ಅಮ್ಮನಿಗೊಂದು ಹೋಮ್ ವರ್ಕ್ ಎಂಬ ಸ್ಮಾರ್ಟ್ ವರ್ಕ್

Morther Daughter
Published on

| ರಾಜೇಶ್ವರಿ ಹಿರೇಮಠ

ಪುಟಾಣಿಗಳಿಗೆ ಶಾಲೆ ಆರಂಭವಾಯಿತೆಂದರೆ, ಅಮ್ಮಂದಿರಿಗೂ ತುಸು ಹೆಚ್ಚುವರಿ ಕೆಲಸದ ಆರಂಭವಾದಂತೆಯೇ ಸರಿ. ಪುಟ್ಟ ಮಕ್ಕಳಿಗೆ ಕಲಿಕೆಯ ಕೆಲವು ಚಟುವಟಿಕೆಗಳನ್ನು ನಿರ್ವಹಿಸಲು ಪಾಲಕರ ಸಹಕಾರ, ಮಾರ್ಗದರ್ಶನ ಬೇಕೇಬೇಕು. ಕೇವಲ ಓದು-ಬರಹ ಮಾತ್ರವಲ್ಲದೆ,ಶಾಲೆಗೆ ಹೊರಡುವ ಮೊದಲು ದೈನಂದಿನ ವೈಯಕ್ತಿಕ ಕೆಲಸಗಳಾದ ಸಮವಸ್ತ್ರದ ಇಸ್ತ್ರಿ, ಶಿಸ್ತಿನಿಂದ ಸಮವಸ್ತ್ರ- ಶೂ ಧರಿಸುವುದು,ಸ್ನಾ್ಯಕ್ಸ್ ಬಾಕ್ಸ್ ಸಿದ್ಧತೆ ಇತ್ಯಾದಿ ಎಲ್ಲದಕ್ಕೂ ಬಹುತೇಕ ಈ ಪುಟಾಣಿಗಳಿಗೆ ಅಮ್ಮನೇ ಬೇಕು. ಹಾಗಾಗಿ ಪುಟಾಣಿ ಮಕ್ಕಳ ಶಾಲಾರಂಭ ಎಂದರೆ ಅಮ್ಮನಿಗೆ ತನ್ನ ದೈನಂದಿನ ವೇಳಾಪಟ್ಟಿಗೆ ಇನ್ನಷ್ಟು ಕೆಲಸಗಳ ಸೇರ್ಪಡೆಯಾಗುವುದಂತೂ ಖಚಿತ.ಈ ಕೆಲಸಗಳನ್ನು ಮಕ್ಕಳ ಮೇಲೆ ಒತ್ತಡ ಹೇರದೆ ಮಾಡುವ ಜಾಣ್ಮೆ ತಾಯಂದಿರದಾಗಿರಬೇಕು.

ತಾಯಿಯ ಕಾಳಜಿ ಅನಿವಾರ್ಯ

ಸಾಮಾನ್ಯವಾಗಿ ನನ್ನ ಮಗು ತರಗತಿಯಲ್ಲಿ ಉತ್ತಮ ವಿದ್ಯಾರ್ಥಿಯಾಗಬೇಕು, ಅಧಿಕ ಅಂಕ ಗಳಿಸಬೇಕು ಎಂಬ ಹಂಬಲ ಪ್ರತಿ ತಾಯಿಗೂ ಸಹಜವಾಗಿಯೇ ಇರುತ್ತದೆ. ಹಾಗಾಗಿ ಮಕ್ಕಳ ಹೋಮ್ ವರ್ಕ್, ಪರೀಕ್ಷಾ ತಯಾರಿ ಎಂದರೆ ತಾಯಂದಿರಿಗೆ ವಿಶೇಷ ಕಾಳಜಿ. ಪ್ರತಿ ವಿಷಯದ ಬರವಣಿಗೆ ಕೆಲಸದಲ್ಲೂ ಕೆಲವು ತಾಯಿಯಂದಿರು ಸಹಕಾರ ನೀಡುತ್ತಾರೆ. ಮಕ್ಕಳ ಓದು-ಬರಹದಲ್ಲಿ ಅವರ ಜತೆಯಲ್ಲೇ ಸಾಗುತ್ತಾರೆ. ಪರೀಕ್ಷಾ ವೇಳಾಪಟ್ಟಿ ಬಂದರಂತೂ, ನಿಗದಿತ ಪಾಠಾಂಶಗಳನ್ನು ಪದೇ ಪದೇ ದೃಢಗೊಳಿಸುತ್ತಾ, ತಾವೇ ಪರೀಕ್ಷಾ ತಯಾರಿ ನಡೆಸುವಂತೆ ಕಾಳಜಿವಹಿಸುತ್ತಾರೆ.ಬೇರೆಲ್ಲ ಕೆಲಸ ಕಾರ್ಯಗಳ ಒತ್ತಡಗಳನ್ನು ಬದಿಗೊತ್ತಿ ಮಕ್ಕಳೊಂದಿಗೆ ಕಲಿಕಾ ಪಥದಲ್ಲಿ ಸಾಗುವ ತಾಯಿಯ ಕಾಳಜಿ ಕೆಲವೊಮ್ಮೆ ಅನಿವಾರ್ಯವೂ ಹೌದು. ಕೆಲವು ಮಕ್ಕಳಿಗೆ ಅದರ ಅಗತ್ಯತೆಯೂ ಒಂದು ನಿರ್ದಿಷ್ಟ ವಯಸ್ಸಿನವರೆಗೆ ಬೇಕಾಗಿರುತ್ತದೆ.

ಅಗತ್ಯವೆನಿಸಿದರೆ ಮಾರ್ಗದರ್ಶನ ನೀಡಿ

ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾಗಿ ಮಕ್ಕಳ ಹೋಮ್ ವರ್ಕ್ ಮತ್ತು ಪರೀಕ್ಷಾ ತಯಾರಿಗೆ ನಾವೇ ಬೆನ್ನೆಲುಬಾಗಿ ನಿಲ್ಲಬಾರದು. ಅಗತ್ಯ ಮಾರ್ಗದರ್ಶನ ಮಾಡಿ, ಅವರೇ ಆಸಕ್ತಿಯಿಂದ ತೊಡಗಿಕೊಳ್ಳುವಂತೆ ಪ್ರೇರೇಪಿಸಬೇಕು. ಮಕ್ಕಳ ದೈನಂದಿನ ಶೈಕ್ಷಣಿಕ ಕೆಲಸಗಳು ಮುಗಿದ ಮೇಲೆ ಒಮ್ಮೆ ಕೂಲಂಕಷವಾಗಿ ಪರಿಶೀಲಿಸಿ ಅವರ ಬೆನ್ನುತಟ್ಟಿ ಪೋ›ತ್ಸಾಹಿಸಬೇಕು. 6 ರಿಂದ 14 ವಯಸ್ಸಿನ ಶಾಲಾ ಹಂತದ ಮಕ್ಕಳು ತಾವೇ ಕುತೂಹಲದಿಂದ ವೀಕ್ಷಿಸುವ, ಚಿಂತನೆ ಮಾಡುವ, ರ್ಚಚಿಸಿ ವಿಷಯ ಗ್ರಹಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಹಾಗಾಗಿ ಅವರ ಕುತೂಹಲದ ಪ್ರಶ್ನೆಗಳಿಗೆ, ವಿಭಿನ್ನವಾದ ಚಿಂತನೆಗಳಿಗೆ ಅವಕಾಶ ನೀಡುವುದು ತಾಯಂದಿರ ಜವಾಬ್ದಾರಿಯಾಗಿರುತ್ತದೆ. ಸದಾ ಮಕ್ಕಳಿಗೆ ನಮ್ಮದೇ ಅಭಿಪ್ರಾಯಗಳನ್ನು ಹೇರುವ ಬದಲು,ಅಗತ್ಯವೆನಿಸಿದರೆ ಮಾತ್ರ ತುಸು ಮಾರ್ಗದರ್ಶನ ನೀಡಿ ಅವರ ಓದು, ಬರಹಗಳನ್ನು ತಿದ್ದುಪಡಿ ಮಾಡಬೇಕು. ಮಕ್ಕಳನ್ನು ಸ್ವಕಲಿಕೆಗೆ ತೊಡಗಿಸುವುದರಿಂದ ಅವರ ಯೋಚನಾ ಲಹರಿ ವಿಸ್ತಾರಗೊಳ್ಳುತ್ತದೆ. ಕಲಿಕೆ ಹೆಚ್ಚು ದೃಢಗೊಳ್ಳುತ್ತದೆ.

ಸೋಲು, ಗೆಲವು ಮನಸ್ಥಿತಿ ಸಲ್ಲ

ಶೈಕ್ಷಣಿಕ ಹೋಮ್ ವರ್ಕ್ ಅನ್ನು ಮಕ್ಕಳಿಗೆ ಶಿಕ್ಷೆಯೆಂದು ಭಾಸವಾಗುವಂತೆ ಹೇರಿಕೆಯ ರೂಪದಲ್ಲಿ ಮಾಡಿಸದೆ, ಅವರೇ ಸಂತಸದಿಂದ ಮಾಡುವ ವಾತಾವರಣವನ್ನು ಮನೆಯಲ್ಲಿ ನಿರ್ಮಾಣ ಮಾಡಬೇಕು.ಅದರೊಂದಿಗೆ ಕೇವಲ ಅಂಕ ಗಳಿಕೆಯ ಲೆಕ್ಕಾಚಾರದಲ್ಲೇ ಸೋಲು, ಗೆಲವು ಎಂಬ ಮನಸ್ಥಿತಿ ತಾಯಂದಿರೂ ಬೆಳೆಸಿಕೊಳ್ಳಬಾರದು, ಮಕ್ಕಳಿಗೂ ಹೇರಬಾರದು. ಕಡಿಮೆ ಅಂಕ ಬಂದರೆ ಅವಮಾನಿಸದೆ ಮುಂದಿನ ಪರೀಕ್ಷೆಗೆ ಸೂಕ್ತ ತಯಾರಿ ಮಾಡಿಕೊಳ್ಳಲು ಪ್ರೇರೇಪಿಸಬೇಕು. ಈ ರೀತಿ ಮಾಡುವುದರಿಂದ ಮಕ್ಕಳು ಬೆಳೆದಂತೆ 10 ಮತ್ತು 12 ನೇ ತರಗತಿ ಫಲಿತಾಂಶ ಕ್ಕೆ ಹೆದರಿ ಆತ್ಮಹತ್ಯೆಯಂತಹ ದಾರಿ ತುಳಿಯುವುದನ್ನು ತಪ್ಪಿಸಬಹುದು.ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ಮಕ್ಕಳಿಗೆ ಮಾತ್ರ ಸೀಮಿತವಾಗದೆ, ಅವುಗಳ ನಿರ್ವಹಣೆ ತಾಯಿಯಂದಿರ ಸ್ಮಾರ್ಟ್ ವರ್ಕ್ ಆಗುವತ್ತ ಚಿತ್ತ ಬೆಳೆಸೋಣ.

ಆಸಕ್ತಿಯ ಕ್ಷೇತ್ರ ಗುರುತಿಸಿ

ಪುಟ್ಟ ಮಕ್ಕಳಿಗೆ ಹೋಮ್ ವರ್ಕ್ ಮಾಡಿಸುವ ಜವಾಬ್ದಾರಿ ಒಂದೆಡೆಯಾದರೆ,ವಿವಿಧ ರಂಗಗಳಲ್ಲಿ ಪುಟಾಣಿಗಳನ್ನು ತರಬೇತುಗೊಳಿಸಿ,ಮುಂಚೂಣಿಗೆ ತರುವ ಬಯಕೆ ಇನ್ನೊಂದೆಡೆ. ಬಿಡುವಿಲ್ಲದ ಕೆಲಸದ ನಡುವೆಯೂ ಬಿಡುವು ಮಾಡಿಕೊಂಡು ಮಕ್ಕಳಿಗೆ ನೃತ್ಯ, ಸಂಗೀತ, ನಾಟಕ, ಚಿತ್ರಕಲೆ ಇತ್ಯಾದಿ ಸಾಂಸ್ಕೃತಿಕ ರಂಗದ ತರಗತಿಗಳಿಗೆ ಕಳುಹಿಸುವುದು, ಕ್ರೀಡಾ ತರಬೇತಿಗಳಾದ ಚೆಸ್ ,ಈಜು ,ಬಾಲ್ ಗೇಮ್ಸ್ ಇತ್ಯಾದಿಗಳಿಗೆ ಕಳುಹಿಸುವುದನ್ನು ಕೂಡ ನಿಭಾಯಿಸುವ ಗುರುತರ ಜವಾಬ್ದಾರಿಯನ್ನು ತಾಯಂದಿರು ನಿರ್ವಹಿಸುತ್ತಾರೆ. ಈ ನಿಟ್ಟಿನಲ್ಲಿ ಸಂಜೆಯ ಅವಧಿ, ಭಾನುವಾರವೂ ಕೂಡ ಬಿಡುವಿಲ್ಲದ ವೇಳಾಪಟ್ಟಿ ಹಾಕಿಕೊಂಡು ಸದಾ ಒತ್ತಡಮುಖಿಯಾಗಿ ಇರುವ ಪರಿಸ್ಥಿತಿ ಆಧುನಿಕ ನಾರಿಯರಿಗೆ ಇದ್ದೇ ಇರುತ್ತದೆ. ಇಂತಹ ಒತ್ತಡಗಳಿಗೆ ತಾವೂ ಒಳಗಾಗುವುದರ ಜತೆಗೆ, ಮಕ್ಕಳಿಗೂ ಕೆಲವೊಂದನ್ನು ಒತ್ತಾಯಪೂರ್ವಕವಾಗಿ ಹೇರಿಕೆ ಮಾಡುವಂತಾಗಬಾರದು.ಮಕ್ಕಳ ಆಸಕ್ತಿ ಗಮನಿಸದೆ ಎಲ್ಲಾ ತರಗತಿಗಳಿಗೂ ಕಳುಹಿಸುವುದಕ್ಕಿಂತ, ಅವರ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿ, ಅದರಲ್ಲಿ ಪ್ರಾವೀಣ್ಯ ಪಡೆಯುವಂತೆ ಅನುವು ಮಾಡಿಕೊಡುವುದು ಅತ್ಯಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net