ಮೊಮ್ಮಕ್ಕಳ ಆರೈಕೆಯಲ್ಲಿ ಅಜ್ಜಿಯ ಪ್ರೀತಿ

Lalitha
Published on

ದಿನವೂ ಇಬ್ಬರು ಮೊಮ್ಮಕ್ಕಳನ್ನು ಅಂಗನವಾಡಿಗೆ ರೆಡಿ ಮಾಡಿ, ಇಬ್ಬರು ಮೊಮ್ಮಕ್ಕಳನ್ನು ಸ್ಕೂಲಿಗೆ ರೆಡಿ ಮಾಡಿ ಹೊರಡಿಸಿ ಕರೆದುಕೊಂಡು ಬಂದು ಬಿಡುವಷ್ಟರಲ್ಲಿ ಸಾಕಾಗಿ ಹೋಗುತ್ತದೆ. ಈ ಮಕ್ಕಳ ಅಮ್ಮ, ಅಪ್ಪ ಬೆಳಗ್ಗೆಯೇ ಕೂಲಿ ಕೆಲಸಕ್ಕೆ ಹೊರಟು ಬಿಡುತ್ತಾರೆ. ಮಗನ ಮಕ್ಕಳು, ಮಗಳ ಮಕ್ಕಳು ಇಬ್ಬರದೂ ಮಕ್ಕಳ ಜವಾಬ್ದಾರಿ ಸಂಪೂರ್ಣ ನನ್ನ ಹೆಗಲ ಮೇಲೇಯೇ. ಒಮ್ಮೊಮ್ಮೆ ಸುಸ್ತು ಎನಿಸಿದರೂ ಮೊಮ್ಮಕ್ಕಳ ಮೇಲಿನ ಪ್ರೀತಿ ಸುಸ್ತನ್ನು ದೂರ ಮಾಡಿ ಬಿಡುತ್ತದೆ ಎಂದು ಹೇಳುವ ಹಳ್ಳಿಯ ಗೌರಜ್ಜಿಯ ಮಾತು ಅಜ್ಜಿಯರ ದೈನಂದಿನ ಜೀವನ ಕ್ರಮ ತೆರೆದಿಡುತ್ತದೆ.

| ಭಾರತಿ ಎ. ಕೊಪ್ಪ

ಅಜ್ಜಿ ಮೊಮ್ಮಕ್ಕಳ ಸ್ನೇಹಬಂಧ: ನಗರ ಪ್ರದೇಶಗಳಲ್ಲಿ ಅಜ್ಜಿಯ ಕೆಲಸಗಳು ಇದಕ್ಕಿಂತ ಭಿನ್ನವಾಗಿರುತ್ತದೆ. ಸ್ಕೂಲ್ ಬಸ್ ಬರುವ ಸಮಯದಲ್ಲಿ ಮೊಮ್ಮಕ್ಕಳನ್ನು ಸಿದ್ಧ ಮಾಡುವುದು, ಬಸ್ ಹತ್ತಿಸುವುದು, ಸಂಜೆ ಬಸ್ ಬರುವ ಸಮಯಕ್ಕೆ ಕಾದು ನಿಂತು ಮನೆಯೊಳಕ್ಕೆ ಕರೆದುಕೊಂಡು ಹೋಗಿ ಅವರ ಸಮವಸ್ತ್ರ ಬದಲಾಯಿಸುವುದು, ತಿನ್ನಲು ಸ್ನಾಕ್ಸ್ ನೀಡುವುದು ಒಂದೇ ಎರಡೇ! ಹೀಗೆ ಮೊಮ್ಮಕ್ಕಳ ಜವಾಬ್ದಾರಿ ನಿಭಾಯಿಸುವುದರಲ್ಲಿ ಒಂದಿಷ್ಟು ಖುಷಿ, ಒಂದಿಷ್ಟು ಸಮಯ ಕಳೆಯುವ ಅಜ್ಜಿಯರು ನಿಜಕ್ಕೂ ಮೊಮ್ಮಕ್ಕಳ ಪಾಲಿನ ಆತ್ಮೀಯ ಸ್ನೇಹಿತರಿದ್ದಂತೆ. ಗ್ರಾಮೀಣ ಭಾಗದಲ್ಲಿ ಅಜ್ಜಿಯಂದಿರು ಕೈ ಹಿಡಿದು ಕರೆದುಕೊಂಡು ಹೋಗಿ ಶಾಲೆಯ ತನಕ ಬಿಟ್ಟು, ಸಂಜೆ ಕರೆದುಕೊಂಡು ಬರುವ ಮೂಲಕ ಮಕ್ಕಳ ಪಾಲಿಗೆ ಶಾಲಾ ಸ್ನೇಹಿತರಷ್ಟೇ ಮುಖ್ಯವೆನಿಸಿಬಿಡುತ್ತಾರೆ.

