ಕ್ರೀಡೆ

ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡದಿದ್ದರೆ ಏನಂತೆ… ಸೊಕ್ಕಿನ ಹೇಳಿಕೆ ಕೊಟ್ಟ ಪಾಕ್ ವೇಗಿ

ನವದೆಹಲಿ: 2025ರ ಫೆಬ್ರವರಿ-ಮಾರ್ಚ್​ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದು, ಪಾಕಿಸ್ತಾನ ಹಾಗೂ ಭಾರತ ನಡುವಿನ ಕಿತ್ತಾಟಕ್ಕೆ ಹೆಚ್ಚು ಸೌಂಡ್​ ಮಾಡುತ್ತಿದೆ. ಇದಕ್ಕೆ ಪೂರಕ ಎಂಬಂತೆ ಪಾಕಿಸ್ತಾನದ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ನೀಡುತ್ತಿರುವ ಹೇಳಿಕೆ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ಇದೀಗ ಪಾಕಿಸ್ತಾನ ಕ್ರಿಕೆಟ್​ ತಂಡದ ವೇಗಿ ಹಸನ್​ ಅಲಿ ನೀಡಿರುವ ಹೇಳಿಕೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

ಚುಟುಕು ವಿಶ್ವ ಸಮರದಲ್ಲಿ ಗೆದ್ದು ಭಾರೀ ಹುಮ್ಮಸ್ಸಿನಲ್ಲಿರುವ ಟೀಮ್​ ಇಂಡಿಯಾ ನೂತನ ಕೋಚ್​ ಗೌತಮ್​ ಗಂಭೀರ್​ ಮಾರ್ಗದರ್ಶನದಲ್ಲಿ ಚಾಂಪಿಯನ್ಸ್​ ಟ್ರೋಫಿಯನ್ನು ಗೆದ್ದು ತನ್ನ ಗೆಲುವಿನ ಓಟವನ್ನು ವಿಸ್ತರಿಸಲು ಸಜ್ಜಾಗುತ್ತಿದೆ. 2013ರಲ್ಲಿ ಕ್ಯಾಪ್ಟನ್​ ಕೂಲ್​ ಎಂ.ಎಸ್. ಧೋನಿ ನಾಯಕತ್ವದಲ್ಲಿ ಕಡೆಯದಾಗಿ ಟ್ರೋಫಿ ಎತ್ತಿ ಹಿಡಿದ್ದ ಭಾರತ, 2017ರಲ್ಲಿ ಪಾಕಿಸ್ತಾನದ ವಿರುದ್ಧ ಫೈನಲ್​ ಪಂದ್ಯದಲ್ಲಿ ಮುಗ್ಗರಿಸಿತ್ತು.ಈ ಬಾರಿಯ ಟೂರ್ನಿಯಲ್ಲಿ ಗೆದ್ದು ಕಪ್​ಅನ್ನು ವಾಪಸ್​ ತರುವ ಬಗ್ಗೆ ಆಟಗಾರರು ಚಿಂತನೆ ನಡೆಸಿದ್ದು, ಅದಕ್ಕೆ ಪೂರಕವೆಂಬಂತೆ ಯೋಜನೆಗಳನ್ನು ರೂಪಿಸುತ್ತಿದ್ದಾರೆ.

2025ರಲ್ಲಿ ನಡೆಯುವ ಚಾಂಪಿಯನ್ಸ್ಟ್​ ಟ್ರೋಫಿಗೆ ಈ ಬಾರಿ ಹಾಲಿ ಚಾಂಪಿಯನ್ಸ್​ ಪಾಕಿಸ್ತಾನ ಆತಿಥ್ಯ ವಹಿಸುತ್ತಿದ್ದು, ತಂಡಗಳು ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿವೆ. ಆದರೆ, ಈ ಬಾರಿಯ ಟೂರ್ನಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವುದರಿಂದ ಭಾರತ ತಂಡ ಭಾಗವಹಿಸುವುದು ಡೌಟ್​ ಎಂದು ಹೇಳಲಾಗಿದೆ. ಈಗಾಗಲೇ ಬಿಸಿಸಿಐ ಪಾಕಿಸ್ತಾನಕ್ಕೆ ಆಟಗಾರರನ್ನು ಕಳುಹಿಸುವ ಬಗ್ಗೆ ತನ್ನ ನಿರ್ಧಾರವನ್ನು ಸರ್ಕಾರ ಹಾಗೂ ಐಸಿಸಿಗೆ ತಿಳಿಸಿದ್ದು, ಇವರುಗಳ ನಿರ್ಧಾರದ ಮೇಲೆ ಭಾರತದ ಭಾಗವಹಿಸುವಿಕೆ ಆಧರಿಸಿದೆ. ಬಿಸಿಸಿಐ ಭಾರತದ ಪಂದ್ಯಗಳನ್ನು ಹೈಬ್ರಿಡ್​ ಮಾದರಿಯಲ್ಲಿ ನಡೆಸುವಂತೆ ಮನವಿ ಮಾಡಿದೆ. ಐಸಿಸಿ ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.

ಏಕೆಂದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಅನೇಕ ವರ್ಷಗಳಿಂದ ವರ್ಷ ಕಳೆದಂತೆ ಉಲ್ಬಣಗೊಳ್ಳುತ್ತಿದ್ದು, ಎರಡು ದೇಶಗಳು ಐಸಿಸಿ ನಡೆಸುವ ಟೂರ್ನಮೆಂಟ್​ಗಳಲ್ಲಿ ಮುಖಾಮುಖಿಯಾಗುತ್ತಿವೆ. ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದು ಬಹಳ ವರ್ಷಗಳಾಗಿದ್ದು, ಪ್ರತಿ ಬಾರಿಯೂ ಈ ಎರಡು ತಂಡಗಳು ಮುಖಾಮುಖಿಯಾದಾಗ ಯುದ್ಧದಂತೆ ಭಾಸವಾಗುತ್ತದೆ. ಆದರೆ, ಭಾರತದ ಆಟಗಾರರನ್ನು ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್​ ತಂಡದ ಆಟಗಾರ ಹಸನ್​ ಅಲಿ ಹೇಳಿಕೆ ನೀಡಿದ್ದು, ಸಖತ್​ ವೈರಲ್​ ಆಗುತ್ತಿದೆ.

ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಹಸನ್ ಅಲಿ, ಪಿಸಿಬಿ ಅಧ್ಯಕ್ಷರು ಈಗಾಗಲೇ ಹೇಳಿರುವ ಪ್ರಕಾರ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸುತ್ತಿದೆ ಎಂದರೆ ಇಲ್ಲಿಯೇ ನಡೆಯುತ್ತದೆ. ಯಾವುದೇ ಬದಲಾವಣೆ ಇಲ್ಲ ಎಂದರ್ಥ. ಭಾರತ ಆಡದಿದ್ದರೆ ನಾವೇನು ಮಾಡುವುದಕ್ಕೆ ಆಗುವುದಿಲ್ಲ. ನಾವು ಚಾಂಪಿಯನ್ಸ್​​ ಟ್ರೋಫಿಯನ್ನು ಇಲ್ಲಿಯೇ ನಡೆಸುತ್ತೇವೆ. ಒಂದು ವೇಳೆ ಭಾರತ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾಗವಹಿಸದಿದ್ದರೆ ಕ್ರೀಡಾ ಜಗತ್ತೇ ಮುಳಿಗಿದಂತಲ್ಲ. ಭಾರತವನ್ನು ಹೊರತುಪಡಿಸಿ ಇನ್ನೂ ಅನೇಕ ತಂಡಗಳಿವೆ ಎಂದು ಹೇಳಿದ್ದಾರೆ.

ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗುವ ಸಾಧ್ಯತೆ ಇದೆ. ಈಗಾಗಲೇ ಪಾಕಿಸ್ತಾನ ನಷ್ಟದ ಹಾದಿಯಲ್ಲಿದೆ. ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾಗೆ ಇರುವ ಕ್ರೇಜ್​ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಹೋದಲ್ಲಿ ಅದರಿಂದ ಆರ್ಥಿಕವಾಗಿಯೂ ಲಾಭವಾಗಲಿದೆ ಮತ್ತು ಪಾಕ್​ ಮೇಲೆ ಇರುವ ಕಳಂಕವೂ ದೂರವಾಗಲಿದೆ. ಅಲ್ಲದೆ, ಉಭಯ ದೇಶಗಳ ನಡುವಿನ ಸಂಬಂಧವೂ ಕೂಡ ಮತ್ತೆ ಚಿಗುರಲಿದೆ ಎಂಬ ನಿರೀಕ್ಷೆಯಲ್ಲಿದೆ. ಆದರೆ, ಪಿಸಿಬಿ ನಿರೀಕ್ಷೆಗೆ ಬಿಸಿಸಿಐ ಆಘಾತ ನೀಡಿದ್ದು, ಬಹುತೇಕ ಟೀಮ್​ ಇಂಡಿಯಾ ಪಾಕಿಸ್ತಾನ ತೆರಳುವುದು ಅನುಮಾನವಾಗಿದೆ. ಇತ್ತ ಹಸನ್​ ಅಲಿ ಹೇಳಿಕೆ ಕೂಡ ಉರಿಯುವ ಬೆಂಕಿಗೆ ತುಪ್ಪ ಸುರಿದಂತಿದೆ.