ಕ್ರೀಡೆ

ಟೀಮ್​ ಇಂಡಿಯಾದ ಈ ಇಬ್ಬರು ಆಟಗಾರರೇ ನನ್ನ ಟಾರ್ಗೆಟ್ ಎಂದ ಪಾಕ್​ ವೇಗಿ​ ಮೊಹಮ್ಮದ್ ಅಮೀರ್!

ನವದೆಹಲಿ: ಟಿ20 ವಿಶ್ವಕಪ್‌ಗೂ ಮುನ್ನವೇ ಟೀಮ್​ ಇಂಡಿಯಾ ವಿರುದ್ಧ ಪಾಕಿಸ್ತಾನ ಆಟಗಾರರು ಮಾತಿನ ಸಮರ ಸಾರಿದ್ದಾರೆ. ಪಾಕ್​ ತಂಡದ ಅನುಭವಿ ವೇಗಿ ಮೊಹಮ್ಮದ್ ಅಮೀರ್, ಟಿ20 ವಿಶ್ವಕಪ್‌ನಲ್ಲಿ ನನ್ನ ಗುರಿ ಆ ಇಬ್ಬರು ಭಾರತೀಯ ಆಟಗಾರರಾಗಿದ್ದು, ಅವರನ್ನು ಮತ್ತೊಮ್ಮೆ ಔಟ್ ಮಾಡುತ್ತೇನೆಂದು ಸವಾಲು ಎಸೆದಿದ್ದಾರೆ.

ಅಮೀರ್​ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದರೂ ಅವರನ್ನು ಪಾಕ್​ ತಂಡಕ್ಕೆ ವಾಪಾಸ್ ತೆಗೆದುಕೊಂಡಿರುವುದು ಗೊತ್ತೇ ಇದೆ. ಅಷ್ಟೇ ಅಲ್ಲ, 2024ರ ಟಿ20 ವಿಶ್ವಕಪ್‌ನಂತಹ ಮೆಗಾ ಟೂರ್ನಮೆಂಟ್‌ಗೆ ಆಯ್ಕೆ ಮಾಡುವ ಮೂಲಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎಲ್ಲರಿಗೂ ಶಾಕ್ ನೀಡಿದೆ. ತಂಡದಲ್ಲಿ ಸ್ಥಾನ ಪಡೆದಿದ್ದೇ ತಡ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗರನ್ನು ಅಮೀರ್ ಟಾರ್ಗೆಟ್​ ಮಾಡಿದ್ದಾರೆ.

ಟೀಮ್​ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬಗ್ಗೆ ಮಾತನಾಡಿರುವ ಅಮೀರ್​, ಮತ್ತೆ ಇಬ್ಬರನ್ನೂ ಔಟ್ ಮಾಡುತ್ತೇನೆ ಎಂದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಮತ್ತು ರೋಹಿತ್ ವಿಕೆಟ್‌ಗಳನ್ನು ಪಡೆಯುವ ಭರವಸೆ ಇದೆ ಎಂದರು. ಅಂದಹಾಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ಎಡಗೈ ವೇಗಿ ಅಮೀರ್, ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಬಳಿಕ ಕಾಮೆಂಟೇಟರ್ ಮತ್ತು ಕ್ರಿಕೆಟ್ ವಿಶ್ಲೇಷಕರಾಗಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಏನಾಯಿತೋ ಕಾಣೆ ಅಮೀರ್​ ಇದ್ದಕ್ಕಿದ್ದಂತೆ ಪಾಕಿಸ್ತಾನ ತಂಡವನ್ನು ಸೇರಿಕೊಂಡಿದ್ದಾರೆ. 2024ರ ಟಿ20 ವಿಶ್ವಕಪ್ ಗೆಲ್ಲುವ ಗುರಿಯೊಂದಿಗೆ ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ತಂಡದ ಆಟಗಾರರಿಗೆ ವಿಶೇಷ ಸೇನಾ ತರಬೇತಿಯನ್ನು ನೀಡಿದೆ.

ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸಿರುವ ಈ ಮೆಗಾ ಟೂರ್ನಮೆಂಟ್ ಜೂನ್ 2ರಿಂದ ಪ್ರಾರಂಭವಾಗಲಿದೆ. ಜೂನ್ 5 ರಂದು ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಮೊದಲ ಪಂದ್ಯವನ್ನಾಡಲಿದೆ. ಆದರೆ, ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಭಾರತ vs ಪಾಕಿಸ್ತಾನ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್​ನಲ್ಲಿ ನಡೆಯಲಿದೆ. ಇಡೀ ವಿಶ್ವವೇ ಈ ಪಂದ್ಯಕ್ಕಾಗಿ ಕಾಯುತ್ತಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳಿಲ್ಲದ ಕಾರಣ, ಈ ಎರಡು ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.

ಕ್ರಿಕೆಟ್​ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಇಂತಹ ಪಂದ್ಯದಲ್ಲಿ ಕೊಹ್ಲಿ ಮತ್ತು ರೋಹಿತ್​ರನ್ನು ಔಟ್ ಮಾಡುತ್ತೇನೆ ಎಂದು ಅಮೀರ್ ಆಡಿರುವ ಮಾತಿನ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್​ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)