ಆಧುನಿಕ ಯಶೋಧೆಯರು: ಮನೆಯಲ್ಲಿ ಒಂದು ಮೊಮ್ಮಗು ಬಂತೆಂದಂತೆ ಅಜ್ಜಿಯರು ಆಧುನಿಕ ಯಶೋಧೆಯ ಪಾತ್ರ ನಿರ್ವಹಿಸಲೇಬೇಕಾಗುತ್ತದೆ. ಬದಲಾದ ಕಾಲಘಟ್ಟದಲ್ಲಿ ಗಂಡ-ಹೆಂಡತಿ ಇಬ್ಬರೂ ಔದ್ಯೋಗಿಕ ನೆಲೆಯಲ್ಲಿ ದುಡಿಯಲೇಬೇಕಾದ ಅನಿವಾರ್ಯತೆ ಇದೆ. ಇಂತಹ ಕುಟುಂಬದಲ್ಲಿ ಪುಟ್ಟ ಮಗುವಿನ ಆರೈಕೆ ಅಜ್ಜಿಯಂದಿರದೇ ಆಗಿರುತ್ತದೆ. ಬಹಳಷ್ಟು ಮಕ್ಕಳು ಅಮ್ಮನ ಮಡಿಲಿನಲ್ಲಿ ನಿದ್ರಿಸುವುದಕ್ಕಿಂತಲೂ ಅಜ್ಜಿಯ ಜೋಗುಳದ ಹಾಡಿಗೆ ಬಹಳ ಬೇಗ ನಿದ್ರೆಗೆ ಜಾರುತ್ತಾರೆ. ಅಜ್ಜಿ ಹೇಳುವ ಒಂದೂರಲ್ಲಿ ಒಬ್ಬ ರಾಜ ಇದ್ನಂತೆ... ಇಂತಹ ಕಥೆಗಳು ಪುಟ್ಟ ಮಕ್ಕಳ ಮತ್ತು ಅಜ್ಜಿಯ ಬಾಂಧವ್ಯವನ್ನು ಬಲಪಡಿಸುತ್ತವೆ. ಮನೆಯೇ ಮೊದಲ ಪಾಠ ಶಾಲೆ ಜನನಿ ತಾನೆ ಮೊದಲ ಗುರು ಎಂಬ ಮಾತಿದ್ದರೂ, ಉದ್ಯೋಗಸ್ಥ ತಾಯಿಯಂದಿರ ಮಕ್ಕಳಿಗೆ ಅಜ್ಜಿಯೇ ತಾಯಿಯ ಸ್ಥಾನದಲ್ಲಿ ನಿಂತು ಆರಂಭಿಕ ಶಿಕ್ಷಣವನ್ನು ನೀಡುತ್ತಾರೆ.

