

ಹೈದರಾಬಾದ್: ತಿರುಪತಿ ದೇವಾಲಯಕ್ಕೆ ಭಕ್ತರು ದಾನವಾಗಿ ನೀಡಿರುವ ಸ್ಥಿರಾಸ್ತಿಗಳ ಹರಾಜಿಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಆಸ್ತಿ ಹರಾಜು ಮಾಡದಂತೆ ಆಂಧ್ರಪ್ರದೇಶ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ.
ಭಕ್ತರು ನೀಡಿರುವ ಸುಮಾರು 50 ಆಸ್ತಿಗಳನ್ನು ಹರಾಜು ಹಾಕಲು ತಿರುಪತಿ ತಿರುಮಲ ದೇಗುಲ ಆಡಳಿತ ಮಂಡಳಿ (ಟಿಟಿಡಿ) ನಿರ್ಧಾರಕ್ಕೆ ಬಂದಿತ್ತು. ಇದರ ಬೆನ್ನಲ್ಲೇ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ವಿರುದ್ಧ ಅಭಿಯಾನ ಕೂಡ ಶುರುವಾಗಿತ್ತು.
ಇದೀಗ ಜನರ ಆಕ್ರೋಶಕ್ಕೆ ಸರ್ಕಾರ ತಲೆಬಾಗಿದೆ. ಸದ್ಯ ಆಸ್ತಿ ಹರಾಜು ಮಾಡಬೇಡಿ ಎಂದಿರುವ ಸರ್ಕಾರ, ಹರಾಜಿನ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ಆದೇಶದಲ್ಲಿ ಟಿಟಿಡಿಗೆ ಸೂಚಿಸಿದೆ. ಹರಾಜು ಆದೇಶವನ್ನು ಸದ್ಯ ಅಮಾನತಿನಲ್ಲಿ ಇಟ್ಟಿದೆ.
ಎರಡು ತಿಂಗಳುಗಳಿಂದ ಲಾಕ್ಡೌನ್ ಹಿನ್ನೆಲೆಯಲ್ಲಿ ದೇವಾಲಯವು ಮುಚ್ಚಿರುವ ಕಾರಣ, ದೇವಸ್ಥಾನದ ಆಡಳಿಯ ಮಂಡಳಿಗೆ ಸಂಬಳ ನೀಡಲು ಕೂಡ ಹಣವಿಲ್ಲದಂತಾಗಿದೆ ಎಂದಿರುವ ಟಿಟಿಡಿ ಈ ಹಿನ್ನೆಲೆಯಲ್ಲಿ ತಮಿಳುನಾಡು, ಆಂಧ್ರ ಪ್ರದೇಶ, ಉತ್ತರಾಖಂಡ, ಋಷಿಕೇಷದಲ್ಲಿ ಇರುವ ದೇಗುಲಗಳಿಗೆ ಭಕ್ತರು ನೀಡಿರುವ ದಾನದ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿತ್ತು.
ಈ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಭಾರಿ ಟೀಕೆ ಹಾಗೂ ವಿರೋಧ ವ್ಯಕ್ತವಾಗಿದ್ದವು. ಆರ್ಥಿಕ ಮುಗ್ಗಟ್ಟು ಮತ್ತು ನಿರ್ವಹಣೆಯ ನೆಪವೊಡ್ಡಿ ಅದನ್ನು ಹರಾಜು ಹಾಕಲು ಮಂಡಳಿ ಮುಂದಾಗಿದ್ದು, ಇದು ಸರಿಯಲ್ಲ ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬಂದಿದ್ದವರು.
ಅಷ್ಟೇ ಅಲ್ಲದೇ, ಆಂಧ್ರ ಸರ್ಕಾರದ ವಿರುದ್ಧ ಬಿಜೆಪಿ, ಜನಸೇನಾ ಪಕ್ಷ, ಸಿಪಿಐ-ಎಂ, ಟಿಡಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ವಾಗ್ದಾಳಿ ನಡೆಸಿದ್ದವು. ಆಸ್ತಿ ಹರಾಜು ನಿರ್ಧಾರವು ಭಕ್ತರ ಭಾವನೆಗಳಿಗೆ ಧಕ್ಕೆ ತರುವಂಥವು ಎಂದು ಹೇಳಿಕೆಗಳು ಕೇಳಿಬಂದಿದ್ದವು. ಆದ್ದರಿಂದ ಸರ್ಕಾರ ಆಸ್ತಿ ಹರಾಜು ನಿರ್ಧಾರಕ್ಕೆ ತಡೆ ನೀಡಿದೆ.
‘ಭಕ್ತರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಧಾರ್ಮಿಕ ಮುಖಂಡರು, ಭಕ್ತರು ಮುಂತಾದವರೊಂದಿಗೆ ಸಮಾಲೋಚಿಸಿ ಈ ವಿಷಯವನ್ನು ಮರುಪರಿಶೀಲಿಸುವಂತೆ ಸರ್ಕಾರ ಟಿಟಿಡಿಗೆ ನಿರ್ದೇಶನ ನೀಡಿದೆ" ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ, ಆಸ್ತಿ ಹರಾಜು ಹಾಕುವ ದೇಗುಲ ಮಂಡಳಿಯ ನಿರ್ಧಾರಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು.