ಸಾರಿಗೆ ನಿಗಮ ಆಸ್ತಿ ಮಾರಾಟಕ್ಕೆ ಮುಂದಾದ ಸರ್ಕಾರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಕುಡಚಿ ಆರೋಪ

Press Conference
Published on

ಗಂಗಾವತಿ: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಾರಿಗೆ ನಿಗಮಕ್ಕೆ ಸಾಲದ ಹೊರೆ ಹೆಚ್ಚುತ್ತಿದ್ದು, ನಿಗಮದ ಆಸ್ತಿ ಮಾರಾಟಕ್ಕೆ ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ. ರಾಜೀವ್ ಕುಡಚಿ ಹೇಳಿದರು.

ತಾಲೂಕಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಿಗಮಕ್ಕೆ ಎರಡು ವರ್ಷದಲ್ಲಿ 800 ಕೋಟಿ ರೂ. ಸರ್ಕಾರ ನೀಡಬೇಕಿದ್ದು, ಅಧಿಕಾರ ಪೂರ್ಣಗೊಳ್ಳುವ ಹೊತ್ತಿಗೆ ಬಾಕಿ ಮೂರು ಪಟ್ಟಾಗಲಿದೆ. ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಹೆಚ್ಚುತ್ತಿದ್ದು, ಡ್ರಗ್ಸ್ ಪೆಡ್ಲರ್‌ಗಳನ್ನು ರಾಜ್ಯ ಸರ್ಕಾರ ರಕ್ಷಿಸುತ್ತಿದೆ.

ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಡ್ರಗ್ಸ್ ಜಾಲದಲ್ಲಿ ಸಿಕ್ಕಿ ಬಿದ್ದಿದ್ದು, ಮಹಾರಾಷ್ಟ್ರ ಪೊಲೀಸರು ಬಂಧಿಸಬೇಕಾಯಿತು. ಬಿಜೆಪಿ ಆಡಳಿತಾವಧಿಯಲ್ಲಿ ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಜಾಗೃತಿ ಅಭಿಯಾನ ಕೈಗೊಂಡಿದ್ದು, ಎನ್‌ಡಿಪಿಎಸ್ ಕಾಯ್ದೆ ಸಮರ್ಪಕ ಜಾರಿಗೊಳಿಸಲಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಡ್ರಗ್ಸ್ ಸಂಬಂಧಿಸಿದ ಒಂದೇ ಒಂದು ಪ್ರಕರಣ ದಾಖಲಿಸಿಲ್ಲ. ಉಗ್ರರನ್ನು ಬೆಂಬಲಿಸುವ ಸರ್ಕಾರ, ರಾಜ್ಯದಲ್ಲಿ ಉಗ್ರರ ಸ್ಲೀಪರ್ ಸೆಲ್ ಆಗಿದೆ ಎಂದು ದೂರಿದರು.

ಮೂಡಾ ಹಗರಣದಲ್ಲಿ ಸಿಎಂ ಅವರೇ ಸೈಟ್‌ಗಳನ್ನು ವಾಪಸ್ ನೀಡಲು ನಿರ್ಧರಿಸಿದ್ದು ಬಹಿರಂಗವಾಗಿದೆ. ಭ್ರಷ್ಟಾಚಾರದಲ್ಲಿ ರಾಜ್ಯ ಸರ್ಕಾರದ ವೈಖರಿಯನ್ನು ಆಡಳಿತ ಪಕ್ಷದ ಶಾಸಕರೇ ಬಹಿರಂಗ ಪಡಿಸಿದ್ದಾರೆ. ಸಿಎಂ ಬದಲಾವಣೆ ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯವಾಗಿದ್ದು, ಯಾರೇ ಸಿಎಂ ಆದರೂ ನಮಗೆ ಸಂಬಂಧವಿಲ್ಲ. ಸಿಗಂಧೂರು ಸೇತುವೆ ಉದ್ಘಾಟನೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಎಲ್ಲ ರೀತಿಯಿಂದ ಆಹ್ವಾನ ನೀಡಿದೆ. ಅನುಕಂಪ ಗಿಟ್ಟಿಸಿಕೊಳ್ಳಲು ಸಿಎಂ ಗೈರಾಗಿದ್ದು, ಜನರು ತಕ್ಕ ಉತ್ತರ ನೀಡಿದ್ದಾರೆ ಎಂದರು.

ಕಾರ್ಮಿಕ ಇಲಾಖೆಯಲ್ಲಿ 700 ಕೋಟಿ ರೂ. ಹಗರಣವಾಗಿದ್ದು, ಸಚಿವ ಸಂತೋಷ ಲಾಡ್‌ಗೆ ಕಾರ್ಮಿಕರ ಬೆವರಿನ ಹಣವೇ ಬೇಕಿತ್ತಾ?. ರಾಜ್ಯ ಸರ್ಕಾರದ ವೈಲ್ಯವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಜಿಲ್ಲಾ, ತಾಲೂಕು ಮತ್ತು ಮಂಡಲ ಮಟ್ಟದಲ್ಲಿ ಪರಿಣಾಮಕಾರಿ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ವರ್ಗಾವಣೆ ದಂಧೆಯಲ್ಲಿ ತೊಡಗಿದ್ದು, ಒಂದೊಂದು ಇಲಾಖೆಗೆ ಒಂದು ದರ ಫಿಕ್ಸ್ ಮಾಡಿದ್ದಾರೆ. ಗ್ರಾಪಂ ಪಿಡಿಒ ವರ್ಗಾವಣೆಗೂ 5ಲಕ್ಷ ರೂ. ಪಡೆಯುತ್ತಿದ್ದಾರೆಂದು ಆರೋಪಿಸಿದರು.

ಮಾಜಿ ಸಚಿವ ಬಿ.ಶ್ರೀರಾಮುಲು ಮತ್ತು ಶಾಸಕ ಗಾಲಿ ಜನಾರ್ದನರೆಡ್ಡಿ ನಡುವಿನ ಭಿನ್ನಾಭಿಪ್ರಾಯ ಶಮನಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಸಭೆ ಆಯೋಜಿಸಿದ್ದು, ಇಬ್ಬರೂ ಒಂದಾಗಲಿದ್ದಾರೆ. ಈ ಹಿಂದೆ ಬಳ್ಳಾರಿಯಲ್ಲಿ ಒಂದಾಗಿದ್ದ ಸಂದರ್ಭದಲ್ಲಿನ ಗತ ವೈಭವ ಮರುಕಳಿಸಲಿದೆ.

> ಸೋಮಶೇಖರರೆಡ್ಡಿ ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net