

ಜೋಧಪುರ್: ನಮ್ಮ ಪೂರ್ವಜರ ಕಾಲದಲ್ಲಿ ಈ ಬಾಲ್ಯ ವಿವಾಹ (Child Marriage) ಪದ್ಧತಿಗಳು ಹೆಚ್ಚು ಚಾಲ್ತಿಯಲ್ಲಿತ್ತು. ಆದ್ರೆ, ಕಾಲಕ್ರಮೇಣ ಹಾಗೂ ಕಾನೂನಿನಡಿ ಬಾಲ್ಯ ವಿವಾಹ ಅಪರಾಧ ಎಂಬ ವಿಷಯ ತಿಳಿಯುತ್ತಿದ್ದಂತೆ ಇಂತಹ ಮದುವೆಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿತು. ಕಾನೂನು ಬಲವಾಗಿದ್ದರೂ ಕೂಡ ಇಂದಿಗೂ ಕೆಲವೆಡೆ ಕದ್ದುಮುಚ್ಚಿ ಹೆತ್ತವರು ತಮ್ಮ ಮಕ್ಕಳಿಗೆ ಕಂಕಣ ಕಟ್ಟಿಸುತ್ತಿದ್ದಾರೆ. ಈ ವಿಷಯದಲ್ಲಿ ಹಲವು ದೇಶಗಳು ಮುಂಚೂಣಿಯಲ್ಲಿವೆ ಎಂಬುದೇ ಇದೀಗ ಭಾರೀ ಅಚ್ಚರಿಗೆ ಕಾರಣವಾಗಿದೆ. ಅದಲ್ಲದೇ ಇತ್ತೀಚಿನ ದಿನಗಳಲ್ಲಿ ಅಂದು ಮದುವೆ ಬಗ್ಗೆ ಅರಿವಿಲ್ಲದ ಸಮಯದಲ್ಲಿ, ಮನೆಯವರ ಬಲವಂತದ ಒಪ್ಪಿಗೆಯಿಂದ ಮಾಡಿಕೊಂಡ ಅದೆಷ್ಟೋ ಸಂಖ್ಯೆಯ ಬಾಲ್ಯ ವಿವಾಹಗಳಿಗೆ ಇಂದು ಮುಕ್ತಿ ಸಿಗುತ್ತಿದೆ. ಇದೀಗ ಈ ಸಾಲಿಗೆ 21 ವರ್ಷದ ಯುವತಿಯೊಬ್ಬಳು (Girl Anita) ಸೇರ್ಪಡೆಗೊಂಡಿದ್ದಾಳೆ.
ರಾಜಸ್ಥಾನದ ಜೋಧ್ಪುರ್ನಲ್ಲಿ ಕೇವಲ ನಾಲ್ಕು ತಿಂಗಳ ಮಗುವಿನಲ್ಲಿದ್ದಾಗಲೇ ಬಾಲ್ಯವಿವಾಹಕ್ಕೆ ಸಿಲುಕಿದ ಅನಿತಾ ಎಂಬ ಯುವತಿ ನಿನ್ನೆ (ಸೆ.30) ಜೋಧಪುರದ ಕೌಟುಂಬಿಕ ನ್ಯಾಯಾಲಯದಲ್ಲಿ 20 ವರ್ಷಗಳ ಬಾಲ್ಯವಿವಾಹದ ಬಂಧನದಿಂದ ಕಡೆಗೂ ಸ್ವಾತಂತ್ರ್ಯ ಪಡೆದಿದ್ದಾಳೆ. ಇದೀಗ ಕೋರ್ಟ್ ನೀಡಿದ ಮಹತ್ವದ ತೀರ್ಪಿನಿಂದ ಯುವತಿಯ ಸಂತಸಕ್ಕೆ ಕೊನೆಯೇ ಇಲ್ಲ ಎನ್ನುವಂತಾಗಿದೆ. ಜೋಧ್‌ಪುರದ ಕೌಟುಂಬಿಕ ನ್ಯಾಯಾಲಯ ನಂ.2ರ ನ್ಯಾಯಾಧೀಶ ವರುಣ್ ತಲ್ವಾರ್ ಅವರು ಅನಿತಾ ಎಂಬ ಯುವತಿಗೆ ಮಾಡಿಸಲಾಗಿದ್ದ ಬಾಲ್ಯ ವಿವಾಹವನ್ನು ರದ್ದುಗೊಳಿಸಿ, ಆಕೆಯನ್ನು ಈ ಬಂಧನದಿಂದ ಮುಕ್ತಿಗೊಳಿಸುವಂತೆ ತೀರ್ಪು ನೀಡಿದ್ದಾರೆ.
ಜೋಧ್‌ಪುರ ಜಿಲ್ಲೆಯ ಗ್ರಾಮೀಣ ಪ್ರದೇಶದ ಬಡ ರೈತ ಕುಟುಂಬದಲ್ಲಿ ಜನಿಸಿದ ಅನಿತಾ, ಕೇವಲ 4 ತಿಂಗಳ ಮಗುವಿದ್ದಾಗಲೇ ಆಕೆಗೆ ಬಾಲ್ಯ ವಿವಾಹ ಮಾಡಿಸಲಾಗಿತ್ತು. ಇದರಿಂದ ಹೊರಬರಲಾಗದ ಯುವತಿ, ತಾನು ಚಿತ್ರಹಿಂಸೆ ಅನುಭವಿಸಿದೆ. ಬಾಲ್ಯ ವಿವಾಹದ ಸಂಕಷ್ಟಗಳನ್ನು ಎದುರಿಸುತ್ತಲೇ ದಿನಗಳನ್ನು ಕಳೆದೆ ಎಂದು ಹೇಳಿಕೊಂಡಿದ್ದಾರೆ. ಆಕೆಯನ್ನು ತವರಿನಲ್ಲಿ ಇಟ್ಟುಕೊಳ್ಳಬೇಡಿ, ನಮ್ಮ ಮನೆಗೆ ಕಳುಸಹಿಸಿಕೊಡಿ ಎಂದು ಆಕೆಯ ಅತ್ತೆ ಮನೆಯವರು ಪದೇ ಪದೇ ಒತ್ತಾಯಿಸುತ್ತಿದ್ದರು ಎಂದು ಅನಿತಾ ಅಳಲು ತೋಡಿಕೊಂಡಿದ್ದರು. ಆದ್ರೆ, ಕಡೆಗೂ ಆಕೆಯ ಸ್ನೇಹಿತೆಯಿಂದ ಇದೀಗ ಬಾಲ್ಯ ವಿವಾಹದಿಂದ ಮುಕ್ತಿ ದೊರಕಿದೆ.
ಇದೇ ವೇಳೆ ಅನಿತಾ ಅವರು ಜೋಧ್‌ಪುರದ ಸಾರಥಿ ಟ್ರಸ್ಟ್‌ನ ಕೃತಿ ಭಾರತಿ ಎಂಬುವವರು ಈ ಬಾಲ್ಯವಿವಾಹಗಳನ್ನು ರದ್ದುಗೊಳಿಸುವ ಕುರಿತು ಮಾಡುತ್ತಿದ್ದ ಅಭಿಯಾನದ ಬಗ್ಗೆ ಮಾಹಿತಿ ಪಡೆದರು. ಅನಿತಾ ಕೃತಿಯನ್ನು ಭೇಟಿಯಾಗಿ ತಮ್ಮ ಪರಿಸ್ಥಿತಿಯನ್ನು ಸಂಪೂರ್ಣವಾಗಿ ವಿವರಿಸಿದರು. ಅನಿತಾ ನೋವನ್ನು ಆಲಿಸಿದ ಕೃತಿ, ಅವರ ಪರವಾಗಿ ನಿಂತು, ತಕ್ಷಣವೇ ಜೋಧ್‌ಪುರದ ಕೌಟುಂಬಿಕ ನ್ಯಾಯಾಲಯ ಸಂಖ್ಯೆ 2ರಲ್ಲಿ ಬಾಲ್ಯ ವಿವಾಹ ರದ್ದುಗೊಳಿಸಲು ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಅನಿತಾ ಅರ್ಜಿ ಸಲ್ಲಿಸಿದ್ದರು. ಸೋಮವಾರ ಈ ಕುರಿತು ವಿವಾರಣೆ ನಡೆಸಿದ ನ್ಯಾಯಾಲಯ, ಇದೀಗ ಅನಿತಾಳ ಪರ ತೀರ್ಪು ನೀಡಿದ್ದು, ಆಕೆಯ ಬಾಲ್ಯ ವಿವಾಹವನ್ನು ರದ್ದುಗೊಳಿಸಿದೆ.
ಕೌಟುಂಬಿಕ ನ್ಯಾಯಾಲಯದಲ್ಲಿ ಅನಿತಾ ಪರವಾಗಿ ವಕಾಲತ್ತು ವಹಿಸಿದ ಕೃತಿ ಭಾರತಿ, ಬಾಲ್ಯವಿವಾಹ ಮತ್ತು ಯುವತಿಯ ವಯಸ್ಸಿಗೆ ಸಂಬಂಧಿಸಿದ ಸಂಗತಿಗಳನ್ನು ನ್ಯಾಯಾಲಯಕ್ಕೆ ಅರಿವು ಮೂಡಿಸುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಕೌಟುಂಬಿಕ ನ್ಯಾಯಾಲಯದ ನಂ.2ರ ನ್ಯಾಯಾಧೀಶ ವರುಣ್ ತಲ್ವಾರ್ ಅವರು 20 ವರ್ಷಗಳ ಹಿಂದೆ ಅನಿತಾ ಅವರಿಗೆ ಕೇವಲ 4 ತಿಂಗಳಿರುವಾಗ ನಡೆದ ಬಾಲ್ಯವಿವಾಹವನ್ನು ರದ್ದುಪಡಿಸುವ ಐತಿಹಾಸಿಕ ತೀರ್ಪು ಕೊಟ್ಟರು. ಈ ತೀರ್ಪು ಇದೀಗ ಅನಿತಾ ಮತ್ತು ಕೃತಿ ಸಂತಸಕ್ಕೆ ಕಾರಣವಾಗಿದ್ದು, ಅನೇಕರು ಅನಿತಾಳ ಆನಂದಕ್ಕೆ ತಮ್ಮ ನಗುವನ್ನು ಜೋಡಿಸಿರುವುದು ವಿಶೇಷ,(ಏಜೆನ್ಸೀಸ್).