ಅಂಗನವಾಡಿಗಳಿನ್ನು ಸ್ಮಾರ್ಟ್: ಮಕ್ಕಳು, ವೃದ್ಧರಿಗಾಗಿ ವಿಶಿಷ್ಟ ಯೋಜನೆ; ಲಕ್ಷ್ಮೀ ಹೆಬ್ಬಾಳ್ಕರ್ ಕನಸು

Laxmi Hebbalkar 2
Published on

ಬೆಂಗಳೂರು: ಹೊಸ ಸರ್ಕಾರದ ಗೃಹಲಕ್ಷ್ಮಿ ಯೋಜನೆಯನ್ನು ಮನೆಮನೆಗೆ ತಲುಪಿಸುವ ಬೃಹತ್ ಸವಾಲಿನ ಜತೆ ಜತೆಗೆ ಮಕ್ಕಳಿಗೆ ‘ಸ್ಮಾರ್ಟ್’ ಅಂಗನವಾಡಿ, ಹಿರಿಯರಿಗೆ ಪ್ರತಿ ಜಿಲ್ಲೆಯಲ್ಲೂ ‘ನೆಮ್ಮದಿ ನೆಲೆ’, ವೃತ್ತಿನಿರತ ಮಹಿಳೆಯರಿಗೆ ವ್ಯವಸ್ಥಿತ ‘ವಸತಿ ನೆಲೆ’ ಕಲ್ಪಿಸಲು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂಕಲ್ಪಿಸಿದ್ದಾರೆ. ವಿಜಯವಾಣಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡ ಲಕ್ಷ್ಮೀ ಹೆಬ್ಬಾಳ್ಕರ್, ತಾವು ಇಲಾಖೆ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಅರಿತ ಸಂಗತಿಯನ್ನು ನಿಷ್ಠುರವಾಗಿ ಪ್ರತಿಪಾದಿಸಿದರಲ್ಲದೇ ತಮ್ಮ ಕನಸು, ಆಶಯಗಳನ್ನೂ ಹಂಚಿಕೊಂಡರು.

ಹೈಟೆಕ್ ರೂಪ: ಮಕ್ಕಳು ಶೈಕ್ಷಣಿಕವಾಗಿ ಮುಂದುವರಿಯಬೇಕೆಂದು ಎಲ್ಲ ಪಾಲಕರು ಆಸೆಪಡುತ್ತಾರೆ. ತಾವು ಎಷ್ಟೇ ಕಷ್ಟಪಡುತ್ತಿದ್ದರೂ ಮಕ್ಕಳನ್ನು ಹೆಚ್ಚು ಶುಲ್ಕದ ಶಿಶುವಿಹಾರಕ್ಕೆ ಕಳಿಸುತ್ತಾರೆ. ಸರ್ಕಾರಿ ವ್ಯವಸ್ಥೆಯಲ್ಲೂ ಅಂಗನವಾಡಿ ಹೈಟೆಕ್ ಆದರೆ ಬಡವರು, ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲ. ಇವುಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶ ನಮ್ಮದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಆಶಯ ವ್ಯಕ್ತಪಡಿಸಿದರು. ಸ್ಮಾರ್ಟ್ ಅಂಗನವಾಡಿ ಮಾಡುತ್ತೇವೆ. ಡಿಜಿಟಲ್ ಸ್ಪರ್ಶ ತರುವ ಉದ್ದೇಶವಿದೆ. ಕೇಂದ್ರವು ಕೇರಳದಲ್ಲಿ ಸಭೆ ನಡೆಸಿದ್ದು, ಮೊದಲ ಹಂತದಲ್ಲಿ 10 ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಹೊಸ 400 ಅಂಗನ ವಾಡಿಗಳನ್ನು ಕಲ್ಯಾಣ ಕರ್ನಾಟಕದಲ್ಲಿ ಸ್ಥಾಪಿಸಲು ಆದ್ಯತೆ ನೀಡಲಾಗುತ್ತದೆ ಎಂದು ವಿವರಿಸಿದರು.

ಹಿರಿಯರಿಗೆ ನೆಮ್ಮದಿ ನೆಲೆ: ಬೆರಳ ತುದಿಯಲ್ಲೇ ಜಗತ್ತು ನೋಡುವ ಅವಕಾಶವನ್ನು ಆಧುನಿಕತೆ, ತಂತ್ರಜ್ಞಾನ ಕಲ್ಪಿಸಿದೆ. ಅದೇ ಕಾಲಕ್ಕೆ ಕರುಳಬಳ್ಳಿಗಳು, ಕುಟುಂಬದ ಸದಸ್ಯರಿಂದ ಹಿರಿಯರು ದೂರವಾಗಿ ಒಬ್ಬಂಟಿ ಜೀವನ ನಡೆಸಬೇಕಾದ ದಾರುಣ ಪರಿಸ್ಥಿತಿಯೂ ತಲೆದೋರಿದೆ. ಒಂಟಿಯಾಗಿರುವ ಹಿರಿಯರಿಗೆ ‘ನೆಮ್ಮದಿ ನೆಲೆ’ ಒದಗಿಸುವ ವಿಶಿಷ್ಟ ಚಿಂತನೆ ಲಕ್ಷ್ಮೀ ಹೆಬ್ಬಾಳ್ಕರ್ ಅವರದ್ದಾಗಿದೆ. ಪ್ರಾಯೋಗಿಕವಾಗಿ ‘ಸಮೂಹ ಮನೆ’ಗಳ ನಿರ್ವಣದ ಪರಿಕಲ್ಪನೆಯನ್ನು ಸಂವಾದದ ವೇಳೆ ಹಂಚಿಕೊಂಡರು. ಮಕ್ಕಳಿಂದ ದೂರ ಇರುವ ಅಥವಾ ಮಕ್ಕಳಿಲ್ಲದ ಹಿರಿಯ ನಾಗರಿಕರು ವೃದ್ಧಾಪ್ಯದಲ್ಲಿ ಅನುಭವಿಸುವ ಸಹಜ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಸರ್ಕಾರದಿಂದಲೇ ಓಲ್ಡೇಜ್ ಹೋಮ್ ನಿರ್ವಿುಸುವ ಆಸೆ ಇದೆ ಎಂದು ತಿಳಿಸಿದರು. ಮೊದಲು ಬೆಂಗಳೂರಲ್ಲಿ ಯೋಜನೆ ಕಾರ್ಯಗತ ಮಾಡಿ, ಬಳಿಕ ಜಿಲ್ಲೆಗಳಲ್ಲೂ ಜಾರಿ ಮಾಡಲಾಗುತ್ತದೆ. ಬೆಂಗಳೂರಲ್ಲಿ ಇಲಾಖೆಗೆ ಸೇರಿದ ಬಳಕೆಯಾಗದೇ ಇರುವ 18 ಎಕರೆ ಜಾಗವಿದೆ. ಅಲ್ಲಿ ಸಮೂಹಮನೆ ನಿರ್ವಿುಸಲಾಗುತ್ತದೆ. ಇಲಾಖೆಯ ಪೂರ್ಣ ಅನುದಾನದಲ್ಲಿ ಇದನ್ನು ಕಾರ್ಯಗತ ಮಾಡುವುದು ಕಷ್ಟ, ಸರ್ಕಾರಿ ಸೂರಿನಡಿ ಆಶ್ರಯ ಪಡೆಯಲು ಬಯಸುವವರ ನೆರವಿನಲ್ಲಿ ಮನೆಗಳನ್ನು ಕಟ್ಟಿಕೊಡಲಾಗುತ್ತದೆ. ಅಲ್ಲಿ ವೃದ್ಧರಿಗೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆ ಮತ್ತು ಚಟುವಟಿಕೆಗೆ ಅವಕಾಶ ಇರಲಿದೆ ಎಂದು ವಿವರಿಸಿದರು. ಮುಂದೆ ಇನ್ನೂ ಎರಡು ಮೂರು ಜಿಲ್ಲೆಗಳಲ್ಲಿ ಇದೇ ರೀತಿ ಸಮುಚ್ಚಯ ಸ್ಥಾಪಿಸಲಾಗುತ್ತದೆ. ಬಳಿಕ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಜಾಗ ಗುರುತು ಮಾಡಲು ತಿಳಿಸಲಾಗುತ್ತದೆ ಎಂದರು.

ವಿದ್ಯಾರ್ಥಿನಿಲಯಗಳಿಗೆ ಸರ್ಜರಿ: ಪ್ರತಿ ಜಿಲ್ಲೆಯಲ್ಲಿ ವೃತ್ತಿನಿರತ ಮಹಿಳೆಯರ ಹಾಸ್ಟೆಲ್​ಗಳಿವೆ. ಅವು ಇನ್ನಷ್ಟು ವ್ಯವಸ್ಥಿತವಾಗಿ ನಡೆಯಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವೆ ಹೆಬ್ಬಾಳ್ಕರ್ ತಿಳಿಸಿದರು. ಪ್ರತಿಜಿಲ್ಲೆಗೆ ಭೇಟಿ ಕೊಟ್ಟಾಗ ಅಲ್ಲಿನ ವೃತ್ತಿನಿರತ ಮಹಿಳೆಯರ ಹಾಸ್ಟೆಲ್​ಗೆ ಅನಿರೀಕ್ಷಿತ ಭೇಟಿ ಕೊಡುವೆ. ಸಮಸ್ಯೆಗಳಿದ್ದರೆ ಸರಿಪಡಿಸಿ ಎಂದು ಅಧಿಕಾರಿಗಳಿಗೂ ಎಚ್ಚರಿಸಿದ್ದೇನೆ. ಹಾಸ್ಟೆಲ್​ಗಳು ಮೇಲ್ದರ್ಜೆಗೇರಬೇಕು, ಎಲ್ಲ ಕಡೆ ಚೆನ್ನಾಗಿದೆ ಎಂದು ಹೇಳಲ್ಲ, ಸರಿಮಾಡುವ ಪ್ರಯತ್ನ ನಡೆಯಲಿದೆ ಎಂದರು.

ಗೃಹಲಕ್ಷ್ಮೀ ಯೋಜನೆಯನ್ನು ಪ್ರೀತಿಯಿಂದ ನಿರೀಕ್ಷಿಸುತ್ತಿದ್ದಾರೆ. ತೆರಿಗೆದಾರರು, ಜಿಎಸ್ಟಿ ನೋಂದಣಿದಾರ ರನ್ನು ಯೋಜನೆ ವ್ಯಾಪ್ತಿಗೆ ತರುವ ಬಗ್ಗೆ ಮುಂದೆ ಯೋಚಿಸುತ್ತೇವೆ. ಕಾರ್ಡ್ ಇಲ್ಲದವರು ಕೆಲ ದಿನ ಕಾಯಿರಿ. | ಲಕ್ಷ್ಮೀ ಹೆಬ್ಬಾಳ್ಕರ್, ಸಚಿವೆ

ಮುಖ್ಯಾಂಶಗಳು

  • ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ವಿತರಣೆಯಲ್ಲಿ ವಿಕೇಂದ್ರೀಕರಣ ವ್ಯವಸ್ಥೆ ಇದೆ. ಇದರಿಂದ ಅನೇಕ ಗೊಂದ ಲಗಳಿದ್ದು, ಕೇಂದ್ರೀಕೃತ ವ್ಯವಸ್ಥೆ ಮಾಡುವ ಉದ್ದೇಶವಿದೆ.
  • ಸ್ವಸಹಾಯ ಸಂಘಗಳ ಸದಸ್ಯರಲ್ಲಿ ಉದ್ಯಮಶೀಲತೆ ಬೆಳೆಸಲು ಬಡ್ಡಿರಹಿತ ಸಾಲದ ಮೊತ್ತವನ್ನು ಹೆಚ್ಚಿಸಲು ಪ್ರಯತ್ನ
  • ಅಂಗನವಾಡಿ ಕಾರ್ಯಕರ್ತೆ ಯರಿಗೆ ವೇತನ ಹೆಚ್ಚಳದ ಅಂಶವನ್ನು ಬಜೆಟ್​ನಲ್ಲಿ ಪ್ರಸ್ತಾಪ ಮಾಡಬೇಕೆಂಬ ಒತ್ತಾಸೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net