ನವದೆಹಲಿ: ಇದೇ ಅಕ್ಟೋಬರ್ 07ರಿಂದ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಇದೀಗ ದಿನಗಣನೆ ಆರಂಭಗೊಂಡಿದೆ. ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ಬಳಿಕ ಪತ್ನಿ ಅನುಷ್ಕಾ ಶರ್ಮ ಮತ್ತು ಮಕ್ಕಳೊಂದಿಗೆ ಲಂಡನ್ ಹಾರಿದ್ದ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ, ಇತ್ತೀಚೆಗಷ್ಟೇ ತಾಯ್ನಾಡಿಗೆ ಮರಳಿದ್ದಾರೆ. ಸದ್ಯ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ ಸಖತ್ ತಯಾರಿ ನಡೆಸುತ್ತಿರುವ 'ಕಿಂಗ್' ಕೊಹ್ಲಿ, ಎದುರಾಳಿಗಳ ಬೆವರಿಳಿಸಲು ಎದುರುನೋಡುತ್ತಿದ್ದಾರೆ.
ಇದನ್ನೂ ಓದಿ: ಕೇವಲ ಅಂಕದಿಂದ ಬದುಕಿನ ಬಾಗಿಲು ತೆರೆಯಲ್ಲ
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಫಾರ್ಮೆಟ್ಗೆ ನಿವೃತ್ತಿಗೆ ಘೋಷಿಸಿದ ನಂತರ ವಿದೇಶದಲ್ಲಿ ವಾಸ್ತವ್ಯ ಹೂಡಿದ್ದ ವಿರಾಟ್ ಕೊಹ್ಲಿ, ಇದೀಗ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಹಿಂತಿರುಗಿದ್ದಾರೆ. ಸದ್ಯ ಈ ವಿಷಯ ಕ್ರಿಕೆಟ್ ಅಭಿಮಾನಿಗಳಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಿಸಿದೆ. ಬಹುದಿನಗಳ ನಂತರ ತಮ್ಮ ನೆಚ್ಚಿನ ಸ್ಟಾರ್ ಆಟಗಾರ ಮೈದಾನದಲ್ಲಿ ಅಬ್ಬರಿಸುವುದನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತರದಿಂದ ಕಾಯತೊಡಗಿದ್ದಾರೆ. ಇದೀಗ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯ ಕಣ್ಣು ಬಾಂಗ್ಲಾ ಬೌಲರ್ಗಳ ಮೇಲೆ ಬಿದ್ದಿದ್ದು, ಯಾರು ವಿರಾಟ್ರನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ಲೆಕ್ಕಾಚಾರಗಳು ಜೋರಾಗಿವೆ.
ಮಿಸ್ಟರ್ ಕನ್ಸಿಸ್ಟೆನ್ಸಿ ಎಂದೇ ಕ್ರಿಕೆಟ್ ಜಗತ್ತಿಗೆ ಚಿರಪರಿಚಿತರಾಗಿರುವ ವಿರಾಟ್, ಮೈದಾನದಲ್ಲಿ ರನ್ಗಳ ಸುರಿಮಳೆ ಹರಿಸುವಲ್ಲಿ ನಿಸ್ಸೀಮರು. ಎದುರಾಳಿ ತಂಡದ ಬೌಲರ್ಗಳು ಯಾವ ರೀತಿ ಬೌಲಿಂಗ್ ಮಾಡಿದರೂ ಸಹ ಅದನ್ನು ಹೇಗೆ ಟ್ಯಾಕಲ್ ಮಾಡಬೇಕು ಎಂಬುದನ್ನು ಚೆನ್ನಾಗಿ ಅರಿತಿರುವ 'ಕಿಂಗ್' ಕೊಹ್ಲಿ, ಸ್ಪಿನ್ನರ್ಗಳೇ ಇರಲಿ, ವೇಗಿಗಳ ಬರಲಿ ಅಬ್ಬರಿಸುವುದನ್ನು ಮಾತ್ರ ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಅತ್ಯಧಿಕ ರನ್ಗಳ ಜತೆ ಅತ್ಯುತ್ತಮ ಬ್ಯಾಟಿಂಗ್ ವೈಖರಿ ಹೊಂದಿರುವ ವಿರಾಟ್ರ ವಿಕೆಟ್ ಕಬಳಿಸುವ ಸಾಮರ್ಥ್ಯ ಯಾರಿಗಿದೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಲಭಿಸಿದೆ.
ಇದನ್ನೂ ಓದಿ: ‘ಅನ್ವಿತಾ’ ಚಲನಚಿತ್ರದ ಪೋಸ್ಟರ್ ಬಿಡುಗಡೆ
ಬಾಂಗ್ಲಾ ತಂಡವು ಈ ಬಗ್ಗೆ ಪೂರ್ವ ತಯಾರಿ ನಡೆಸಿಯೇ ಅಖಾಡಕ್ಕೆ ಇಳಿಯುತ್ತಿದೆ ಎಂಬುದು ಇದೀಗ ಸ್ಪಷ್ಟವಾಗಿದೆ. ತಂಡದಲ್ಲಿ ಕೊಹ್ಲಿ ಇದ್ದಾರೆ ಎಂದರೆ ಅಲ್ಲಿ ತಂತ್ರಗಾರಿಕೆ ಬಹಳ ಮುಖ್ಯ. ಸದ್ಯ ಇದೇ ಅಸ್ತ್ರವನ್ನು 'ರನ್ ಮಷಿನ್' ಮೇಲೆ ಪ್ರಯೋಗಿಸಲು ಸಜ್ಜಾಗಿರುವ ಬಾಂಗ್ಲಾದೇಶ ಕ್ರಿಕೆಟ್ ಮ್ಯಾನೇಜ್ಮೆಂಟ್, ತಮ್ಮ ತಂಡದಲ್ಲಿರುವ ನಿಹಿದ್ ರಾಣಾ, ತೈಜುಲ್ ಇಸ್ಲಾಂ ಮತ್ತು ಟಾಸ್ಕಿನ್ ಅಹ್ಮದ್ರಿಂದ ಮಾತ್ರ ಕೊಹ್ಲಿ ವಿಕೆಟ್ ಪಡೆಯುವ ಸಾಮರ್ಥ್ಯವಿದೆ ಎಂದು ಬಲವಾಗಿ ನಂಬಿರುವಂತೆ ಕಂಡುಬಂದಿದೆ. ಏಕೆಂದರೆ, ಈ ಮೂವರ ಬೌಲಿಂಗ್ ಕೂಡ ವಿಶೇಷ ಹಾಗೂ ವಿಭಿನ್ನವಾಗಿದೆ.
ಪೇಸ್ನಲ್ಲಿ ನಿಹಿದ್ ರಾಣಾ ಇದ್ದರೆ, ಸ್ಪಿನ್ ದಾಳಿಗೆ ತೈಜುಲ್ ರೆಡಿಯಿದ್ದಾರೆ. ಇನ್ನು ಟಾಸ್ಕಿನ್ ಸ್ವಿಂಗ್ ಸ್ಪೆಷಲಿಸ್ಟ್ ಆಗಿದ್ದು, ವಿರಾಟ್ರ ವಿಕೆಟ್ ಪಡೆಯಲು ಸಾಧ್ಯವಾಗದಿದ್ದರೂ ರನ್ ಕಲೆಹಾಕದಂತೆ ಕಟ್ಟಿಹಾಕುವ ಪ್ಲ್ಯಾನ್ನಲ್ಲಿದ್ದಾರೆ. ಒಟ್ಟಾರೆ ಈ ಮೂವರು ಬೌಲರ್ಗಳ ಮೇಲೆ ಬಾಂಗ್ಲಾ ಮ್ಯಾನೇಜ್ಮೆಂಟ್ಗೆ ಭಾರೀ ಭರವಸೆ ಇದ್ದು, ಯಾರು ಎಷ್ಟು ವಿಕೆಟ್ ಕಬಳಿಸುತ್ತಾರೆ? ಯಾರಿಗೆ ವಿರಾಟ್ರನ್ನು ಕಾಡುವ ಸಾಮರ್ಥ್ಯವಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).