

Nimisha Priya: ಯೆಮೆನ್ ದೇಶದ ಪ್ರಜೆಯ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಸದ್ಯ ತಾತ್ಕಾಲಿಕ ಮಟ್ಟಿಗೆ ಬಿಗ್ ರಿಲೀಫ್ ನೀಡಲಾಗಿದೆ. ಇದೇ ಜುಲೈ 16ರಂದು ಪ್ರಿಯಾಳನ್ನು ಗಲ್ಲಿಗೇರಿಸಲು ಕೋರ್ಟ್ ದಿನಾಂಕವನ್ನು ನಿಗದಿಪಡಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ನಿಮಿಷಾಳ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಹಿನ್ನಲೆ ಕೊನೆಯ ಕ್ಷಣಗಳಲ್ಲಿ ಆಕೆಯ ಗಲ್ಲು ಶಿಕ್ಷೆಯನ್ನು ಕೋರ್ಟ್ ಮುಂದೂಡಿತು. ಇದು ಪ್ರಿಯಾ ಮತ್ತು ಆಕೆಯ ಹೆತ್ತವರ ನಿಟ್ಟುಸಿರಿಗೆ ಕಾರಣವಾಗಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿಮಿಷಾ ಪ್ರಿಯಾ, ತನ್ನ ನರ್ಸಿಂಗ್ ತರಬೇತಿ ಪೂರ್ಣಗೊಳಿಸಿದ ಬಳಿಕ 2011ರಲ್ಲಿ ಯೆಮೆನ್‌ಗೆ ತೆರಳಿದರು. ವರದಿಗಳ ಪ್ರಕಾರ, ತನ್ನ ಬಡ ಕುಟುಂಬವನ್ನು ಬೆಂಬಲಿಸಲು ದೇಶ ತೊರೆದು ಹೋದ ಪ್ರಿಯಾ, ಅಲ್ಲಿ ತನ್ನದೇ ಆದ ಒಂದು ಕ್ಲಿನಿಕ್ ತೆರೆಯುವ ನಿರ್ಧಾರಕ್ಕೆ ಮುಂದಾಗಿದ್ದು ಹಾಗೂ ಅದಕ್ಕೆ ಓರ್ವನ ಸಹಾಯಕ್ಕೆ ಕೈಚಾಚಿದ್ದೇ ಇಂದು ಆಕೆಯ ಗಲ್ಲು ಶಿಕ್ಷೆಗೆ ಕಾರಣವಾಗಿದೆ.
2017ರಲ್ಲಿ ತನ್ನ ವ್ಯವಹಾರದ ಪಾಲುದಾರನಾಗಿದ್ದ ವಿವಾಹಿತ ತಲಾಲ್ ಅಬ್ದೋ ಮಹ್ದಿಯನ್ನು ಕೊಲೆಗೈದ ಆರೋಪದಡಿ ಕೇರಳ ಮೂಲದ ನರ್ಸ್ ನಿಮಿಷಾಳನ್ನು ಬಂಧಿಸಲಾಯಿತು. ಮೂರು ವರ್ಷಗಳ ಬಳಿಕ, 2020ರಲ್ಲಿ ಯೆಮೆನ್ ನ್ಯಾಯಾಲಯವು ಈ ಪ್ರಕರಣದಲ್ಲಿ ಆಕೆಗೆ ಮರಣದಂಡನೆ ವಿಧಿಸಿತು. ಈ ಆದೇಶವನ್ನು ಪ್ರಶ್ನಿಸಿ, ಅಂದು ಪ್ರಿಯಾ ತಾಯಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ, 2023ರಲ್ಲಿ ಪ್ರೇಮಾ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.
