More

    ಏಪ್ರಿಲ್ 9 ರಿಂದ 14ನೇ ಐಪಿಎಲ್,  ಬೆಂಗಳೂರು ಸೇರಿದಂತೆ 6 ನಗರಗಳಲ್ಲಿ ಲೀಗ್ 

    ನವದೆಹಲಿ: ಬಹುನಿರೀಕ್ಷಿತ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಏಪ್ರಿಲ್ 9 ರಿಂದ ಮೇ 30 ರವರೆಗೆ ಬೆಂಗಳೂರು ಸೇರಿದಂತೆ 6 ನಗರಗಳಲ್ಲಿ ನಡೆಯಲಿದೆ. ಭಾನುವಾರ ಸಭೆ ಸೇರಿದ ಐಪಿಎಲ್ ಆಡಳಿತ ಮಂಡಳಿ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿತು. ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ, ಅಹಮದಾಬಾದ್ ಹಾಗೂ ದೆಹಲಿಯಲ್ಲಿ ಲೀಗ್ ನಡೆಯಲಿದ್ದು, ಏಪ್ರಿಲ್ 9 ರಂದು ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಆರ್‌ಸಿಬಿ ತಂಡಗಳು ಎದುರಾಗಲಿವೆ. ಅಹಮದಾಬಾದ್‌ನಲ್ಲಿ ನಿರ್ಮಾಣವಾಗಿರುವ ನೂತನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ಲೇ-ಆ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ಮೇ. 30 ರಂದು ಪ್ರಶಸ್ತಿಗಾಗಿ ಕದನ ನಡೆಯಲಿದೆ.

    * ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳು
    ಮುನ್ನೆಚ್ಚರಿಕೆ ಕ್ರಮವಾಗಿ ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿದ್ದು, ಪ್ರೇಕ್ಷಕರಿಗೆ ಅನುಮತಿ ನಿರಾಕರಿಸಲಾಗಿದೆ. ಸದ್ಯ ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿದ್ದು, ಲೀಗ್ ಹಂತ ಸಾಗುತ್ತಿದ್ದಂತೆ ಪ್ರೇಕ್ಷಕರಿಗೆ ಅವಕಾಶ ನೀಡುವ ಕುರಿತು ತೀರ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈಗಾಗಲೇ ದೇಶೀಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಹಾಗೂ ವಿಜಯ್ ಹಜಾರೆ ಟ್ರೋಫಿ ಏಕದಿನ ಮಾದರಿ ಟೂರ್ನಿಯ ಲೀಗ್ ಹಂತದ ಪಂದ್ಯಗಳನ್ನು ಖಾಲಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿತ್ತು. ಸೋಮವಾರದಿಂದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ನಾಕೌಟ್ ಹಂತದ ಪಂದ್ಯಗಳು ಆರಂಭಗೊಳ್ಳಲಿವೆ.

    * ಮೇ 9 ರವರೆಗೆ ಬೆಂಗಳೂರು, ಕೋಲ್ಕತದಲ್ಲಿಲ್ಲ ಪಂದ್ಯ
    ಲೀಗ್‌ನ ಆರಂಭಿಕ ನಾಲ್ಕು ವಾರಗಳ ಕಾಲ ಬೆಂಗಳೂರು ಹಾಗೂ ಕೋಲ್ಕತ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸುತ್ತಿಲ್ಲ. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ 8 ಹಂತದಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೋಲ್ಕತದಲ್ಲಿ ಪಂದ್ಯಗಳು ನಡೆಯುತ್ತಿಲ್ಲ. ಮತ್ತೊಂದೆಡೆ, ಚಿನ್ನಸ್ವಾಮಿ ಸ್ಟೇಡಿಯಂನ ಫ್ಲಡ್‌ಲೈಟ್ ನವೀಕರಣ ಕಾರ್ಯ ನಡೆಯುತ್ತಿರುವುದರಿಂದ ಬೆಂಗಳೂರಿನಲ್ಲೂ ಆರಂಭಿಕ ಪಂದ್ಯಗಳು ನಡೆಯುತ್ತಿಲ್ಲ. ಎರಡು ನಗರಗಳಲ್ಲಿ ಮೇ 9 ರಂದು ಮೊದಲ ಪಂದ್ಯ ನಡೆಯಲಿದೆ. ಲೀಗ್ ಹಂತದ ಆರಂಭಿಕ 36 ಪಂದ್ಯಗಳು ಚೆನ್ನೈ, ಅಹಮದಾಬಾದ್, ಮುಂಬೈ ಹಾಗೂ ದೆಹಲಿಯಲ್ಲಿ ನಡೆದರೆ, ಬೆಂಗಳೂರು ಹಾಗೂ ಕೋಲ್ಕತದಲ್ಲಿ ಕಡೇ 20 ಲೀಗ್ ಪಂದ್ಯಗಳು ನಡೆಯಲಿವೆ. ಲೀಗ್ ಹಂತದ 56 ಪಂದ್ಯಗಳ ಪೈಕಿ ಬೆಂಗಳೂರು, ಚೆನ್ನೈ, ಕೋಲ್ಕತ ಹಾಗೂ ಮುಂಬೈನಲ್ಲಿ ತಲಾ 10 ಪಂದ್ಯಗಳು ನಡೆಯಲಿದ್ದು, ದೆಹಲಿ ಹಾಗೂ ಅಹಮದಾಬಾದ್‌ನಲ್ಲಿ ತಲಾ 8 ಪಂದ್ಯಗಳು ನಡೆಯಲಿವೆ.

