

ಬೆಂಗಳೂರು: ನಿನ್ನೆ (ಮೇ 18) ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತು. ಪ್ಲೇಆಫ್ ತಲುಪಲು ನಿರ್ಣಾಯಕ ಎನಿಸಿಕೊಂಡಿದ್ದ ಪಂದ್ಯದಲ್ಲೇ ಚೆನ್ನೈ ಮುಖಭಂಗ ಅನುಭವಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಫಾಫ್ ಡುಪ್ಲೆಸಿಸ್ ಪಡೆ ನಿಗದಿತ 20 ಓವರ್ಗಳನ್ನು ಆಡಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಬೃಹತ್ ಗುರಿ ಬೆನ್ನತ್ತಲು ವಿಫಲವಾದ ಸಿಎಸ್‌ಕೆ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸೋಲಿನೊಂದಿಗೆ ರುತುರಾಜ್ ಪಡೆ ಲೀಗ್ ಹಂತದಲ್ಲೇ ನಿರ್ಗಮಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಒಂದು ಹಂತದಲ್ಲಿ ಚೆನ್ನೈ ಗದ್ದೇ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸಿಎಸ್‌ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಾಡಿದ ಆ ಒಂದು ತಪ್ಪಿನಿಂದಾಗಿ ಎಲ್ಲವೂ ತಲೆಕೆಳಗಾಯಿತು.
ಬೃಹತ್ ಸ್ಕೋರ್ ಬೆನ್ನತ್ತುವಲ್ಲಿ ಚೆನ್ನೈ ಎಡವಿತು. 13.4 ಓವರ್‌ಗಳಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡು ಕೇವಲ 119 ರನ್ ಗಳಿಸಿತ್ತು. ಈ ಹಂತದಲ್ಲಿ ರವೀಂದ್ರ ಜಡೇಜಾ ಕ್ರೀಸ್‌ನಲ್ಲಿದ್ದರು. ಅದೇ ಸಮಯಕ್ಕೆ ಧೋನಿ ಬ್ಯಾಟಿಂಗ್‌ಗೆ ಬರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಮೊಣಕಾಲಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಮಹಿ ಈ ಸೀಸನ್ನಲ್ಲಿ ಕೊನೆಯಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದಾರೆ. ಆದರೆ, ನಿನ್ನೆಯ ಪಂದ್ಯ ನಿರ್ಣಾಯಕವಾದ್ದರಿಂದ ಧೋನಿ ಕ್ರೀಸ್ಗೆ ಇಳಿಯುತ್ತಾರೆ ಅಂತಾ ಭಾವಿಸಿದ್ದರು. ಆದರೆ ಧೋನಿ ಬರುವ ಬದಲು ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಅವರನ್ನು ಕ್ರೀಸ್ಗೆ ಇಳಿಸಲಾಯಿತು. ಆದರೆ, ಸ್ಯಾಂಟ್ನರ್ 4 ಎಸೆತಗಳನ್ನು ಆಡಿ ಕೇವಲ 3 ರನ್ ಗಳಿಸಿ ಔಟಾದರು. ಬಳಿಕ ಮಹಿ ಬ್ಯಾಟಿಂಗ್‌ಗೆ ಬಂದರು. ಇತ್ತ ಸ್ಯಾಂಟ್ನರ್ ಔಟಾದ ನಂತರ ಒತ್ತಡವೂ ಹೆಚ್ಚಾಯಿತು. ಜಡ್ಡು ಮತ್ತು ಧೋನಿ ಕೆಲವು ಎಸೆತಗಳನ್ನು ನಿಧಾನವಾಗಿ ಆಡಿದರು. ಇದರಿಂದ ಅಗತ್ಯ ರನ್ ರೇಟ್ ಹೆಚ್ಚಾಯಿತು.
ಒಂದು ವೇಳೆ ಸ್ಯಾಂಟ್ನರ್ ಪ್ಲೇಸ್‌ನಲ್ಲಿ ಧೋನಿ ಬ್ಯಾಟಿಂಗ್ ಮಾಡಿದ್ದರೆ, ಚೇಸ್ ಇನ್ನೂ ಸುಲಭವಾಗುತ್ತಿತ್ತು. ಡಾಟ್ ಬಾಲ್‌ಗಳು ಬೀಳುತ್ತಿರಲಿಲ್ಲ ಮತ್ತು ಅಗತ್ಯ ರನ್ ರೇಟ್ ಕೂಡ ಕೊಂಚ ಕಡಿಮೆಯಾಗುತತ್ತಿತ್ತು. ಅಂತಿಮವಾಗಿ 9ರನ್‌ಗಳ ಅಂತರದಿಂದ ಚೆನ್ನೈ ಪ್ಲೇಆಫ್ ಅರ್ಹತೆಯಿಂದ ದೂರ ಉಳಿಯಿತು. ಧೋನಿ ಮೊದಲೇ ಬ್ಯಾಟಿಂಗ್‌ಗೆ ಬಂದಿದ್ದರೆ, ಆ ರನ್‌ಗಳನ್ನು ಗಳಿಸುವುದು ಕಷ್ಟವಾಗುತ್ತಿರಲಿಲ್ಲ. ಕಠಿಣ ಪರಿಸ್ಥಿತಿಯ ಹೊರತಾಗಿಯೂ, ಸಿಎಸ್‌ಕೆ ಸೋಲಿನತ್ತ ಸಾಗುತ್ತಿದ್ದಾಗ ಮಹಿ ತಡವಾಗಿ ಬ್ಯಾಟಿಂಗ್‌ಗೆ ಬಂದರು. 13 ಎಸೆತಗಳಲ್ಲಿ 25 ರನ್ ಗಳಿಸಿ ಪೆವಿಲಿಯನ್ ತಲುಪಿದರು. ಮೊದಲೇ ಬಂದಿದ್ದರೆ ಫಲಿತಾಂಶವೇ ಬೇರೆಯಾಗುತ್ತಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಧೋನಿ ಸರಿಯಾದ ಸಮಯದಲ್ಲಿ ಬ್ಯಾಟಿಂಗ್ ಇಳಿಯದ ಪರಿಣಾಮ ಚೆನ್ನೈ ಸೋತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಅಲ್ಲದೆ, ಚೆನ್ನೈ ಅಭಿಮಾನಿಗಳು ಧೋನಿ ವಿರುದ್ಧ ಆಕ್ರೋಶ ಮತ್ತು ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಏನು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ. (ಏಜೆನ್ಸೀಸ್)