More

    ಸಾಧಾರಣ ಮಳೆಯಿಂದ ಹಸಿರಾದ ಕಾಡು

    ಗುಂಡ್ಲುಪೇಟೆ: ಬಂಡೀಪುರ ಭಾಗದ ಎಲ್ಲೆಡೆ ಇತ್ತೀಚೆಗೆ ಮಳೆಯಾಗುತ್ತಿರುವ ಪರಿಣಾಮ ಅರಣ್ಯ ಪ್ರದೇಶವು ಆಕಸ್ಮಿಕ ಅಗ್ನಿ ಅವಘಡದ ಭೀತಿಯಿಂದ ಪಾರಾಗಿದೆ. ಸತತ ಎರಡ್ಮೂರು ಬಾರಿ ಮಳೆಯಾದ ಪರಿಣಾಮ ಕಾಡಿನಲ್ಲಿ ಹೊಸದಾಗಿ ಹುಲ್ಲು-ಗರಿಕೆಗಳು ಚಿಗುರುತ್ತಿವೆ. ಇದರಿಂದ ಸಸ್ಯಾಹಾರಿ ಪ್ರಾಣಿಗಳ ಮೇವಿನ ಕೊರತೆ ನೀಗಲಿದೆ.

    ಈ ಬಾರಿ ಮಳೆಯ ಕೊರತೆಯಿಂದ ಮರಗಿಡಗಳ ಎಲೆಗಳು ಉದುರಿ ಬಂಡೀಪುರ ಅರಣ್ಯ ಬೇಗನೆ ಒಣಗಿತ್ತು. ಅರಣ್ಯ ಇಲಾಖೆ ಸಕಾಲದಲ್ಲಿ ಫೈರ್‌ಲೈನ್, ವ್ಯೆಲೈನ್ ನಿರ್ಮಾಣ ಮಾಡಿ ಮುನ್ನೆಚ್ಚರಿಕೆ ಕ್ರಮಕೈಗೊಂಡಿತ್ತು. ಬಿಸಿಲಿನ ತಾಪಮಾನದಿಂದ ಕಾಡಿನಲ್ಲಿ ಹುಲ್ಲು ಒಣಗಿದ್ದ ಪರಿಣಾಮ ಸ್ವಲ್ಪ ಬೆಂಕಿ ಬಿದ್ದರೂ ಇಡೀ ಅರಣ್ಯಕ್ಕೇ ವ್ಯಾಪಿಸುವ ಆತಂಕ ಎದುರಾಗಿತ್ತು. ಇದರಿಂದ ಪ್ರತಿ ವಲಯಗಳಲ್ಲಿಯೂ 30 ರಿಂದ 40 ಫೈರ್ ವಾಚರ್‌ಗಳನ್ನು ನಿಯೋಜಿಸಿ ಅರಣ್ಯ ಪ್ರದೇಶಕ್ಕೆ ಬೆಂಕಿ ಬೀಳದಂತೆ ಕಟ್ಟೆಚ್ಚರ ವಹಿಸಲಾಗಿತ್ತು.

    ಕೆರೆ-ಕಟ್ಟೆಗಳು ಬತ್ತಿ ಹೋಗಿದ್ದರಿಂದ ಆನೆ, ಕಾಟಿ ಇತರ ದೈತ್ಯ ವನ್ಯಜೀವಿಗಳು ಕಬಿನಿ ಹಿನ್ನೀರಿನತ್ತ ವಲಸೆ ಹೋಗಿದ್ದವು. ಇನ್ನು ಜಿಂಕೆ, ಕಡವೆಗಳು ಕಾಡಂಚಿನ ಗ್ರಾಮಗಳ ಜಮೀನುಗಳತ್ತ ದಾಳಿ ನಡೆಸಿ ರೈತರ ಬೆಳೆಗಳನ್ನು ನಾಶಪಡಿಸುತ್ತಿದ್ದವು.
    ಆದರೂ, ನಾಟಾ ಕಳ್ಳತನಕ್ಕಾಗಿ ಕಿಡಿಗೇಡಿಗಳು ಮದ್ದೂರು ಭಾಗದಲ್ಲಿ ಹಚ್ಚಿದ ಬೆಂಕಿ ಗೋಪಾಲಸ್ವಾಮಿ ಬೆಟ್ಟ ವಲಯಕ್ಕೂ ವ್ಯಾಪಿಸಿ ಹಲವಾರು ಎಕರೆ ಅರಣ್ಯ ಪ್ರದೇಶ ಭಸ್ಮವಾಗಿತ್ತು. ಬೆಂಕಿ ಕಂಡ ಕೂಡಲೇ ಕಾರ್ಯಾಚರಣೆಗಿಳಿದ ಅರಣ್ಯಾಧಿಕಾರಿಗಳು ರಾತ್ರಿಯಿಡೀ ಶ್ರಮಿಸಿ ಬೆಂಕಿಯನ್ನು ನಂದಿಸಿದ್ದರು.

    ಅದೇ ದಿನ ಬೆಂಕಿ ಬಿದ್ದ ಪ್ರದೇಶಗಳಿಗೆ ಮಳೆ ಸುರಿಯುವ ಮೂಲಕ ವರುಣ ತನ್ನ ಕೃಪೆ ತೋರಿದ್ದ. ನಂತರ ದಿನಗಳಲ್ಲಿಯೂ ಅಲ್ಲಲ್ಲಿ ಮಳೆ ಬೀಳುತ್ತಿರುವ ಪರಿಣಾಮ ಬಿಸಿಲ ಬೇಗೆಯಲ್ಲಿ ಬೇಯುತ್ತಿದ್ದ ಬಂಡೀಪುರ ಅರಣ್ಯ ಆಕಸ್ಮಿಕ ಅಪಾಯದಿಂದ ಪಾರಾಗಿದ್ದು ಇಲಾಖೆ ನಿಟ್ಟುಸಿರು ಬಿಡುವಂತಾಗಿದೆ. ಗೋಪಾಲಸ್ವಾಮಿಬೆಟ್ಟ, ಬಂಡೀಪುರ, ಮದ್ದೂರು, ಕುಂದಕೆರೆ ಹಾಗೂ ಓಂಕಾರ ವಲಯ ವ್ಯಾಪ್ತಿಯಲ್ಲಿ ಮಳೆಬಿದ್ದ ಪರಿಣಾಮ ನೆಲದಲ್ಲಿ ಹುಲ್ಲು ಗರಿಕೆಗಳು ಚಿಗುರುತ್ತಿರುವುದರಿಂದ ಕಾಡಿಗೆ ಜೀವಕಳೆ ತಂದಿದೆ.

    ಮೇ ತಿಂಗಳಲ್ಲಿ ವಾಡಿಕೆ ಮಳೆ 53 ಮಿಮೀ ಇದ್ದರೂ ಸದ್ಯ 32 ಮಿಮಿ ಮಾತ್ರ ಬಿದ್ದಿದೆ. ಕಳೆದ ಬಾರಿ 62 ಮಿಮೀ ಬಿದ್ದ ಪರಿಣಾಮ ಕೆರೆಕಟ್ಟೆಗಳು ತುಂಬಿ ಕೋಡಿ ಹರಿದಿತ್ತು. ಆದರೆ, ಈ ಬಾರಿ ಯಾವುದೇ ವಲಯದಲ್ಲಿಯೂ ಜೋರಾಗಿ ಮಳೆ ಬೀಳದಿರುವುದರಿಂದ ಕೆರೆ-ಕಟ್ಟೆಗಳಿಗೆ ನೀರು ಬಂದಿಲ್ಲ.

