ಕ್ರೀಡೆ

ಆಂಗ್ಲರ ವಿರುದ್ಧ 4ನೇ ಟೆಸ್ಟ್ ಗೆಲ್ಲಲು ಈ ಬದಲಾವಣೆಗಳು ಅಗತ್ಯ!? ಗಿಲ್​ ಪಡೆಗೆ ಇದು ಸವಾಲಿನ ಪಂದ್ಯ | IND vs ENG

ಮೋಹನ್​ ಶೆಟ್ಟಿ

IND vs ENG: ಪ್ರಸಕ್ತ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಅಂತರದಲ್ಲಿ ಬೆನ್​ ಸ್ಟೋಕ್ಸ್​ ಪಡೆ ಮುನ್ನಡೆ ಸಾಧಿಸಿದೆ. ಸತತ ಎರಡು ಪಂದ್ಯಗಳಲ್ಲಿ ಸೋಲುಂಡಿರುವ ಟೀಮ್ ಇಂಡಿಯಾಗೆ ನಾಲ್ಕನೇ ಟೆಸ್ಟ್​ನಲ್ಲಿ ಗೆಲುವಿನ ಅನಿವಾರ್ಯತೆ ಎದುರಾಗಿದೆ. ಈ ಬೆನ್ನಲ್ಲೇ ತಂಡದಲ್ಲಿ ಒಂದಷ್ಟು ಬದಲಾವಣೆಗಳ ಕೂಗು ಕೇಳಿಬಂದಿವೆ.

ಶುಭಮನ್​ ಗಿಲ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾ, ಪಂದ್ಯ ಗೆಲ್ಲುವುದರಲ್ಲಿ ಮುಗ್ಗರಿಸುತ್ತಿದೆ. ಮೊದಲ ಟೆಸ್ಟ್​ ಸೋತ ಭಾರತ, ಎರಡನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು. ಆದರೆ ಮೂರನೇ ಪಂದ್ಯದಲ್ಲಿ 22 ರನ್​ಗಳಿಂದ ಹೀನಾಯ ಸೋಲುಂಡಿತು. ಇದೀಗ ನಾಲ್ಕನೇ ನಿರ್ಣಾಯಕ ಪಂದ್ಯಕ್ಕೆ ದಿನಗಣನೆ ಶುರುವಾಗಿದ್ದು, ಜುಲೈ 23ರಿಂದ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿದೆ.

ಕಳೆದ ಪಂದ್ಯದಲ್ಲಿ ಇಂಗ್ಲೆಂಡ್​ ನೀಡಿದ ಗುರಿಯನ್ನು ಬೆನ್ನತ್ತುವಲ್ಲಿ ಕೊನೆಯವರೆಗೂ ನಿಂತು ಏಕಾಂಗಿ ಹೋರಾಟ ನಡೆಸಿದ ರವೀಂದ್ರ ಜಡೇಜಾಗೆ ಉತ್ತಮ ಸಾಥ್​ ಸಿಗಲಿಲ್ಲ. ನಾಯಕ ಶುಭಮನ್​ ಗಿಲ್​, ಕರುಣ್ ನಾಯರ್​, ರಿಷಭ್ ಪಂತ್ ಸೇರಿದಂತೆ ಸ್ಟಾರ್​ ಬ್ಯಾಟರ್​ಗಳೇ ಕೈಕೊಟ್ಟಿದ್ದು, ಜಡೇಜಾಗೆ ಜೊತೆಯಾಗಿ ನಿಲ್ಲಲಿಲ್ಲ. ಇದೇ ತಂಡದ ಸೋಲಿಗೆ ದೊಡ್ಡ ಕಾರಣವಾಯಿತು. ಇನ್ನು ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ಸೋತರೆ, ಇಂಗ್ಲೆಂಡ್ ಸರಣಿ ವಶಪಡಿಸಿಕೊಳ್ಳುತ್ತದೆ.

ಭಾರತೀಯ ಅಂತಿಮ ತಂಡದಲ್ಲಿ ಪ್ರಮುಖ ಬದಲಾವಣೆಗಳ ಅಗತ್ಯವಿದೆ ಎಂದು ಮಾಜಿ ಕ್ರಿಕೆಟಿಗರು ಅಭಿಪ್ರಾಯಿಸಿದ್ದಾರೆ. ಅನೇಕ ಮಾಜಿ ಕ್ರಿಕೆಟಿಗರು ನಿರ್ದಿಷ್ಟವಾಗಿ ನಾಲ್ಕು ಕ್ಷೇತ್ರಗಳಲ್ಲಿ ಬದಲಾವಣೆಗಳು ಅನಿವಾರ್ಯ ಎಂದು ಸೂಚಿಸಿದ್ದಾರೆ. ಕರುಣ್ ನಾಯರ್ ಅವರ ಸತತ ಕಳಪೆ ಪ್ರದರ್ಶನ ಟೀಮ್ ಇಂಡಿಯಾಗೆ ಸಮಸ್ಯೆಯಾಗಿ ಪರಿಣಮಿಸಿದೆ. ಕರಣ್​, ಮೂರು ಟೆಸ್ಟ್‌ಗಳಲ್ಲಿ 0, 20, 31, 20, 40, 14 ರನ್‌ಗಳನ್ನು ಮಾತ್ರ ಕಲೆಹಾಕಿದ್ದಾರೆ. ಈ ಕಾರಣ, ಮುಂದಿನ ಟೆಸ್ಟ್​ನಲ್ಲಿ ತಂಡದಿಂದ ಅವರನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ.

ಅಂತಿಮ ತಂಡದಲ್ಲಿ ಸಾಯಿ ಸುದರ್ಶನ್ ಅಥವಾ ಅಭಿಷೇಕ್ ಈಶ್ವರನ್ ಅವರಿಗೆ ಸ್ಥಾನ ಕೊಡಬೇಕು ಎಂಬ ಸಲಹೆಗಳು ಕೇಳಿಬಂದಿವೆ. ಮತ್ತೊಂದೆಡೆ, ವಿಕೆಟ್ ಕೀಪರ್ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಗಾಯವು ಭಾರತ ತಂಡವನ್ನು ಚಿಂತೆಗೀಡುಮಾಡಿದೆ. ಆದಾಗ್ಯೂ, 4ನೇ ಪಂದ್ಯದ ಆರಂಭದೊಳಗೆ ಅವರು ಗುಣಮುಖರಾಗುತ್ತಾರೆ ಎಂದು ನಾಯಕ ಶುಭಮನ್ ಗಿಲ್ ಹೇಳಿದ್ದಾರೆ. ರಿಷಭ್ ಪಂತ್ ಮೈದಾನಕ್ಕೆ ಇಳಿಯದಿದ್ದರೆ, ಮತ್ತೊಬ್ಬ ವಿಕೆಟ್ ಕೀಪರ್ ಧ್ರುವ್ ಜುರೆಲ್​ರನ್ನು ಅಂತಿಮ ತಂಡದಲ್ಲಿ ಆಡಿಸುವ ಸಾಧ್ಯತೆಯಿದೆ.