ಕ್ರೀಡೆ

ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ 11ರ ಬಳಗದ ಆಯ್ಕೆ ಗೊಂದಲದಲ್ಲಿ ಭಾರತ

ಪ್ರಸಾದ್​ ಶೆಟ್ಟಿಗಾರ್​

ಅಹಮದಾಬಾದ್: ಟೆಸ್ಟ್ ಸರಣಿಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ನಡುವೆ, ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮುಂಬರುವ ಟಿ20 ಸರಣಿಯಲ್ಲಿ ಆಡುವ ಬಳಗವನ್ನು ಕಣಕ್ಕಿಳಿಸುವ ವಿಚಾರದಲ್ಲಿ ಭಾರತ ತಂಡ ಭಾರಿ ಗೊಂದಲಗಳನ್ನು ಎದುರಿಸುತ್ತಿದೆ. ಹಾಲಿ ವರ್ಷ ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಂಡ ಸಂಯೋಜನೆ ರೂಪಿಸುವ ದೃಷ್ಟಿಯಿಂದ ಈ ಸರಣಿ ಮಹತ್ವದ್ದಾಗಿದ್ದು, ತಂಡದ ಬಹುತೇಕ ಸ್ಥಾನಕ್ಕೆ ತಲಾ ಇಬ್ಬರು ಆಟಗಾರರ ಸ್ಪರ್ಧೆ ಏರ್ಪಟ್ಟಿದೆ.

ಕರೊನಾ ಭೀತಿಯಿಂದ ನಿರ್ಮಿಸಿಕೊಳ್ಳಲಾಗಿರುವ ಬಯೋ-ಬಬಲ್ ವಾತಾವರಣದಲ್ಲಿರಲು 19 ಆಟಗಾರರ ಬೃಹತ್ ತಂಡವನ್ನು ಪ್ರಕಟಿಸಲಾಗಿದೆ. ಈ ಪೈಕಿ ಆಡುವ 11ರ ಬಳಗದ ಆಯ್ಕೆ ಈಗ ಸವಾಲಿನದ್ದಾಗಿದ್ದು, ಮುಖ್ಯ ಕೋಚ್ ರವಿಶಾಸಿ, ನಾಯಕ ವಿರಾಟ್ ಕೊಹ್ಲಿ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಮುಂದಿನ 6-7 ತಿಂಗಳ ಕಾಲ ತಂಡದ ಕಾಯಂ ಆಟಗಾರರಾಗುವರತ್ತ ಗಮನಹರಿಸಿದ್ದಾರೆ.

ಸರಣಿಯ ಆರಂಭಿಕ ಪಂದ್ಯಗಳಲ್ಲಿ ತನ್ನ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲು ಭಾರತ ಆದ್ಯತೆ ನೀಡಲಿದ್ದು, ಸರಣಿ ವಶಪಡಿಸಿಕೊಂಡ ಬಳಿಕ ಪ್ರಯೋಗಗಳಿಗೆ ಅಥವಾ ಮೀಸಲು ಆಟಗಾರರಿಗೂ ಅವಕಾಶ ಕಲ್ಪಿಸುವತ್ತ ಗಮನಹರಿಸಲಿದೆ. ಭಾರತ-ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಯ ಎಲ್ಲ ಪಂದ್ಯಗಳು ಶುಕ್ರವಾರದಿಂದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಗಾಯ-ವಿಶ್ರಾಂತಿ ಕಾರಣಗಳಿಂದಾಗಿ ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ ಮತ್ತು ರವೀಂದ್ರ ಜಡೇಜಾ ತಂಡದಿಂದ ಹೊರಗಿದ್ದು, ಇವರು ಮರಳಿದಾಗ ಟೀಮ್ ಮ್ಯಾನೇಜ್‌ಮೆಂಟ್‌ಗೆ ಆಡುವ ಬಳಗದ ಆಯ್ಕೆಯ ತಲೆನೋವು ಇನ್ನಷ್ಟು ಹೆಚ್ಚಾಗಬಹುದು.

ರಿಷಭ್ ಪಂತ್ ಕೀಪರ್?

ರಿಷಭ್ ಪಂತ್ 2019-20ರ ಸಾಲಿನಲ್ಲಿ ತೋರಿದ ಅಸ್ಥಿರ ನಿರ್ವಹಣೆಯಿಂದಾಗಿ ಸೀಮಿತ ಓವರ್ ತಂಡದಿಂದ ಹೊರಬಿದ್ದಿದ್ದರು. ಇದರಿಂದಾಗಿ ಕನ್ನಡಿಗ ಕೆಎಲ್ ರಾಹುಲ್ ವಿಕೆಟ್ ಕೀಪರ್ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು. ಆದರೆ ರಿಷಭ್ ಇತ್ತೀಚೆಗೆ ಆಸೀಸ್, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ತೋರಿರುವ ದಿಟ್ಟ ನಿರ್ವಹಣೆಯಿಂದಾಗಿ ಇದೀಗ ಟಿ20 ತಂಡಕ್ಕೂ ಮೊದಲ ಆದ್ಯತೆಯ ಕೀಪರ್ ಆಗುವ ನಿರೀಕ್ಷೆ ಇದೆ. ಇದರಿಂದ ರಾಹುಲ್ ಕೇವಲ ಬ್ಯಾಟ್ಸ್‌ಮನ್ ಆಗಿ ಆಡಬೇಕಾಗುತ್ತದೆ. ತಂಡದಲ್ಲಿರುವ ಮತ್ತೋರ್ವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್‌ಗೆ ಆರಂಭಿಕ ಪಂದ್ಯಗಳಲ್ಲಿ ಅವಕಾಶ ಲಭಿಸುವ ಸಾಧ್ಯತೆ ಇಲ್ಲ.

ಆರಂಭಿಕರಾಗಲು ಧವನ್-ರಾಹುಲ್ ಫೈಟ್​

ಉಪನಾಯಕ ರೋಹಿತ್ ಶರ್ಮಗೆ ಆರಂಭಿಕ ಜೋಡಿ ಯಾರಾಗುವರು ಎಂಬ ಬಗ್ಗೆ ಕುತೂಹಲವಿದೆ. ಹಿಂದೆಲ್ಲ ರೋಹಿತ್‌ಗೆ ಶಿಖರ್ ಧವನ್ ಕಾಯಂ ಜತೆಗಾರರಾಗಿದ್ದರು. ಆದರೆ ಇದೀಗ ರಾಹುಲ್ ತಂಡದಲ್ಲಿ ಕೇವಲ ಬ್ಯಾಟ್ಸ್‌ಮನ್ ಆಗಿ ಆಡಬೇಕಾಗಿರುವುದರಿಂದ, ಆರಂಭಿಕ ಸ್ಥಾನವೇ ಅವರಿಗೆ ಸೂಕ್ತವೆನಿಸುತ್ತಿದೆ. ರಾಹುಲ್ ಕಳೆದ ಐಪಿಎಲ್, ಆಸೀಸ್ ಪ್ರವಾಸದಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದರು. ಧವನ್ ಕೂಡ ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಹಾರಾಷ್ಟ್ರ ವಿರುದ್ಧ 153 ರನ್ ಸಿಡಿಸಿ ಮಿಂಚಿದ್ದರು. ಹೀಗಾಗಿ ಇಬ್ಬರನ್ನೂ ಆಡಿಸಲು ಟೀಮ್ ಮ್ಯಾನೇಜ್‌ಮೆಂಟ್ ಮುಂದಾದರೆ, ರೋಹಿತ್-ಧವನ್ ಮೂಲಕ ಬಲಗೈ-ಎಡಗೈ ಆರಂಭಿಕ ಜೋಡಿಯನ್ನು ಉಳಿಸಿಕೊಂಡು, ರಾಹುಲ್‌ರನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸಿದರೂ ಅಚ್ಚರಿ ಇಲ್ಲ.

4ನೇ ಕ್ರಮಾಂಕಕ್ಕೆ ತ್ರಿಕೋನ ಸ್ಪರ್ಧೆ?

ಶ್ರೇಯಸ್ ಅಯ್ಯರ್ ಇತ್ತೀಚೆಗೆ ಸೀಮಿತ ಓವರ್ ತಂಡದಲ್ಲಿ 4ನೇ ಕ್ರಮಾಂಕ ಭದ್ರಪಡಿಸಿಕೊಂಡಿದ್ದರು. ಆದರೆ ಇದೀಗ ಮುಂಬೈನ ಮತ್ತೋರ್ವ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಸೇರ್ಪಡೆಯಿಂದ ಶ್ರೇಯಸ್‌ಗೆ ಪೈಪೋಟಿ ಎದುರಾಗಿದೆ. ಐಪಿಎಲ್‌ನಲ್ಲಿ ಉತ್ತಮ ನಿರ್ವಹಣೆ ತೋರಿದ ಆಧಾರದಲ್ಲಿ ಆಯ್ಕೆಯಾಗಿರುವ ಸೂರ್ಯಕುಮಾರ್, ಮೊದಲ ಪಂದ್ಯದಲ್ಲೇ ಅವಕಾಶ ಪಡೆಯುವರೇ ಎಂದು ಕಾದುನೋಡಬೇಕಾಗಿದೆ. ಯಾಕೆಂದರೆ ಶ್ರೇಯಸ್ ಅವರನ್ನು ಆಡಿಸದೆ ಕೈಬಿಡುವುದು ಕಷ್ಟ. ಕೆಎಲ್ ರಾಹುಲ್‌ಗೆ ಆರಂಭಿಕರಾಗಿ ಆಡುವ ಅವಕಾಶ ಸಿಗದಿದ್ದರೆ ಆಗ ಅವರೂ 4ನೇ ಕ್ರಮಾಂಕದ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಗ ಇಬ್ಬರು ಮುಂಬೈಕರ್‌ಗಳಿಗಿಂತ ಕರ್ನಾಟಕದ ಬ್ಯಾಟ್ಸ್‌ಮನ್ ಫೇವರಿಟ್ ಎನಿಸಬಹುದು.

ವೇಗಿಗಳು ಯಾರು?

ವೇಗದ ಬೌಲಿಂಗ್ ವಿಭಾಗದಲ್ಲೂ ಪ್ರಬಲ ಪೈಪೋಟಿ ಇದ್ದು, 2 ಸ್ಥಾನಕ್ಕೆ ಐವರು ಸ್ಪರ್ಧೆಯಲ್ಲಿದ್ದಾರೆ. ಮೊದಲ ವೇಗದ ಬೌಲರ್ ಸ್ಥಾನಕ್ಕೆ ಸ್ವಿಂಗ್ ಬೌಲರ್‌ಗಳಾದ ಭುವನೇಶ್ವರ್ ಕುಮಾರ್, ದೀಪಕ್ ಚಹರ್ ಮತ್ತು ಶಾರ್ದೂಲ್ ಠಾಕೂರ್ ನಡುವೆ ಸ್ಪರ್ಧೆ ಇದೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಭುವನೇಶ್ವರ್, ಇತ್ತೀಚೆಗೆ ಹೆಚ್ಚಿನ ಕ್ರಿಕೆಟ್ ಆಡದ ಹಿನ್ನಡೆ ಹೊಂದಿದ್ದಾರೆ. 2ನೇ ವೇಗದ ಬೌಲರ್ ಸ್ಥಾನಕ್ಕೆ ಟಿ. ನಟರಾಜನ್ ಮತ್ತು ನವದೀಪ್ ಸೈನಿ ಸ್ಪರ್ಧೆಯಲ್ಲಿದ್ದಾರೆ. ಐಪಿಎಲ್ ಮತ್ತು ಆಸೀಸ್‌ನಲ್ಲಿ ಯಾರ್ಕರ್ ಎಸೆತಗಳಿಂದ ಮಿಂಚಿದ ಟಿ. ನಟರಾಜನ್ ಅವರೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಸ್ಪಿನ್ನರ್‌ಗಳಲ್ಲಿ ಗೊಂದಲವಿಲ್ಲ!

ಮೊಟೆರಾದ ಟರ್ನಿಂಗ್ ಟ್ರ್ಯಾಕ್‌ನಲ್ಲಿ ಭಾರತ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಇದ್ದು, ಈ ಮೂರು ಸ್ಥಾನಕ್ಕೆ ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್ ಬಹುತೇಕ ಖಚಿತ ಆಯ್ಕೆಯಾಗಿದ್ದಾರೆ. ಇವರಲ್ಲಿ ಯಾರಾದರೂ ವೈಲ್ಯ ಅಥವಾ ಗಾಯಗೊಂಡರೆ ಮಾತ್ರ ಸ್ಪಿನ್ ಬೌಲಿಂಗ್ ಆಲ್ರೌಂಡರ್ ರಾಹುಲ್ ತೆವಾಟಿಯಾಗೂ ಅವಕಾಶ ಒಲಿಯಬಹುದು.

ಸಂಭಾವ್ಯ ತಂಡ: ರೋಹಿತ್ ಶರ್ಮ, ಶಿಖರ್ ಧವನ್/ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್/ಸೂರ್ಯಕುಮಾರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್/ಭುವನೇಶ್ವರ್/ದೀಪಕ್ ಚಹರ್, ಯಜುವೇಂದ್ರ ಚಾಹಲ್, ಟಿ. ನಟರಾಜನ್/ನವದೀಪ್ ಸೈನಿ.