More

    ಜೆಡಿಎಸ್‌ನಲ್ಲಿ ಒಡಕು ಮೂಡಿಸಿದ ಒಪ್ಪಂದ!

    ಗಂಗಾವತಿ: ಲೋಕಸಭೆ ಚುನಾವಣೆಗೆ ರಾಜ್ಯಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯಾಗಿದೆ. ಇದಕ್ಕೆ ಸ್ಥಳೀಯ ಜೆಡಿಎಸ್ ಮುಖಂಡರು ವಿರೋಧಿಸಿದ್ದಾರೆ. ಐಎನ್‌ಡಿಐಎ(ಕಾಂಗ್ರೆಸ್) ಒಕ್ಕೂಟ ಬೆಂಬಲಿಸಲು ನಿರ್ಧರಿಸಿದ್ದು, ಪಕ್ಷದ ಒಡಕಿಗೆ ಕಾರಣವಾಗಿದೆ.

    1985ರಿಂದಲೂ ಜನತಾ ಪರಿವಾರ ಅಸ್ತಿತ್ವದಲ್ಲಿದ್ದು, ಮಾಜಿ ಪ್ರಧಾನಿ ದೇವೇಗೌಡರ ನಾಯಕತ್ವದಲ್ಲಿ ಕ್ಷೇತ್ರದಲ್ಲಿ ಈ ಹಿಂದೆ ಗೌಳಿಮಹಾದೇವಪ್ಪ ಶಾಸಕರಾಗಿದ್ದರು. ಜೆಡಿಎಸ್ ಹೊಸ ರೂಪ ಪಡೆದ ಮೇಲೆ 2004ರಲ್ಲಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಖಾತೆ ತೆರೆದಿದ್ದು, ಇಕ್ಬಾಲ್ ಅನ್ಸಾರಿ. ಅಲ್ಲದೆ ಮೊದಲ ಬಾರಿಗೆ ಶಾಸಕರಾಗಿ ಕ್ಯಾಬಿನೆಟ್ ದರ್ಜೆ ಅಧಿಕಾರ ಪಡೆದ ಜಿಲ್ಲೆಯ ಮೊದಲ ಸಚಿವರಾದರು. 2013ರಲ್ಲಿ ಮತ್ತೊಮ್ಮೆ ಜೆಡಿಎಸ್‌ನಿಂದ ಆಯ್ಕೆಯಾಗಿ ಮೂಲಕ ಗಮನಸೆಳೆದಿದ್ದರು.

    ಜೆಡಿಎಸ್‌ನಿಂದ ಅಧಿಕಾರ ಪಡೆದಿದ್ದ ಇಕ್ಬಾಲ್ ಅನ್ಸಾರಿ ಎರಡು ಬಾರಿ ಪಕ್ಷ ತೊರೆದರೂ, ಕಾರ್ಯಕರ್ತರು ಮಾತ್ರ ಹೊರಬಂದಿರಲಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್‌ಗೆ ತನ್ನದೇ ಆದ ವರ್ಚಸ್ಸಿದ್ದರೂ, ನಾಯಕತ್ವದ ಕೊರತೆಯಿದೆ. ಚುನಾವಣೆಯಲ್ಲಿ ಪಕ್ಷ ಗೆಲ್ಲದೇ ಇರಬಹುದು, ಆದರೆ ಕಾಂಗ್ರೆಸ್ ಸೋಲಿಗೆ ಕಾರಣವಾಗಿದಂತೂ ಸತ್ಯ. 2019ರಲ್ಲಿ ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲಿಸಿದ್ದ ಜೆಡಿಎಸ್, ಪ್ರಸಕ್ತ ಚುನಾವಣೆಯಲ್ಲೂ ಅದೇ ಹಾದಿ ತುಳಿಯಲು ಪಕ್ಷದ ಹಳೇ ಕಾರ್ಯಕರ್ತರು ನಿರ್ಧರಿಸಿದ್ದಾರೆ.
    ಗಮನಸೆಳದಿದ್ದ ಕ್ಷೇತ್ರ: ಜನತಾ ಪರಿವಾರಕ್ಕೆ 80ರದಶಕದಿಂದಲೂ ನಂಟಿದ್ದು, 1991ರಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಸಿಎಂ ಸಿದ್ದರಾಮಯ್ಯ 2.29ಲಕ್ಷ ಮತ ಪಡೆದು ಪರಾಭವಗೊಂಡಿದ್ದರು.2009ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಇಕ್ಬಾಲ್ ಅನ್ಸಾರಿ 1.80ಲಕ್ಷ ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

    ಬಸವರಾಜ ರಾಯರೆಡ್ಡಿ, ಕರಡಿ ಸಂಗಣ್ಣ, ಅಗಡಿ ವಿರೂಪಾಕ್ಷಪ್ಪ, ಇಕ್ಬಾಲ್ ಅನ್ಸಾರಿ ಸೇರಿ ಜಿಲ್ಲೆಯ ಹಲವು ನಾಯಕರಿಗೆ ವರ್ಚಸ್ಸು ನೀಡಿದ್ದು ಜೆಡಿಎಸ್. ಕಾಂಗ್ರೆಸ್ಸಿನ ಸಂಪ್ರದಾಯಿಕ ಮತಗಳನ್ನೇ ಪಡೆಯುವ ಜೆಡಿಎಸ್ ಪಕ್ಷದ ಹಳೇ ಕಾರ್ಯಕರ್ತರಿಗೆ ಬಿಜೆಪಿ ಸಖ್ಯ ಇಷ್ಟವಿಲ್ಲ. ಮಾಜಿ ಸಚಿವ ಸಿ.ಎಂ. ಇಬ್ರಾಹಿಂರೊಂದಿಗೆ ಗುರುತಿಸಿಕೊಂಡ ವಿಧಾನಸಭೆ ಕ್ಷೇತ್ರದ ಹಳೆಯ ಮುಖಂಡರು ಮತ್ತು ಕಾರ್ಯಕರ್ತರು ಸದ್ಯಕ್ಕಂತೂ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಿ.ಎಂ.ಇಬ್ರಾಹಿಂ ಅಥವಾ ಮಾಜಿ ಸಿಎಂ ಕುಮಾರಸ್ವಾಮಿ ಒಪ್ಪಿಕೊಳ್ಳಬೇಕೆ ಎಂಬ ಗೊಂದಲದಲ್ಲಿ ಕಾರ್ಯಕತರಿದ್ದಾರೆ.

    ಎಲ್ಲರೂ ಹೊಸಬರೇ: ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಒಪ್ಪದ ಹಲವು ವರ್ಷಗಳಿಂದ ದುಡಿದ ನಿಷ್ಠಾವಂತ ಕಾರ್ಯಕರ್ತರು ತಟಸ್ಥರಾಗಿದ್ದಾರೆ. ಇತ್ತೀಚೆಗೆ ಪಕ್ಷಕ್ಕೆ ಬಂದ ಹೊಸಬರದ್ದೇ ಕಾರುಬಾರು. 2004ರಿಂದ ಕ್ಷೇತ್ರದಲ್ಲಿ ಹೈಕಮಾಂಡ್ ಆಗಿದ್ದ ಪಾಡಗುತ್ತಿ ಅಖ್ತರ್‌ಸಾಬ್ ಮೌನಕ್ಕೆ ಶರಣಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ೋಷಣೆಯಾದರೂ ಪಕ್ಷದ ಹಳೇ ಕಾರ್ಯಕರ್ತರು ಇದುವರಿಗೂ ಸಭೆಯಲ್ಲಿ ಪಾಲ್ಗೊಂಡಿಲ್ಲ, ಅಭ್ಯರ್ಥಿ ಭೇಟಿಯಾಗಿಲ್ಲ. ಮುಖಂಡರನ್ನು ಭೇಟಿಯಾಗುವ ಸೌಜನ್ಯ ಬಿಜೆಪಿ ಮುಖಂಡರಿಗಿಲ್ಲ. ಇದೇ ಕಾರಣಕ್ಕೆ ಬಿಜೆಪಿಯೊಂದಿಗೆ ಜೆಡಿಎಸ್ ಕಾರ್ಯಕರ್ತರು ಮುನಿಸಿಕೊಂಡಿದ್ದು, ಐಎನ್‌ಡಿಐಎ ಒಕ್ಕೂಟ ಬೆಂಬಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಪಕ್ಷ ಇಬ್ಭಾಗವಾಗುವ ಎಲ್ಲ ಸೂಚನೆಗಳಿದ್ದು, ಉಳಿಸಿಕೊಳ್ಳಲು ಹೈಕಮಾಂಡ್ ಕ್ಷೇತ್ರದತ್ತ ಗಮನಹರಿಸಬೇಕಿದೆ.

    ಹಲವರಿಗೆ ಅಧಿಕಾರ ನೀಡಿದ್ದ ಜೆಡಿಎಸ್…

    20ರದಶಕದಲ್ಲಿ ಹೊಸ ಮುಖಗಳಿಗೆ ಜೆಡಿಎಸ್ ಉನ್ನತ ಅಧಿಕಾರ ನೀಡಿದ್ದು, ನಗರಸಭೆ, ತಾಪಂ ಮತ್ತು ಎಪಿಎಂಸಿಯಲ್ಲೂ ಪಾರುಪತ್ಯವಿತ್ತು. ಅಂದು ಅಧಿಕಾರ ಪಡೆದಿದ್ದ ಬಹುತೇಕ ನಾಯಕರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದು, ಸರ್ಕಾರದ ನಾಮನಿರ್ದೇಶನ ಸೇರಿ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯಿಂದ ಮಾತ್ರ ಜೆಡಿಎಸ್ ಎಂಬ ಮಾತು ಸಾರ್ವಜನಿಕ ವಲಯದಲ್ಲಿದ್ದು, ಅದರಂತೆ ಪಕ್ಷ ಸಂಘಟಿಸಿದ್ದರು. ರಾಜಕೀಯ ಅಸ್ತಿತ್ವಕ್ಕಾಗಿ ಸಚಿವ ಶಿವರಾಜ ತಂಗಡಗಿ ಸಹೋದರ ವೆಂಕಟೇಶ ತಂಗಡಗಿ ಕೂಡಾ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿದ್ದರು. ಜೆಡಿಎಸ್, ಬಿಜೆಪಿ ಹೊಂದಾಣಿಕೆಯಿಂದ ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರಿದ್ದು, ವೋಟ್ ಬ್ಯಾಂಕ್ ಕಳೆದುಕೊಳ್ಳಲಿದೆ.

    ರಾಜ್ಯಮಟ್ಟದಲ್ಲಿ ಒಪ್ಪಂದವಾದಂತೆ ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಸ್ಥಳೀಯ ಮಟ್ಟದಲ್ಲಿ ಒಪ್ಪಿಲ್ಲ. ಕಾರ್ಯಕರ್ತರೊಂದಿಗೆ ಸಭೆ ಆಯೋಜಿಸಿ ಮುಂದಿನ ನಿರ್ಧಾರಕ್ಕೆ ಬರಲಾಗುವುದು. ಐಎನ್‌ಡಿಐಎ (ಕಾಂಗ್ರೆಸ್) ಒಕ್ಕೂಟ ಬೆಂಬಲಿಸಲು ನಿರ್ಧರಿದ್ದೇವೆ.
    ಶೇಖ್ ನಬಿಸಾಬ್ಜೆ
    ಡಿಎಸ್ ತಾಲೂಕು ಘಟಕದ ಮಾಜಿ ಅಧ್ಯಕ್ಷ

    ಜೆಡಿಎಸ್ ವರಿಷ್ಠ ಹಾಗೂ ಮಾಜಿ ಸಿಎಂ ಕುಮಾರಣ್ಣ ಸೂಚನೆಯಂತೆ ಬಿಜೆಪಿ ಬೆಂಬಲಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಶ್ರಮಿಸಲಾಗುವುದು. ಕ್ಷೇತ್ರದ ಜೆಡಿಎಸ್ ಎಲ್ಲ ಕಾರ್ಯಕರ್ತರು ಬಿಜೆಪಿ ಬೆಂಬಲ ಒಪ್ಪಿದ್ದಾರೆ.
    ರಾಜುನಾಯಕ
    ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts