

ಕಾಸರಗೋಡು: ಬಿರಿಯಾನಿ ತಿಂದ ಬಳಿಕ ಮೃತಪಟ್ಟ 19 ವರ್ಷದ ಯುವತಿಯ ಸಾವಿನ ಪ್ರಕರಣದಲ್ಲಿ ಅನೇಕ ಸಂಗತಿಗಳು ಹೊರಬಿದ್ದಿದೆ. ಉದುಮದಲ್ಲಿರುವ ಹೋಟೆಲ್ ಒಂದರಲ್ಲಿ ಆನ್ಲೈನ್ ಮೂಲಕ ಕುಜಿಮಂತಿ ಹೆಸರಿನ ಚಿಕನ್ ಆಹಾರ ತರಿಸಿ ಅಂಜುಶ್ರೀ ಸೇವಿಸಿದ್ದಳು. ಇದಾದ ಬಳಿಕ ಆಕೆಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಪರಿಸ್ಥಿತಿ ಗಂಭೀರವಾದ ಬೆನ್ನಲ್ಲೇ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.
ಅಂಜುಶ್ರೀ ಮತ್ತು ಆಕೆಯ ಸ್ನೇಹಿತರು ಡಿಸೆಂಬರ್ 31 ರಂದು ಅಲ್ ರೊಮ್ಯಾನ್ಸಿಯಾ ಹೋಟೆಲ್ನಿಂದ ಕೇರಳದ ವಿಶೇಷ ಬಿರಿಯಾನಿ ಕುಜಿಮಂತಿಯನ್ನು ಆರ್ಡರ್ ಮಾಡಿ ಸೇವಿಸಿದರು. ಮರುದಿನ ಅಂಜುಶ್ರೀ ಕೂಡ ಅದೇ ಆಹಾರವನ್ನು ಸೇವಿಸಿದಳು ಎಂದು ಅಂಜುಶ್ರೀ ಸಹೋದರಿ ಅನುಶ್ರೀ ಬಹಿರಂಗಪಡಿಸಿದ್ದಾರೆ. ಅನುಶ್ರೀ ಪ್ರಕಾರ, ಆಕೆಯು ಸೇರಿದಂತೆ ನಾಲ್ಕು ಜನರು ಆಹಾರವನ್ನು ಸೇವಿಸಿದ್ದಾರೆ ಮತ್ತು ಅವರಲ್ಲಿ ಇಬ್ಬರಿಗೆ ತಕ್ಷಣ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ.
ಆಹಾರ ಸೇವಿಸಿದ ಅಂಜುಶ್ರೀ ಅಸ್ವಸ್ಥಗೊಂಡಿದ್ದಳು. ಬಳಿಕ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ಬಳಿಕ ಆಕೆ ಮನೆಗೆ ಮರಳಿದ್ದಳು. ಆದರೆ, ಶುಕ್ರವಾರ ಬೆಳಗ್ಗೆ ಮತ್ತೆ ಪ್ರಜ್ಞಾಹೀನಳಾಗಿ ಬಿದ್ದಿದ್ದ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದಾಗ್ಯೂ, ಚಿಕಿತ್ಸೆ ಫಲಿಸದೇ ಅಂಜುಶ್ರೀ ಕೊನೆಯುಸಿರೆಳೆದಳು. ಉದುಮ ಶಾಸಕ ಸಿ.ಎಚ್.ಕುಂಜಂಬು ಮಾತನಾಡಿ, ಅಂಜು ಜೊತೆ ಊಟ ಮಾಡಿದವರೂ ಅಸ್ವಸ್ಥರಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅಲ್ ರೊಮ್ಯಾನ್ಸಿಯಾ ಹೋಟೆಲ್ ಮಾಲೀಕ ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಆಹಾರ ಸುರಕ್ಷತಾ ಇಲಾಖೆ ಹೊಟೇಲ್ಗೆ ಬೀಗ ಹಾಕಿ ಸೀಲ್ ಮಾಡಿದೆ. ಅಂಜುಶ್ರೀ ಅವರ ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ. ವೈದ್ಯರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವೇ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)