

| ಡಾ. ತಯಬಅಲಿ ಅ. ಹೊಂಬಳ
ನಾವು ಚೆನ್ನಾಗಿದ್ದರೆ ಸಾಕು; ನಮ್ಮ ಮಕ್ಕಳು ಚೆನ್ನಾಗಿರಲಿ; ಮತ್ತೊಬ್ಬರ ಉಸಾಬರಿ ನಮಗ್ಯಾಕೆ ಎಂಬ ಸ್ವಾರ್ಥ ಮನಸ್ಥಿತಿ ಇರುವವರಿಗೆ ಈ ಕಥೆ ಮಾದರಿ ಆಗಬಹುದಾಗಿದೆ. ಬಡ ರೈತನೊಬ್ಬನಿಗೆ ಆತನ ಆಕಳೇ ಜೀವನಾಧಾರವಾಗಿತ್ತು, ಬಡತನದ ಕಾರಣ ಆಕಳಿಗೆ ಆತ ಸರಿಯಾದ ಆಹಾರ, ನೀರು ಕೊಡುತ್ತಿರಲಿಲ್ಲ. ಕೊಟ್ಟಿಗೆಯಲ್ಲಿರುವುದನ್ನೇ ತಿಂದು ಆಕಳು ಹೇಗೋ ಬದುಕುತ್ತಿತ್ತು. ಕೆಲವೊಮ್ಮೆ ಆಹಾರ ಅನಿವಾರ್ಯವಾದಾಗ ಅಂಬಾ ಎಂದು ಕೂಗುತ್ತಿತ್ತು. ಆಗ ಸಿಟ್ಟಿಗೇಳುತ್ತಿದ್ದ ರೈತ, ‘ನನಗೇ ತಿನ್ನಲು ಅನ್ನವಿಲ್ಲ, ನಿನಗೆ ಎಲ್ಲಿಂದ ತರಲಿ’ ಎಂದು ಹೊಡೆಯುತ್ತಿದ್ದ. ‘ನನ್ನ ಕಷ್ಟ ಯಾರ ಹತ್ತಿರ ಹೇಳಲಿ, ಹೊಟ್ಟೆಯಲ್ಲಿ ಕರು ಬೆಳೆಯುತ್ತಿರಲು ಸಾಕಷ್ಟು ಆಹಾರ ಬೇಕು, ಏನ ಮಾಡಲಿ’ ಎಂದು ಆಕಳು ಚಿಂತಿಸುತ್ತಿತ್ತು. ಸ್ವಲ್ಪ ದಿನಗಳಾದ ಮೇಲೆ ಆಕಳ ಹೊಟ್ಟೆಯಲ್ಲಿ ಕರು ಇರುವುದು ಗೊತ್ತಾದ ರೈತ, ಚೆನ್ನಾಗಿ ಮೇವು ಹಾಕಿ ನೀರು ಕುಡಿಸತೊಡಗಿದ. ತನ್ನ ಯಜಮಾನ ಎಷ್ಟೊಂದು ಬದಲಾಗಿದ್ದಾನೆ ಎಂದು ಆಕಳು ಸಂತೋಷಗೊಂಡಿತು.
ಒಂದು ದಿನ ಆಕಳು ಒಂದು ಮುದ್ದಾದ ಕರುವಿಗೆ ಜನ್ಮ ನೀಡಿತು. ಆಕಳು ತನ್ನ ಕೆಚ್ಚಲು ತುಂಬಾ ಹಾಲನ್ನು ಶೇಖರಿಸಿ ಮಗುವಿಗೆ ಉಣಿಸುತ್ತಿತ್ತು. ಒಂದೆರಡು ದಿನ ಕರು ಹೊಟ್ಟೆ ತುಂಬಾ ಹಾಲು ಕುಡಿದು ಸುಖವಾಗಿತ್ತು. ಮುಂದೆ ರೈತನು ಕರುವನ್ನು ಒಂದು ಕಂಬಕ್ಕೆ ಕಟ್ಟಿ ಹಾಕಿದ. ಕರು ಹಾಲು ಕುಡಿಯಲು ಬಿಡಲಿಲ್ಲ. ಕರುವಿಗೆ ಹಾಲು ಕುಡಿಸದೆ ಇದ್ದುದರಿಂದ ಆಕಳ ಕೆಚ್ಚಲು ಹಾಲು ಚಿಮ್ಮುತ್ತಿತ್ತು. ಆಗ ರೈತನು ಹಾಲನ್ನು ಕರೆದು ಮಾರುವ ಯೋಚನೆ ಮಾಡಿದ. ಆಕಳಿಗೆ ಅವನ ಸ್ವಾರ್ಥ ಬುದ್ಧಿ ಗೊತ್ತಾಗಿ ಮುಂದೆ ಹಾಲು ಕೊಡುವುದನ್ನು ನಿಲ್ಲಿಸಿಬಿಟ್ಟಿತು. ಒಂದು ದಿನ ರೈತನ ಮಗನ ಆರೋಗ್ಯ ಹದಗೆಟ್ಟಿತು. ವೈದ್ಯರಲ್ಲಿ ತೋರಿಸಲು ಹಣವಿಲ್ಲದೆ ಒದ್ದಾಡಿದ. ಈ ಆಕಳು ಹಾಲು ಕೊಟ್ಟಿದ್ದರೆ ಅದನ್ನೇ ಮಾರಿ ಮಗನಿಗೆ ಔಷಧಿ ತರುತ್ತಿದ್ದೆ ಎಂದು ಮನಸ್ಸಿನಲ್ಲಿಯೇ ತೊಳಲಾಡಿದ. ಆಕಳು ಅವನ ಮನಸ್ಸನ್ನು ಅರಿಯಿತು. ‘ನನ್ನ ಕರು ಬೇರೆ ಅಲ್ಲ. ನನ್ನ ಯಜಮಾನನ ಮಗು ಬೇರೆ ಅಲ್ಲ. ಏನೂ ತಿಳಿಯದ ಈ ಕಂದಮ್ಮಗಳು ಈ ಲೋಕದಲ್ಲಿ ಬಾಳಿ ಬದುಕಬೇಕು. ಇಂಥ ಮಕ್ಕಳು ಸ್ವಾರ್ಥರ ಹೊಟ್ಟೆಯಲ್ಲಿ ಹುಟ್ಟಿದ್ದೇ ತಪ್ಪು’ ಎಂದು ಮರುಗಿ ಯಜಮಾನನ ಕಡೆ ನೋಡಿ ಅಂಬಾ ಎಂದು ಕೂಗಿತು. ಇದನ್ನು ಗಮನಿಸಿದ ರೈತ ಹಾಲನ್ನು ಕರೆದು ಮಾರಿ ಮಗನಿಗೆ ಔಷಧಿ ತಂದ. ಆಗ ಕರುವನ್ನು ಆಕಳ ಹತ್ತಿರ ಕರೆದುಕೊಂಡು ಹಾಲು ಕುಡಿಯಲು ಬಿಟ್ಟು, ‘ನನ್ನಿಂದ ತಪ್ಪಾಯಿತು ಕ್ಷಮಿಸಮ್ಮ’ ಎಂದು ಕಣ್ಣೀರಿಟ್ಟ.
(ಲೇಖಕರು ಉಪನ್ಯಾಸಕರು)