ಬೆಂಗಳೂರು: ಸಾಮಾನ್ಯವಾಗಿ ಕ್ರಿಕೆಟ್ನಲ್ಲಿ ಪಂದ್ಯ ಮುಗಿದ ನಂತರ ಎರಡೂ ತಂಡದ ಆಟಗಾರರು ಹ್ಯಾಂಡ್ ಶೇಕ್ ಮಾಡುವುದು ಸಹಜ. ಅದೇ ರೀತಿ ಮೇ 18ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವಿನ ನಿರ್ಣಾಯಕ ಪಂದ್ಯದ ನಂತರ ಉಭಯ ತಂಡಗಳ ಆಟಗಾರರು ಹಸ್ತಲಾಘವ ಮಾಡಿದರು. ಆದರೆ ಈ ವೇಳೆ ಮೈದಾನದ ಒಳಗೆ ಬಂದ ಕ್ರಿಕೆಟ್ ದಂತಕಥೆ ಎಂ.ಎಸ್. ಧೋನಿ ಆರ್‌ಸಿಬಿ ಆಟಗಾರರನ್ನು ಭೇಟಿಯಾಗದೆ ಅಲ್ಲಿಂದ ಡ್ರೆಸ್ಸಿಂಗ್ ರೂಮ್‌ಗೆ ನಿರ್ಗಮಿಸಿದರು. ಸಿಎಸ್‌ಕೆ ತಂಡದ ಸಾಲಿನಲ್ಲಿ ಎಲ್ಲರಿಗಿಂತ ಮುಂದೆ ನಿಂತಿದ್ದ ಮಹಿ ಆರ್‌ಸಿಬಿ ಆಟಗಾರರು ಬರುವ ಮುನ್ನವೇ ನಿರ್ಗಮಿಸಿದರು. ಇದಾದ ಸ್ವಲ್ಪ ಸಮಯದ ನಂತರ ವಿರಾಟ್ ಕೊಹ್ಲಿ ಸಿಎಸ್‌ಕೆ ಡ್ರೆಸ್ಸಿಂಗ್ ರೂಮ್‌ಗೆ ತೆರಳಿ ಮಹಿಯನ್ನು ಭೇಟಿಯಾದರು. ಧೋನಿ ಅವರು ಮಧ್ಯದಲ್ಲಿ ನಿರ್ಗಮಿಸಿದ್ದು ದೊಡ್ಡ ವಿವಾದದ ಸ್ವರೂಪ ಪಡೆದುಕೊಂಡಿದೆ.
ಬೆಂಗಳೂರು ತಂಡ ಚೆನ್ನೈ ತಂಡವನ್ನು ಹೀನಾಯವಾಗಿ ಸೋಲಿಸಿದ್ದಕ್ಕೆ ಧೋನಿ ಸಿಟ್ಟಿಗೆದ್ದಿದ್ದಾರೆ ಮತ್ತು ಅಸಮಾಧಾನಗೊಂಡಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಎದುರಾಳಿ ತಂಡದ ಆಟಗಾರರನ್ನು ಭೇಟಿ ಮಾಡದೇ ಇರುವುದು ಸಭ್ಯತೆ ಅಲ್ಲ ಎಂದು ಕೆಲವರು ಹೇಳಿದ್ದಾರೆ. ಆದರೆ ಇದೀಗ ಪಂದ್ಯದ ಸಮಯದ ಮತ್ತೊಂದು ವಿಡಿಯೋ ಹೊರಬಿದ್ದಿದೆ. ಇದನ್ನು ನೋಡಿದರೆ ತಪ್ಪು ಯಾರದ್ದು ಎಂದು ಸುಲಭವಾಗಿ ಗೊತ್ತಾಗುತ್ತದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಧೋನಿ ಸಿಎಸ್‌ಕೆ ತಂಡದ ಸಾಲಿನಲ್ಲಿ ಮುಂದೆ ನಿಂತಿದ್ದಾರೆ. ಆರ್‌ಸಿಬಿ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡಲು ಧೋನಿ ಕಾಯುತ್ತಿದ್ದರು. ಆದರೆ, ಆರ್‌ಸಿಬಿ ಆಟಗಾರರು ಸಂಭ್ರಮಾಚರಣೆಯಲ್ಲಿ ಮುಳುಗಿದ್ದರು. ಸ್ವಲ್ಪ ಹೊತ್ತು ಕಾದರು ಅವರು ಬರದಿದ್ದಾಗ ಧೋನಿ ಅಲ್ಲಿಂದ ನಿರ್ಗಮಿಸಿದರು.
ಇನ್ನೂ ಪ್ಲೇಆಫ್‌ಗೆ ಅರ್ಹತೆ ಪಡೆದ ಖುಷಿಯಲ್ಲಿ ಆರ್‌ಸಿಬಿ ಆಟಗಾರರು ಪಿಚ್ ತೊರೆದಿರಲಿಲ್ಲ. ಚೆನ್ನೈ ಆಟಗಾರರು ಅವರಿಗಾಗಿ ಕಾಯುತ್ತಿದ್ದರೂ ಸಂಭ್ರಮಾಚರಣೆಯಲ್ಲಿ ಮುಳುಗಿದ್ದರು. ಇದರಿಂದ ಧೋನಿ ಬೇಸರಗೊಂಡು ಅಲ್ಲಿಂದ ನಿರ್ಗಮಿಸಿದರು. ಆರ್‌ಸಿಬಿ ಕೋಚಿಂಗ್ ಸಿಬ್ಬಂದಿಯನ್ನು ಮಧ್ಯದಲ್ಲಿ ಭೇಟಿಯಾಗಿ ಕೈಕುಲುಕಿದರು. ಇದನ್ನು ನೋಡಿದ ನೆಟ್ಟಿಗರು ಧೋನಿ ತಪ್ಪೇನೂ ಇಲ್ಲ ಎಂದಿದ್ದಾರೆ.
ಧೋನಿ ಅವರು ಆರ್‌ಸಿಬಿಯನ್ನು ಅವಮಾನಿಸುತ್ತಿಲ್ಲ, ಬೆಂಗಳೂರು ಆಟಗಾರರೇ ಧೋನಿ ಅವರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಅಭಿಮಾನಿಗಳು ವಾದಿಸುತ್ತಿದ್ದಾರೆ. ಧೋನಿ ಸ್ಥಾನದಲ್ಲಿ ಯಾರೇ ಇದ್ದಿದ್ದರೂ ಅದನ್ನೇ ಮಾಡುತ್ತಿದ್ದರು ಎಂದಿದ್ದಾರೆ. ಆದರೆ, ಇನ್ನು ಕೆಲವರು ಧೋನಿ ತುಂಬಾ ಹೊತ್ತೇನು ಕಾದಿಲ್ಲ, ಇನ್ನು ಸ್ವಲ್ಪ ಹೊತ್ತು ಕಾದು ಆರ್‌ಸಿಬಿ ಆಟಗಾರರನ್ನು ಅಭಿನಂದಿಸಿ, ದೊಡ್ಡತನ ಮೆರೆಯಬೇಕಿತ್ತು ಎಂದಿದ್ದಾರೆ. ಒಂದು ವೇಳೆ ಧೋನಿ ಮಾಡಿದ್ದನ್ನು ಕೊಹ್ಲಿ ಮಾಡಿದ್ದರೆ ಇಷ್ಟೊತ್ತಿಗೆ ಹಿರಿಯ ಕ್ರಿಕೆಟಿಗರೆಲ್ಲ ಬಾಯಿ ಬಡಿದುಕೊಳ್ಳುತ್ತಿದ್ದರು ಎಂದು ಆರ್‌ಸಿಬಿ ಅಭಿಮಾನಿಗಳು ಕಿಡಿಕಾರಿದ್ದಾರೆ. ಎಲ್ಲದಕ್ಕೂ ಆರ್‌ಸಿಬಿಯನ್ನು ದೂಷಿಸುವುದು ಸರಿಯಲ್ಲ ಎಂದಿದ್ದಾರೆ.
ಅಂದಹಾಗೆ ಈ ವೈರಲ್ ವಿಡಿಯೋ ನೋಡಿ ನಿಮಗೆ ಯಾರದು ತಪ್ಪು ಅನಿಸಿತು ಎಂದು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)