ಕ್ರೀಡೆ

ಮತ್ತೊಂದು ದಾಖಲೆಯ ಸಮೀಪದಲ್ಲಿದ್ದಾರೆ ರನ್​ ಮೆಷಿನ್​ ವಿರಾಟ್​ ಕೊಹ್ಲಿ: ಕೇವಲ 21 ರನ್​ ಸಾಕು! Virat Kohli

Virat Kohli : ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ನವೆಂಬರ್ 22 ರಿಂದ ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯ ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈಗಾಗಲೇ ಟೀಮ್​ ಇಂಡಿಯಾ ಆಟಗಾರರು ತಮ್ಮ ತರಬೇತಿ ಆರಂಭಿಸಿದ್ದಾರೆ.

ದಾಖಲೆಗಳ ಸರದಾರ ಮತ್ತು ರನ್​ ಮೆಷಿನ್​ ವಿರಾಟ್ ಕೊಹ್ಲಿ ಬಗ್ಗೆ ನಾವಿಲ್ಲಿ ವಿಶೇಷವಾಗಿ ಹೇಳಲೇಬೇಕು. ಪರ್ತ್ ಮೈದಾನದಲ್ಲಿ ಅವರ ದಾಖಲೆ ಅತ್ಯುತ್ತಮವಾಗಿದೆ. ಆದರೂ, ಪ್ರಸ್ತುತ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್​ನಲ್ಲಿ ಫಾರ್ಮ್​ನಲ್ಲಿ ಎಡವಿರುವುದು ಗೊತ್ತೇ ಇದೆ. ಇದು ತಂಡಕ್ಕೆ ಚಿಂತಿಸುವ ವಿಷಯವಾದರೂ ಆಸಿಸ್​ ನೆಲದಲ್ಲಿ ಮತ್ತೆ ಪುಟಿದೇಳಲಿದ್ದಾರೆ ಎಂದು ಕ್ರಿಕೆಟ್​ ವಿಶ್ಲೇಷಕರು ಈಗಾಗಲೇ ಭವಿಷ್ಯ ನುಡಿದಿದ್ದಾರೆ.

ರನ್​ಗಳ ಸುನಾಮಿಯೊಂದಿಗೆ ಈಗಾಗಲೇ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿರುವ ವಿರಾಟ್ ಕೊಹ್ಲಿ, ಮತ್ತೊಂದು ದಾಖಲೆಗಾಗಿ ಕಾಯುತ್ತಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕೇವಲ 21 ರನ್ ಗಳಿಸಿದರೆ, ಈ ಟ್ರೋಫಿಯಲ್ಲಿ 2,000 ರನ್‌ಗಳ ಮೈಲುಗಲ್ಲನ್ನು ತಲುಪಿದ ಏಳನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ ಕೊಹ್ಲಿ.

ಬಾರ್ಡರ್ ಗವಾಸ್ಕರ್ ಟ್ರೋಫಿಗಳಲ್ಲಿ ಇದುವರೆಗೂ 24 ಟೆಸ್ಟ್‌ಗಳಲ್ಲಿ 42 ಇನ್ನಿಂಗ್ಸ್‌ ಆಡಿರುವ ಕೊಹ್ಲಿ 48.26 ಸರಾಸರಿಯಲ್ಲಿ 1979 ರನ್ ಗಳಿಸಿದ್ದಾರೆ. ಇದರಲ್ಲಿ 8 ಶತಕ ಹಾಗೂ 5 ಅರ್ಧ ಶತಕಗಳಿವೆ. ಕೊಹ್ಲಿಗಿಂತ ಮೊದಲು ಕೇವಲ ನಾಲ್ವರು ಭಾರತೀಯ ಕ್ರಿಕೆಟಿಗರು ಮಾತ್ರ ಈ ಸಾಧನೆ ಮಾಡಿದ್ದಾರೆ.

3,262 ರನ್​ಗಳೊಂದಿಗೆ ಕ್ರಿಕೆಟ್​ ದಂತಕತೆ ಸಚಿನ್​ ಮೊದಲ ಸ್ಥಾನದಲ್ಲಿದ್ದರೆ, ಆಸಿಸ್​ ದಿಗ್ಗಜ ಆಟಗಾರ ರಿಕ್ಕಿ ಪಾಂಟಿಂಗ್​ 2555 ರನ್​ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಮೂರನೇ ಸ್ಥಾನದಲ್ಲಿ ವಿವಿಎಸ್​ ಲಕ್ಷ್ಮಣ್​ (2434 ರನ್​), ನಾಲ್ಕನೇ ಸ್ಥಾನದಲ್ಲಿ ರಾಹುಲ್​ ದ್ರಾವಿಡ್​ (2143 ರನ್​) ಐದನೇ ಸ್ಥಾನದಲ್ಲಿ ಮೈಕಲ್​ ಕ್ಲಾರ್ಕ್​ (2049 ರನ್​) ಆರನೇ ಸ್ಥಾನದಲ್ಲಿ ಚೇತೇಶ್ವರ ಪೂಜಾರಾ (2033 ರನ್​) ಹಾಗೂ ಏಳನೇ ಸ್ಥಾನದಲ್ಲಿ 1979 ರನ್​​ಗಳೊಂದಿಗೆ ಕೊಹ್ಲಿ ಇದಾರೆ.

ಶುಕ್ರವಾರದಿಂದ ಆರಂಭವಾಗುವ ಟ್ರೋಫಿಯಲ್ಲಿ ಕೊಹ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದರೆ ಎಲ್ಲರನ್ನು ಹಿಂದಿಕ್ಕಿ ನಂಬರ್​ 1 ಸ್ಥಾನಕ್ಕೇರುವ ಅವಕಾಶವಿದೆ. ಹೀಗಾಗಿ ಎಲ್ಲರ ಕಣ್ಣು ಇದೀಗ ಕೊಹ್ಲಿಯ ಆಟದ ಮೇಲಿದೆ. ಅಂದಹಾಗೆ ವಿರಾಟ್ ಕೊಹ್ಲಿ ಆಸೀಸ್ ನೆಲದಲ್ಲಿ ಟೆಸ್ಟ್‌ನಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಇದುವರೆಗೆ 13 ಪಂದ್ಯಗಳನ್ನು ಆಡಿರುವ ವಿರಾಟ್ 54.08 ಸರಾಸರಿಯಲ್ಲಿ 1352 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕಗಳು ಸೇರಿವೆ. ಟೀಮ್​ ಇಂಡಿಯಾ ನಾಯಕನಾಗಿ 2018-19ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡಕ್ಕೆ ಸರಣಿ ಗೆಲ್ಲಿಸಿಕೊಟ್ಟ ಹೆಗ್ಗಳಿಕೆ ಕೊಹ್ಲಿ ಅವರದು. ಹೀಗಾಗಿ ಕೊಹ್ಲಿ ಅಂದರೆ, ಆಸಿಸ್​ ಕ್ರಿಕೆಟಿಗರು ಹೆದರುತ್ತಾರೆ. (ಏಜೆನ್ಸೀಸ್​)