ತಂದೆ, ಪತ್ನಿ, ಪುತ್ರನನ್ನು ಕೊಂದು ಸಾವಿಗೆ ಶರಣು: ಪ್ರಾಣ ಬಿಡೋ ಮುನ್ನ ಮನದ ನೋವನ್ನು ಅಕ್ಷರಕ್ಕಿಳಿಸಿದ ಟೆಕ್ಕಿ

SalemTechie
Published on

ಸೇಲಂ: ಐಟಿ ಉದ್ಯೋಗಿಯೊಬ್ಬರು ತನ್ನ ಪತ್ನಿ, ಮಗು ಮತ್ತು ತಂದೆಯನ್ನು ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಮಂಗಳವಾರ (ಆ.22) ರಾತ್ರಿ ನಡೆದಿದೆ.

ಮೃತರನ್ನು ತಿಲಕ್​ (38), ಪತ್ನಿ ಮಹೇಶ್ವರಿ (33), ಪುತ್ರ ಸಾಯಿಕೃಶ್ಚಂತ್ (6) ಮತ್ತು ತಂದೆ ಶಿವರಾಮನ್​ (65) ಎಂದು ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ತಿಲಕ್​​​ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಊಟದಲ್ಲಿ ವಿಷ ಬೆರೆಸಿ, ತಂದೆ, ತಾಯಿ, ಪತ್ನಿ ಹಾಗೂ ಪುತ್ರನಿಗೆ ನೀಡಿದ ತಿಲಕ್​, ನಂತರ ತಾನೂ ಸೇವಿಸಿದ್ದಾನೆ.

ತಿಲಕ್​ ತಂದೆ ಶಿವರಾಮನ್​ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದರು. ತಿಲಕ್​ ಇಂಜಿನಿಯರಿಂಗ್​ ವಿದ್ಯಾಭ್ಯಾಸ ಮಾಡಿ, ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಮಹಾಮಾರಿ ಕರೊನಾ ಪರಿಣಾಮ ತವರಿಗೆ ಮರಳಿದ ತಿಲಕ್​, ಸಾಫ್ಟ್​ವೇರ್​ ಕಂಪನಿ ಒಂದಕ್ಕೆ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ತಿಲಕ್​ ಪುತ್ರ ಸಾಯಿಕೃಶ್ಚಂತ್​ಗೆ ಮಾತು ಬರುತ್ತಿರಲಿಲ್ಲ.

ಸಾಯುವ ಮುನ್ನೆ ಬೆಂಗಳೂರಿನಲ್ಲಿ ವಾಸವಿರುವ ಸಹೋದರನಿಗೆ ತಿಲಕ್,​ ವಾಟ್ಸ್​ಆ್ಯಪ್​ ಮೆಸೇಜ್​ ಮಾಡಿ, ತಾನು ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದ. ಮಗುವಿನ ಆರೋಗ್ಯ ಸಮಸ್ಯೆ ಗುಣಪಡಿಸಲು ಆಗುತ್ತಿಲ್ಲ ಮತ್ತು ಸಾಲದ ಕಾಟ ತಾಳಲಾಗುತ್ತಿಲ್ಲ ಎಂದು ಮಸೇಜ್​ನಲ್ಲಿ ತಿಳಿಸಿದ್ದರು.

ಇದರಿಂದ ಆಘಾತಗೊಂಡ ತಿಲಕ್​ ಸಹೋದರ, ತಕ್ಷಣ ಸಮೀಪದ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದರು. ನಂತರ ಪೊಲೀಸರು ತಿಲಕ್​ ಅವರ ನಿವಾಸಕ್ಕೆ ಹೋದಾಗ ಒಳಗಡೆಯಿಂದ ಬಾಗಿಲು ಹಾಕಲಾಗಿತ್ತು. ಬಳಿಕ ಬಾಗಿಲನ್ನು ಮುರಿದು ಒಳಗಡೆ ನುಗ್ಗಿದಾಗ ಶಿವರಾಮನ್​, ಮಹೇಶ್ವರಿ, ಸಾಯಿಕೃಶ್ಚಂತ್ ಹಾಗೂ ತಿಲಕ್​ ಮೃತಪಟ್ಟಿದ್ದರು.

ತಿಲಕ್​ ಅವರ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಅವರನ್ನು ಕೂಡಲೇ ಪೊಲೀಸರು ಸಮೀಪದ ಆಸ್ಪತ್ರಗೆ ದಾಖಲಿಸಲಾಗಿದೆ. ಉಳಿದ ನಾಲ್ವರ ಮೃತದೇಹಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಸೇಲಂ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮನೆಯಲ್ಲಿ ಡೆತ್​ನೋಟ್​ ಸಹ ಪತ್ತೆಯಾಗಿದೆ. ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. ಮಗುವಿಗೆ ಮಾತನಾಡಲು ಬರದ ಕಾರಣ ತಿಲಕ್ ವೈದ್ಯಕೀಯ ವೆಚ್ಚಕ್ಕಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಅಲ್ಲದೆ, ಸಾಲ ಹಣದಿಂದ ಆನ್ ಲೈನ್ ವ್ಯವಹಾರದಲ್ಲಿ ತೊಡಗಿ ಹಣ ಕಳೆದುಕೊಂಡಿದ್ದರು. ಈ ನೋವಿನಿಂದ ಹೊರಬರಲಾರದೆ ತಿಲಕ್​ ಕುಟುಂಬ ಸಾವಿನ ಹಾದಿ ಹಿಡಿದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net