7 ವಾರಗಳ ಗರಿಷ್ಠ ಮಟ್ಟ ತಲುಪಿದ ಬಂಗಾರ 
ವೆಬ್‌ಡೆಸ್ಕ್

ಮತ್ತೆ ಮಿನುಗಿದ ಬಂಗಾರ! 7 ವಾರಗಳ ಗರಿಷ್ಟ ಮಟ್ಟ ತಲುಪಿದ ಚಿನ್ನ; ಈಗ ಖರೀದಿಸಬೇಕಾ? ಇಲ್ಲ ಮಾರಬೇಕಾ? ತಜ್ಞರ ಸಲಹೆ ಇಲ್ಲಿದೆ! Gold Investment

ಪ್ರಮುಖ ಮುಖ್ಯಾಂಶಗಳು

  • ಚಿನ್ನದ ಬೆಲೆ 7 ವಾರಗಳ ಗರಿಷ್ಠ ಮಟ್ಟ ತಲುಪಿದೆ
  • ಈ ಸಮಯದಲ್ಲಿ ಚಿನ್ನ ಖರೀದಿಸುವುದು ಲಾಭದಾಯಕವೇ ಅಥವಾ ಮಾರಾಟ ಮಾಡುವುದು ಉತ್ತಮವೇ?
  • ಮಾರುಕಟ್ಟೆ ತಜ್ಞರ ಪ್ರಮುಖ ಸಲಹೆ ಏನು?
ನವದೆಹಲಿ: ಅಮೆರಿಕ ಹಾಗೂ ಇರಾನ್​ ನಡುವಿನ ಭಿನ್ನಾಭಿಪ್ರಾಯಗಳು ಶಮನವಾಗುತ್ತಿದ್ದಂತೆ, ಇತ್ತ ಕಚ್ಚಾ ತೈಲದ ಬೆಲೆ ಕೂಡ ಕಡಿಮೆಯಾಗುತ್ತಿದೆ. ಈ ಸಂದರ್ಭದಲ್ಲಿ ಚಿನ್ನದ ಮೇಲೆ ಹೂಡಿಕೆ (Gold Investment) ಮಾಡಿದ್ದ ಜನರ ಮುಖದಲ್ಲಿ ಮಂದಹಾಸ ಮೂಡಿದೆ.
ಕಳೆದ ಕೆಲ ತಿಂಗಳುಗಳಿಂದ ಏರಿಳಿತದಿಂದ ಕೂಡಿದ್ದ ಚಿನ್ನದ ಮಾರುಕಟ್ಟೆ ಈಗ ಸ್ಥಿರತೆಯನ್ನು ಕಾಣುತ್ತಿದ್ದು, ಒಮ್ಮೆ ಏರಿಕೆ, ಇನ್ನೊಮ್ಮೆ ಇಳಿಕೆಯಲ್ಲಿದ್ದ ಚಿನ್ನದ ನಿಜವಾದ ಬೆಲೆ ಈಗ ಜನರಿಗೆ ತಿಳಿಯುತ್ತಿದೆ.

ಚಿನ್ನದ ಮಾರುಕಟ್ಟೆ ಪ್ರತಿದಿನ ಏರಿಕೆ ಕಾಣದಿದ್ದರೂ, ಮದ್ಯದಲ್ಲಿ ಯಾವುದೇ ಬ್ರೇಕ್​ ಬೀಳದೆ ಇರುವುದರಿಂದ ಬಂಗಾರದ ಮೇಲೆ ಹೂಡಿಕೆ ಮಾಡಿದ್ದ ಜನರು ಈಗ ಅಲ್ಪ ನೆಮ್ಮದಿಯನ್ನು ಕಾಣುತ್ತಿದ್ದಾರೆ.

ಇದರ ಪರಿಣಾಮವಾಗಿ, ಚಿನ್ನವು ಕಳೆದ ಏಳು ವಾರಗಳಲ್ಲೇ ಅತ್ಯುನ್ನತ ಮೈಲಿಗಲ್ಲನ್ನು ಮುಟ್ಟಿದ್ದು, ಮಾರುಕಟ್ಟೆ ವರದಿಗಳ ಪ್ರಕಾರ, ಎಂಸಿಎಕ್ಸ್ (MCX) ಗೋಲ್ಡ್ ಪ್ರತಿ 10 ಗ್ರಾಂಗೆ 1,49,296 ರೂಪಾಯಿಗಳಂತೆ ವಹಿವಾಟು ನಡೆಸುತ್ತಿದ್ದು, ಒಟ್ಟಾರೆ 803 ರೂಪಾಯಿಗಳಷ್ಟು ಜಿಗಿತ ಕಂಡಿದೆ ಎಂದು ತಿಳಿದು ಬಂದಿದೆ.

ಚಿನ್ನದ ಬೆಲೆ ಏರಿಕೆಗೆ ಅಸಲಿ ಕಾರಣಗಳೇನು?

ಜಾಗತಿಕ ಉದ್ವಿಗ್ನತೆ ಮತ್ತು ಹಣದುಬ್ಬರ


ವಿಶ್ವದ ಪ್ರಮುಖ ದೇಶಗಳ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ತಣ್ಣಗಾಗುವ ಲಕ್ಷಣಗಳು ಹಾಗೂ ಇಂಧನ ಬೆಲೆಯಲ್ಲಿ ಆಗುತ್ತಿರುವ ಇಳಿಕೆಯು ಹಣದುಬ್ಬರದ ಒತ್ತಡವನ್ನು ಕಡಿಮೆ ಮಾಡಿದೆ ಎಂದು ಹೇಳಲಾಗುತ್ತಿದೆ. ಒಂದು ಸಮಯದಲ್ಲಿ ಬ್ಯಾರೆಲ್​ಗೆ 100 ಡಾಲರ್​ಯಿದ್ದ ಕಚ್ಚಾ ತೈಲ ಈಗ 75 ಡಾಲರ್​ ತಲುಪಿದ್ದು, ಹಣದುಬ್ಬರದ ಪ್ರಮಾಣ ಕಡಿಮೆ ಆಗುತ್ತಿದೆ.

ಸುರಕ್ಷಿತ ಹೂಡಿಕೆ

ಜಾಗತಿಕ ಪರಿಸ್ಥಿತಿಯ ಬಗ್ಗೆ ಸ್ಪಷ್ಟತೆ ಸಿಗುವವರೆಗೆ ಹೂಡಿಕೆದಾರರು ಬಂಗಾರವನ್ನೇ ಅತ್ಯಂತ ಸುರಕ್ಷಿತ ಆಸ್ತಿಯಾಗಿ ನಂಬಿಕೊಂಡಿದ್ದಾರೆ. ಚಿನ್ನದ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿರುವ ಹಿನ್ನಲೆ ಮಾರುಕಟ್ಟೆ ಚೇತರಿಸಿಕೊಳ್ಳುವಂತೆ ಮಾಡಿದೆ ಎಂದು ಹೇಳಲಾಗುತ್ತಿದೆ.

ತಜ್ಞರು ಹೇಳುವುದೇನು? ಮಾರುಕಟ್ಟೆ ಟ್ರೆಂಡ್ ಹೇಗಿದೆ?

ಎನ್ರಿಚ್ ಮನಿ ಸಿಇಒ ಪೊನ್ಮುಡಿ ಆರ್ ಅವರ ಪ್ರಕಾರ, ಚಿನ್ನವು ಅತ್ಯಂತ ಬಲವಾದ ಪ್ರಗತಿಯನ್ನು ಕಾಣುತ್ತಿದೆ. ಎಂಸಿಎಕ್ಸ್‌ನಲ್ಲಿ ಚಿನ್ನವು ಗ್ಯಾಪ್-ಅಪ್ ಮೂಲಕ ತೆರೆದುಕೊಂಡು ಶೇ. 0.62ರಷ್ಟು ಏರಿಕೆ ದಾಖಲಿಸಿದೆ. ಬೆಲೆಯು ರೂ. 1,44,000 ಮಟ್ಟದಿಂದ ಜಿಗಿದು ರೂ. 1,49,494 ತಲುಪಿರುವುದು ಕಳೆದ ಏಳು ವಾರಗಳ ಗರಿಷ್ಠ ಸಾಧನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ರೂ. 1,50,000 ದಿಂದ ರೂ. 1,50,700 ರ ನಡುವೆ ಸಣ್ಣ ಮಟ್ಟದ ತಡೆ ಎದುರಿಸಬಹುದು. ಈ ಗಡಿಯನ್ನು ದಾಟಿ ಮುಂದೆ ಸಾಗಿದರೆ, ಬೆಲೆಯು ನೇರವಾಗಿ ರೂ. 1,52,200 ರಿಂದ ರೂ. 1,52,800 ರವರೆಗೂ ಏರಿಕೆಯಾಗುವ ಸಾಧ್ಯತೆಯಿದೆ ಎನ್ನುವುದು ಅವರ ಲೆಕ್ಕಾಚಾರವಾಗಿದೆ.


