ಕ್ರೀಡೆ

WPL 2024: ಸ್ಮೃತಿ ಮಂದಾನ ತಂಡಕ್ಕೆ ವಿಡಿಯೋ ಕಾಲ್​ ಮಾಡಿ ಅಭಿನಂದನೆ ತಿಳಿಸಿದ ರನ್ ಮಷಿನ್​!

ನವದೆಹಲಿ: ವುಮೆನ್ಸ್​ ಪ್ರೀಮಿಯರ್ ಲೀಗ್ (WPL) 2024ರಲ್ಲಿ ಸೃತಿ ಮಂದಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂತಿಮ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿತು. ಆರ್​ಸಿಬಿ ವನಿತೆಯರ ಗೆಲುವಿಗೆ ಅಭಿಮಾನಿಗಳಲ್ಲಿ ಹರ್ಷೋದ್ಘಾರ ಮೂಡಿದ್ದು, ಐತಿಹಾಸಕ ಗೆಲುವಿಗೆ ಗಣ್ಯರು ಟ್ವೀಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ.

ಆರ್​ಸಿಬಿ ಗೆಲುವು ದಾಖಲಿಸುತ್ತಿದ್ದಂತೆ ಎಲ್ಲೆಲ್ಲೂ ಸಂಭ್ರಮ ಜೋರಾಗಿದ್ದು, ಅಭಿಮಾನಿಗಳು ವಿಶೇಷ ರೀತಿಯಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್​ ಮಣಿಸಿದ ಆರ್​ಸಿಬಿ ತಂಡದ ನಾಯಕಿ ಸೃತಿ ಮಂದಾನಗೆ ವಿಡಿಯೋ ಕಾಲ್ ಮಾಡಿದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಆರ್​ಸಿಬಿ ಪುರುಷರ ಟೀಮ್​ನ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಸೃತಿ ಹಾಗೂ ತಂಡಕ್ಕೆ ವಿಶೇಷ ಅಭಿನಂದನೆ ತಿಳಿಸಿದರು.

ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವನಿತೆಯರ ತಂಡಕ್ಕೆ ದಿಗ್ಗಜರು ಕೂಡ ಅಭಿನಂದನೆ ತಿಳಿಸಿದ್ದು, ಮುಂಬರುವ ಐಪಿಎಲ್​ 2024ರಲ್ಲಿ ಪುರುಷರ ತಂಡವು ಇದೇ ರೀತಿ ಟ್ರೋಫಿ ಗೆಲ್ಲಲಿದೆ ಎಂಬ ಭರವಸೆ ವ್ಯಕ್ತವಾಗುತ್ತಿದೆ.

ಡೆಲ್ಲಿ ಕ್ಯಾಪಿಟಲ್ಸ್​ ನೀಡಿದ 114 ರನ್​​ ಗುರಿ ಬೆನ್ನತ್ತಿದ ಆರ್​ಸಿಬಿ, 19.3 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 115 ರನ್​ ಗಳಿಸುವ ಮೂಲಕ 8 ವಿಕೆಟ್​ಗಳ ಸುಲಭ ಗೆಲುವು ದಾಖಲಿಸಿತು. ಈ ಮೂಲಕ ವ್ಯುಮೆನ್ಸ್​ ಐಪಿಎಲ್​ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿತು. ಆರ್​ಸಿಬಿ ಪರ ನಾಯಕಿ ಸ್ಮೃತಿ ಮಂದನಾ (31), ಸೋಫಿ ಡಿವೈನ್​ (32), ಎಲ್ಲಿಸ್​ ಪೆರ್ರಿ (35 ಅಜೇಯ) ಹಾಗೂ ರಿಚಾ ಘೋಷ್​ (17 ಅಜೇಯ) ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ನಾಲ್ಕು ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಈ ನಾಲ್ವರು ಆಟಗಾರರು ಡೆಲ್ಲಿ ಬೌಲರ್​ಗಳ ಬೆವರಿಳಿಸಿದರು.

ಡೆಲ್ಲಿ ಕ್ಯಾಪಿಟಲ್​ ಪರ ಶಿಖಾ ಪಾಂಡೆ ಮತ್ತು ಮಿನ್ನು ಮನಿ ತಲಾ ಒಂದು ವಿಕೆಟ್​ ಪಡೆದನ್ನು ಬಿಟ್ಟರೆ ಉಳಿದ ಯಾವೊಬ್ಬ ಬೌಲರ್​ ಕೂಡ ಆರ್​ಸಿಬಿ ಬ್ಯಾಟ್ಸ್​ವುಮೆನ್​ಗಳಿಗೆ ಸವಾಲಾಗಲೇ ಇಲ್ಲ.

ಇದಕ್ಕೂ ಮುನ್ನ ಟಾಸ್​​ ಗೆದ್ದು ಬ್ಯಾಟಿಂಗ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ 18.3 ಓವರ್​ಗಳಲ್ಲಿ 113 ರನನ್​ಗಳಿಗೆ ಆಲೌಟ್​ ಆಯಿತು. ತಂಡದ ಪರ ಶಫಾಲಿ ವರ್ಮಾ (27 ಎಸೆತ 44 ರನ್​, 2 ಬೌಂಡರಿ, 3 ಸಿಕ್ಸರ್​) ಹಾಗೂ ನಾಯಕಿ ಲ್ಯಾನಿಂಗ್​ (23) ಉತ್ತಮ ಬ್ಯಾಟಿಂಗ್​ ಪ್ರದರ್ಶಿಸಿದರು. ಉಳಿದಂತೆ ಯಾವೊಬ್ಬ ಬ್ಯಾಟ್ಸ್​ವುಮೆನ್​ ಕೂಡ ಆರ್​ಸಿಬಿ ಬೌಲರ್​ಗಳನ್ನು ಎದುರಿಸುವಲ್ಲಿ ವಿಫಲವಾದರು.

ಆರ್​ಸಿಬಿ ಪರ ಮಿಂಚಿನ ಬೌಲಿಂಗ್​ ದಾಳಿ ಮಾಡಿದ ಶ್ರೇಯಾಂಕ ಪಾಟೀಲ್​ 4 ವಿಕೆಟ್​ ಬಳಿಸಿದರೆ, ಮೊಲಿನೆಕ್ಸ್ 3 ವಿಕೆಟ್​ ಹಾಗೂ ಆಶಾ ಶೋಭನಾ 2 ವಿಕೆಟ್​ ಪಡೆದರು. ಆರ್​ಸಿಬಿ ಬೌಲರ್​ಗಳ ದಾಳಿಗೆ ನಲುಗಿದ ಡೆಲ್ಲಿ ಕ್ಯಾಪಿಟಲ್ಸ್​ ತರಗೆಲೆಗಳಂತೆ ವಿಕೆಟ್​ ಒಪ್ಪಿಸುವ ಮೂಲಕ 113 ರನ್​ಗಳ ಸಾಧಾರಣ ಮೊತ್ತಕ್ಕೆ ಕುಸಿದರು.