

ನವದೆಹಲಿ: ಮಂಜನ ಜತೆಗೆ ಕಲುಷಿತ ಗಾಳಿಯಿಂದ ರಾಷ್ಟ್ರ ರಾಜಧಾನಿ ಜನ ಶೀತ ಸಂಬಂಧಿ ಕಾಯಿಲೆಗಳಿಂದ ತತ್ತರಿಹೋಗಿದ್ದು, ಸರ್ಕಾರ ಶಾಲೆಗಳಿಗೆ ರಜೆ, ವಾಹನಗಳ ಬಳಕೆ ಮೇಲೆ ನಿಷೇದದಂತಹ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಇದರ ಬೆನ್ನಲ್ಲೇ ಸ್ವಿಸ್ ಗ್ರೂಪ್ ಐಕ್ಯೂ ಎಐಆರ್ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರ ಪ್ರಕಾರ ವಿಶ್ವದಲ್ಲೇ ದೆಹಲಿ ನಂ.1ಸ್ಥಾನದಲ್ಲಿದ್ದು, ಕೋಲ್ಕತ್ತಾ ಮತ್ತು ಮುಂಬೈ ಸಹ ಹೆಚ್ಚು ವಾಯುಮಾಲಿನ್ಯ ಎದುರಿಸುತ್ತಿರುವ ಭಾರತೀಯ ನಗರಗಳಾಗಿವೆ.
ಭಾನುವಾರ ಬೆಳಗ್ಗೆ 7.30ರಲ್ಲಿ ಇದ್ದಂತೆ ಐಕ್ಯೂ ಎಐಆರ್ ಪಟ್ಟಿಯಲ್ಲಿ ನವದೆಹಲಿ ಎಕ್ಯೂಐ(ಗಾಳಿ ಗುಣಮಟ್ಟ) - 483 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಲಾಹೋರ್ 371 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಕೋಲ್ಕತ್ತಾ ಮತ್ತು ಮುಂಬೈ ಕೂಡ ಹೆಚ್ಚು ವಾಯುಮಾಲಿನ್ಯ ಎದುರಿಸುತ್ತಿರುವ 5 ನಗರಗಳಲ್ಲಿಯೇ ಬರುತ್ತವೆ. ಈ ನಗರಗಳು ಕ್ರಮವಾಗಿ 206 ಮತ್ತು 162 ಎಕ್ಯೂಐ ಇರುವ ನಗರಗಳಾಗಿವೆ.
ತಜ್ಞರು ಮತ್ತು ವೈದ್ಯರ ಪ್ರಕಾರ, ಯಾವುದೇ ಆರೋಗ್ಯವಂತ ವ್ಯಕ್ತಿಗೆ ಶಿಫಾರಸು ಮಾಡಲಾದ ಎಕ್ಯೂಐ 50 ಕ್ಕಿಂತ ಕಡಿಮೆ ಇರಬೇಕು. ಆದರೆ ವಿಶ್ವದ ಅತ್ಯಂತ ಕಲುಷಿತಗೊಂಡಿರುವ ನಗರಗಳಲ್ಲಿ 3 ಭಾರತೀಯ ನಗರಗಳು ಸ್ಥಾನ ಪಡೆದಿರುವುದು ಆತಂಕಕ್ಕೆ ಕಾರಣವಾಗಿವೆ.
ಇನ್ನೂ ವಾಯು ಕಾಲುಷ್ಯಕ್ಕೆ ಗುರಿಯಾಗಿರುವ 10 ದೇಶಗಳಲ್ಲಿ ಮೊದಲ ಸ್ಥಾನದಲ್ಲಿ ಆಫ್ರಿಕಾದ ಚಾಡ್ ದೇಶ ಬರುತ್ತದೆ. ಭಾರತವು 8 ನೇ ಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿ ಇರಾಕ್, ನಂತರ ಪಾಕಿಸ್ಥಾನ, ಬಹ್ರೇನ್, ಬಾಂಗ್ಲಾದೇಶ, ಬುರ್ಕಿನೋಫಾಸೋ, ಕುವೈತ್, ಈಜಿಫ್ಟ್, ತಜಕಿಸ್ಥಾನ ಬರುತ್ತವೆ.