ಪುಣೆ ಕಾರು ಅಪಘಾತ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್.. ವರದಿ ಬದಲಿಸಿದ ವೈದ್ಯರು!

car
Published on

ಮುಂಬೈ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣದಲ್ಲಿ ಒಂದೊಂದೇ ಬೆಚ್ಚಿಬೀಳಿಸುವ ವಿಷಯಗಳು ಬೆಳಕಿಗೆ ಬರುತ್ತಿವೆ ಇದೀಗ ಅಧಿಕಾರಿಗಳು ಮತ್ತೊಂದು ಅನಿರೀಕ್ಷಿತ ಟ್ವಿಸ್ಟ್ ಅನ್ನು ಕಂಡುಹಿಡಿದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅಪ್ರಾಪ್ತ(17 ವರ್ಷ)ನ ರಕ್ತದ ಮಾದರಿ ಪರೀಕ್ಷೆಯ ವರದಿಯನ್ನು ಇಬ್ಬರು ವೈದ್ಯರು ಬದಲಾಯಿಸಿರುವುದು ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಆಸ್ಪತ್ರೆಯ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಅಜಯ್ ತಾವರೆ ಮತ್ತು ಡಾ.ಶ್ರೀಹರಿ ಹರ್ನೋಲ್ ಬಂಧಿತರು. ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಇದನ್ನು ಬಹಿರಂಗಪಡಿಸಿದ್ದಾರೆ. ಆ ಇಬ್ಬರು ವೈದ್ಯರು ಸ್ಯಾಸೂನ್ ಜನರಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಕಾರು ಅಪಘಾತದ ನಂತರ ಪೊಲೀಸರು ಅಪ್ರಾಪ್ತನನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗಾಗಿ ಸಾಸೂನ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಬೆಳಗ್ಗೆ 11 ಗಂಟೆಗೆ ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಯಿತು. ಅವರ ರಕ್ತದ ಮಾದರಿಯಲ್ಲಿ ಆಲ್ಕೋಹಾಲ್ ಅಂಶ ಕಂಡುಬಂದಿಲ್ಲ ಎಂದು ಇಬ್ಬರು ವೈದ್ಯರು ತಿಳಿಸಿದ್ದಾರೆ. ಆದರೆ.. ಪೊಲೀಸರಿಗೆ ಅನುಮಾನ ಬಂದಿದ್ದರಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿ ತನ್ನ ಸ್ನೇಹಿತರೊಂದಿಗೆ ಮದ್ಯ ಸೇವಿಸುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ದಾಖಲಾಗಿವೆ. ಹೀಗಿದ್ದರೂ ಇಬ್ಬರು ವೈದ್ಯರು ರಕ್ತದ ಮಾದರಿ ಪರೀಕ್ಷೆಯ ವರದಿಯನ್ನು ಬದಲಿಸಿದ್ದರು. ಹೀಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಇಲ್ಲಿ ಪೊಲೀಸರು ಮಾಡಿದ ಮತ್ತೊಂದು ಒಳ್ಳೆಯ ಕೆಲಸವೆಂದರೆ ಅಪಘಾತದ ದಿನ ಆರೋಪಿಯ ಮತ್ತೊಂದು ರಕ್ತದ ಮಾದರಿಯನ್ನು ಡಿಎನ್ಎಗಾಗಿ ತೆಗೆದುಕೊಳ್ಳಲಾಗಿದೆ. ಈ ವಿಷಯವನ್ನು ಸ್ವತಃ ಪೊಲೀಸ್ ಆಯುಕ್ತರೇ ಹೇಳಿದ್ದಾರೆ.

ಮೇ 19ರಂದು ನಡೆದ ಈ ಅಪಘಾತದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ಎಂಜಿನಿಯರ್‌ಗಳು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಬಾಲಾಪರಾಧಿಗೆ ನ್ಯಾಯಾಲಯ ಕೆಲವು ಷರತ್ತುಗಳೊಂದಿಗೆ ಜಾಮೀನು ನೀಡಿದ್ದು, ತೀವ್ರ ಟೀಕೆಗೆ ಗುರಿಯಾಗಿತ್ತು.

ಬಳಿಕ ಬಾಲ ನ್ಯಾಯ ಮಂಡಳಿಯು ತೀರ್ಪನ್ನು ಮಾರ್ಪಡಿಸಿ ಬಾಲಕನನ್ನು ವೀಕ್ಷಣಾಲಯಕ್ಕೆ ಕಳುಹಿಸಿತ್ತು. ಮತ್ತೊಂದೆಡೆ ರಿಯಲ್​ ಎಸ್ಟೇಟ್​ ವ್ಯಾಪಾರಿಯಾಗಿರುವ ಬಾಲಕನ ತಂದೆ ಪ್ರಕರಣದ ದಾರಿ ತಪ್ಪಿಸಿ ಮಗನನ್ನು ರಕ್ಷಿಸಲು ಯತ್ನಿಸಿ ಚಾಲಕನನ್ನು ಸಿಲುಕಿಸಲು ಯತ್ನಿಸಿದ್ದರು. ಹೀಗಾಗಿ ಬಾಲಕನ ತಂದೆ ಮತ್ತು ಎರಡು ಬಾರ್‌ಗಳ ಸಿಬ್ಬಂದಿಯನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net