ್ಧ ಅಗತ್ಯವನಿಸುವ ಯಾವುದೇ ಕ್ರಮವನ್ನು ಕೈಗೊಳ್ಳುವ ಸ್ವಾತಂತ್ರ್ಯವನ್ನು ಟ್ರಂಪ್ ಇಸ್ರೇಲಿ ನೇತಾರನಿಗೆ ನೀಡಿರುವ ಸಾಧ್ಯತೆ ದಟ್ಟವಾಗಿದೆ ಎಂದು ಅಮೆರಿಕದ ಬೇಹುಗಾರಿಕಾ ಸಂಸ್ಥೆ ‘ಸಿಐಎ’ಯ ಮಾಜಿ ನಿರ್ದೇಶಕ ಲಿಯಾನ್ ಎಡ್ವರ್ಡ್ ಪೆನೆಟಾ ಮತ್ತು ಬ್ರಿಟಿಷ್ ಬೇಹುಗಾರಿಕಾ ಸಂಸ್ಥೆ ‘ಎಂಐ6’ಯ ಮಾಜಿ ಮುಖ್ಯಸ್ಥ ಸರ್ ರಿಚರ್ಡ್ ಬಿಲಿಂಗ್ ದಿಯರ್​ಲೋವ್ ಬರೆಯುತ್ತಾರೆ. ಇವರಿಬ್ಬರೂ ನಿರ್ವಹಿಸಿರುವ ಜವಾಬ್ದಾರಿಗಳು ಮತ್ತು ಹೊಂದಿರುವ ಅನುಭವಗಳ ಆಧಾರದ ಮೇಲೆ ಇವರ ಮಾತುಗಳು ಹುಡುಗಾಟಿಕೆಯವಲ್ಲ ಎಂದು ನಾವು ತಿಳಿಯಬಹುದು.

ಇದೆಲ್ಲದರ ಅರ್ಥ ಯೂಕ್ರೇನ್​ನಲ್ಲಿ ಯುದ್ಧ ನಿಲ್ಲುತ್ತದೆ, ಜಗತ್ತಿನ ಇತರೆಡೆ ದುಷ್ಟರಿಗೆ ಶಿಕ್ಷೆಯಾಗಿ, ಶಿಷ್ಟರಿಗೆ ರಕ್ಷಣೆಯಾಗುತ್ತದೆ ಎಂದರ್ಥವೇ? ಹಾಗಿಲ್ಲವೇನೋ ಎಂಬ ಸೂಚನೆಯನ್ನು ಬೈಡೆನ್ ಇದೇ ಭಾನುವಾರ ನೀಡಿದ್ದಾರೆ. ಅಮೆರಿಕ-ನಿರ್ವಿುತ ದೂರಗಾಮಿ ಕ್ಷಿಪಣಿ ಎಟಿಸಿಎಂಎಸ್ ಅನ್ನು ರಷ್ಯಾ ವಿರುದ್ಧ ಬಳಸುವ ಅನುಮತಿಯನ್ನು ಅವರು ಯೂಕ್ರೇನ್​ಗೆ ನೀಡಿದ್ದಾರೆ! ಇದನ್ನು ನೋಡಿ ಬ್ರಿಟನ್ ಮತ್ತು ಫ್ರಾನ್ಸ್ ಸಹ ತಮ್ಮ ದೂರಗಾಮಿ ಕ್ಷಿಪಣಿ ಸ್ಟಾಮರ್್​ಶ್ಯಾಡೋವನ್ನು ರಷ್ಯಾ ವಿರುದ್ಧ ಬಳಸುವ ಅನುಮತಿಯನ್ನು ಯೂಕ್ರೇನ್​ಗೆ ನೀಡಬಹುದು. ಹೀಗೇನಾದರೂ ಆದರೆ ತಾನು ಯೂಕ್ರೇನ್ ಜತೆ ನ್ಯಾಟೋ ದೇಶಗಳ ಮೇಲೂ ಅಣ್ವಸ್ತ್ರಗಳನ್ನು ಬಳಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುತಿನ್ ಗುಡುಗಿದ್ದಾರೆ. ಇದರರ್ಥ ಯೂಕ್ರೇನ್ ಯುದ್ಧ ಯೂರೋಪ್​ಗೆ, ಅಲ್ಲಿಂದ ಇಡೀ ಜಗತ್ತಿಗೇ ಹರಡುವ ಅಪಾಯವಿದೆ. ಬೈಡೆನ್​ರ ಈ ನಡವಳಿಕೆಯ ಹಿಂದೆ ಎರಡು ಕರಾಳ ಹುನ್ನಾರಗಳಿರುವಂತಿದೆ. ಒಂದು- ‘ಯೂಕ್ರೇನ್ ಯುದ್ಧವನ್ನು ಇಪ್ಪತ್ತನಾಲ್ಕು ತಾಸುಗಳಲ್ಲಿ ನಿಲುಗಡೆಗೆ ತರುತ್ತೇನೆ’ ಎಂಬ ಟ್ರಂಪ್​ರ ಘೊಷಣೆ ಕಾರ್ಯಗತಗೊಳ್ಳಲು ಸಾಧ್ಯವಾಗದಂಥ ಸ್ಥಿತಿ ಸೃಷ್ಟಿಸುವುದು. ಎರಡು- ತಮ್ಮ ನಡವಳಿಕೆಯಿಂದ ಜಗತ್ತಿನಲ್ಲಿ ಮಹಾಯುದ್ಧವೊಂದು ಆರಂಭವಾದರೆ ಆ ನೆಪವೊಡ್ಡಿ ಟ್ರಂಪ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವುದನ್ನೇ ಮುಂದೂಡಿ ತಾವೇ ಅಧಿಕಾರದಲ್ಲಿ ಮುಂದುವರಿಯುವ ಅವಕಾಶವನ್ನು ಬೈಡೆನ್ ಅಥವಾ ಅವರ ಹಿಂದಿರುವ ಡೀಪ್ ಸ್ಟೇಟ್ ಶಕ್ತಿಗಳು ರೂಪಿಸಿವೆ! ಇಂತಹ ಅಸಾಧಾರಣ ಕ್ರಮಕ್ಕೆ ಅಸಾಮಾನ್ಯ ಸನ್ನಿವೇಶಗಳಲ್ಲಿ ಅವಕಾಶವಿದ್ದರೂ ಇದು ಅಮೆರಿಕಕ್ಕಾಗಲೀ, ಜಗತ್ತಿಗಾಗಲೀ ಒಳ್ಳೆಯದಲ್ಲ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net