ವೈಯಕ್ತಿಕ ಸಂತೋಷಕ್ಕೂ ಸಮಯವಿರಲಿ: ವಯಸ್ಸು ಹಿರಿತನಕ್ಕೆ ಹೊರಳುತ್ತಿದ್ದಂತೆ ಒಂದಿಷ್ಟು ಬಂಧುಗಳ ಜೊತೆಗೆ ಬೆರೆಯುವ, ತಮ್ಮದೇ ವಯಸ್ಸಿನ ಸ್ನೇಹಿತರ ಜತೆಗೆ ಧಾರ್ವಿುಕ ಸ್ಥಳಗಳಿಗೆ ಪ್ರವಾಸ ತೆರಳುವತ್ತ ಮನಸ್ಸು ಬಯಸುತ್ತದೆ. ಮೊಮ್ಮಕ್ಕಳ ಆರೈಕೆಯಲ್ಲಿ ತಲ್ಲೀನರಾಗಿರುವ ಅಜ್ಜಿಯಂದಿರಿಗೆ ಈ ರೀತಿಯಲ್ಲಿ ಪ್ರಯಾಣ, ಪ್ರವಾಸಕ್ಕೆ ಹೊರಡುವುದೂ ಕಷ್ಟವೆನಿಸುತ್ತದೆ್. ಆದರೆ ಅದಕ್ಕೆ ಬಿಡುವು ಮಾಡಿಕೊಂಡು ಕೆಲಸದ ಏಕತಾನತೆಯಿಂದ ಹೊರಗೆ ಬರಬೇಕು. ಅಜ್ಜಿಯರು ಮೊಮ್ಮಕ್ಕಳನ್ನು ನೋಡಿಕೊಳ್ಳುವುದರಿಂದ ಬೇರೆಡೆ ಹೋಗಲು ಕಷ್ಟವಾಗುತ್ತದೆ. ವಿರಾಮವನ್ನು ಯೋಜಿಸುತ್ತಿದ್ದರೆ, ಮೊಮ್ಮಕ್ಕಳ ಪೋಷಕರಿಗೆ ಸಾಕಷ್ಟು ಮೊದಲೇ ವಿಚಾರ ಹೇಳುವುದು ಸೂಕ್ತ. ಇದರಿಂದ ಅವರಿಗೆ ಬದಲಿ ವ್ಯವಸ್ಥೆ ಮಾಡಿಕೊಳ್ಳಲು, ಕೆಲಸಕ್ಕೆ ರಜೆ ತೆಗೆದುಕೊಳ್ಳಲು ಸಹಾಯವಾಗುತ್ತದೆ. ಅವರು ಮಕ್ಕಳನ್ನು ನೋಡಿಕೊಳ್ಳಲು ಯಾರನ್ನಾದರೂ ಹುಡುಕಲು ಸಹಕಾರಿಯಾಗುತ್ತದೆ.

ಅನವಶ್ಯಕ ಗೊಂದಲ ಬೇಡ: ಕೆಲಸದ ಒತ್ತಡದ ನಡುವೆ ಅನವಶ್ಯಕ ಕೋಪ, ಗೊಂದಲಗಳು ಸಹಜವಾಗಿ ಮೂಡುತ್ತವೆ. ಮಕ್ಕಳು ಏನಾದರೂ ವಸ್ತು ಬೇಕೇ ಬೇಕು ಎಂದು ಹಠ ಹಿಡಿದಾಗ, ಆಟಕ್ಕೆ ಮನೆಯಿಂದ ಸದಾ ಹೊರಗೆ ಹೋಗಬೇಕೆಂದಾಗ ಅವರನ್ನು ನಿಭಾಯಿಸಲು ಕಷ್ಟ ಎನಿಸಬಹುದು. ಯಾವುದೇ ಸಂದರ್ಭದಲ್ಲಿ ಮಕ್ಕಳ ಪಾಲಕರನ್ನು ಮಕ್ಕಳ ಮುಂದೆ ತೆಗಳುವುದು ಅಷ್ಟು ಸಮಂಜಸವಲ್ಲ. ಮನೆಯೊಳಗಿನ ಅಸಮಧಾನಗಳನ್ನು ಕೂಡ ಪುಟ್ಟ ಮಕ್ಕಳ ಮುಂದೆ ಹೇಳುವುದು ಕೂಡ ಸೂಕ್ತವಲ್ಲ.

ಮೊಮ್ಮಕ್ಕಳ ಜೊತೆಗೆ ಕಿರು ಪ್ರವಾಸ: ಮನೆಯಲ್ಲಿನ ಏಕತಾನತೆಯನ್ನು ದೂರ ಮಾಡಲು ಮನೆಯ ಸಮೀಪದ ಪಾರ್ಕ್, ದೇವಾಲಯ, ಮ್ಯೂಸಿಯಂ ಇಂತಹ ಸ್ಥಳಗಳಿಗೆ ಕಿರು ಪ್ರವಾಸ ಕೈಗೊಳ್ಳಬಹುದು. ಇದರಿಂದಾಗಿ ಮನಸ್ಸು ಉಲ್ಲಾಸಿತಗೊಳ್ಳುತ್ತದೆ.

ಸಾಮಾಜಿಕ ಜಾಲತಾಣಗಳಿಂದ ದೂರವಿರಿ: ಕಾಲ ಬದಲಾದಂತೆ ಹಿರಿಯ ನಾಗರಿಕರು ಕೂಡ ಸಾಮಾಜಿಕ ಜಾಲತಾಣಗಳನ್ನು ಬಳಸುವುದು ಸಾಮಾನ್ಯವಾಗಿದೆ. ಇವುಗಳ ಬಳಕೆ ಹಿತಮಿತವಾಗಿರುವುದು ಸೂಕ್ತ. ಮೊಮ್ಮಕ್ಕಳ ಜತೆಗೆ ಕಾಲ ಕಳೆಯುವಾಗ ಟಿ.ವಿ., ಮೊಬೈಲ್ಗಳಿಂದ ದೂರವಿರುವುದು ಉತ್ತಮ. ಇದರ ಬದಲಾಗಿ ಕಥೆ ಪುಸ್ತಕಗಳು, ಮೌಖಿಕ ಕಥೆಗಳು, ಸಾಕು ಪ್ರಾಣಿಗಳ ಜತೆಗೆ ಕಾಲ ಕಳೆಯುವುದನ್ನು ಮಕ್ಕಳಿಗೂ ಕಲಿಸುತ್ತಾ ತಾವು ಸಮಯ ಸದುಪಯೋಗ ಮಾಡಿಕೊಳ್ಳಬಹುದು.

ವಿದೇಶಗಳಲ್ಲೂ ಅಜ್ಜಿಯರ ಆರೈಕೆ: ಭಾರತೀಯ ಕುಟುಂಬಗಳಲ್ಲಿ ಅಜ್ಜಿಯಂದಿರು ಮೊಮ್ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಅಂತೆಯೇ ವಿದೇಶಗಳಲ್ಲೂ ಇದು ರೂಢಿಗತವಾಗಿದೆ. 2019 ರ ಅಮೇರಿಕನ್ ಸಮುದಾಯ ಸಮೀಕ್ಷೆಯ ಡೇಟಾ ಪ್ರಕಾರ ಅಲ್ಲಿನ 2.5 ಮಿಲಿಯನ್ ಅಜ್ಜಿಯರು ತಮ್ಮ ಮೊಮ್ಮಕ್ಕಳನ್ನು ನೋಡಿಕೊಳ್ಳುವ ಮತ್ತು ಅವರ ಮೂಲಭೂತ ಅಗತ್ಯಗಳನ್ನು ಪೂರೈಸುವ ಪ್ರಾಥಮಿಕ ಜವಾಬ್ದಾರಿಯನ್ನು ಹೊತ್ತಿದ್ದಾರೆ, ಸುಮಾರು 35% ನಷ್ಟು ಅಜ್ಜಿಯರು ಮೊಮ್ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.

ಆರೋಗ್ಯದ ಕಾಳಜಿ ಇರಲಿ: ಮನೆಯಲ್ಲಿ ಚಿಕ್ಕ ಮಕ್ಕಳ ಆರೈಕೆ ಅಷ್ಟು ಸುಲಭದ ಕೆಲಸವೇನಲ್ಲ. ದೇಹ ಮತ್ತು ಮನಸ್ಸು ಎರಡಕ್ಕೂ ಆಯಾಸ ನೀಡುವ ಕೆಲಸವಿದು. ಆದ್ದರಿಂದ ಮೊಮ್ಮಕ್ಕಳ ನಡುವೆ ಸದಾ ಕಳೆದು ಹೋಗದೆ ವೈಯಕ್ತಿಕ ಆರೋಗ್ಯದ ಕಡೆಗೂ ಕಾಳಜಿ ವಹಿಸಬೇಕಾಗುತ್ತದೆ. ತಮ್ಮ ದೈನಂದಿನ ವ್ಯಾಯಾಮ, ವಾಕಿಂಗ್, ಧ್ಯಾನ ಇಂತಹ ಆರೋಗ್ಯಕ್ಕೆ ಪೂರಕ ಚಟುವಟಿಕೆಗಳಿಗೂ ಒಂದಿಷ್ಟು ಸಮಯ ಮೀಸಲಿಡಬೇಕು. ಆಗಾಗ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು, ಈಗಾಗಲೆ ಯಾವುದಾದರೂ ಮಾತ್ರೆಗಳನ್ನು ವೈದ್ಯರ ಸಲಹೆ ಮೇರೆಗೆ ಬಳಸುತ್ತಿದ್ದರೆ ಅವುಗಳನ್ನು ನಿಯಮಿತವಾಗಿ ತೆಗೆದುಕೊಳ್ಳುವುದು ಅತ್ಯಗತ್ಯ.

ಮಗಳು ಔದ್ಯೋಗಿಕ ನೆಲೆಯಲ್ಲಿ ರಜೆ ಹಾಕಲು ಅಸಾಧ್ಯವಾದಾಗ ಮೊಮ್ಮಗನ ಆರೈಕೆಯ ಜವಾಬ್ದಾರಿ ನನ್ನದಾಗಿತ್ತು. ಮಗಳ ಜತೆಯಲ್ಲಿಯೇ ಇದ್ದು ಮೊಮ್ಮಗನಿಗೆ ಮೂರನೇ ತರಗತಿ ಮುಗಿಯುವ ತನಕವೂ ಅವನನ್ನು ನೋಡಿಕೊಳ್ಳುತ್ತಿದ್ದೆ. ದೇಹಕ್ಕೆ ಆಯಾಸವಾದರೂ ಮೊಮ್ಮಕ್ಕಳ ಪ್ರೀತಿ ಎಲ್ಲವನ್ನೂ ಮರೆಸುತ್ತದೆ. ಈಗ ಮೊಮ್ಮಗ ಕಾಲೇಜು ಹಂತ ತಲುಪಿದರೂ ಅವನೊಂದಿಗೆ ಆಗಾಗ ಪ್ರವಾಸ ಮಾಡುತ್ತೇನೆ. ಇದು ಮನಸ್ಸಿಗೆ ಖುಷಿ ನೀಡುತ್ತದೆ. | ಸುಶೀಲಾ ಎಸ್.ಭಟ್ಟ, ಕಮಲಶಿಲೆ, ಉಡುಪಿ ಜಿಲ್ಲೆ

ಅಜ್ಜಿಯ ಪಾತ್ರ: ಅಜ್ಜಿ ಇಲ್ಲದ ಮನೆ ಮಜ್ಜಿಗೆ ಇಲ್ಲದ ಊಟ ಎಂಬ ಗಾದೆಯಂತೆ ಅಜ್ಜಿ ಇಲ್ಲದ ಮನೆ ಪರಿಪೂರ್ಣತೆಯನ್ನು ಪಡೆಯಲು ಸಾಧ್ಯವಿಲ್ಲ. ಅಜ್ಜಿಯ ಆರೈಕೆಯಲ್ಲಿ ಬೆಳೆಯುವ ಮಕ್ಕಳು ತಮ್ಮ ಕುಟುಂಬದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಕೂಡ ಬಹಳ ಚೆನ್ನಾಗಿ ಮೈಗೂಡಿಸಿಕೊಳ್ಳುತ್ತಾರೆ.ಭವಿಷ್ಯದ ಪ್ರಜೆಗಳನ್ನು ಸಂಸ್ಕಾರವಂತರನ್ನಾಗಿ ಬೆಳೆಸುವಲ್ಲಿ ಅಜ್ಜಿಯ ಪಾತ್ರ ಬಹು ಮುಖ್ಯವಾದುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net