    * ಮುಂಬೈನಲ್ಲೂ ಪಂದ್ಯ: ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿದ್ದರೂ ಮುಂಬೈನಲ್ಲೂ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಮುಂಬೈ, ಪುಣೆ ಹಾಗೂ ಅಹಮದಾಬಾದ್‌ನಷ್ಟೇ ಲೀಗ್ ನಡೆಯಲಿದೆ ಎನ್ನಲಾಗಿತ್ತು. ಆದರೆ, ಮುಂಬೈ ಹಾಗೂ ಪುಣೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಎರಡೂ ನಗರಗಳನ್ನು ಕೈಬಿಡಲಾಗುತ್ತಿದೆ ಎಂದು ಹೇಳಲಾಗಿತ್ತು. ಇದೀಗ ಲೀಗ್‌ನ ಆರಂಭಿಕ ಹಂತದ ಪಂದ್ಯಗಳು ಮುಂಬೈನಲ್ಲೇ ನಡೆಯಲಿವೆ.

    * ತಟಸ್ಥ ಸ್ಥಳಗಳಲ್ಲಿ ಪಂದ್ಯಗಳು
    ಈ ಬಾರಿಯ ಲೀಗ್ ವಿಶೇಷವೆಂದರೆ ಯಾವುದೇ ತಂಡಕ್ಕೂ ತವರಿನ ಪಂದ್ಯಗಳು ಅಂತ ನಿಗದಿಪಡಿಸಿಲ್ಲ. ಹಿಂದಿನ ವರ್ಷಗಳಲ್ಲಿ ನಡೆಯುತ್ತಿದ್ದ ತವರು ಹಾಗೂ ತವರಿನ ಹೊರಗೆ ಮಾದರಿಯಂತೆ ಈ ಬಾರಿ ಲೀಗ್ ನಡೆಯುತ್ತಿಲ್ಲ. ಎಲ್ಲ ತಂಡಗಳು ತಟಸ್ಥ ಸ್ಥಳಗಳಲ್ಲಿ ಆಡಲಿವೆ. ಲೀಗ್ ಹಂತದಲ್ಲಿ ಎಲ್ಲ ತಂಡಗಳು 6 ನಗರಗಳ ಪೈಕಿ ಕೇವಲ 4 ನಗರಗಳಲಷ್ಟೇ ಪಂದ್ಯಗಳನ್ನಾಡಲಿವೆ.

    * 11 ಡಬಲ್ ಹೆಡರ್: ಒಟ್ಟಾರೆ 11 ಡಬಲ್ ಹೆಡರ್ ಪಂದ್ಯಗಳು ನಡೆಯಲಿದ್ದು, 6 ತಂಡಗಳು ಮೂರು ಮಧ್ಯಾಹ್ನದ ಪಂದ್ಯಗಳನ್ನಾಡಿದರೆ, 2 ತಂಡಗಳು ಎರಡು ಮಧ್ಯಾಹ್ನದ ಪಂದ್ಯಗಳನ್ನಾಡಲಿವೆ. ಮಧ್ಯಾಹ್ನದ ಪಂದ್ಯಗಳು ಮಧ್ಯಾಹ್ನ 3.30 ರಿಂದ ಹಾಗೂ ರಾತ್ರಿ 7.30 ರಿಂದ ಉಳಿದ ಪಂದ್ಯಗಳು ನಡೆಯಲಿವೆ.

