ಉತ್ತಮ ಮಳೆಯಿಂದ ಕೆರೆ-ಕಟ್ಟೆಗಳು ಭರ್ತಿ

3 Min Read
ಉತ್ತಮ ಮಳೆಯಿಂದ ಕೆರೆ-ಕಟ್ಟೆಗಳು ಭರ್ತಿ

ಗುಂಡ್ಲುಪೇಟೆ: ತಾಲೂಕಿಗೆ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ದೊಡ್ಡ ದೊಡ್ಡ ಕೆರೆಕಟ್ಟೆಗಳು ತುಂಬಿಹರಿಯುತ್ತಿವೆ. ಆದರೆ, ನದಿ ಮೂಲದಿಂದ ಹರಿಸುತ್ತಿರುವ ನೀರನ್ನು ನಿಲ್ಲಿಸಿದ್ದರಿಂದ ಗುಂಡ್ಲು ಪಾತ್ರದಲ್ಲಿ ಹರಿಯಬೇಕಾದ ನೀರು ವಿಳಂಬವಾಗುತ್ತಿದೆ.

ಕಳೆದ ಎರಡು ತಿಂಗಳಿಂನಿಂದ ತಾಲೂಕಿನ ಎಲ್ಲ ಭಾಗಗಳಿಗೂ ಉತ್ತಮ ಮಳೆ ಬೀಳುತ್ತಿದೆ. ಅರಣ್ಯಪ್ರದೇಶಕ್ಕೆ ಉತ್ತಮ ಮಳೆಬಿದ್ದ ಪರಿಣಾಮ ಭೋರ್ಗರೆದು ಹರಿಯುವ ಹಳ್ಳ ಕೊಳ್ಳಗಳ ನೀರು ಬತ್ತಿಹೋಗಿರುವ ಕೆರೆಗಳಿಗೆ ಜೀವ ತುಂಬುತ್ತಿದೆ. ಮದ್ದೂರು ಹಾಗೂ ಗೋಪಾಲಸ್ವಾಮಿ ಬೆಟ್ಟ ವಲಯದ ಕಾಡಂಚಿನ ಕೆರೆಗಳು ತುಂಬಿ ಕೋಡಿಬೀಳುತ್ತಿರುವುದು ಈ ಬಾರಿ ಗುಂಡ್ಲು ನದಿ ಪಾತ್ರದಲ್ಲಿ ನೀರು ಹರಿಯುವ ಭರವಸೆ ಮೂಡಿಸಿದೆ.

ಗುಂಡ್ಲುನದಿಗೆ ನೀರು ಹರಿಸುವ ಪ್ರಮುಖ ಮೂಲಗಳಾದ ತಾಲೂಕಿನ ಹಿಮವದ್ ಗೋಪಾಲಸ್ವಾಮಿಬೆಟ್ಟ, ಪಾರ್ವತಿ ಬೆಟ್ಟಗಳಿಗೆ ಉತ್ತಮ ಮಳೆಬಿದ್ದಿದೆ. ಕಳೆದ 15 ದಿನಗಳಿಂದ ಬೀಳುತ್ತಿರುವ ಪೂರ್ವ ಮುಂಗಾರು ಮಳೆಗೆ ಈಗಾಗಲೇ ಹಂಗಳ ಹೋಬಳಿಯ ಹತ್ತಾರು ಕೆರೆಗಳು ಕೋಡಿ ಬಿದ್ದು ಮುಂದಿನ ಕೆರೆಗಳತ್ತ ಹರಿಯುತ್ತಿವೆ.

ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಕಟ್ಟೆಹಳ್ಳ ಹಾಗೂ ಸೋನಾಪುರ ಕೆರೆಗಳಿಗೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ಕಳೆದ 17 ವರ್ಷಗಳಿಂದ ನೀರು ಕಾಣದೆ ಬರಡಾಗಿದ್ದ ದೇವರಹಳ್ಳಿ ಕೆರೆ ಈಗಾಗಲೇ ಅರ್ಧ ಭಾಗ ತುಂಬಿಕೊಂಡಿದೆ. ಹಂಗಳದ ದೊಡ್ಡಕೆರೆಯೂ ತುಂಬಿಕೊಂಡಿದ್ದು, ಮಳೆ ಇದೇ ಪ್ರಮಾಣದಲ್ಲಿ ಬಿದ್ದರೆ ಕೋಡಿಬೀಳಲಿದೆ. ಇತ್ತ ಪಾರ್ವತಿ ಬೆಟ್ಟಕ್ಕೂ ಹಲವಾರು ಬಾರಿ ದೊಡ್ಡ ಮಳೆಬಿದ್ದ ಪರಿಣಾಮ ಚೆಕ್ ಡ್ಯಾಂ ತುಂಬಿ ಬಿಲಸರ್ಗೆಯ ಮೂಲಕ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ಬೇಗೂರು ಸಮೀಪದ ಹಾಲಹಳ್ಳಿ ಡ್ಯಾಂ ತುಂಬಿ ಗುಂಡ್ಲು ಮಾರ್ಗದಲ್ಲಿ ಸೇರುತ್ತಿದೆ.

ಬಂಡೀಪುರ ಅರಣ್ಯ ಪ್ರದೇಶಕ್ಕೆ ಹೆಚ್ಚಿನ ಮಳೆ ಬಿದ್ದ ಪರಿಣಾಮ ಕಾಡಂಚಿನ ಕೆರೆಗಳು ಕೋಡಿ ಬಿದ್ದು ಹರಿಯುತ್ತಿವೆ. ಮೇ ತಿಂಗಳಿನಲ್ಲಿ ವಾಡಿಕೆ ಮಳೆ 55 ಮಿಮೀ ಇದೆ. ಆದರೆ, ಈ ಬಾರಿ 145 ಮಿಮೀ ಬಿದ್ದಿದೆ. ಜೂನ್ ಮೊದಲ ವಾರದಲ್ಲಿ ಪ್ರತಿ ದಿನವೂ ಭಾರಿ ಮಳೆ ಬೀಳುತ್ತಿರುವ ಪರಿಣಾಮ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ.

See also  ಬೋನಿಗೆ ಬೀಳದ ವ್ಯಾಘ್ರ

ಎರಡು ವರ್ಷಗಳ ಹಿಂದೆ ಹುತ್ತೂರು ಕೆರೆಯಿಂದ ಸತತವಾಗಿ ಆರೇಳು ತಿಂಗಳು ನದಿ ಮೂಲದಿಂದ ವಡ್ಡಗೆರೆ ಕೆರೆಗೆ ನೀರು ಹರಿಸಿದ್ದರಿಂದ ನದಿ ಮೂಲದ ನೀರಿನೊಂದಿಗೆ ಮಳೆ ನೀರು ಹರಿದು ಗುಂಡ್ಲು ಪಾತ್ರದಲ್ಲಿ ನೀರು ಹರಿದಿತ್ತು.
ವಡ್ಡಗೆರೆ ಸಮೀಪದ ಕರಕಲಮಾದಹಳ್ಳಿ, ದಾರಿಬೇಗೂರು, ಯರಿಯೂರು, ಕೊಡಸೋಗೆ, ಬೊಮ್ಮಲಾಪುರ ಕೆರೆಗಳು ತುಂಬಿ ಮೂರು ದಶಕಗಳಿಂದ ನೀರು ಕಾಣದೆ ಬರಿದಾಗಿದ್ದ ಕಲ್ಲುಕಟ್ಟೆ ಜಲಾಶಯವೂ ತುಂಬಿಕೊಂಡಿತ್ತು. ಅದೇ ವೇಳೆಗೆ ಹೆಚ್ಚಿನ ಮಳೆ ಬೀಳಲಾರಂಭಿಸಿದ್ದರಿಂದ ಜಲಾಶಯದಿಂದ ಕೋಡಿ ಬಿದ್ದ ನೀರು ನೆರೆಯ ವಿಜಯಪುರ ಅಮಾನಿಕೆರೆಗೆ ಹರಿದು ಗುಂಡ್ಲು ನದಿ ಪಾತ್ರದಲ್ಲಿ ನೀರು ಹರಿದಿತ್ತು.

ನೀರು ನಿಲ್ಲಿಸಿದ ಅಧಿಕಾರಿಗಳು:
ಈ ಬಾರಿಯೂ ಮೇ 21ರಿಂದ ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ನೀರು ಹರಿಸಲಾಗಿತ್ತು. ಇದೇ ಸಂದರ್ಭದಲ್ಲಿ ಮಳೆ ಬೀಳಲಾರಂಭಿಸಿದ್ದರಿಂದ ವಡ್ಡಗೆರೆ ಕೆರೆ ತುಂಬಿ ನೆರೆಯ ಮಂಚನಕಟ್ಟೆ ಕೆರೆಗೆ ನೀರು ಹರಿಯುತ್ತಿದೆ. ಜೋರು ಮಳೆಗೆ ನೆರೆಯ ದಾರಿ ಬೇಗೂರು, ಕರಕಲಮಾದಹಳ್ಳಿ ಹಾಗೂ ಬೊಮ್ಮಲಾಪುರ ಕೆರೆಗಳಿಗೂ ಮಳೆನೀರು ಹರಿದು ಮೈತುಂಬಿಕೊಳ್ಳುತ್ತಿದ್ದಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹುತ್ತೂರಿನಿಂದ ವಡ್ಡಗೆರೆ ಕೆರೆಗೆ ನೀರು ಹರಿಸುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಕೆಲವೇ ದಿನಗಳಲ್ಲಿ ಕೋಡಿ ಬೀಳುವ ಹಂತದಲ್ಲಿದ್ದ ಕಲ್ಲುಕಟ್ಟೆ ಜಲಾಶಯ, ಕೊಡಸೋಗೆ ಕೆರೆ, ಬೊಮ್ಮಲಾಪುರ ಕೆರೆ, ವಿಜಯಪುರ ಅಮಾನಿ ಕೆರೆ ಮುಂತಾದ ದೊಡ್ಡ ದೊಡ್ಡ ಕೆರೆಗಳು ಇನ್ನೂ ತುಂಬದಂತಾಗಿದೆ. ಆದ್ದರಿಂದ ಮಳೆಗಾಲದಲ್ಲಿ ತಮಿಳುನಾಡಿಗೆ ಹರಿಸುವ ನೀರನ್ನು ಕೆರೆಗಳಿಗೆ ತುಂಬಿಸಲು ಕ್ರಮಕೈಗೊಳ್ಳಬೇಕು. ಪ್ರತಿ ವರ್ಷವೂ ನದಿ ಪಾತ್ರದಲ್ಲಿ ನೀರು ಹರಿಸುವಂತೆ ಮಾಡಿದರೆ ಬತ್ತಿಹೋಗಿದ್ದ ಗುಂಡ್ಲು ನದಿಯ ಪುನಶ್ಚೇತನ ಸಾಧ್ಯವಾಗಲು ನೆರವಾಗಲಿದೆ ಎಂದು ತಾಲೂಕಿನ ಜನತೆ ಬಯಸುತ್ತಿದ್ದಾರೆ.

ಕಳೆದ ತಿಂಗಳು ಹುತ್ತೂರಿನಿಂದ ವಡ್ಡಗೆರೆ ಕೆರೆಗೆ ಹತ್ತು ದಿನ ಟ್ರಯಲ್ ರನ್‌ಗಾಗಿ ನೀರು ಹರಿಸಲಾಗಿತ್ತು. ಈ ಬಾರಿ ಎಲ್ಲ ಕೆರೆಗಳಿಗೂ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು.
ಎಚ್.ಎಂ.ಗಣೇಶ್ ಪ್ರಸಾದ್, ಶಾಸಕರು.

Share This Article