ಕಾಶಿಯ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳು ಪೂಜೆ ಮುಂದುವರಿಸಲು ಸುಪ್ರೀಂ ಕೋರ್ಟ್ ಅನುಮತಿ

jnanavapi
Published on

ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ದಕ್ಷಿಣ ಕೊಠಡಿಯಲ್ಲಿ ಪೂಜೆ ಮುಂದುವರಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಪೂಜೆಗೆ ಅನುಮತಿಸಿರುವುದರ ವಿರುದ್ಧ ಮಸೀದಿ ಸಮಿತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ಈ ಸ್ಪಷ್ಟನೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿದ್ದ ಪೀಠದಿಂದ ಈ ಆದೇಶ ಹೊರಬಿದ್ದಿದೆ.

ವಾರಣಾಸಿ ಜಿಲ್ಲಾ ನ್ಯಾಯಾಲಯ ನೀಡಿದ ಅನುಮತಿ ವಿರುದ್ಧದ ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ಈ ಹಿಂದೆ ವಜಾಗೊಳಿಸಿತ್ತು. ನಂತರ ಮಸೀದಿ ಸಮಿತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಜ್ಞಾನವಾಪಿಯಲ್ಲಿ ಪೂಜೆಗೆ ತಡೆ ನೀಡಬೇಕೆಂಬ ಮಸೀದಿ ಸಮಿತಿಯ ಬೇಡಿಕೆಯನ್ನು ನ್ಯಾಯಾಲಯ ಒಪ್ಪಲಿಲ್ಲ. ನೆಲಮಾಳಿಗೆಯಲ್ಲಿನ ಪೂಜೆ ಮಸೀದಿಯಲ್ಲಿನ ಪ್ರಾರ್ಥನೆಗೆ ಅಡ್ಡಿಯಾಗುವುದಿಲ್ಲ ಎಂದು ಸೂಚಿಸಿದ ನ್ಯಾಯಾಲಯ, ಸದ್ಯಕ್ಕೆ ಎರಡೂ ಕಡೆಯವರು ಯಥಾಸ್ಥಿತಿ ಮುಂದುವರಿಸುವಂತೆ ಸೂಚಿಸಿದೆ.

ಹೈಕೋರ್ಟ್​ ಏನು ಹೇಳಿತ್ತು?: ದಕ್ಷಿಣ ಭಾಗದಲ್ಲಿ ಪೂಜೆಗೆ ಅವಕಾಶ ನೀಡಿರುವ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಅಡ್ಡಿಪಡಿಸುವ ಅಗತ್ಯವಿಲ್ಲ ಎಂದು ತಿಳಿಸಿದ ಹೈಕೋರ್ಟ್ ಮೇಲ್ಮನವಿಯನ್ನು ವಜಾಗೊಳಿಸಿತ್ತು. ಎಲ್ಲ ಸಾಕ್ಷಾಧಾರಗಳನ್ನು ಪರಿಶೀಲಿಸಿದ ಬಳಿಕ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದೆ. 1993ರವರೆಗೆ ಕಮಾನುಗಳಲ್ಲಿ ಪೂಜೆ ನಡೆದಿದ್ದಕ್ಕೆ ಸ್ಪಷ್ಟ ದಾಖಲೆಗಳಿವೆ. ಇದನ್ನು ತಡೆದ ಅಂದಿನ ರಾಜ್ಯ ಸರ್ಕಾರದ ಕ್ರಮ ಕಾನೂನು ಬಾಹಿರ. ವ್ಯಾಸರ ಕುಟುಂಬದ ಆರಾಧನೆಯ ಹಕ್ಕನ್ನು ನಿರಾಕರಿಸಲಾಯಿತು. ಇದು ಆರಾಧನಾ ಸ್ವಾತಂತ್ರ್ಯವನ್ನು ರಕ್ಷಿಸುವ ಸಂವಿಧಾನದ 25ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net