ಕ್ರೀಡೆ

ಮಗನಿಂದ ಹೇರ್ ಟ್ರಿಮ್ ಮಾಡಿಸಿಕೊಂಡ ಕ್ರಿಕೆಟಿಗ ಶಿಖರ್ ಧವನ್

ನವದೆಹಲಿ: ಕರೊನಾ ವೈರಸ್ ಭೀತಿಯಿಂದಾಗಿ ಕಳೆದ ನಾಲ್ಕು ತಿಂಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿರುವ ಕ್ರಿಕೆಟಿಗರಿಗೆ ಸಾಮಾಜಿಕ ಜಾಲತಾಣಗಳೇ ಪ್ರಮುಖ ಅಸ್ತ್ರವಾಗಿವೆ. ಫಿಟ್ನೆಸ್ ಜತೆಗೆ ದೈನಂದಿನ ಕೆಲಸ ಕಾರ್ಯಗಳಲ್ಲಿ ಮಗ್ನರಾಗುತ್ತಿದ್ದಾರೆ. ಲಾಕ್‌ಡೌನ್ ವೇಳೆ ಸಚಿನ್ ತೆಂಡುಲ್ಕರ್ ತಮ್ಮ ಮಗನಿಗೆ ಹೇರ್ ಕಟ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್‌ಗೆ ಅವರ ಮಗನೇ ಟ್ರಿಮ್ಮರ್ ಮೂಲಕ ಅಪ್ಪನಿಗೆ ಹೊಸ ಲುಕ್ ನೀಡಿದ್ದಾನೆ.

ಶಿಖರ್ ಧವನ್ ಸಾಮಾನ್ಯವಾಗಿ ತಲೆಯಲ್ಲಿ ಕೂದಲು ಬಿಡುವುದಿಲ್ಲ. ಬೊಕ್ಕು ತಲೆಯ ಧವನ್ ಇತರ ಆಟಗಾರರಂತೆ ಹೇರ್‌ಸ್ಟೈಲ್‌ಗೆ ಒತ್ತು ನೀಡುವುದಿಲ್ಲ. ಗಡ್ಡ, ಮೀಸೆಗೆ ವಿವಿಧ ಆಕಾರ ನೀಡುತ್ತಿರುತ್ತಾರೆ. ಕರೊನಾ ವೈರಸ್ ಭೀತಿಯಿಂದಾಗಿ ಸಲೂನ್ ಶಾಷ್‌ಗೆ ತೆರಳದ ಧವನ್‌ಗೆ ಅವರ ಮಗನೇ ಟ್ರಿಮ್ಮರ್ ಮೂಲಕ ಹೇರ್ ಸ್ಟೈಲ್ ಮಾಡಿದ್ದಾರೆ. ‘ಫ್ರೆಶ್​ ಲುಕ್, ಥಾಂಕ್ಸ್ ಟು ಹೆಡ್ ಮಾಸ್ಟರ್ ಜೊರಾವೆರ್’ ಎಂದು ಧವನ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಎರಡು ನಾಯಿಮರಿಗಳನ್ನು ಖರೀದಿಸಿದ್ದ ಧವನ್, ನಮ್ಮ ಮನೆಗೆ ಹೊಸ ಅತಿಥಿಗಳ ಆಗಮನ ಎಂದು ಹೇಳಿಕೊಂಡಿದ್ದರು. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಐಪಿಎಲ್ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆಯಾಗಿದೆ.