More

  ಆರ್​ಸಿಬಿ ಆಟಗಾರರಿಗೆ ಎಂ.ಎಸ್​. ಧೋನಿ ಶೇಕ್​ ಹ್ಯಾಂಡ್​ ಮಾಡಲಿಲ್ಲ ಏಕೆ? ಕೊನೆಗೂ ಕಾರಣ ಬಹಿರಂಗ!

  ಬೆಂಗಳೂರು: ಮೇ 18ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಚೆನ್ನೈ ಸೂಪರ್​ ಕಿಂಗ್ಸ್​ (ಸಿಎಸ್​ಕೆ) ವಿರುದ್ಧ ಭರ್ಜರಿ ಜಯ ದಾಖಲಿಸುವ ಮೂಲಕ ಪ್ಲೇಆಫ್​ ಪ್ರವೇಶಿಸಿರುವುದು ಎಲ್ಲರಿಗೂ ತಿಳಿದಿದೆ. ಈ ಪಂದ್ಯದಲ್ಲಿ ಚೇಸಿಂಗ್​ ವೇಳೆ ಆಕ್ರಮಣಕಾರಿ ಆಟವಾಡಿದ ಎಂ.ಎಸ್​. ಧೋನಿ ಒಂದು ಹಂತದಲ್ಲಿ ಪಂದ್ಯ ದಿಕ್ಕನ್ನು ಬದಲಿಸಿದ್ದರು. ಇನ್ನೇನು ಆರ್​ಸಿಬಿ ಪ್ಲೇಆಫ್​ ಕನಸನ್ನು ನುಚ್ಚು ನೂರು ಮಾಡಬೇಕು ಅನ್ನುವಷ್ಟರಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಕೇವಲ 13 ಎಸೆತಗಳಲ್ಲಿ 25 ರನ್ ಗಳಿಸಿದರು. ಆದರೆ, ಕೊನೆಗೂ ವಿಜಯಲಕ್ಷ್ಮೀ ಆರ್​ಸಿಬಿ ಕಡೆ ಒಲಿಯಿತು.

  ಇನ್ನು ಈ ಪಂದ್ಯದ ಬಳಿಕ ನಡೆದ ಘಟನೆ ಈಗಲೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಧೋನಿ ಈ ರೀತಿ ಯಾಕೆ ಮಾಡಿದರೂ? ನಿಜಕ್ಕೂ ಧೋನಿ ನಡೆ ಸರಿ ಇರಲಿಲ್ಲ ಎಂದು ಒಂದು ಗುಂಪು ವಾದಿಸಿದರೆ, ಧೋನಿ ಈ ರೀತಿ ನಡೆದುಕೊಂಡಿದ್ದರಲ್ಲಿ ಯಾವುದೇ ತಪ್ಪಿಲ್ಲ, ಕ್ರಿಕೆಟ್​ ದಿಗ್ಗಜ ಧೋನಿಗೆ ಅವಮಾನವಾಗಿದೆ ಎಂದು ಇನ್ನೊಂದು ಗುಂಪು ಪ್ರತಿವಾದಿಸಿದೆ.

  ಅಷ್ಟಕ್ಕೂ ನಡೆದಿದ್ದೇನು ಎಂದು ನೋಡುವುದಾದರೆ, ಯಾರೇ ಪಂದ್ಯ ಗೆಲ್ಲಲಿ ಕೊನೆಯಲ್ಲಿ ಉಭಯ ತಂಡದ ಆಟಗಾರರು ಪರಸ್ಪರ ಹಸ್ತಲಾಘವ ಮಾಡುವುದು ಸಾಮಾನ್ಯ. ಆದರೆ, ಮೊನ್ನೆ ನಡೆದಿದ್ದೇ ಬೇರೆ. ಪಂದ್ಯದ ನಂತರ ಇನ್ನೇನು ಆಟಗಾರರು ಸಾಲಿನಲ್ಲಿ ನಿಂತು ಶೇಕ್​ ಹ್ಯಾಂಡ್​ ಮಾಡಬೇಕಿತ್ತು. ಆದರೆ, ಧೋನಿ ಅಲ್ಲಿಂದ ಸೀದಾ ಡ್ರೆಸ್ಸಿಂಗ್​ ರೂಮ್​ಗೆ ಹೊರಟರು. ಈ ವೇಳೆ ಎದುರಾದ ಆರ್​ಸಿಬಿಯ ಬೆಂಬಲ ಸಿಬ್ಬಂದಿ ಹಾಗೂ ಕೆಲವೇ ಆಟಗಾರರಿಗೆ ಶೇಕ್​ ಹ್ಯಾಂಡ್​ ನೀಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಧೋನಿ ವಿರುದ್ಧ ಅನೇಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇಲ್ಲಿ ಧೋನಿ ಅವರು ಕ್ರೀಡಾಸ್ಫೂರ್ತಿ ಮೆರೆಯಬೇಕಿತ್ತು. ದಿಗ್ಗಜ ಆಟಗಾರ ಈ ರೀತಿ ನಡೆದುಕೊಳ್ಳುತ್ತಾರೆ ಅಂತಾ ಯಾರೂ ನಿರೀಕ್ಷೆ ಮಾಡಿರಲಿಲ್ಲ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

  ಧೋನಿ ಶೇಕ್​ ಹ್ಯಾಂಡ್​ ನೀಡದಿರಲು ಕಾರಣವೇನು?
  ಯಾವುದೇ ಪಂದ್ಯಗಳಲ್ಲಿ ಅದು ಗೆಲುವಾಗಿರಲಿ ಅಥವಾ ಸೋಲಾಗಿರಲಿ ಎಲ್ಲರ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದ ಕೂಲ್​ ಕ್ಯಾಪ್ಟನ್​ ಖ್ಯಾತಿಯ ಧೋನಿ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಈ ರೀತಿ ಯಾಕೆ ನಡೆದುಕೊಂಡರು ಎಂದು ಬಹುತೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ, ಇದರ ಹಿಂದೆ ಒಂದು ಕಾರಣವೂ ಇದೆ ಎಂದು ವಾದಿಸುತ್ತಿದೆ ಒಂದು ವರ್ಗ. ಅದೇನೆಂದರೆ, ಪಂದ್ಯ ಮುಗಿದ ಬಳಿಕ ಆರ್​ಸಿಬಿ ಆಟಗಾರರಿಗೆ ಹ್ಯಾಂಡ್​ಶೇಕ್​ ಮಾಡಲು ಧೋನಿ ಸಾಲಿನಲ್ಲಿ ನಿಂತಿದ್ದರು. ಆದರೆ, ಆರ್​ಸಿಬಿ ಆಟಗಾರರು ಪಂದ್ಯ ಗೆದ್ದ ಸಂಭ್ರಮಾಚರಣೆಯಲ್ಲಿ ಮುಳುಗಿದ್ದರು. ತುಂಬಾ ತಡವಾದ್ದರಿಂದ ಬೇಸರಗೊಂಡು ಧೋನಿ ಅಲ್ಲಿಂದ ಹೊರಟು ಎಂದು ಹೇಳಲಾಗಿದೆ. ಓರ್ವ ಹಿರಿಯ ಆಟಗಾರನನ್ನು ಈ ರೀತಿ ನಡೆಸಿಕೊಳ್ಳಬಾರದಿತ್ತು. ಮೊದಲು ಶೇಕ್​ ಹ್ಯಾಂಡ್​ ಮಾಡಿ, ಆಮೇಲೆ ಸಂಭ್ರಮಾಚರಣೆ ಮಾಡಬೇಕಿತ್ತು ಎಂದು ಹಿರಿಯ ಆಟಗಾರರು ಆರ್​ಸಿಬಿ ವಿರುದ್ಧ ಮುಗಿಬಿದ್ದಿದ್ದಾರೆ.

  ಧೋನಿ ಔಟಾದಗಲೂ ಶೇಕ್​ಹ್ಯಾಂಡ್​ ಮಾಡಬೇಕಿತ್ತು
  ಇನ್ನು ಧೋನಿ ಅವರು ಔಟಾಗಿ ಡಗೌಟ್​ಗೆ ಹಿಂದಿರುಗಿದ ಸಂದರ್ಭದಲ್ಲಿ ಆರ್​ಸಿಬಿ ಆಟಗಾರರು ಧೋನಿಗೆ ಶೇಕ್​ ಹ್ಯಾಂಡ್​ ಮಾಡಬೇಕಿತ್ತು ಎಂಬ ವಾದವೂ ಇದೆ. ಇದು ಧೋನಿ ಅವರ ಕೊನೆಯ ಐಪಿಎಲ್​ ಟೂರ್ನಿ ಎಂದೇ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ವಿಚಾರದಲ್ಲಿ ಧೋನಿ ಸಹ ಸುಳಿವು ನೀಡಿದ್ದಾರೆ. ಟೂರ್ನಿಯ ಆರಂಭದಲ್ಲಾದ ನಾಯಕತ್ವ ಬದಲಾವಣೆಯೇ ಇದಕ್ಕೆ ಉದಾಹರಣೆ. ಕೊನೆಯ ಟೂರ್ನಿಯಾದ್ದರಿಂದ ಆರ್​ಸಿಬಿ ಆಟಗಾರರು ಧೋನಿ ಅವರನ್ನು ಅಭಿನಂದಿಸಬೇಕಿತ್ತು ಮತ್ತು ಧೋನಿ ಔಟಾದಗ ಸಂಭ್ರಮಿಸದೇ ಇರಬೇಕಿತ್ತು ಎಂದು ಕೆಲ ಹಿರಿಯ ಕ್ರಿಕೆಟಿಗರು ವಾದ ಮಂಡಿಸುತ್ತಿದ್ದಾರೆ.

  ಧೋನಿ ನಡೆ ಬಗ್ಗೆಯೂ ಟೀಕೆ
  ಇದೇ ಸಂದರ್ಭದಲ್ಲಿ ಕೊಹ್ಲಿ ತೋರಿದ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಧೋನಿ ಇಲ್ಲದಿರುವುದನ್ನು ಗಮನಿಸಿದ ಕೊಹ್ಲಿ, ನೇರವಾಗಿ ಧೋನಿ ಅವರಿದ್ದ ಡ್ರೆಸ್ಸಿಂಗ್​ ರೂಮ್​ಗೆ ತೆರಳಿ ಹಸ್ತಲಾಘವ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಕೊಹ್ಲಿಯಂತೆ ಧೋನಿ ಕೂಡ ಕ್ರೀಡಾಸ್ಫೂರ್ತಿ ಮೆರಯಬೇಕಿತ್ತು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಸ್ವಲ್ಪ ಹೊತ್ತು ಕಾಯುವುದರಲ್ಲಿ ಏನೂ ತಪ್ಪಿರಲಿಲ್ಲ. ಅನಿರೀಕ್ಷಿತವಾಗಿ ಪ್ಲೇಆಫ್​ ಪ್ರವೇಶ ಮಾಡಿದ ಆರ್​ಸಿಬಿ ಖುಷಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಇಲ್ಲಿ ಧೋನಿ ಅವರು ತಮ್ಮ ದೊಡ್ಡತನ ಮೆರೆಯಬೇಕಿತ್ತು ಎಂದು ಕೆಲವರು ಅಭಿಪ್ರಾಯ ಮಂಡಿಸಿದ್ದಾರೆ.

  ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಫಾಫ್​ ಡುಪ್ಲೆಸಿಸ್ ಪಡೆ ನಿಗದಿತ 20 ಓವರ್​ಗಳನ್ನು ಆಡಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಬೃಹತ್ ಗುರಿ ಬೆನ್ನತ್ತಲು ವಿಫಲವಾದ ಸಿಎಸ್​ಕೆ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸೋಲಿನೊಂದಿಗೆ ರುತುರಾಜ್ ಪಡೆ ಲೀಗ್​ ಹಂತದಲ್ಲೇ ನಿರ್ಗಮಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇ ಆಫ್‌ ಪ್ರವೇಶಿಸಿದೆ.

  ಕೊನೆಯ ಹಂತದಲ್ಲಿ ಮಹೇಂದ್ರ ಸಿಂಗ್​ ಧೋನಿ ಅವರು ತಮ್ಮ ಬಿರುಸಿನ ಬ್ಯಾಟಿಂಗ್​ ಮೂಲಕ ಆರ್​ಸಿಬಿ ಪಾಳಯದಲ್ಲಿ ನಡುಕು ಹುಟ್ಟಿಸಿದರು. ಆರ್​ಸಿಬಿ ಪ್ಲೇಆಫ್​ಗೆ ಏರುವುದನ್ನು ತಪ್ಪಿಸಲು ಕೊನೆಯ ಒಂದು ಓವರ್​ನಲ್ಲಿ 17 ರನ್​ ಅವಶ್ಯಕತೆ ಇತ್ತು. ಈ ವೇಳೆ ಧೋನಿ ಕ್ರೀಸ್​ನಲ್ಲಿದ್ದರು. ಯಶ್​ ದಯಾಳ್​ ಎಸೆದ ಮೊದಲ ಎಸೆತದಲ್ಲಿ 110 ಮೀಟರ್​ ಉದ್ದದ ಟೂರ್ನಿಯ ಅತ್ಯಂತ ಉದ್ದದ ಸಿಕ್ಸರ್​ ಸಿಡಿಸುವ ಮೂಲಕ ಆರ್​ಸಿಬಿ ಪರ ಇದ್ದ ಪ್ಲೇಆಫ್​ ವಿಜಯಲಕ್ಷ್ಮೀಯನ್ನು ಚೆನ್ನೈ ಕಡೆ ತಿರುಗಿಸಿದರು. ಸಿಕ್ಸರ್​ ಬಳಿಕ 5 ಎಸೆತಗಳಲ್ಲಿ ಕೇವಲ 11 ರನ್​ ಬೇಕಿತ್ತು. ಇದರಿಂದ ಆರ್​ಸಿಬಿ ಮೇಲೆ ಹೆಚ್ಚಿನ ಒತ್ತಡವೂ ಇತ್ತು. ಆದರೆ, ದಯಾಳ್​ ಅವರ ಎರಡನೇ ಎಸೆತವನ್ನು ಧೋನಿ ಬಲವಾಗಿ ಹೊಡೆದರು. ಈ ಚೆಂಡು ಕೂಡ ಸಿಕ್ಸರ್​ ಹೋಗುತ್ತದೆ ಅಂದುಕೊಂಡಿದ್ದರು. ಆದರೆ, ತುಂಬಾ ಎತ್ತರಕ್ಕೆ ಹೋಗಿದ್ದ ಚೆಂಡನ್ನು ಬೌಂಡರಿ ಗೆರೆಯಲ್ಲಿ ನಿಂತಿದ್ದ ಸ್ವಪ್ನಿಲ್​ ಸಿಂಗ್​ ತುಂಬಾ ಸುಲಭವಾಗಿ ಹಿಡಿದರು. ಈ ಕ್ಯಾಚ್​ ಹಿಡಿದಿದ್ದು ತಂಡದ ಗತಿಯನ್ನೇ ಬದಲಿಸಿತು. ಕೊನೆಯಲ್ಲಿ 4 ಎಸೆತಕ್ಕೆ 11 ರನ್​ ಬೇಕಿದ್ದಾಗ ಶಾರ್ದುಲ್​ ಠಾಕೂರ್​ ಕ್ರೀಸ್​ನಲ್ಲಿದ್ದರು. ಆದರೆ, ದಯಾಳ್​ 3ನೇ ಎಸೆತವನ್ನು ಡಾಟ್​ ಬಾಲ್​ ಮಾಡಿದರು. 4 ಎಸೆತದಲ್ಲಿ ಒಂದು ರನ್​ ನೀಡಿದರು. ಕೊನೆಯ 2 ಬಾಲ್​ನಲ್ಲಿ 10 ರನ್​ ಬೇಕಿದ್ದಾಗ ಅಪಾಯಕಾರಿ ಜಡೇಜಾ ಕ್ರೀಸ್​ನಲ್ಲಿದ್ದರು. ಆದರೆ, 5ನೇ ಎಸೆತವನ್ನು ದಯಾಳ್​ ಡಾಟ್​ ಬಾಲ್​ ಮಾಡಿದರು. ಅಲ್ಲಿಗೆ ಆರ್​ಸಿಬಿ ಪಾಳಯದಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತು. ಕೊನೆಯ ಎಸೆತವನ್ನು ದಯಾಳ್ ಮತ್ತೆ​ ಡಾಟ್​ ಬಾಲ್​ ಮಾಡಿದರು. ಅಲ್ಲಿಗೆ ಆರ್​ಸಿಬಿ ಪ್ಲೇಆಫ್​ ಪ್ರವೇಶ ಖಚಿತವಾಯಿತು. (ಏಜೆನ್ಸೀಸ್​)

  ಎಂ.ಎಸ್​. ಧೋನಿ ಮಾಡಿದ ಈ ಒಂದು ತಪ್ಪಿನಿಂದ ಸಿಎಸ್​ಕೆ ಪ್ಲೇಆಫ್ ಕನಸು ಭಗ್ನ! ಚೆನ್ನೈ ಅಭಿಮಾನಿಗಳ ಆಕ್ರೋಶ

  ಸ್ವಪ್ನಿಲ್​​ ಸಿಂಗ್​ ಆರ್​ಸಿಬಿ ಪಾಲಿಗೆ ಅದೃಷ್ಟವಂತ ಅನ್ನೋದಕ್ಕೆ ಈ ಘಟನೆಗಿಂತ ಉತ್ತಮ ಸಾಕ್ಷಿ ಮತ್ತೊಂದಿಲ್ಲ!

  ಈ ಒಂದು ಕ್ಷಣ ಮರುಕಳಿಸಿದ್ರೆ RCB ಕಪ್​ ಗೆಲ್ಲೋದು ತುಂಬಾ ಕಷ್ಟ! ಕೋಟ್ಯಂತರ ಅಭಿಮಾನಿಗಳಿಂದ ಪ್ರಾರ್ಥನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts