ಕುಶಾಗ್ರಾ ಅಪಹರಣ-ಕೊಲೆ ಪ್ರಕರಣ: ಬಯಲಾಗುವುದೇ ವಿದ್ಯಾರ್ಥಿ ಹತ್ಯೆ ರಹಸ್ಯ?

boy killed
Published on

ಲಕ್ನೋ: ಉತ್ತರ ಪ್ರದೇಶದ ಕಾನ್ಪುರದಲ್ಲಿ 10ನೇ ತರಗತಿ ವಿದ್ಯಾರ್ಥಿ ಕುಶಾಗ್ರಾ ಅಪಹರಣ-ಕೊಲೆ ಪ್ರಕರಣದಲ್ಲಿ ಪೊಲೀಸರು ಟ್ಯೂಷನ್ ಶಿಕ್ಷಕಿ ರಚಿತಾ, ಆಕೆಯ ಪ್ರಿಯಕರ ಪ್ರಭಾತ್ ಶುಕ್ಲಾ ಮತ್ತು ಸ್ನೇಹಿತ ಶಿವನನ್ನು ಜೈಲಿಗೆ ಕಳುಹಿಸಿದ್ದರು. ಆದರೆ ಈ ಪ್ರಕರಣದಲ್ಲಿ ಹಲವು ಬಗೆಹರಿಯದ ಪ್ರಶ್ನೆಗಳಿದ್ದವು, ಇದಕ್ಕೆಂದೇ ಪೊಲೀಸರು ನ್ಯಾಯಾಲಯದಿಂದ 72 ಗಂಟೆಗಳ ಕಸ್ಟಡಿ ಪಡೆದಿದ್ದು, ಹತ್ಯೆ ರಹಸ್ಯ ಬಯಲಾಗುವುದೇ ಎಂಬ ಕುತೂಹಲ ಮೂಡಿಸಿದೆ.

ಪೊಲೀಸರು ಐದು ದಿನಗಳ ಕಸ್ಟಡಿ ಕೋರಿದ್ದರು. ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸೂರಜ್ ಮಿಶ್ರಾ ಮೂರು ದಿನಗಳ ಪೊಲೀಸ್ ಕಸ್ಟಡಿ ಸ್ವೀಕರಿಸಿದ್ದಾರೆ. ಆರೋಪಿಗಳ ವಿಚಾರಣೆಗೆ ಪೊಲೀಸರು ಸುದೀರ್ಘ ಪ್ರಶ್ನೆಗಳ ಪಟ್ಟಿ ಸಿದ್ಧಪಡಿಸಿದ್ದಾರೆ. ಭಾನುವಾರ ಬೆಳಗ್ಗೆ 9 ರಿಂದ ಬುಧವಾರ ಬೆಳಗ್ಗೆ 9 ಗಂಟೆಯವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರುತ್ತಾರೆ.

ಕೊಲೆ ಹೇಗಾಗಿತ್ತು: ರಾಯಪುರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ಚೇ ನಗರದ ಭಗವತಿ ವಿಲ್ಲಾ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಮನೀಶ್ ಕನೋಡಿಯಾ ಸೂರತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದಾರೆ. ಅವರ ಪುತ್ರ ಕುಶಾಗ್ರ ಕನೋಡಿಯಾ (16) ಜೈಪುರಿಯಾ ಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿ. ಅ. 30ರಂದು ಸಂಜೆ 4 ಗಂಟೆಗೆ ಈತ ಟ್ಯೂಷನ್​ಗೆ ತೆರಳಿದ್ದ. ತಡರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಮರುದಿನ ಟ್ಯೂಷನ್ ಟೀಚರ್ ರಚಿತಾ ಪ್ರೇಮಿ ಪ್ರಭಾತ್ ಶುಕ್ಲಾನ ಸ್ಟೋರ್ ರೂಂನಲ್ಲಿ ಕುಶಾಗ್ರಾ ಮೃತದೇಹ ಪತ್ತೆಯಾಗಿತ್ತು. ಹತ್ಯೆಯ ನಂತರ ಪ್ರಭಾತ್ 30 ಲಕ್ಷ ರೂ. ಗೆ ಒತ್ತಾಯಿಸಿ ಮನೀಶ್ ಕನೋಡಿಯಾ ಸುಲಿಗೆ ಪತ್ರವನ್ನು ಕಳುಹಿಸಿದ್ದ.

ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ ಎಫ್​ಐಆರ್​ನಲ್ಲಿ ಸುಲಿಗೆ ಸಲುವಾಗಿ ಕುಶಾಗ್ರನನ್ನು ಅಪಹರಿಸಲಾಗಿದೆ. ಬಳಿಕ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಹತ್ಯೆಯ ಹಿಂದಿನ ಉದ್ದೇಶವನ್ನು ಇನ್ನಷ್ಟು ಸ್ಪಷ್ಟಪಡಿಸಲು ಹಾಗೂ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. ಆರೋಪಿಗಳು ನ್ಯಾಯಾಲಯದಲ್ಲಿ ತಮ್ಮನ್ನು ತಾವು ನಿರಪರಾಧಿಗಳೆಂದು ಘೋಷಿಸುತ್ತಲೇ ಇದ್ದರು. ಹೀಗಾಗಿ ಹಲವು ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆಯಿದೆ.

ಪ್ರಭಾತ್ ಕಳುಹಿಸಿದ್ದ ಪತ್ರದಲ್ಲಿ ಅಲ್ಲಾ ಓ ಅಕ್ಬರ್ ಎಂದು ಬರೆದಿರುವ ಉದ್ದೇಶವೇನು? ಕುಶಾಗ್ರನ ಸ್ಕೂಟರ್ ಗುಜನ್ ಟಾಕೀಸ್ ಬಳಿ ನಿಂತಿತ್ತು ಎಂದು ಸುಲಿಗೆ ಪತ್ರದಲ್ಲಿ ಬರೆಯಲಾಗಿತ್ತು. ಸ್ಕೂಟರ್ ಪತ್ತೆಯಾಗಿದೆ, ಆದರೆ ಆತನ ಮೊಬೈಲ್ ಪತ್ತೆಯಾಗಿಲ್ಲ. ಕೊಲೆಯಾದಾಗ ಪ್ರಭಾತ್ ಯಾವ ಬಟ್ಟೆ ಧರಿಸಿದ್ದ? ಪತ್ರದಲ್ಲಿನ ಬರಹ ಯಾರದ್ದು? ವಿಧಿವಿಜ್ಞಾನ ಪ್ರಯೋಗಾಲಯ ವರದಿ ಏನನ್ನು ತಿಳಿಸುತ್ತದೆ? ಈ ನಿಟ್ಟಿನಲ್ಲಿ ಹಲವು ಬಗೆಹರಿಯದ ಪ್ರಶ್ನೆಗಳಿದ್ದು, ಎಲ್ಲಕ್ಕೂ ಉತ್ತರ ಸಿಗುವುದೇ ಎಂಬ ನಿರೀಕ್ಷೆಯಲ್ಲಿ ಬಾಲಕನ ಕುಟುಂಬಸ್ಥರು, ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net