    ಕಳೆಗಟ್ಟಿದ ಗುಲ್ ಮೊಹರ್ ಹೂವುಗಳು:
    ಏಪ್ರಿಲ್ ತಿಂಗಳಲ್ಲಿ ಚಿಗುರೊಡೆದಿದ್ದ ಮರಗಿಡಗಳ ನಡುವೆ ಅಲ್ಲಲ್ಲಿ ಗುಲ್ ಮೊಹರ್ ಮರಗಳಲ್ಲಿ ಹೂ ಅರಳಿ ಬಂಡೀಪುರಕ್ಕೆ ರಂಗಿನ ಕಳೆ ಬಂದಿದೆ. ಮರಗಳ ತುಂಬೆಲ್ಲ ಕೆಂಪು ಹೂಗಳನ್ನರಳಿಸಿಕೊಂಡು ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.
    ಬಿರುಬೇಸಿಗೆಯಲ್ಲೂ ಹೂವರಳಿಸಿಕೊಂಡು ಬಿಸಿಲಿಗೆ ಸೆಡ್ಡು ಹೊಡೆದಿದ್ದ ಗುಲ್ ಮೊಹರ್. ಈಚೆಗೆ ಬೀಸಿದ ಬಿರುಗಾಳಿ ಮಳೆಗೂ ಜಗ್ಗದೆ, ಅಳುಕದೆ ಎಲ್ಲರ ಕಣ್ಮನಗಳನ್ನು ತನ್ನತ್ತ ಆಕರ್ಷಿಸುತ್ತಿವೆ. ಹಂಗಳದಿಂದ ಬಂಡೀಪುರ ಕೆಕ್ಕನಹಳ್ಳ ರಸ್ತೆಯ ಬದಿಗಳಲ್ಲಿ ಹೂ ಬಿಟ್ಟಿರುವ ಈ ಮರಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಹೂಗಳು ಪ್ರಕೃತಿ ಪ್ರಿಯರ ಕಣ್ಣಿಗೆ ಮಾತ್ರ ಹಬ್ಬವಲ್ಲ, ಜೇನು ನೊಣಗಳ ಪಾಲಿಗೂ ಇವು ಸುಗ್ಗಿಯಾಗಿವೆ. ಸಾವಿರಾರು ಜೇನು ನೊಣಗಳನ್ನು ತನ್ನತ್ತ ಸೆಳೆಯುವ ಈ ಪುಷ್ಪಗಳು ಜೀವವೈವಿಧ್ಯ ಉಳಿಸುವಲ್ಲಿಯೂ ಮಹತ್ವದ್ದಾಗಿವೆ. ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಹೂಗಳು ಅರಳುವುದರಿಂದ ಈ ಮರವನ್ನು ಮೇ ಫ್ಲವರ್ ಎಂದೇ ಕರೆಯುತ್ತಾರೆ. ಡೆಲೋನಿಕ್ ರೆಜಿಯಾ ರಾಫ್ ಅಥವಾ ಡೆಲೋನಿಕ್ಸ್ ಎಂಬ ಹೆಸರಿನಿಂದ ಕರೆಯಲಾಗುವ ಈ ಹೂವನ್ನು ಹಿಂದಿಯಲ್ಲಿ ಗುಲ್‌ಮೊಹರ್ ಎಂದು ಕರೆಲಾಗುತ್ತದೆ.

    ಬೇರೆ ವಲಯಗಳಿಗೆ ಹೋಲಿಸಿದರೆ ಬಂಡೀಪುರಕ್ಕೆ ದೊಡ್ಡ ಮಳೆಬಿದ್ದಿಲ್ಲ. ಕೇವಲ 2 ಮಿಮೀ ಮಳೆಬಿದ್ದಿದ್ದು ಹೂಳೆತ್ತಿಸಿರುವ ಕೆರೆಗಳಲ್ಲಿ ಸ್ವಲ್ಪ ನೀರು ನಿಂತಿದೆ. ಆದರೂ, ಹುಲ್ಲು ಗರಿಕೆಗಳು ಚಿಗುರಿದ್ದರಿಂದ ಸಸ್ಯಾಹಾರಿ ವನ್ಯಜೀವಿಗಳಿಗೆ ಮೇವು ದೊರಕುವ ಜತೆಗೆ ಅರಣ್ಯಕ್ಕೆ ತಗಲುವ ಅಗ್ನಿ ಅವಘಡದ ಆತಂಕ ದೂರಾಗಿದೆ.
    ದೀಪಾ, ಬಂಡೀಪುರ ವಲಯದ ಆರ್ ಎಫ್ ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts