ಬಾಲಿವುಡ್‌ನ ‘ಗಾಸಿಪ್ ಕ್ವೀನ್’ ಯಾರು ಗೊತ್ತಾ? ಅನನ್ಯ ಪಾಂಡೆ ಹೇಳುತ್ತಾರೆ ಕೇಳಿ ...

Ananya Pandey - Final
Published on

ಎಲ್ಲಾ ಚಿತ್ರರಂಗಗಳಲ್ಲೂ ಗಾಸಿಪ್‌ಗಳು, ಗಾಸಿಪ್ ಮಾಡುವವರು ಬಹಳ ಸಾಮಾನ್ಯ. ಅದರಲ್ಲೂ ಬಾಲಿವುಡ್‌ನಲ್ಲಿ ಗಾಸಿಪ್‌ಗಳು ಮತ್ತು ಗಾಸಿಪ್ ಮಾಡುವವರು ಇನ್ನೂ ಜಾಸ್ತಿಯೇ. ಅತೀ ಹೆಚ್ಚು ಗಾಸಿಪ್ ಮಾಡುವವರ ಪಟ್ಟಿಯಲ್ಲಿ ಯಾರಿದ್ದಾರೆ ಗೊತ್ತಾ? ಕರೀನಾ ಕಪೂರ್ ಖಾನ್. ಹಾಗಂತ ಹೇಳಿದ್ದು ಬೇರ‌್ಯಾರೂ ಅಲ್ಲ, ಕಳೆದ ವರ್ಷ ‘ಸ್ಟೂಡೆಂಟ್ ಆಫ್​ ದಿ ಇಯರ್ 2’ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಅನನ್ಯ ಪಾಂಡೆ.

ಬಾಲಿವುಡ್‌ನ ಖ್ಯಾತ ನಟ ಚಂಕಿ ಪಾಂಡೆ ಅವರ ಮಗಳು ಈ ಅನನ್ಯ ಪಾಂಡೆ. ಇತ್ತೀಚೆಗೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಅನನ್ಯ, ತಾನು ಸಹ ಆಗಾಗ ಒಮ್ಮೆಒಮ್ಮೆ ಗಾಸಿಪ್ ಮಾಡುವುದು ಹೌದು ಎಂದು ಹೇಳಿಕೊಂಡಿದ್ದಾರೆ. ಇನ್ನು ಬಾಲಿವುಡ್‌ನಲ್ಲಿ ಅತೀ ಹೆಚ್ಚು ಗಾಸಿಪ್ ಮಾಡುವುದು ಯಾರು ಎಂದರೆ, ಮೂರು ಜನರ ಹೆಸರನ್ನು ಅವರು ಪ್ರಸ್ತಾಪಿಸಿದ್ದಾರೆ. ಕರಣ್ ಜೋಹಾರ್, ಕರೀನಾ ಕಪೂರ್ ಮತ್ತು ರಣಬೀರ್ ಕಪೂರ್ ತುಂಬಾ ಗಾಸಿಪ್ ಮಾಡುತ್ತಾರೆ ಎಂದು ಕೇಳಿ ತಿಳಿದುಕೊಂಡಿದ್ದೇನೆ ಎಂದು ಅನನ್ಯ ಹೇಳಿಕೊಂಡಿದ್ದಾರೆ.

ಬರೀ ಅನನ್ಯ ಮಾತ್ರವಲ್ಲ, ಬಾಲಿವುಡ್‌ನಲ್ಲಿ ಅತೀ ಹೆಚ್ಚು ಗಾಸಿಪ್ ಮಾಡುವುದು ಯಾರು ಎಂದು ಯಾವ ಸೆಲೆಬ್ರಿಟಿಯನ್ನು ಕೇಳಿದರೂ, ಅವರು ಮೊದಲು ಹೇಳುವ ಹೆಸರು ಕರೀನಾ ಕಪೂರ್ ಅವರದ್ದು. ಕೆಲವು ತಿಂಗಳುಗಳ ಹಿಂದೆ, ‘ದಿ ಕಪಿಲ್ ಶರ್ಮಾ ಶೋ’ನಲ್ಲಿ ‘ಸೂರ್ಯವಂಶಿ’ ತಂಡ ಬಂದಿತ್ತು. ಆ ಸಂದರ್ಭದಲ್ಲಿ ಗಾಸಿಪ್ ವಿಷಯ ಚರ್ಚೆಗೆ ಬಂದಿತ್ತು. ಆ ಸಂದರ್ಭದಲ್ಲಿ ಅಲ್ಲಿದ್ದ ಅಕ್ಷಯ್ ಕುಮಾರ್, ಕರೀನಾ ಕಪೂರ್ ಅವರನ್ನು ಬಾಲಿವುಡ್‌ನ ‘ಗಾಸಿಪ್ ಕ್ವೀನ್’ ಎಂದು ಕರೆದಿದ್ದರು.

ಇನ್ನು ಕರಣ್ ಜೋಹಾರ್ ಅಂತೂ, ‘ಮುಂಬೈ ಪೊಲೀಸ್‌ನವರು ಸಮಸ್ಯೆ ಎದುರಾದಾಗ, ಕರೀನಾ ಅವರ ಸಹಾಯ ಪಡೆಯಬಹುದು. ಏಕೆಂದರೆ, ಆಕೆಗೆ ಎಲ್ಲವೂ ಗೊತ್ತಿದೆ. ಎಲ್ಲರ ಮನೆಯಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾಳೆ ಅನಿಸುತ್ತೆ. ಯಾರ ಮನೆಯಲ್ಲಿ ಏನೇ ನಡೆದರೂ, ಮೊದಲು ಗೊತ್ತಾಗುವುದೇ ಕರೀನಾಗೆ. ಇಡೀ ಚಿತ್ರರಂಗದಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ಯಾರಿಗಾದರೂ ಗೊತ್ತಿದ್ದರೆ, ಅದು ಕರೀನಾಗೆ’ ಎಂದು ಹೇಳಿದ್ದರು.

ಅಲ್ಲೇ ಇದ್ದ ನಿರ್ದೇಶಕ ರೋಹಿತ್ ಶೆಟ್ಟಿ ಸಹ ಇದಕ್ಕೆ ಅನುಮೋದಿಸಿದ್ದರು. ‘ನನಗೂ ಇದು ಅನುಭವಕ್ಕೆ ಬಂದಿದೆ. ‘ಚೆನ್ನೈ ಎಕ್ಸ್‌ಪ್ರೆಸ್’ ಚಿತ್ರದ ಸಲುವಾಗಿ ಒಮ್ಮೆ ಶಾರೂಖ್ ಖಾನ್ ಅವರ ಮನೆಗೆ ಮಧ್ಯರಾತ್ರಿ ಹೋಗಿದ್ದೆ. ನಾನು ಹೋಗಿದ್ದು ಕರಣ್ ಜೋಹಾರ್‌ಗೆ ಬಿಟ್ಟರೆ ಯಾರಿಗೂ ಗೊತ್ತಿರಲಿಲ್ಲ. ಆದರೆ, ಮರುದಿನ ಕರೀನಾ ಅವರನ್ನು ಭೇಟಿಯಾಗುವ ಪ್ರಸಂಗ ಬಂತು. ಆಗ ಅವರು ನೇರವಾಗಿ, ‘ಶಾರೂಖ್ ಜತೆಗೆ ಮೀಟಿಂಗ್ ಹೇಗಾಯ್ತು ...’ ಅಂತ ಕೇಳಿದರು. ನಾನು ನಿಜಕ್ಕೂ ಶಾಕ್ ಆಗಿದ್ದೆ’ ಎಂದು ನೆನಪಿಸಿಕೊಂಡಿದ್ದರು ರೋಹಿತ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net