ಈಗ ಚಿನ್ನ ಖರೀದಿಸುವುದು ಉತ್ತಮವೇ ಅಥವಾ ಮಾರಾಟ ಒಳ್ಳೆಯದೇ?

ಚಿನ್ನದ ಪ್ರವೃತ್ತಿ ಸಕಾರಾತ್ಮಕವಾಗಿದೆ ಎಂದಮಾತ್ರಕ್ಕೆ ಹೂಡಿಕೆದಾರರು ಒಮ್ಮೆ ಮುನ್ನುಗ್ಗುವುದು ಸರಿಯಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.
ನಿಮ್ಮ ಬಳಿ ಈಗಾಗಲೇ ಬಂಗಾರವಿದ್ದರೆ, ಬೆಲೆಗಳು ರೂ. 1,49,000 ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಮುಂದುವರಿಯುವವರೆಗೆ ನಿಮ್ಮ ಹೂಡಿಕೆ ಸುರಕ್ಷಿತ ಮತ್ತು ಲಾಭದಾಯಕವಾಗಿರುತ್ತದೆ. ಮುಂದಿನ ದಿನಗಳಲ್ಲಿ ಇದು ರೂ. 1,50,000 ದಾಟುವುದರಿಂದ ನೀವು ಮಾರಾಟ ಮಾಡದೇ ಇರುವುದು ಉತ್ತಮ.

ಒಂದು ವೇಳೆ ನಿಮ್ಮ ಬಳಿ ಹಣವಿದೆ, ಆದರೆ ಚಿನ್ನವಿಲ್ಲ ಎನ್ನುವವರು, ಮುಂದಿನ ದಿನಗಳಲ್ಲಿ ಮಾರಿಕಟ್ಟೆ ಏರಿಕೆ ಕಾಣುವ ಲಕ್ಷಣವಿರುವ ಕಾರಣ ಈಗಲೇ ಬಂಗಾರದ ಮೇಲೆ ಹೂಡಿಕೆ ಮಾಡುವುದು ಉತ್ತಮ ನಿರ್ಧಾರವಾಗಿರುತ್ತದೆ.

ಒಟ್ಟಾರೆಯಾಗಿ, ಚಿನ್ನವು ತನ್ನ ಮಂದ ಹಾಗೂ ದುರ್ಬಲ ಹಂತದಿಂದ ಹೊರಬಂದಿದ್ದು, ಭದ್ರವಾದ ಬುನಾದಿಯನ್ನು ಸೃಷ್ಟಿಸುತ್ತಿದೆ. ಮುಂಬರುವ ದಿನಗಳಲ್ಲಿ ಜಾಗತಿಕ ಹಣದುಬ್ಬರ, ಬಡ್ಡಿದರ ಬದಲಾವಣೆಗಳು ಮತ್ತು ಅಂತಾರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳು ಚಿನ್ನದ ಮುಂದಿನ ಹೆಜ್ಜೆಯನ್ನು ನಿರ್ಧರಿಸಲಿವೆ. ಹೀಗಾಗಿ ಹೂಡಿಕೆ ಎನ್ನುವುದು ವೈಯಕ್ತಿಕ ನಿರ್ಧಾರವಾಗಿದ್ದು, ಹಣವನ್ನು ತೊಡಗಿಸುವ ಮುನ್ನ ಎಚ್ಚರಿಕೆ ಇರಲಿ, (ಏಜನ್ಸೀಸ್).