ಕ್ರೀಡೆ

ಇಂಥವರನ್ನು ಆಯ್ಕೆ ಮಾಡಿಕೊಳ್ಳುವುದೇ ವ್ಯರ್ಥ! ಈ ಮಾತು ಯಾರಿಗೆ ಹೇಳಿದ್ದು? ಗವಾಸ್ಕರ್​ ವಿರುದ್ಧ ಫ್ಯಾನ್ಸ್​ ಕಿಡಿ

ಚೆನ್ನೈ: ನಿನ್ನೆ (ಮೇ.26) ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ ಫೈನಲ್ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಕೆಕೆಆರ್ 8 ವಿಕೆಟ್​ಗಳ ಸುಲಭ ಗೆಲುವು ದಾಖಲಿಸಿತು. ರೋಚಕವಲ್ಲದ ಫೈನಲ್​ ಮ್ಯಾಚ್​ ಕಂಡು ಕ್ರಿಕೆಟ್ ಫ್ಯಾನ್ಸ್ ಭಾರೀ ಆಕ್ರೋಶ ಹೊರಹಾಕಿದ್ದು, ಇಂತಹ ಕಳಪೆ ಪ್ರದರ್ಶನ ನೋಡಲು ನಾವು ಇಲ್ಲಿಯವರೆಗೂ ಬರಬೇಕಿತ್ತಾ? ಎಂದು ಎಸ್​ಆರ್​ಎಚ್​ ತಂಡದ ಆಟಗಾರರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.

ನಿನ್ನೆಯ ಫೈನಲ್​ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಎಸ್‌ಆರ್‌ಹೆಚ್ ತಂಡ ಕೇವಲ 113 ರನ್‌ಗಳಿಗೆ ಆಲೌಟ್​ ಆಗುವ ಮೂಲಕ ಈ ಬಾರಿಯ ಸೀಸನ್​ನಲ್ಲಿ ಅತ್ಯಂತ ಕೆಟ್ಟ ದಾಖಲೆಗೆ ಕಾರಣವಾಯಿತು. ಇದಕ್ಕೂ ಮುನ್ನ ಈ ರೆಕಾರ್ಡ್​​ ಚೆನ್ನೈ ಸೂಪರ್ ಕಿಂಗ್ಸ್ ಹೆಸರಿನಲ್ಲಿತ್ತು. 2013ರ ಐಪಿಎಲ್​ ಫೈನಲ್​ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ತಂಡ 9 ವಿಕೆಟ್​ ಕಳೆದುಕೊಂಡು ಕೇವಲ 125 ರನ್​ ಗಳಿಸಿತ್ತು. ಈಗ ಈ ದಾಖಲೆಯನ್ನು ಎಸ್​ಆರ್​ಎಚ್​ ಬ್ರೇಕ್ ಮಾಡಿದ್ದು, ಕ್ರಿಕೆಟ್ ಪ್ರೇಮಿಗಳ ಅಸಮಾಧಾನಕ್ಕೆ ಕಾರಣರಾಗಿದ್ದಾರೆ.

ಇನ್ನು ಸನ್​​ರೈಸರ್ಸ್​ ವಿರುದ್ಧ ಕೊಲ್ಕತ್ತ ನೈಟ್ ರೈಡರ್ಸ್​ ಭರ್ಜರಿ ಜಯ ಸಾಧಿಸಿ, ಮೂರನೇ ಬಾರಿಗೆ ಚೆನ್ನೈನಲ್ಲಿ ಐಪಿಎಲ್​ ಟ್ರೋಫಿ ಪಡೆಯುತ್ತಿದ್ದಂತೆ ಫ್ರಾಂಚೈಸಿಗಳ ವಿರುದ್ಧ ಗುಡುಗಿದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್​, “ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಅರ್ಹರಲ್ಲದ ಆಟಗಾರರನ್ನು ಸಹಿ ಮಾಡುವಲ್ಲಿ ತಂಡಗಳು ಅತ್ಯಂತ ದೊಡ್ಡ ತಪ್ಪುಗಳನ್ನು ಮಾಡುತ್ತಿವೆ. ಅನರ್ಹ ಕ್ರಿಕೆಟಿಗರು ಮಾನದಂಡಗಳ ಮೇಲೆ ಮಾತ್ರ ಪರಿಣಾಮ ಬೀರುತ್ತಿಲ್ಲ, ಬದಲಿಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿರುವ ತಂಡಕ್ಕೆ ಕೊಡುಗೆ ನೀಡಲು ಸಹ ವಿಫಲರಾಗಿದ್ದಾರೆ" ಎಂದಿದ್ದಾರೆ.

"ಈ ಆಟಗಾರರು ಐಪಿಎಲ್​ನಲ್ಲಿ ಆಡಲು ಸಾಧ್ಯವಿಲ್ಲ ಎಂಬುದನ್ನು ಆಯಾ ಫ್ರಾಂಚೈಸಿಗಳು ಮೊದಲು ಅರಿತುಕೊಳ್ಳಬೇಕು. ಅಧಿಕ ಮೊತ್ತದ ಸಂಭಾವನೆ ನೀಡಿ, ಅವರನ್ನೆಲ್ಲಾ ಆಯ್ಕೆ ಮಾಡಿಕೊಂಡಿರುತ್ತಾರೆ. ಆದ್ರೆ, ಪಂದ್ಯದದಲ್ಲಿ ಉತ್ತಮ ಪ್ರದರ್ಶನದ ನೀಡುವಲ್ಲಿ ಮಾತ್ರ ವಿಫಲರಾಗುತ್ತಾರೆ. ಇವರು ಕೇವಲ ಸ್ಥಳೀಯ ಟಿ20 ಲೀಗ್‌ಗಳಲ್ಲಿ ಪ್ರದರ್ಶನ ನೀಡಬಹುದೇ ವಿನಃ ಐಪಿಎಲ್‌ನಲ್ಲಿ ಅಲ್ಲ" ಎಂದು ಹೇಳಿದ್ದಾರೆ. ಸದ್ಯ ಸುನಿಲ್ ಗವಾಸ್ಕರ್ ಅವರ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಕೆಲವರಿಂದ ಭಾರೀ ಟೀಕೆಗಳು ಸಹ ವ್ಯಕ್ತವಾಗಿವೆ,(ಏಜೆನ್ಸೀಸ್).