ಕ್ರೀಡೆ

ವಿರಾಟ್​ ಮತ್ತು ಸ್ಮೃತಿ ಮಂಧಾನ ಬೌಲಿಂಗ್​ ಒಂದೇ! ಇದು 'ನಂ.18' ಪ್ರಭಾವವೇ?

ಬೆಂಗಳೂರು: ನಿನ್ನೆ (ಜೂ.19) ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಮಹಿಳಾ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಟಾರ್​ ಆಟಗಾರ್ತಿ ಸೃತಿ ಮಂಧಾನ ಬೌಲಿಂಗ್ ದಾಳಿಗೆ ಎದುರಾಳಿ ತತ್ತರಿಸಿದ್ದು, 4 ವಿಕೆಟ್​ಗಳ ಅಂತರದಿಂದ ಭಾರತ ದಕ್ಷಿಣಾ ಆಫ್ರಿಕಾ ವಿರುದ್ಧ ಗೆದ್ದು ಸಂಭ್ರಮಿಸಿತು. ಟಾಸ್​ ಗೆದ್ದ ಸೌತ್​ ಆಫ್ರಿಕಾ ಮಹಿಳೆಯರ ತಂಡ, ಮೊದಲು ಬೌಲಿಂಗ್ ಆಯ್ದುಕೊಂಡು, ಭಾರತಕ್ಕೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್​ನಲ್ಲಿ 3 ವಿಕೆಟ್​ ನಷ್ಟಕ್ಕೆ 325 ರನ್​ ಗಳಿಸಿತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ದಕ್ಷಿಣಾ ಆಫ್ರಿಕಾ ತಂಡ, 6 ವಿಕೆಟ್​ ಕಳೆದುಕೊಂಡು 321 ರನ್​ ಕಲೆಹಾಕುವಲ್ಲಿ ಮಾತ್ರ ಶಕ್ತವಾಯಿತು.

ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದಲ್ಲಿ ಮಿಂಚಿದ ಸೃತಿ ಮಂಧಾನ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸೃತಿ ಬೌಲಿಂಗ್ ವೈಖರಿ ಮಾತ್ರ ಸಖತ್ ವೈರಲ್ ಆಗುತ್ತಿದ್ದು, ಇವರ ಸ್ಪಿನ್​ಗೂ ನಂ.18ಗೂ ಸಂಬಂಧವಿದೆ ಎಂದು ಕ್ರಿಕೆಟ್ ಫ್ಯಾನ್ಸ್​ ಅಭಿಪ್ರಾಯಿಸಿದ್ದಾರೆ.

15ನೇ ಓವರ್​ನಲ್ಲಿ ಬೌಲಿಂಗ್​ ಮಾಡಿದ ಸೃತಿ, ಸುನೆ ಲೂಸ್​ ಅವರ ವಿಕೆಟ್​ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಮ್ಮ ಚೊಚ್ಚಲ ವಿಕೆಟ್ ಕಬಳಿಸಿದರು. ಮಂಧಾನ ಅವರ ಸ್ಪಿನ್​ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ ಕ್ರಿಕೆಟ್ ಅಭಿಮಾನಿಗಳು, ವಿರಾಟ್​ ಕೂಡ ಹೀಗೆ ಬೌಲ್ ಮಾಡುತ್ತಾರೆ. ನೀವು ಕೊಹ್ಲಿ ಅವರನ್ನೇ ಅನುಕರಿಸಿದ್ದೀರಿ ಎಂಬಂತೆ ಇಲ್ಲಿ ಕಾಣಿಸುತ್ತಿದೆ. ನಂ.18ಗೂ ಈ ಬೌಲಿಂಗ್​ಗೂ ಸಂಬಂಧವಿದೆ ಎಂದು ಫ್ಯಾನ್ಸ್ ತಮ್ಮ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಮತ್ತೊಮ್ಮೆ ಈ ವಿಷಯದ ಮೂಲಕ ಮುನ್ನೆಲೆಗೆ ತಂದಿದ್ದಾರೆ,(ಏಜೆನ್ಸೀಸ್).