ಕ್ರೀಡೆ

ಡೆಲ್ಲಿ ವಿರುದ್ಧ 'ಕ್ಯಾಪ್ಟನ್ ಕೂಲ್' ಆರ್ಭಟ! ಸಿಎಸ್​ಕೆ ತಂಡಕ್ಕೆ ವ್ಯಾಟ್ಸನ್, ಬ್ರೆಟ್ ಲೀ ಮನವಿ…

ಮೋಹನ್​ ಶೆಟ್ಟಿ

ವಿಶಾಖಪಟ್ಟಣ: ನಿನ್ನೆ ವೈಜಾಗ್​ನಲ್ಲಿ ನಡೆದ ಐಪಿಎಲ್​ 13ನೇ ಪಂದ್ಯದಲ್ಲಿ ಸಿಎಸ್​ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಭರ್ಜರಿ ಪೈಪೋಟಿ ಕೊಡುವ ಮೂಲಕ ನೋಡುಗರ ಮನ ತಣಿಸಿತು. ಅದರಲ್ಲೂ ಪ್ರತ್ಯೇಕವಾಗಿ ಚೆನ್ನೈ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ 37 ರನ್​ಗಳ ಸ್ಪೋಟಕ ಬ್ಯಾಟಿಂಗ್​ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳ ದಂಡನ್ನು ಹುಚ್ಚೇದ್ದು ಕುಣಿಯುವಂತೆ ಮಾಡಿತು.

ಡೆಲ್ಲಿ ನೀಡಿದ 192 ರನ್​ಗಳನ್ನು ಬೆನ್ನಟ್ಟಿದ ಸಿಎಸ್​ಕೆ ಮೊದಲ ಹತ್ತು ಓವರ್​ಗಳಲ್ಲೇ 3 ವಿಕೆಟ್​ಗಳನ್ನು ಕಳೆದುಕೊಂಡು ಗೆಲುವಿನಿಂದ ಬಹಳ ದೂರ ಉಳಿಯಿತು. ಸಿಎಸ್​ಕೆ ಗೆಲುವು ಬಹುತೇಕ ಖಚಿತ ಎಂದು ನಿರ್ಧರಿಸಿದ್ದ ಚೆನ್ನೈ ಅಭಿಮಾನಿ ಬಳಗಕ್ಕೆ ಸಮೀರ್​ ರಿಜ್ವಿ ವಿಕೆಟ್​ ಹೋದ ಕೂಡಲೇ ಎಲ್ಲಿಲ್ಲದ ಉತ್ಸಾಹ ಹರಿದಾಡ ತೊಡಗಿತು. ಇದಕ್ಕೆ ಕಾರಣ ಎಂಟನೇ ಕ್ರಮಾಂಕದಲ್ಲಿದ್ದ ಧೋನಿ ಬ್ಯಾಟಿಂಗ್​ಗೆ ಬಂದದ್ದು.

ಕೇವಲ 16 ಎಸೆತಗಳಲ್ಲಿ 4 ಬೌಂಡ್ರಿ ಮತ್ತು 3 ಸಿಕ್ಸರ್​ ಸಿಡಿಸಿದ ಧೋನಿ ಆರ್ಭಟಕ್ಕೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು. 128 ಡೆಸಿಬಲ್​ನಲ್ಲಿ ಕ್ರೀಡಾಂಗಣದ ಪೂರ ಧೋನಿ....ಧೋನಿ ಎಂದು ಕಿರುಚಾಡಿದ ಫ್ಯಾನ್ಸ್​ಗಳ ಕೂಗು ನೋಡುಗರಿಗೆ ರೋಮಾಂಚನ ಮೂಡಿಸಿತು. 42ರ ವಯಸ್ಸಿನಲ್ಲೂ ಹೀಗೂ ಆಡಬಹುದು ಎಂದು ಧೋನಿ ತೋರಿಸಿಕೊಟ್ಟಿದ್ದಾರೆ ಎಂದು ಅನೇಕರು ಅಭಿಪ್ರಾಯಿಸಿದರು.

ಇನ್ನು ಪಂದ್ಯ ವೀಕ್ಷಿಸಿದ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರರಾದ ಬ್ರೆಟ್ ಲೀ ಮತ್ತು ಶೇನ್ ವ್ಯಾಟ್ಸನ್ ಎಂ.ಎಸ್​.ಧೋನಿ ಅವರ ಕ್ಲಾಸಿಕ್‌ ಬ್ಯಾಟಿಂಗ್​ಗೆ ಫಿದಾ ಆಗಿ, ಸಿಎಸ್​ಕೆ ಕ್ಯಾಪ್ಟನ್​ ರುತುರಾಜ್ ಗಾಯಕ್ವಾಡ್​ಗೆ ಮನವಿ ಮಾಡಿದ್ದಾರೆ. ಐಪಿಎಲ್​ನ ಮೊದಲೆರೆಡು ಪಂದ್ಯಗಳಲ್ಲಿ ಅಖಾಡಕ್ಕಿಳಿಯದ ಮಾಹಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಕ್ರೀಸ್​ಗೆ ಇಳಿದರು.

"ಧೋನಿ ಅವರ ಬ್ಯಾಟಿಂಗ್ ವಿಷಯದಲ್ಲಿ ನಾನು ಇನ್ನೂ ಹೆಚ್ಚಿನದನ್ನು ಬಯಸುತ್ತೇನೆ. ಅವರು ದಿ ಬೆಸ್ಟ್​ ಆಗಿದ್ದಾರೆ. ಮಾಸ್ಟರ್​ಮೈಂಡ್​ ಇಂದಿಗೂ ಚುರುಕಾಗಿ, ಕ್ಲಾಸ್​ ಆಟವನ್ನು ತೋರುತ್ತಿದ್ದಾರೆ. ಹೀಗಿದ್ದ ಮೇಲೆ ಅವರಿಂದ ಹೆಚ್ಚಿನ ನಿರೀಕ್ಷೆಯಿದೆ. ದಯವಿಟ್ಟು ಧೋನಿ ಅವರ ಬ್ಯಾಟಿಂಗ್​ ಆರ್ಡರ್ ಬದಲಾಯಿಸಿ, 8ನೇ ಕ್ರಮಾಂಕದಲ್ಲಿ ಎಂ.ಎಸ್ ಬರೋದು ಬೇಡ" ಎಂದಿದ್ದಾರೆ,(ಏಜೆನ್ಸೀಸ್).