2018ರಲ್ಲಿ, ವಿಚಾರಣಾ ನ್ಯಾಯಾಲಯವು ನಿಮಿಷಾ ಪ್ರಿಯಾಗೆ ಗಲ್ಲು ಶಿಕ್ಷೆ ವಿಧಿಸಿತು. 2024ರಲ್ಲಿ, ಯೆಮೆನ್ ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಎತ್ತಿಹಿಡಿಯಿತು. ಮೃತ ತಲಾಲ್ ಕುಟುಂಬವು ಕ್ಷಮಾದಾನ ನೀಡಲು ಒಪ್ಪಿಗೆ ಸೂಚಿಸಿದ್ರೆ ಮಾತ್ರ ನಿಮಿಷಾ ಮರಣದಂಡನೆಯಿಂದ ತಪ್ಪಿಸಿಕೊಳ್ಳಬಹುದು. ಆದರೆ, ಇದಕ್ಕೆ ಅವರು ಒಪ್ಪಿಗೆ ನೀಡಿಲ್ಲ. ಕಳೆದ ವರ್ಷ, ನಿಮಿಷಾ ಪ್ರಿಯಾ ಅವರ ತಾಯಿ ಯೆಮನ್‌ಗೆ ತೆರಳಿದ್ದರು. ತಮ್ಮ ಮಗಳನ್ನು ಈ ಪ್ರಕರಣದಿಂದ ಮುಕ್ತಗೊಳಿಸಲು ಹಲವು ರೀತಿಯಲ್ಲಿ ಪ್ರಯತ್ನ ನಡೆಸಿದರು. ಮೃತನ ಕುಟುಂಬಕ್ಕೆ ಒಂದು ಮಿಲಿಯನ್ ಡಾಲರ್ (ಸುಮಾರು 8.6 ಕೋಟಿ ರೂ.) ನೀಡಲು ಪ್ರಿಯಾ ಕುಟುಂಬ ಸಿದ್ಧವಾಗಿದೆ. ಈ ಕುರಿತಂತೆ ಎಲ್ಲಾ ಕಡೆಯಿಂದ ಮಾತುಕತೆ ನಡೆಯುತ್ತಿದೆ. ಆದರೆ, ಇದಕ್ಕೆ ತಲಾಲ್ ಕುಟುಂಬಸ್ಥರು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಪ್ರಿಯಾಳನ್ನು ಕ್ಷಮಿಸಲು ಮೃತರ ಕುಟುಂಬ ಸಿದ್ಧವಾಗಿದೆ ಎಂಬ ವರದಿಗಳಿವೆ. ಆದಾಗ್ಯೂ, ಆ ಮಟ್ಟಿಗೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ವರದಿಯಾಗಿದೆ. ಮೃತ ತಲಾಲ್ನ ಕುಟುಂಬ, ನಿಮಿಷಾ ಪ್ರಿಯಾಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದೆ. ಯೆಮೆನ್ ನ್ಯಾಯಾಲಯವು ಪ್ರಿಯಾಗೆ ವಿಧಿಸಿರುವ ಮರಣದಂಡನೆಯನ್ನು ತಾತ್ಕಾಲಿಕವಾಗಿ ಮುಂದೂಡಿದ ಬೆನ್ನಲ್ಲೇ ಮೃತನ ಸಹೋದರ ಅಬ್ದುಲ್ ಫತ್ತಾಹ್ ಮೆಹದಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಆಕೆಗೆ ಶಿಕ್ಷೆಯಾಗಬೇಕು. ಪರಿಹಾರ ಹಣ ನಮಗೆ ಬೇಡ. ಅದನ್ನು ನಾವು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿಮಿಷಾ ಪ್ರಿಯಾಳ ಗಲ್ಲುಶಿಕ್ಷೆ ಮುಂದೂಡಲ್ಪಡುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಮಧ್ಯಸ್ಥಿಕೆ ಮತ್ತು ಸಮನ್ವಯಕ್ಕಾಗಿ ಪ್ರಸ್ತುತ ಪ್ರಯತ್ನಗಳು ಹೊಸದೇನಲ್ಲ. ಹಣದಿಂದ ಹೋದ ಜೀವವನ್ನು ಖರೀದಿಸಲು ಸಾಧ್ಯವಿಲ್ಲ. ನಮಗೆ ನ್ಯಾಯ ಬೇಕು' ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿ ನೋಡುವುದಾದರೆ, ನಿಮಿಷಾ ಪ್ರಿಯಾಳನ್ನು ಮರಣದಂಡನೆಯಿಂದ ರಕ್ಷಿಸಲು ಮೃತರ ಕುಟುಂಬಕ್ಕೆ ಮಾತ್ರ ಅವಕಾಶವಿದೆ. ಅವರೇನಾದರೂ ಪ್ರಿಯಾಳ ಕುಟುಂಬಸ್ಥರ ಕ್ಷಮಾದಾನಕ್ಕೆ ಒಪ್ಪದಿದ್ದರೆ, ಯೆಮೆನ್ ಸರ್ಕಾರವು ಆಕೆಯನ್ನು ಗಲ್ಲಿಗೇರಿಸಬಹುದು. ಆದಾಗ್ಯೂ, ನಿಮಿಷಾ ಪರ ವಕೀಲರು ಮೃತರ ಕುಟುಂಬ ಸದಸ್ಯರೊಂದಿಗೆ ಮಾತುಕತೆಗಳು ಇನ್ನೂ ನಡೆಯುತ್ತಿವೆ ಮತ್ತು ಕ್ಷಮಾದಾನ ನೀಡುವಂತೆ ಅವರನ್ನು ಮನವೊಲಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).
ಸಹಾಯ ಮಾಡುವ ನೆಪದಲ್ಲಿ ಪ್ರಿಯಾಳನ್ನು ದುರಪಯೋಗ ಪಡಿಸಿಕೊಳ್ಳಲು ಮುಂದಾದ ಮಹ್ದಿ, ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಆಕೆಗೆ ಒತ್ತಾಯಿಸಿದ್ದ. ವಿಪರೀತ ಹಿಂಸೆಯ ಬೆನ್ನಲ್ಲೇ ಆಕೆ ಮಹ್ದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಬಂಧಿತನಾಗಿದ್ದ ಮಹ್ದಿ, 2016ರಲ್ಲಿ ಜೈಲಿನಿಂದ ಹೊರಬಂದ. 2017ರಲ್ಲಿ ಆಕೆಗೆ ಇನ್ನಷ್ಟು ಹಿಂಸೆ ಕೊಡಲು ಮುಂದಾದ ಎಂದು ವರದಿಗಳು ತಿಳಿಸಿವೆ. ಮಹ್ದಿ, ಪ್ರಿಯಾ ಬಳಿಯಿದ್ದ ಪಾಸ್‌ಪೋರ್ಟ್ ಅನ್ನು ಕಸಿದುಕೊಂಡಿದ್ದ. ಇದರಿಂದ ಕಂಗಾಲಾಗಿದ್ದ ಪ್ರಿಯಾ, ಆತನಿಂದ ಪಾಸ್‌ಪೋರ್ಟ್ ಪಡೆದು ಭಾರತಕ್ಕೆ ಹೋಗುವ ತವಕದಲ್ಲಿದ್ದಳು. ಇವನಿಂದ ಹೇಗಾದರೂ ಮುಕ್ತಿ ಪಡೆಯಬೇಕು ಎಂದು ಸಂಚು ರೂಪಿಸಿದ ಪ್ರಿಯಾ, ಮಹ್ದಿಗೆ ನಿದ್ರಾಜನಕ ನೀಡಿದ್ದಳು. ಆದರೆ, ಓವರ್ಡೋಸ್ನಿಂದ ಆತ ಸತ್ತುಬಿದ್ದಿದ್ದ.
ಕೊಲೆಗೈದ ಬಳಿಕ ಹೇಗೋ ದೇಹವನ್ನು ತನ್ನ ಸ್ನೇಹಿತೆಯೊಂದಿಗೆ ವಿಲೇವಾರಿ ಮಾಡಿದ್ದ ಪ್ರಿಯಾ, ಕಡೆಗೂ ಕೊಲೆ ಆರೋಪದಡಿ ಸಿಕ್ಕಿಬಿದ್ದಳು. ಈ ವೇಳೆ ಆಕೆಯ ಕೈವಾಡ ಇರುವುದು ದೃಢವಾಯಿತು. ಹತ್ಯೆ ಕೇಸ್ನಡಿ ಯೆಮೆನ್ ಪೊಲೀಸರು ಆಕೆಯನ್ನು ಬಂಧಿಸಿದರು. ಈ ಪ್ರಕರಣದಲ್ಲಿ ಕೋರ್ಟ್ ಪ್ರಿಯಾಳ ಸ್ನೇಹಿತೆಗೆ ಜೀವಾವಧಿ ಶಿಕ್ಷೆ ವಿಧಿಸಿದರೆ, ಪ್ರಿಯಾಗೆ ಗಲ್ಲು ಶಿಕ್ಷೆಯನ್ನು ವಿಧಿಸಿತು. ಜುಲೈ 16ರಂದು ಮರಣದಂಡನೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಆದರೀಗ ಅದು ಮುಂದೂಡಿಕೆಯಾಗಿದೆ,(ಏಜೆನ್ಸೀಸ್).