ಬರ ಸಂಕಷ್ಟಕ್ಕೆ ಅನಪೇಕ್ಷಿತ ಪರಿಹಾರ: ಎನ್​ಡಿಆರ್​ಎಫ್ ನಿಯಮಗಳಲ್ಲಿನ ಅವಕಾಶ ಬಳಕೆಗೆ ಮುಂದಾದ ಸರ್ಕಾರ

Farmer
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು 
ರಾಜ್ಯವನ್ನು ಕಾಡಿರುವ ಭೀಕರ ಬರದ ಹಿನ್ನೆಲೆಯಲ್ಲಿ ಕೃಷಿಯನ್ನೇ ನಂಬಿರುವ ಸಣ್ಣ ಮತ್ತು ಮಧ್ಯಮ ವರ್ಗದ ರೈತಾಪಿ ಕುಟುಂಬಗಳ ಜೀವನ ನಿರ್ವಹಣೆಗೆ ಅನಪೇಕ್ಷಿತ ಪರಿಹಾರ (ಗ್ರೇಟುಯಿಟಸ್ ರಿಲೀಫ್) ನೀಡಲು ಕೇಂದ್ರದ ಕಡೆ ರಾಜ್ಯ ಸರ್ಕಾರ ದೃಷ್ಟಿ ನೆಟ್ಟಿದೆ.

ನರೇಗಾ ಕೂಲಿಯನ್ನು ನೆಚ್ಚಿಕೊಳ್ಳದೆ ಕೃಷಿಯನ್ನೇ ಅವಲಂಬಿಸಿರುವ ಗ್ರಾಮೀಣ ಭಾಗದ ಕುಟುಂಬಗಳು ಜೀವನ ನಿರ್ವಹಣೆಗೆ ಪರದಾಡುತ್ತಿವೆ. ಅಂತಹ ಕುಟುಂಬಗಳ ನೆರವಿಗೆ ಹೋಗಬೇಕಾಗಿರುವುದು ಸರ್ಕಾರದ ಮೂಲ ಉದ್ದೇಶವಾಗಿದೆ. ರಾಜ್ಯದಲ್ಲಿ ಈ ವರ್ಷ ಮುಂಗಾರಿನಲ್ಲಿ 82.35 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಗೆ 74.26 ಲಕ್ಷ ಹೆಕ್ಟೇರ್ ಬಿತ್ತನೆಯಾಗಿತ್ತು. ಆದರೆ ಬೆಳೆ ಕೈಗೆ ಬಾರದಂತೆ ಒಣಗಿದೆ. ರಾಜ್ಯದಲ್ಲಿರುವ ಕಾರ್ವಿುಕರ ಪೈಕಿ ಶೇ.41 ಕೃಷಿ ಕೂಲಿ ಕಾರ್ವಿುಕರಿದ್ದಾರೆ. ರಾಜ್ಯದ ಅಂಕಿಅಂಶಗಳ ಪ್ರಕಾರ ಶೇ.77ಕ್ಕೂ ಹೆಚ್ಚು ಸಣ್ಣ ಮತ್ತು ಅತಿಸಣ್ಣ ಕೃಷಿಕರು. ಆದ್ದರಿಂದಲೇ ಇಂತಹವರ ನೆರವಿಗೆ ಸರ್ಕಾರ ಧಾವಿಸಬೇಕಾಗಿದೆ.

ನಿಯಮದಲ್ಲಿದೆ ಅವಕಾಶ: ಸಣ್ಣ, ಅತಿಸಣ್ಣ, ಮಧ್ಯಮ ವರ್ಗದ ರೈತರಿಗೆ ಅಂದರೆ ಯಾರು 2 ಹೆಕ್ಟೇರ್​ಗಿಂತ ಕಡಿಮೆ ಭೂಮಿಯನ್ನು ಹೊಂದಿರುತ್ತಾರೋ ಅವರಿಗೆ ಎನ್​ಡಿಆರ್​ಎಫ್ ನಿಯಮಗಳಲ್ಲಿ ಗರಿಷ್ಠ 90 ದಿನ ಅನಪೇಕ್ಷಿತ ಪರಿಹಾರ ನೀಡಲು ಅವಕಾಶಗಳಿವೆ. ಬೆಳೆ ಇಲ್ಲದೇ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಇಂತಹ ಪರಿಹಾರವನ್ನು ನೀಡಲು ಸರ್ಕಾರ ಈಗ ಕೇಂದ್ರದ ಕಡೆ ಗಮನ ಹರಿಸಿದೆ. ಇತ್ತೀಚಿಗೆ ಕೇಂದ್ರಕ್ಕೆ ಸಲ್ಲಿಕೆಯಾಗಿರುವ ಮನವಿಯಲ್ಲಿಯೂ ವಿವರಿಸಲಾಗಿದೆ.

ರಾಜ್ಯದಲ್ಲಿ ಒಟ್ಟಾರೆ 63,19,528 ಕೃಷಿಕರಿದ್ದು, ಅದರಲ್ಲಿ 2 ಹೆಕ್ಟೇರ್​ಗಿಂತ ಕಡಿಮೆ ಭೂಮಿ ಇರುವ ರೈತರ ಸಂಖ್ಯೆ 52,73,736 ಇದೆ. ಇವರಿಗೆ ಪರಿಹಾರ ನೀಡಬೇಕಾಗುತ್ತದೆ.

ಪರಿಹಾರ ಎಷ್ಟು?: ಒಂದು ಕುಟುಂಬದ ಇಬ್ಬರಿಗೆ ನರೇಗಾದಲ್ಲಿ ನಿಗದಿ ಮಾಡಿರುವ ಕೂಲಿಯನ್ನು ಪರಿಹಾರವಾಗಿ ನೀಡಲು ನಿಯಮಗಳಲ್ಲಿ ಹೇಳಲಾಗಿದೆ. ನರೇಗಾ ಕೂಲಿ 265 ರೂ.ಗಳಿದೆ. ಇದರ ಪ್ರಕಾರ ಅನಪೇಕ್ಷಿತ ಪರಿಹಾರ ನೀಡಲು ರಾಜ್ಯಕ್ಕೆ 12,577.86 ಕೋಟಿ ರೂ.ಗಳ ಅಗತ್ಯವಿದೆ. ಕೇಂದ್ರ ಸರ್ಕಾರ ಇಷ್ಟು ಮೊತ್ತವನ್ನು ನೀಡಿದರೆ ಸಣ್ಣ, ಅತಿಸಣ್ಣ ರೈತರು ಉಸಿರಾಡುತ್ತಾರೆ. ಇಲ್ಲದಿದ್ದರೆ ಕಷ್ಟ ಎಂಬ ಪರಿಸ್ಥಿತಿ ಇದೆ. ಕೇಂದ್ರ ಸರ್ಕಾರ ಏನು ಮಾಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಸೂಚನೆಗಳೇನು?: ರಾಜ್ಯದಲ್ಲಿ ಅಲ್ಲಲ್ಲಿ ಬ್ಯಾಂಕ್​ಗಳು ರೈತರಿಗೆ ಜಫ್ತಿ ನೋಟಿಸ್​ಗಳನ್ನು ನೀಡುವುದು, ಅದಕ್ಕೆ ಹೆದರಿದ ಕೆಲ ರೈತರು ಆತ್ಮಹತ್ಯೆಗೆ ಶರಣಾಗಿರುವುದು ನಡೆಯುತ್ತಿದೆ. ರಾಜ್ಯ ಮಟ್ಟದ ಬ್ಯಾಂಕರ್​ಗಳ ಸಮಿತಿ ರೈತರ ಸಾಲವನ್ನು ರಿಶೆಡ್ಯೂಲ್ ಮಾಡಬೇಕು ಎಂಬ ಸೂಚನೆ ನೀಡಿದ್ದರೂ ಸಹ ಬಹುತೇಕ ಬ್ಯಾಂಕ್​ಗಳು ಪಾಲಿಸುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಮತ್ತೊಮ್ಮೆ ಸೂಕ್ತ ಸೂಚನೆಯನ್ನು ಬ್ಯಾಂಕ್​ಗಳಿಗೆ ಕೊಡಿಸುವ ಅಗತ್ಯ ವಿದೆ ಎಂಬ ಅಭಿಪ್ರಾಯ ರೈತರ ವಲಯದಲ್ಲಿದೆ. ಸಾಲವನ್ನು 3 ರಿಂದ 5 ವರ್ಷಗಳ ಅವಧಿಗೆ ವಿಸ್ತರಣೆ ಮಾಡಬೇಕು ಹಾಗೂ ಬಡ್ಡಿದರ ಶೇ.2 ಕ್ಕಿಂತ ಹೆಚ್ಚು ಇರಬಾರದು ಎಂಬುದು ರಾಜ್ಯದ ಒತ್ತಾಯವೂ ಆಗಿದೆ.

ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಸಣ್ಣ ಮತ್ತು ಅತಿಸಣ್ಣ ರೈತರ ನೆರವಿಗೆ ಹೋಗಲೇ ಬೇಕಾಗಿದೆ. ಎನ್​ಡಿಆರ್​ಎಫ್ ನಿಯಮಗಳಲ್ಲಿ ಇರುವ ಅವಕಾಶವನ್ನು ಹುಡುಕಿ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಏನು ಮಾಡಲಿದೆ ಎಂಬುದನ್ನು ನೋಡುತ್ತೇವೆ. ಕೇಂದ್ರ ಕೈ ಹಿಡಿಯದಿದ್ದರೆ ಕಷ್ಟವಾಗಲಿದೆ. | ಕೃಷ್ಣ ಬೈರೇಗೌಡ, ಕಂದಾಯ ಸಚಿವ

ಜಿಆರ್ ಉದ್ದೇಶಗಳೇನು?
  • ಮಕ್ಕಳ ಶಿಕ್ಷಣ ಅರ್ಧಕ್ಕೆ ನಿಲ್ಲಬಾರದು
  • ಗ್ರಾಮೀಣ ಭಾಗದಿಂದ ನಗರಕ್ಕೆ ವಲಸೆ ತಪ್ಪಿಸುವುದು
  • ಇರುವ ಹಳ್ಳಿಗಳಲ್ಲಿಯೂ ಜೀವನ ರೂಪಿಸುವುದು
  • ಆರೋಗ್ಯದ ಸಮಸ್ಯೆಗಳಾದರೆ ಔಷಧ ಪಡೆಯುವುದು
  • ಹೆಚ್ಚುವರಿ ಆಹಾರ ಧಾನ್ಯಗಳನ್ನು ಖರೀದಿಸುವುದು

ಮೊದಲ ಬಾರಿ ಬೇಡಿಕೆ: ಅನಪೇಕ್ಷಿತ ಪರಿಹಾರವನ್ನು ನೀಡುವಂತೆ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಕೇಂದ್ರಕ್ಕೆ ಮನವಿ ಮಾಡಿದೆ. ಇದುವರೆಗೂ ಇಂತಹ ಮನವಿಯನ್ನು ಮಾಡಿರಲಿಲ್ಲ. ಎನ್​ಡಿಆರ್​ಎಫ್ ನಿಯಮಗಳನ್ನು ಅಧ್ಯಯನ ಮಾಡಿ ರಾಜ್ಯ ಸರ್ಕಾರಕ್ಕೆ ಕೇಂದ್ರಕ್ಕೆ ಮನವಿ ಮಾಡಿದೆ.

ನರೇಗಾ ಕೂಲಿಯಲ್ಲ: ನರೇಗಾದಲ್ಲಿ ಕೂಲಿ ಕಾರ್ವಿುಕರಿಗೆ 150 ದಿನಗಳ ಅವಕಾಶ ನೀಡಲಾಗುತ್ತಿದೆ. ಅನಪೇಕ್ಷಿತ ಪರಿಹಾರಕ್ಕೂ ನರೇಗಾಕ್ಕೂ ವ್ಯತ್ಯಾಸವಿದೆ. ನರೇಗಾದಲ್ಲಿ ನೋಂದಾಯಿತರಿಗೆ ಮಾತ್ರ ಕೂಲಿ ನೀಡಲಾಗುತ್ತದೆ.

ನಬಾರ್ಡ್ ಕ್ರಮಗಳೇನು?: ಬರ ನಿರ್ವಹಣೆಗಾಗಿ ನಬಾರ್ಡ್ ಕೆಲವು ಕ್ರಮಗಳನ್ನು ಕೈಗೊಂಡಿದೆ. ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಧಿ (ಆರ್​ಐಡಿಎಫ್) ಮೂಲಕ ನೀರಾವರಿ ಸೌಲಭ್ಯ ಹೆಚ್ಚಿಸುವ ಕಡೆ ಗಮನ ಹರಿಸಿದೆ. ಜಂಟಿ ಸಮಿತಿಗಳ ಮೂಲಕ ಕೃಷಿ ಹೊಂಡಗಳ ನಿರ್ವಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮೂಲಕ ಸಮಗ್ರ ಕೃಷಿ ಕುರಿತು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net