

ಟಾಲಿವುಡ್ನ ಮೋಸ್ಟ್ ವಾಂಟೆಡ್ ವ್ಯಕ್ತಿಗಳಲ್ಲಿ ನಿರ್ದೇಶಕ ಅನಿಲ್ ರಾವಿಪುಡಿ ಸಹ ಒಬ್ಬರು. ಸಂಭಾಷಣೆಕಾರರಾಗಿ ಬಂದ ಅವರು, ಈಗ ತೆಲುಗಿನ ಬಹಳ ಜನಪ್ರಿಯ ನಿರ್ದೇಶಕರಾಗಿದ್ದಾರೆ.
ಅದರಲ್ಲೂ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಚಿತ್ರ ಹಿಟ್ ಆಗಿದ್ದೇ ಆಗಿದ್ದು, ಅನಿಲ್ಗೆ ತೆಲುಗು ಚಿತ್ರರಂಗದಲ್ಲಿ ಡಿಮ್ಯಾಂಡ್ ಜಾಸ್ತಿಯಾಗುತ್ತಿದೆ. ಅದರಲ್ಲೂ ಅಲ್ಲಿನ ಜನಪ್ರಿಯ ನಿರ್ಮಾಪಕರೇ, ತಮ್ಮ ಬ್ಯಾನರ್ಗೊಂದು ಚಿತ್ರ ಮಾಡಿಕೊಡಿ ಎಂದು ಕೇಳುತ್ತಿದ್ದಾರಂತೆ.
ಈ ಪೈಕಿ ತೆಲುಗಿನ ಜನಪ್ರಿಯ ನಿರ್ಮಾಪಕ ಮತ್ತು ನಟ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರು ಕೊಟ್ಟ ಆಫರ್ನ್ನು ಅನಿಲ್ ರಾವಿಪುಡಿ ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲು ಅರವಿಂದ್ ಅವರು ಆಹಾ ಎಂಬ ಓವರ್ ದಿ ಟಾಪ್ (ಓಟಿಟಿ) ನಡೆಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.
ಈ ಓಟಿಟಿಗೆ ಒಂದು ವೆಬ್ ಸೀರೀಸ್ ಮಾಡಿಕೊಡಿ ಎಂದು ಅನಿಲ್ಗೆ ಅಲ್ಲು ಅರವಿಂದ್ ಕೇಳಿದ್ದಾರೆ. ಅಷ್ಟೇ ಅಲ್ಲ, ವೆಬ್ ಸೀರೀಸ್ ನಿರ್ದೇಶಿಸಿಕೊಡುವುದಕ್ಕೆ ಐದು ಕೋಟಿ ಆಫರ್ ಸಹ ಕೊಟ್ಟಿದ್ದಾರೆ. ಆದರೆ, ಅನಿಲ್ ಮಾತ್ರ 'ನೋ ವೇ ಚಾನ್ಸೇ ಇಲ್ಲ' ಎಂದು ಹೇಳಿ ಹೊರನಡೆದಿದ್ದಾರೆ.
ಇದನ್ನೂ ಓದಿ: ಇಂಡಿಪೆಂಡೆನ್ಸ್ ಡೇ ಪ್ರಯುಕ್ತ ‘ಶಿವಾಜಿ ಸುರತ್ಕಲ್’
ವೆಬ್ ಸೀರೀಸ್ ನಿರ್ದೇಶಿಸುವುದಕ್ಕೆ ಅಷ್ಟೊಂದು ಹಣ ಕೊಡುತ್ತಿದ್ದರೂ, ಅನಿಲ್ ಯಾಕೆ ನಿರಾಕರಿಸಿದರು ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿಯೇ ಇದ್ದೇ ಇರುತ್ತದೆ. ಈ ಕುರಿತು ನಿಖರವಾದ ಉತ್ತರ ಅನಿಲ್ ಕಡೆಯಿಂದ ಸಿಗದಿದ್ದರೂ, ಅನಿಲ್ ಯಾಕೆ ನಿರಾಕರಿಸಿರಬಹುದು ಎಂಬ ಥಿಯರಿಗಳು ಓಡಾಡುತ್ತಿವೆ.
ಪ್ರಮುಖವಾಗಿ ದೊಡ್ಡ ದೊಡ್ಡ ಸ್ಟಾರ್ಗಳ ಜತೆಗೆ ಚಿತ್ರ ಮಾಡುವುದಕ್ಕೆ ಸಿಗುತ್ತಿರುವ ಅವಕಾಶಗಳನ್ನು ಬಿಟ್ಟು, ವೆಬ್ ಸೀರೀಸ್ ಯಾಕೆ ಬೇಕು ಎಂಬ ಕಾರಣಕ್ಕೆ ಬೇಡ ಎಂದರಿಬಹುದು ಎಂದು ಹೇಳಲಾಗುತ್ತಿದೆ. ಇನ್ನು ಅನಿಲ್ ತಮ್ಮ ಮುಂದಿನ ಚಿತ್ರಕ್ಕೆ ಸಂಭಾವನೆಯಾಗಿ 10 ಕೋಟಿ ನಿರೀಕ್ಷಿಸುತ್ತಿರುವುದರಿಂದ, ಐದು ಕೋಟಿ ಕಡಿಮೆಯಾಯಿತು ಎಂಬ ಕಾರಣಕ್ಕೆ ಬಿಟ್ಟಿದ್ದಾರಂತೆ. ಕಾರಣ ಏನೇ ಇರಲಿ, ಐದು ಕೋಟಿ ಸಂಭಾವನೆಯನ್ನು ಅನಿಲ್ ಬಿಟ್ಟಿದ್ದು ಹಲವರು ಹಬ್ಬೇರಿಸುವಂತಾಗಿದೆ.