ಮೆಟ್ರೋ ರೈಲಿನೊಳಗೆ ಅಶ್ಲೀಲ ಡಾನ್ಸ್​! ಯುವತಿಯ ವಿರುದ್ಧ ಭಾರಿ ಆಕ್ರೋಶ, ಕಠಿಣ ಕ್ರಮಕ್ಕೆ ಆಗ್ರಹ

Young Girl
Published on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜನರು ತಮ್ಮ ಪ್ರಯಾಣಕ್ಕಾಗಿ ಹೆಚ್ಚಾಗಿ ಮೆಟ್ರೋ ರೈಲುಗಳನ್ನು ಅವಲಂಬಿಸಿದ್ದಾರೆ. ಬಿಡುವಿಲ್ಲದ ಜೀವನದಲ್ಲಿ ಜನರಿಗೆ ಇದು ಅತ್ಯಂತ ಅನುಕೂಲಕರ ಸಾರಿಗೆ ವಿಧಾನಗಳಲ್ಲಿ ಒಂದಾಗಿದೆ. ಆದರೆ ಇತ್ತೀಚೆಗೆ ದೆಹಲಿ ಮೆಟ್ರೋ ಹಲವಾರು ಕಾರಣಗಳಿಗಾಗಿ ಸುದ್ದಿಯಲ್ಲಿದೆ.

ಪ್ರಯಾಣಿಕರಿಗೆ ಕಿರುಕುಳ ನೀಡುವ ವರ್ತನೆಗಳು, ರೀಲ್‌ಗಳ ಚಿತ್ರೀಕರಣ, ಪ್ರೇಮಿಗಳ ಅಶ್ಲೀಲ ವರ್ತನೆ ಮತ್ತು ಜನ ದಟ್ಟಣೆ ಸೇರಿದಂತೆ ಅನೇಕ ವಿಚಾರಗಳಿಗೆ ದೆಹಲಿ ಮೆಟ್ರೋ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ದೆಹಲಿ ಮೆಟ್ರೋ ಮತ್ತೊಮ್ಮೆ ಸುದ್ದಿಯಾಗಿದೆ. ಅದಕ್ಕೆ ಕಾರಣ ಯುವತಿಯೊಬ್ಬಳ ಅಶ್ಲೀಲ ಡಾನ್ಸ್ ವಿಡಿಯೋ. ಮನಿಷಾ ಡ್ಯಾನ್ಸರ್ ಹೆಸರಿನ ಇನ್‌ಸ್ಟಾಗ್ರಾಮ್ ಪೇಜ್​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಿಡಿಯೋದಲ್ಲಿ ಮನಿಷಾ ಎಂಬಾಕೆ ಮೆಟ್ರೋ ರೈಲಿನೊಳಗೆ ಅಶ್ಲೀಲವಾಗಿ ಡಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಮುಂದಿನ ನಿಲ್ದಾಣದಲ್ಲಿ ಇಳಿಯಲು ಕಾಯುತ್ತಿರುವ ಮಹಿಳೆಯ ಮುಂದೆಯೇ ಮನೀಶಾ ವಿಚಿತ್ರವಾಗಿ ಸೊಂಟ ಬಳುಕಿಸಿದ್ದಾಳೆ. ಮನಿಷಾ ಅವರ ಡಾನ್ಸ್ ಪ್ರಯಾಣಿಕರಿಗೆ ಮುಜುಗರ ತಂದಿದ್ದು, ವಿಡಿಯೋ ವೈರಲ್​ ಆದ ಬೆನ್ನಲ್ಲೇ ಮನಿಷಾ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಯುವತಿ ಇತರ ಪ್ರಯಾಣಿಕರಿಗೆ ತೊಂದರೆ ನೀಡುತ್ತಿದ್ದು, ಸಾರ್ವಜನಿಕ ಸಾರಿಗೆಯಲ್ಲಿ ಇಂತಹ ವರ್ತನೆ ಮರುಕಳಿಸಬಾರದು ಎಂದು ಹಲವರು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ವಿಡಿಯೋ ನೋಡಿದ ಹಲವರು ‘ಅಶ್ಲೀಲ’ ಎಂದು ಬರೆದುಕೊಂಡಿದ್ದಾರೆ. ಕೆಲವರು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳನ್ನು ಕೋರಿದ್ದಾರೆ.

ಇಂತಹ ಘಟನೆಗಳು ನಡೆಯದಂತೆ ತಡೆಯಲು ಪ್ರತಿ ಕಂಪಾರ್ಟ್​ಮೆಂಟ್​ನಲ್ಲೂ ಪೊಲೀಸರು ಇರಬೇಕು ಎಂದು ಆಗ್ರಹಿಸಿರುವ ನೆಟ್ಟಿಗರು, ಪ್ರಯಾಣಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದಿದ್ದಾರೆ. ಮೆಟ್ರೋದ ಸೋಶಿಯಲ್​ ಮೀಡಿಯಾ ಪೇಜ್​ ಮತ್ತು ರೈಲ್ವೆ ಇಲಾಖೆಯ ಪೇಜ್​ ಅನ್ನು ಅನೇಕ ನೆಟ್ಟಿಗರು ಉಲ್ಲೇಖಿಸಿದ್ದು, ವಿಡಿಯೋ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ ಘಟನೆ ಬಗ್ಗೆ ಮೆಟ್ರೋ ಅಧಿಕಾರಿಗಳು ಈವರೆಗೂ ಸ್ಪಂದಿಸಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net