    * 3 ಬಾರಿಯಷ್ಟೆ ಪ್ರಯಾಣ: ತಂಡಗಳ ಪ್ರಯಾಣದ ಹಿತದೃಷ್ಟಿಯಿಂದ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಲೀಗ್ ಹಂತದಲ್ಲಿ ತಂಡಗಳು ಕೇವಲ 3 ಬಾರಿಯಷ್ಟೇ ಪ್ರಯಾಣ ಮಾಡಲಾಗಿವೆ. ಆಟಗಾರರಿಗೆ ಸಾಧ್ಯವಾದಷ್ಟು ಮಟ್ಟಿಗೆ ಪ್ರಯಾಣ ತಪ್ಪಿಸುವಂಥ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. 2020ರಲ್ಲಿ ಕೋವಿಡ್-19 ಭೀತಿಯಿಂದಾಗಿ 13ನೇ ಆವೃತ್ತಿಯನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು.

    * ಟಿ20 ವಿಶ್ವಕಪ್‌ಗೆ ಬುನಾದಿ?
    14ನೇ ಆವೃತ್ತಿಯ ಐಪಿಎಲ್ ಟೂರ್ನಿಯೂ ಮುಂಬರುವ ಟಿ20 ವಿಶ್ವಕಪ್ ಟೂರ್ನಿ ಆಯೋಜನೆಗೆ ಭದ್ರಬುನಾದಿ ಹಾಕಿಕೊಟ್ಟಂತಾಗುತ್ತದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಕಡೇ ಮೂರು ಟೆಸ್ಟ್ ಪಂದ್ಯಗಳಿಗೆ ಶೇಕಡ 50 ಪ್ರೇಕ್ಷಕರಿಗೆ ಅವಕಾಶ ನೀಡಲಾಗಿತ್ತು. ಆದರೆ, ಐಪಿಎಲ್ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿಲ್ಲ. ಕೋವಿಡ್-19 ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯನ್ನು ಮುಂದೂಡಲಾಗಿದೆ. ಹೀಗಾಗಿ ಎಚ್ಚೆತ್ತುಗೊಂಡಿರುವ ಬಿಸಿಸಿಐ ಪ್ರೇಕ್ಷಕರಿಗೆ ಅವಕಾಶ ನಿರಾಕರಿಸಿದ್ದು, ಲೀಗ್ ನಡೆಯುತ್ತಿರುವ 6 ನಗರಗಳ ಸ್ಟೇಡಿಯಂ ಸುತ್ತಮುತ್ತ ಹಾಗೂ ತಂಡಗಳು ಉಳಿದುಕೊಳ್ಳುವ ಹೋಟೆಲ್‌ಗಳಲ್ಲಿ ಬಯೋ ಬಬಲ್ ವಲಯ ರಚಿಸಲಿದೆ. ಒಂದು ವೇಳೇ ಯಾವುದೇ ಅಡ್ಡಿ ಆತಂಕವಿಲ್ಲದೆ ಐಪಿಎಲ್ ಮುಕ್ತಾಯಗೊಂಡರೆ, 16 ತಂಡಗಳು ಸ್ಪರ್ಧಿಸುವ ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿ ಆಯೋಜನೆಗೆ ಸರಾಗವಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಏಪ್ರಿಲ್ 9 ರಿಂದ 14ನೇ ಐಪಿಎಲ್,  ಬೆಂಗಳೂರು ಸೇರಿದಂತೆ 6 ನಗರಗಳಲ್ಲಿ ಲೀಗ್ 

    ಪ್ಲೇಆಫ್ ಹಂತ
    ದಿನಾಂಕ, ಪಂದ್ಯ,ಸ್ಥಳ, ಆರಂಭ:
    ಮೇ 25, ಕ್ವಾಲಿಫೈಯರ್-1, ಅಹಮದಾಬಾದ್, ರಾತ್ರಿ 7.30
    ಮೇ 26, ಎಲಿಮಿನೇಟರ್, ಅಹಮದಾಬಾದ್, ರಾತ್ರಿ 7.30
    ಮೇ 28, ಕ್ವಾಲಿಫೈಯರ್-2, ಅಹಮದಾಬಾದ್, ರಾತ್ರಿ 7.30
    ಮೇ 30, ಫೈನಲ್, ಅಹಮದಾಬಾದ್, ರಾತ್ರಿ 7.30

    ಒಟ್ಟು ಪಂದ್ಯಗಳು: 60
    ಲೀಗ್ ಪಂದ್ಯಗಳು: 56 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts