ಬೆಂಗಳೂರು: ಮಾರ್ಚ್ 22ರಂದು ಆರಂಭಗೊಂಡ 17ನೇ ಆವೃತ್ತಿಯ ಐಪಿಎಲ್ ಆರಂಭಗೊಂಡು ಈಗಾಗಲೇ ಮುಕ್ತಾಯದ ಹಂತ ತಲುಪಿದ್ದು, ಮೇ 26ರಂದು ಚೆನ್ನೈನ ಚೆಪಾಕ್ ಅಂಗಳದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಮೇ 18ರಂದು ನಡೆಯಲಿರುವ ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಪಂದ್ಯ ಉಭಯ ತಂಡಗಳ ಅಭಿಮಾನಿಗಳಿಗೆ ಈ ಇದು ಫೈನಲ್ ಪಂದ್ಯವಿದ್ದಂತೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದ ಟಿಕೆಟ್ಗಳು ಬಹುತೇಕ ಮಾರಾಟವಾಗಿದ್ದು, ಕಾಳಸಂತೆಯಲ್ಲಿ ಈ ಪಂದ್ಯದ ಟಿಕೆಟ್ಗೆ ಭರ್ಜರಿ ಬೇಡಿಕೆಯುಂಟಾಗಿದೆ. ಈ ಬೇಡಿಕೆಯನ್ನೇ ಕೆಲವು ದುರುಳರು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಆನ್ಲೈನ್ನಲ್ಲಿ ವಂಚನೆ ಎಸಗುತ್ತಿದ್ದಾರೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು 3 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯು ಮೇ 11ರಂದು ನಡೆದಿದದು, ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವತಿ ಶವ ಪತ್ತೆ
ಬೆಂಗಳೂರಿನ ಸುಧಾಮನಗರದ ನಿವಾಸಿಯೊಬ್ಬರು ಬೆಂಗಳೂರು ಹಾಗೂ ಚೆನ್ನೈ ನಡುವಿನ ಪಂದ್ಯವನ್ನು ಸ್ಟೇಡಿಯಂನಲ್ಲಿ ವೀಕ್ಷಿಸಲು ಟಿಕೆಟ್ಗಾಗಿ ಹುಡುಕಾಡುತ್ತಿದ್ದರು. ಈ ವೇಳೆ ipl_2024_tickets__24 ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಪಂದ್ಯದ ಟಿಕೆಟ್ ಸಿಗಲಿದೆ ಎಂಬ ಜಾಹೀರಾತನ್ನು ನೋಡಿ ಖಾತಾದರರೊಂದಿಗೆ ಚಾಟಿಂಗ್ ಆರಂಭಿಸಿದ್ದಾರೆ. ತನ್ನನ್ನು ಪದ್ಮ ಸಿನ್ಹಾ ವಿಜಯ್ ಕುಮಾರ್ ಎಂದು ವಂಚಕ ತನ್ನನ್ನು ತಾನು ಪರಿಚಯಿಸಿಕೊಂಡಿದ್ದಾನೆ.
ಐಪಿಎಲ್ ಟಿಕೆಟ್‌ಗಳನ್ನು ಮಾರಾಟ ಮಾಡಲು ಅಧಿಕೃತ ಫ್ರಾಂಚೈಸ್ ಹೊಂದಿರುವುದಾಗಿ ಹೇಳಿಕೊಂಡಿದ್ದಾನೆ. ಇದು ಸಾಲದೆಂಬಂತೆ ವಂಚನೆಗೊಳಗಾಗಿರುವ ವ್ಯಕ್ತಿಯನ್ನು ನಂಬಿಸುವ ಸಲುವಾಗಿ, ಆನ್‌ಲೈನ್ ವಂಚಕ ಆಧಾರ್ ಕಾರ್ಡ್‌ನ ಫೋಟೋ ಮತ್ತು ಮೊಬೈಲ್ ನಂಬರ್ 9155026674 ಅನ್ನು ಕಳುಹಿಸಿ ಹಣ ಪಾವತಿಯಾದ ನಂತರ ಇ-ಟಿಕೆಟ್‌ಗಳನ್ನು ಕಳುಹಿಸುವುದಾಗಿ ಹೇಳಿದ್ದಾನೆ. ವಂಚಕನ ಮಾತನ್ನು ಸಂಪೂರ್ಣವಾಗಿ ನಂಬಿದ ವ್ಯಕ್ತಿ ಟಿಕೆಟ್ನ ಆಸೆಗೆ ಬಿದ್ದು ಹಂತಹಂತವಾಗಿ 3 ಲಕ್ಷ ರೂಗಳನ್ನು ಕಳೆದುಕೊಂಡಿದ್ದು, ವಂಚಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಿಇಎನ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ. ಮೇ 11ರಂದು ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.